ಸರಕಾರಿ ಶಾಲಾ ಮಕ್ಕಳ ಶೂ-ಸಾಕ್ಸ್ ಗುಣಮಟ್ಟಕ್ಕೆ ಆಕ್ಷೇಪ
ಬ್ರ್ಯಾಂಡ್, ತಯಾರಕರ ವಿವರಗಳಿಲ್ಲದ ಪಾದರಕ್ಷೆ ವಿತರಣೆ; ಗುಣಮಟ್ಟ ಪರಿಶೀಲನೆಗೆ ಒತ್ತಾಯ

ಲಿಂಗಸುಗೂರು: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ಉಚಿತವಾಗಿ ವಿತರಿಸುತ್ತಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಪೋಷಕರು ಹಾಗೂ ವಿವಿಧ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿತರಿಸಲಾದ ಶೂ-ಸಾಕ್ಸ್ ಗಳ ಗುಣಮಟ್ಟವನ್ನು ಸ್ವತಂತ್ರ ಸಂಸ್ಥೆಯಿಂದ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರದ ವಿದ್ಯಾ ವಿಕಾಸ ಯೋಜನೆಯಡಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ ಒಂದು ಜೋಡಿ ಶೂ ಹಾಗೂ ಎರಡು ಜೋಡಿ ಸಾಕ್ಸ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 2026-27ನೇ ಸಾಲಿನಲ್ಲಿ ರಾಜ್ಯದ ಸರಕಾರಿ ಶಾಲೆಗಳ ಸುಮಾರು 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಿಸುವ ಯೋಜನೆ ಜಾರಿಯಲ್ಲಿದೆ. ಕೇಂದ್ರೀಕೃತ ಟೆಂಡರ್ ಮೂಲಕ ಖರೀದಿ ಮಾಡಲಾಗಿದ್ದು, ಪ್ರತಿ ಸೆಟ್‌ಗೆ ಸುಮಾರು ರೂ. 195ರ ಏಕರೂಪ ದರ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ತಯಾರಕರ ವಿವರಗಳಿಲ್ಲ!
ಲಿಂಗಸುಗೂರು ತಾಲೂಕಿನ ಕೆಲವು ಸರಕಾರಿ ಶಾಲೆಗಳಲ್ಲಿ ವಿತರಿಸಲಾದ ಶೂಗಳನ್ನು ಪರಿಶೀಲಿಸಿದಾಗ, ಅವುಗಳ ಮೇಲೆ ತಯಾರಕರ ಹೆಸರು, ಬ್ರ್ಯಾಂಡ್, ಉತ್ಪಾದನಾ ವಿವರ ಅಥವಾ ಗುಣಮಟ್ಟಕ್ಕೆ ಸಂಬಂಧಿಸಿದ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಸರಕಾರಿ ಖರೀದಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ತಾಂತ್ರಿಕ ಮಾನದಂಡಗಳನ್ನು ಪಾಲಿಸಲಾಗಿದೆಯೇ, ಶಾಲೆಗಳಿಗೆ ಪೂರೈಸಿರುವ ಶೂ-ಸಾಕ್ಸ್‌ಗಳನ್ನು ಯಾವ ಸಂಸ್ಥೆ ಸರಬರಾಜು ಮಾಡಿದೆ, ಟೆಂಡರ್ ಯಾವ ಸಂಸ್ಥೆಗೆ ನೀಡಲಾಗಿದೆ ಹಾಗೂ ಗುಣಮಟ್ಟ ಪರೀಕ್ಷೆಯನ್ನು ಯಾವ ಸಂಸ್ಥೆ ನಡೆಸಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟೆಂಡರ್ ದಾಖಲೆ ಬಹಿರಂಗಕ್ಕೆ ಆಗ್ರಹ
2026-27ನೇ ಸಾಲಿನ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ನ ಅಂದಾಜು ಮೊತ್ತ ರೂ. 72.30 ಕೋಟಿಯಾಗಿದೆ ಎಂದು ಲಭ್ಯ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಟೆಂಡರ್‌ಗೆ ಎರಡು ಬಿಡ್‌ಗಳು ದಾಖಲಾಗಿರುವ ಮಾಹಿತಿಯೂ ಲಭ್ಯವಾಗಿದೆ.
ಆದರೆ ಟೆಂಡರ್‌ನಲ್ಲಿ ಸಂಸ್ಥೆಗಳ ಹೆಸರು ಇರುವುದನ್ನಷ್ಟೇ ಆಧರಿಸಿ ಶಾಲೆಗಳಲ್ಲಿ ವಿತರಿಸಿರುವ ಶೂ-ಸಾಕ್ಸ್ ಕಳಪೆ ಗುಣಮಟ್ಟದ್ದಾಗಿವೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ವಿತರಿಸಲಾದ
ಸಾಮಗ್ರಿಗಳ ಪೂರೈಕೆದಾರರ ವಿವರ, ಬ್ಯಾಚ್ ಸಂಖ್ಯೆ, ಬಿಲ್, ವರ್ಕ್‌ಆರ್ಡರ್ ಹಾಗೂ ಗುಣಮಟ್ಟ ಪರೀಕ್ಷಾ ವರದಿಗಳನ್ನು ಪರಿಶೀಲಿಸಿ ಸ್ಪಷ್ಟಪಡಿಸಬೇಕಿದೆ ಎಂದು ಪೋಷಕರು ಹಾಗೂ ಸಂಘಟನೆಗಳು ಒತ್ತಾಯಿಸಿವೆ.
ಯಾವ ಸಂಸ್ಥೆ ಎಷ್ಟು ಪ್ರಮಾಣದ ಶೂ-ಸಾಕ್ಸ್ ಪೂರೈಸಿದೆ, ಪ್ರತಿ ಜೋಡಿಗೆ ಸರಕಾರ ಪಾವತಿಸಿರುವ ಮೊತ್ತ, ಯಾವ ಸಂಸ್ಥೆಗೆ ಯಾವ ಪ್ಯಾಕೇಜ್ ನೀಡಲಾಗಿದೆ ಹಾಗೂ ಗುಣಮಟ್ಟ ಪರೀಕ್ಷೆ ನಡೆಸಿದ ಸಂಸ್ಥೆ ಮತ್ತು ಅದರ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆಯೂ ಆತಂಕ
ಕಳಪೆ ಗುಣಮಟ್ಟದ ಶೂಗಳನ್ನು ಮಕ್ಕಳು ಪ್ರತಿದಿನ ಹಲವು ಗಂಟೆಗಳ ಕಾಲ ಧರಿಸುವುದರಿಂದ ಕಾಲುನೋವು, ಅತಿಯಾದ ಬೆವರು, ಚರ್ಮದ ಉರಿ ಹಾಗೂ ಗಾಯಗಳಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಶೂಗಳ ಗಾತ್ರ ಸರಿಯಾಗಿಲ್ಲದಿದ್ದರೆ ಮಕ್ಕಳ ನಡಿಗೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ, ಉಚಿತವಾಗಿ ವಿತರಿಸಲಾಗುತ್ತಿದೆ ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಪೋಷಕರು ಹೇಳಿದ್ದಾರೆ.
ಶೂ ಮತ್ತು ಸಾಕ್ಸ್‌ಗಳನ್ನು ನೇರವಾಗಿ ರಾಜ್ಯ ಸರಕಾರವೇ ಸರಬರಾಜು ಮಾಡಿದೆ. ಅವುಗಳ ಗುಣಮಟ್ಟದ ಕುರಿತು ನಮಗೆ ಮಾಹಿತಿ ಇಲ್ಲ. ಸರಕಾರದ ಆದೇಶದಂತೆ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬೇಕು.
-ಸುಜಾತ ಹೂನೂರು
ಕ್ಷೇತ್ರ ಶಿಕ್ಷಣಾಧಿಕಾರಿ, ಲಿಂಗಸುಗೂರು
ಸರಕಾರಿ ಹಣವೆಂದರೆ ಸಾರ್ವಜನಿಕರ ಹಣ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಖರೀದಿಸುವ ಶೂ-ಸಾಕ್ಸ್‌ಗಳು ವಿದ್ಯಾರ್ಥಿಗಳಿಗೆ ನಿಗದಿತ ಗುಣಮಟ್ಟದಲ್ಲಿ ದೊರೆಯಬೇಕು. ಶಾಲೆಗಳಿಗೆ ವಿತರಿಸಿದ ನಂತರವೂ ಮಾದರಿಗಳನ್ನು ಸಂಗ್ರಹಿಸಿ ಸ್ವತಂತ್ರ ಗುಣಮಟ್ಟ ಪರೀಕ್ಷಾ ಸಂಸ್ಥೆಯಿಂದ ಪರೀಕ್ಷಿಸಬೇಕು.
-ಜಿಲಾನಿಪಾಷಾ
ತಾಲೂಕು ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಲಿಂಗಸುಗೂರು






