ಉತ್ತರ ಕರ್ನಾಟಕ ವೃದ್ಧಿಯಾಗದಿರಲು ಯಾರು ಕಾರಣ?

ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗಿಲ್ಲ, ಅಭಿವೃದ್ಧಿಯಲ್ಲಿ ಬಹಳ ಹಿಂದೆ ಇದೆ ಎಂಬ ಮಾತು ಆ ಭಾಗದ ನಾಯಕರುಗಳಿಂದ ಪದೇ ಪದೇ ಕೇಳಿ ಬರುತ್ತದೆ. ಜೊತೆಗೆ ಕೆಲವು ತಲೆ ಹರಟೆ ನಾಯಕರು ಪ್ರತ್ಯೇಕ ರಾಜ್ಯದಂತಹ ಆಗದ ಹೋಗದ ಮಾತುಗಳನ್ನು ಹೇಳಿ ನಾಯಕರಾಗಲು ಪ್ರಯತ್ನಿಸುತ್ತಿದ್ದಾರೆ.
ಏಕೀಕರಣದ ಮೊದಲು ಮೈಸೂರು ರಾಜ್ಯವನ್ನು ಆಡಳಿತ ನಡೆಸಿದ ಸ್ವಾತಂತ್ರ್ಯ ಪೂರ್ವದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ಹಿಂದಿನ ತಲೆಮಾರಿನವರ ದೂರದೃಷ್ಟಿತ್ವದ ಮತ್ತು ಪರಿಣಾಮಕಾರಿಯಾದ ಯೋಜನೆಗಳ ಸಕಾಲಿಕ ಅನುಷ್ಠಾನದಿಂದಾಗಿ ಮೈಸೂರು ರಾಜ್ಯದ ಭಾಗ ಸಂಪೂರ್ಣವಾಗಿ ಎಲ್ಲಾ ಭಾಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯಾಗಿತ್ತು. 1956ರಲ್ಲಿ ಏಕೀಕರಣವಾಗಿ ಮುಂಬೈ ಪ್ರಾಂತದ ಮತ್ತು ಹೈದರಾಬಾದ್ ಪ್ರಾಂತದಲ್ಲಿದ್ದ ಕನ್ನಡ ಮಾತನಾಡುವ ಜನರನ್ನು ಒಳಗೊಂಡಿರುವ ಕನ್ನಡ ಪ್ರದೇಶಗಳು ಒಂದಾಗಿ ರಾಜ್ಯ ಸ್ಥಾಪನೆಯಾದ ಮೇಲೆ ಬಂದಂತಹ ಸರಕಾರಗಳು ಕಾಲಕಾಲಕ್ಕೆ ಮುಂಗಡಪತ್ರದಲ್ಲಿ ಅನುದಾನವನ್ನು ಸಮವಾಗಿಯೇ ಹಂಚಿರುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಾಗೂ ಕೈಗಾರಿಕೆ, ನೀರಾವರಿ, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಹೀಗೆ ಹತ್ತು ಹಲವಾರು ಪ್ರಕಾರದಲ್ಲಿ ಅಭಿವೃದ್ಧಿಯಾಗಿದ್ದ ಮೈಸೂರು ಪ್ರಾಂತದ ಭಾಗ ಉತ್ತರ ಕರ್ನಾಟಕದ ಮತ್ತು ಹೈದರಾಬಾದ್ ಕರ್ನಾಟಕದ ಪ್ರಾಮುಖ್ಯದ ಭಾಗಗಳೊಂದಿಗೆ ಪೈಪೋಟಿ ನಡೆಸಲು ಅಭಿವೃದ್ಧಿಯ ವಿಚಾರದಲ್ಲಿ ಸಾಧ್ಯವಾಗಿರುವುದಿಲ್ಲ.
ಉತ್ತರ ಕರ್ನಾಟಕ ರಾಜ್ಯವು ಸಹ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಾಗೂ ಉದ್ಯೋಗಗಳನ್ನು ಕಲ್ಪಿಸಿಕೊಡುವ ಕೈಗಾರಿಕೆಗಳನ್ನು ಹೊಂದಬೇಕಾದದ್ದು ಅತ್ಯಂತ ಅವಶ್ಯಕವಾದ ವಿಚಾರವಾಗಿದೆ. ಇದೇ ಸಂದರ್ಭದಲ್ಲಿ ಕಳೆದ 75 ವರ್ಷಗಳ ಅವಧಿಯಲ್ಲಿ ಈ ಭಾಗ ಹಿಂದೆ ಉಳಿಯಲು ಯಾರು ಕಾರಣ ಎನ್ನುವುದನ್ನು ಅವಲೋಕಿಸಬೇಕಾಗಿದೆ.
ಕೇವಲ ಸರಕಾರಗಳನ್ನು ಮತ್ತು ಸರಕಾರ ನಡೆಸುವವರನ್ನು ದೂರವುದರಲ್ಲಿ ಅರ್ಥವಿಲ್ಲ. ರಾಜ್ಯದ ಮುಖ್ಯಮಂತ್ರಿಗಳಾಗಿ ಅನೇಕರು ಆ ಭಾಗದಿಂದಲೂ ಹಲವಾರು ವರ್ಷಗಳ ಕಾಲ ಅಧಿಕಾರವನ್ನು ನಡೆಸಿದ್ದಾರೆ. 1956ರಿಂದ ಎಲ್ಲ ಸಂಪುಟಗಳಲ್ಲೂ ಹೈದರಾಬಾದ್ ಪ್ರಾಂತದ ಮತ್ತು ಮುಂಬೈ ಪ್ರಾಂತದ ಚುನಾಯಿತ ಪ್ರತಿನಿಧಿಗಳು ಸರಕಾರಗಳಲ್ಲಿ ಮಂತ್ರಿಗಳಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಅದೇ ರೀತಿಯಲ್ಲಿ ಆ ಭಾಗದಿಂದ ಆಯ್ಕೆಯಾದ ಶಾಸಕರುಗಳು ಸಹ ಕೆಲವರು ಹಲವಾರು ಬಾರಿ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಹೀಗಿದ್ದರೂ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂದು ಎನ್ನುವುದಾದರೆ ಅದಕ್ಕೆ ಅಲ್ಲಿನ ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಶ್ರದ್ಧೆ ವಿಚಾರದಲ್ಲಿ ಅನುಮಾನ ಪಡಬೇಕಾಗುತ್ತದೆ.
ಸದನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಯಾಗುವ ಸಂದರ್ಭದಲ್ಲಿ 1956 ರಿಂದ ಎಲ್ಲ ಸರಕಾರಗಳು ಆ ಭಾಗದ ಜಿಲ್ಲೆಗಳಿಗೆ ಎಷ್ಟು ಅನುದಾನವನ್ನು ನೀಡಿದ್ದಾರೆ ಎನ್ನುವುದು ವಿವರವಾಗಿ ಹೇಳಬೇಕು. ಅದೇ ರೀತಿಯಲ್ಲಿ ಯಾವ ಯಾವ ಕ್ಷೇತ್ರಕ್ಕೆ ಕಳೆದ 70 ವರ್ಷದ ಅವಧಿಯಲ್ಲಿ ಯಾವ ಯಾವ ಸರಕಾರದಲ್ಲಿ ಎಷ್ಟು ಅನುದಾನಗಳನ್ನು ವಿವಿಧ ಯೋಜನೆಗಳಿಗೆ ನೀಡಿದ್ದಾರೆ ಎನ್ನುವುದು ಬಹಿರಂಗವಾಗಲಿ. ಇಲ್ಲಿಯವರೆಗೂ 70 ವರ್ಷಗಳಲ್ಲಿ ಘೋಷಣೆಯಾಗಿರುವ ಯೋಜನೆಗಳು ಎಷ್ಟು, ಅವುಗಳಿಗೆ ಬಿಡುಗಡೆಯಾಗಿರುವ ಮೊತ್ತ ಎಷ್ಟು, ಅವುಗಳಲ್ಲಿ ಎಷ್ಟು ಯೋಜನೆಗಳು ಪೂರ್ಣಗೊಂಡಿದೆ ಮತ್ತು ಎಷ್ಟು ಯೋಜನೆಗಳು ಪ್ರಗತಿಯ ಹಾದಿಯಲ್ಲಿದೆ ಹಾಗೂ ಎಷ್ಟು ಯೋಜನೆಗಳು ಕೇವಲ ಕಾಗದದ ಮೇಲಿದೆ ಎನ್ನುವುದು ವಿವರವಾಗಿ ತಿಳಿಸಬೇಕಾಗಿದೆ.
ಆ ಭಾಗದ ಚುನಾಯಿತ ಪ್ರತಿನಿಧಿಗಳು ತಾವು ರಾಜಕಾರಣಕ್ಕೆ ಬರುವ ಮುನ್ನ ಇದ್ದಂತಹ ತಮ್ಮ ಆಸ್ತಿ ಮತ್ತು ಕಳೆದ 70 ವರ್ಷದ ಅವಧಿಯಲ್ಲಿ ತಮ್ಮ ಕುಟುಂಬದವರು ಹೊಂದಿರುವ ಆಸ್ತಿ ಇವುಗಳ ಬಗ್ಗೆಯೂ ಚರ್ಚೆಯಾಗಲಿ.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರತಿನಿಧಿಸುವ ವಿವಿಧ ರಾಜಕೀಯ ಪಕ್ಷದ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಕುಟುಂಬದವರು ನಡೆಸುತ್ತಿರುವ ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಉದ್ಯಮಗಳ ಬಗ್ಗೆ ಚರ್ಚೆಯಾಗಲಿ.
ಕೇವಲ ಪ್ರಚಾರಕ್ಕಾಗಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಉತ್ತರ ಕರ್ನಾಟಕದ ಭಾಗದ ಅನೇಕರು 70 ವರ್ಷದ ಅವಧಿಯಲ್ಲಿ ಕೇಂದ್ರದ ಸಚಿವರುಗಳಾಗಿದ್ದಾರೆ. ಅವರುಗಳು ರಾಜ್ಯಕ್ಕೆ ಮತ್ತು ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಕೊಡಿಸಿರುವ ಕೊಡುಗೆಗಳೇನು ಎನ್ನುವುದು ಚರ್ಚೆಯಾಗಲಿ.
ಎಪ್ಪತ್ತು ವರ್ಷವಾದರೂ ಇನ್ನೂ ಶುದ್ಧ ಕುಡಿಯುವ ನೀರು ಮತ್ತು ಗುಣಮಟ್ಟದ ರಸ್ತೆಗಳು, ಸರಕಾರಿ ಶಾಲೆಗಳ ಅವ್ಯವಸ್ಥೆ, ಕನಿಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಹಳ್ಳಿಗಳು, ಬಸ್ ನಿಲ್ದಾಣಗಳಿಲ್ಲದ ತಾಲೂಕುಗಳು, ಸಂಚಾರದ ವ್ಯವಸ್ಥೆಯೇ ಇಲ್ಲದ ಹಳ್ಳಿಗಳು, ತಮ್ಮ ಜಮೀನಿನ ಸಂಬಂಧದಲ್ಲಿ ಹಲವಾರು ದಶಕಗಳಿಂದ ನ್ಯಾಯಕ್ಕಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿ ಅಲೆದಾಡುತ್ತಿರುವ ನಾಗರಿಕರ ಕಡತಗಳು ಇಂತಹ ಮೂಲಭೂತ ಸೌಕರ್ಯ ಸೌಲಭ್ಯದ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರಿನಲ್ಲಿರುವ ಸರಕಾರಗಳು ಬರಬೇಕಾಗಿಲ್ಲ. ಆಯಾ ಚುನಾಯಿತ ಪ್ರತಿನಿಧಿಗಳು ಪ್ರತೀ ವರ್ಷ ತಮಗೆ ನೀಡುವ ಕ್ಷೇತ್ರ ಅಭಿವೃದ್ಧಿ ನಿಧಿ ಮತ್ತು ವಿವಿಧ ಇಲಾಖೆಗಳಲ್ಲಿ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಆಸ್ಪದ ಕೊಡದೆ ಮಾಡಿದ್ದರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತಿತ್ತು.
ಉತ್ತರ ಕರ್ನಾಟಕದ ಅಥವಾ ಹಳೆ ಮೈಸೂರಿನ ಎಲ್ಲ ಪ್ರತಿನಿಧಿಗಳು ಸಾರ್ವಜನಿಕ ಜೀವನದಲ್ಲಿ ಸರಿಯಾದ ದಾರಿಯಲ್ಲಿ ಸಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಇಲ್ಲಿಯೂ ಸಹ ಎಲ್ಲ ಭಾಗದಲ್ಲೂ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿರುವ ತಮ್ಮ ಕ್ಷೇತ್ರದ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿರುವ ಹಾಗೂ ಹಲವಾರು ಕ್ಷೇತ್ರಗಳಲ್ಲಿ ವಿವಿಧ ವಿನೂತನ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಿ ಕ್ಷೇತ್ರವನ್ನು ಕೆಲವು ಸಂಗತಿಗಳಲ್ಲಾದರೂ ಸಂಪೂರ್ಣವಾಗಿ ಪ್ರಗತಿ ಪಥದಲ್ಲಿ ಸಾಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಿರುವ ಚುನಾಯಿತ ಪ್ರತಿನಿಧಿಗಳನ್ನು ನಿಜಕ್ಕೂ ಅಭಿನಂದಿಸಬೇಕಾಗಿದೆ.







