ಬೂತ್‌ವೊಂದರಲ್ಲಿ ಅಲೆಮಾರಿ ಸಮುದಾಯದ ಅರ್ಧದಷ್ಟು ಮಂದಿಗೆ ನೋಟಿಸ್
ಅಲೆಮಾರಿ ದಕ್ಕಲಿಗರ ಮತದ ಹಕ್ಕಿಗೆ ದಾಖಲೆಗಳ ಸಂಕಷ್ಟ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆಯಿಂದಾಗಿ ಅಲೆಮಾರಿ ಸಮುದಾಯದ ಮತದಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 235ರಲ್ಲಿ ಅಲೆಮಾರಿ ದಕ್ಕಲಿಗ ಸಮುದಾಯಕ್ಕೆ ಸೇರಿದ ಸುಮಾರು 90 ಮತದಾರರ ಪೈಕಿ ಅರ್ಧದಷ್ಟು ಮಂದಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬೂತ್‌ನಲ್ಲಿ ಒಟ್ಟು 123 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಅವರ ಪೈಕಿ ಅಲೆಮಾರಿ ದಕ್ಕಲಿಗ ಸಮುದಾಯದ 28 ಕುಟುಂಬಗಳ 45 ಮಂದಿಗೆ ನೋಟಿಸ್ ಬಂದಿದೆ. ಚಿಕ್ಕನಾಯಕನಹಳ್ಳಿ ನಗರದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಗಾಂಧಿನಗರ ಪ್ರದೇಶದ ಸ್ಮಶಾನದ ಪಕ್ಕದಲ್ಲಿ ಈ ಕುಟುಂಬಗಳು ವಾಸಿಸುತ್ತಿವೆ. ಹಲವು ಸುತ್ತಿನ ಹೋರಾಟಗಳ ಬಳಿಕ 2009ರಲ್ಲಿ ಸರಕಾರ ಕೆಲವು ಕುಟುಂಬಗಳಿಗೆ ಇದೇ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಕ್ಕುಪತ್ರ ನೀಡಿತ್ತು. ಬಳಿಕ ಇಲ್ಲಿ ಹಲವು ಕುಟುಂಬಗಳು ನೆಲೆಸಿವೆ.
ನೋಟಿಸ್ ಪಡೆದುಕೊಂಡಿರುವ ಅಲೆಮಾರಿ ಸಮುದಾಯದ ಬಹುತೇಕ ಮತದಾರರು ಗಣತಿ ನಮೂನೆ ಹಂತದಲ್ಲಿ 2002ರ ಮತಪಟ್ಟಿಯಲ್ಲಿ ಅವರ ತಂದೆ-ತಾಯಿಗಳ ದತ್ತಾಂಶ ಸಿಗದ ಕಾರಣ, ಸೆಲ್ಫ್ ಮ್ಯಾಪಿಂಗ್ ಮತ್ತು ಪ್ರೊಜಿನಿ ಮ್ಯಾಪಿಂಗ್ ಮಾಹಿತಿ ಭರ್ತಿ ಮಾಡದೇ, ಕೆಳಗಿನ ಮೂರನೇ ವರ್ಗದಲ್ಲಿ ಕನಿಷ್ಠ ಮಾಹಿತಿ ತುಂಬಿ ಸಹಿ ಹಾಕಿಕೊಟ್ಟಿರುವರೇ ಆಗಿದ್ದಾರೆ. ಇನ್ನು ಕೆಲವರ ಹೆಸರುಗಳಲ್ಲಿ ಅಕ್ಷರ ಬದಲಾವಣೆ, ತಂದೆ-ತಾಯಿಯ ನಡುವಿನ ವಯಸ್ಸಿನ ಅಂತರ ಹಾಗೂ ಇತರ ಕಾರಣಗಳಿಂದಾಗಿ ನೋಟಿಸ್ ಪಡೆದುಕೊಂಡಿದ್ದಾರೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಯೋಜಕಿ ಇಂದಿರಮ್ಮ ತಿಳಿಸಿದ್ದಾರೆ.
<ನೋಟಿಸ್ ಪಡೆದುಕೊಂಡವರ ಬಳಿ ಆಧಾರ್, ರೇಷನ್ ಕಾರ್ಡ್ ಮಾತ್ರ: ಎಸ್‌ಐಆರ್‌ಗೆ ಚು.ಆಯೋಗ ಕೇಳಿರುವ ದಾಖಲೆಗಳ ಪೈಕಿ ಈ ಸಮುದಾಯದ ಸುಮಾರು ಅರ್ಧದಷ್ಟು ಜನರ ಬಳಿ ಆಧಾರ್ ಮತ್ತು ಶಾಶ್ವತ ನಿವಾಸಿ ಪ್ರಮಾಣಪತ್ರ(ಪಿಆರ್‌ಸಿ) ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳಿಲ್ಲ. ಈ ಕುಟುಂಬಗಳ ಬಳಿ ಮುಖ್ಯವಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಹಾಗೂ ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಮಾತ್ರ ಇವೆ. ಹಲವು ವರ್ಷಗಳಿಂದ ಅಲೆಮಾರಿ ಜೀವನ ನಡೆಸಿಕೊಂಡು ಬಂದಿರುವುದರಿಂದ ಜನನ ಪ್ರಮಾಣಪತ್ರ, ಹಳೆಯ ಶೈಕ್ಷಣಿಕ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ. ಇದರಿಂದ ನೋಟಿಸ್‌ಗೆ
ಉತ್ತರಿಸಲು ಅಗತ್ಯ ದಾಖಲೆಗಳನ್ನು ಒದಗಿಸುವುದು ಇವರಿಗೆ ದೊಡ್ಡ ಸವಾಲಾಗಿದೆ.
<ಗಣತಿ ನಮೂನೆಯೂ ತಲುಪಿಲ್ಲ: ಎಸ್‌ಐಆರ್‌ನ ಮೊದಲ ಹಂತದ ಗಣತಿ ನಮೂನೆ ಪ್ರಕ್ರಿಯೆಯಲ್ಲಿ ಈ ಸಮುದಾಯದ ಹಲವು ಕುಟುಂಬಗಳು ಸಮಸ್ಯೆ ಎದುರಿಸಿದ್ದವು. ಈ ನಿರ್ದಿಷ್ಟ ಪ್ರದೇಶದ ಸುಮಾರು 10 ಜನರಿಗೆ ಗಣತಿ ನಮೂನೆ ತಲುಪಿಲ್ಲ. ನಮೂನೆ ಪಡೆದ ಮತದಾರರು ಸ್ವಯಂ ಹಾಗೂ ಪ್ರೊಜೆನಿ ಮ್ಯಾಪಿಂಗ್‌ಗೆ ಹೊರತಾಗಿ ಮೂರನೇ ವರ್ಗದಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಿದ್ದಾರೆ. ಇದೀಗ ಇವರ ಪೈಕಿ ಹಲವರಿಗೆ ನೋಟಿಸ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ದಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಶಾಂತರಾಜ ಡಿ. ತಿಳಿಸಿದ್ದಾರೆ. <ದಿನಗೂಲಿ ಬಿಟ್ಟು ಅಧಿಕಾರಿಗಳ ಮುಂದೆ ಹಾಜರಾಗಬೇಕಾದ ಸ್ಥಿತಿ: ನೋಟಿಸ್ ಪಡೆದ 45 ಮಂದಿಯಲ್ಲಿ ಇಂದು(ಸೆ.8) ಸುಮಾರು 25 ಮಂದಿ ಇಆರ್‌ಒ ಮುಂದೆ ಹಾಜರಾಗಿದ್ದಾರೆ. ಕೆಲವರು ಆಧಾರ್ ಹಾಗೂ ಪಿಆರ್‌ಸಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇನ್ನು ಕೆಲವರ ಬಳಿ ಆಧಾರ್ ಹೊರತುಪಡಿಸಿ ಸಲ್ಲಿಸಲು ಬೇರೆ ದಾಖಲೆಗಳೇ ಇರಲಿಲ್ಲ. ಇನ್ನೂ ಹಲವು ಮಂದಿ ಮಂಗಳವಾರ ಹಾಜರಾಗಲು ಸಾಧ್ಯವಾಗಿಲ್ಲ. ದಿನನಿತ್ಯದ ದುಡಿಮೆಗಾಗಿ ಊರಿನಿಂದ ಹೊರಗೆ ತೆರಳಿರುವುದರಿಂದ ಅವರು ಅಧಿಕಾರಿಗಳ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲಎಂದು ಮೂಲಗಳು ತಿಳಿಸಿವೆ.
ಮತಪಟ್ಟಿಯಲ್ಲಿ ಹೆಸರು ಉಳಿಯುವುದೇ?
ಹಲವು ವರ್ಷಗಳಿಂದ ಒಂದೇ ಪ್ರದೇಶದಲ್ಲಿ ವಾಸಿಸುತ್ತಿರುವ, ಸರಕಾರದಿಂದ ಹಕ್ಕುಪತ್ರ ಪಡೆದಿರುವ ಕುಟುಂಬಗಳಿಗೂ ದಾಖಲೆಗಳ ಕೊರತೆಯಿಂದ ಎಸ್‌ಐಆರ್ ನೋಟಿಸ್ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ನೋಟಿಸ್ ಪಡೆದಿರುವ ಅಲೆಮಾರಿ ದಕ್ಕಲಿಗ ಸಮುದಾಯದ ಎಲ್ಲ 45 ಮಂದಿಯ ಹೆಸರುಗಳು ಮುಂದಿನ ಮತದಾರರ ಪಟ್ಟಿಯಲ್ಲಿ ಉಳಿಯಲಿವೆಯೇ? ಎಂಬುದು ಪ್ರಶ್ನೆಯಾಗಿದೆ.
ದಾಖಲೆಗಳ ಕೊರತೆಯಿಂದಾಗಿ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
-ಇಂದಿರಮ್ಮ, ತುಮಕೂರು ಜಿಲ್ಲಾ ಸಂಯೋಜಕಿ, ಎದ್ದೇಳು ಕರ್ನಾಟಕ
ಅಲೆಮಾರಿ ದಕ್ಕಲಿಗ ಸಮುದಾಯದ ಬಹುತೇಕ ಕುಟುಂಬಗಳು ಭಿಕ್ಷಾಟನೆ, ಪೊರಕೆ ಕಟ್ಟುವುದು ಮತ್ತು ಮಾರಾಟ, ಹೇರ್‌ಪಿನ್ ಹಾಗೂ ಹಣೆಬೊಟ್ಟು ಮಾರಾಟ, ಚಿಂದಿ ಸಂಗ್ರಹ, ಹಳೆ ಗುಜರಿ ವ್ಯಾಪಾರ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿವೆ. ದಿನದ ದುಡಿಮೆಯನ್ನೇ ಅವಲಂಬಿಸಿರುವ ಇವರಿಗೆ ಕೆಲಸ ಬಿಟ್ಟು ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳ ಮುಂದೆ ಹಾಜರಾಗುವುದು ಮತ್ತೊಂದು ಆರ್ಥಿಕ ಹೊರೆಯಾಗಿದೆ.
-ಶಾಂತರಾಜ ಡಿ., ರಾಜ್ಯಾಧ್ಯಕ್ಷ, ದಕ್ಕಲಿಗರ ಸಂಘ
ಹಿಂದೆ ಚುನಾವಣಾ ಆಯೋಗವು ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಅವರನ್ನು ಹುಡುಕಿ, ಹುಡುಕಿ ಮತಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಯತ್ನ ಮಾಡುತ್ತಿತ್ತು. ಆದರೆ ಇದೀಗ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆ, ಮ್ಯಾಪಿಂಗ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಇದೇ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಹಾಗಾದರೆ ಹಿಂದೆ ಅರ್ಹ ಮತದಾರರನ್ನು ಹುಡುಕಿ ಮತಪಟ್ಟಿಗೆ ಸೇರಿಸುತ್ತಿದ್ದ ಚುನಾವಣಾ ವ್ಯವಸ್ಥೆ, ಈಗ ಅದೇ ಮತದಾರರನ್ನು ಹುಡುಕಿ ಮತಪಟ್ಟಿಯಿಂದ ದೂರ ಉಳಿಯುವಂತೆ ಮಾಡುತ್ತಿದೆಯೇ?
-ಜೆ.ಎಂ.ವೀರಸಂಗಯ್ಯ, ಸದಸ್ಯ,
ಎಸ್‌ಐಆರ್ ವಿರೋಧಿ ಒಕ್ಕೂಟ






