ಜನವಾಸವಿಲ್ಲದೆ ಪಾಳುಬಿದ್ದ ಅಧಿಕಾರಿಗಳ ವಸತಿಗೃಹ ; ವಾಸ್ತು ದೋಷವೆಂದು ವಾಸ ಮಾಡದ ಅಧಿಕಾರಿಗಳು

ಲಿಂಗಸುಗೂರು : ತಾಲೂಕಿನ ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿಯವರ ವಸತಿ ಗೃಹವೇ ಜನವಾಸವಿಲ್ಲದೆ ಪಾಳುಬಿದ್ದು , ಸ್ವಚ್ಛತೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಆಂಗ್ಲರ ಆಡಳಿತದಲ್ಲಿ ಸೈನಿಕರ ನೆಲೆಯಾಗಿದ್ದ ಲಿಂಗಸುಗೂರನ್ನು ಈ ಹಿಂದೆ ಛಾವಣಿ ಎಂದು ಕರೆಯಲಾಗುತ್ತಿತ್ತು. ಆಂಗ್ಲರು ತಮ್ಮ ಅಧಿಕಾರಿಗಳ ವಾಸಕ್ಕಾಗಿ ಕಚೇರಿ ಮತ್ತು ವಸತಿ ಗೃಹಗಳನ್ನು ವಿಶಾಲವಾದ ಜಾಗೆದಲ್ಲಿ ನಿರ್ಮಿಸಿದ್ದರು. ಅಂದು ಬಳಕೆ ಮಾಡಿದ್ದ ಕಟ್ಟಡಗಳಲ್ಲಿಯೇ ಇಂದು ಕೆಲವು ಇಲಾಖೆಗಳ ಕಚೇರಿಗಳನ್ನು ನಡೆಸಲಾಗುತ್ತಿದೆ.
ಅಂತೆಯೇ ತಾಲೂಕು ಪಂಚಾಯತ್‌ಕಾರ್ಯನಿರ್ವಾಹಕ ಅಧಿಕಾರಿ ನಿವಾಸಕ್ಕಾಗಿ ಪಟ್ಟಣದಲ್ಲಿ ವಿಶಾಲ ಆವರಣದಲ್ಲಿ ಮನೆ ನಿರ್ಮಿಸಲಾಗಿತ್ತು. ಆದರೆ ಕಳೆದ 10-15 ವರ್ಷಗಳಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಇಲ್ಲಿ ವಾಸ ಮಾಡುತ್ತಿಲ್ಲ, ಹೀಗಾಗಿ ಮನೆ ಪಾಳುಬಿದ್ದಿದೆ. ಕಿಡಿಗೇಡಿಗಳು ಬಾಗಿಲು ಮುರಿದು ಕೊಂಡು ಹೋಗಿದ್ದಾರೆ. ದಿನೇ ದಿನೇ ಮನೆಯ ಒಂದೊಂದೇ ಪರಿಕರಗಳು ಕಾಣೆಯಾಗುತ್ತಿವೆ.
ತಾಲೂಕಿನ ಜನತೆಗೆ ಸೂರು ವಿತರಿಸುವ ತಾಲೂಕು ಮಟ್ಟದ ಅಧಿಕಾರಿಯ ಅಧಿಕೃತ ಸೂರು ಪಾಳುಬಿದ್ದು ಬಡಪಾಯಿಯಾಗಿದೆ. ಕಟ್ಟಡದ ಒಳಗೆ ಹಾಗೂ ಆವರಣದಲ್ಲಿ ತ್ಯಾಜ್ಯ ಸಂಗ್ರಹವಾಗಿ ಗಿಡಗಂಟಿಗಳು ಬೆಳೆದಿವೆ. ಜನರಿಗೆ ಸ್ವಚ್ಛತೆ ಪಾಠ ಹೇಳುವ ಅಧಿಕಾರಿಯ ನಿವಾಸವೇ ಸ್ವಚ್ಛ ಕಾಣದೇ ಇಡೀ ಪರಿಸರ ಹಾಳಾಗಿದೆ.
10-15 ವರ್ಷದಿಂದ ಖಾಲಿ:
ಈ ವಸತಿ ಗಹೃ ಸುಮಾರು 10-15 ವರ್ಷಗಳಿಂದ ಖಾಲಿ ಬಿದ್ದಿದ್ದು, ಈ ಹಿಂದೆ ಸುಮಾರು ನಾಲ್ಕೈದು ಅಧಿಕಾರಿಗಳು ಬಂದು ಹೋದರೂ ಯಾರು ಈ ವಸತಿ ಗೃಹವನ್ನು ಬಳಕೆ ಮಾಡಿಲ್ಲ. ಈಗ ಬರುವ ಅಧಿಕಾರಿಗಳೆಲ್ಲೂರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಅಧಿಕಾರಿಗಳಲ್ಲಿ ಮನೆ ಮಾಡಿದ ಮೂಢನಂಬಿಕೆ:
ಕಾರ್ಯನಿರ್ವಾಹಕ ಅಧಿಕಾರಿಗಳ ವಸತಿ ಗೃಹದಲ್ಲಿ ವಾಸ್ತು ದೋಷವಿದೆ. ಈ ಹಿಂದೆ ಈ ಮನೆಯಲ್ಲಿ ವಾಸವಿದ್ದ ಎಲ್ಲಾ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಆದ್ದರಿಂದ ಇಲ್ಲಿಗೆ ವರ್ಗವಾಗಿ ಬರುವ ಯಾವೊಬ್ಬ ಅಧಿಕಾರಿಗಳು ಈ ಮನೆಯಲ್ಲಿ ವಾಸ ಮಾಡಲಿಕ್ಕೆ ಹಿಂಜರಿಯುತ್ತಿದ್ದಾರೆ. ಆದ್ದರಿಂದ ಕಟ್ಟಡ ನಿರ್ವಾಹಣೆ ಇಲ್ಲದೇ ಪಾಳುಬಿದ್ದಿದೆ.
ಇಓ ವಸತಿ ಗೃಹ ಪಾಳುಬಿದ್ದ ಪರಿಣಾಮ ಪುಂಡಪೋಕರಿಗಳ ತಾಣವಾಗಿ ಮಾರ್ಪಟ್ಟಿದೆ. ಸಂಜೆಯಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ ಕುಡುಕರ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.
ಪಟ್ಟಣದಲ್ಲಿ 4 ಎಕರೆ ವಿಸ್ತೀರ್ಣದ ತರಕಾರಿ ಮಾರುಕಟ್ಟೆ ಇಂದು ಒತ್ತುವರಿಯಾಗಿ ಕೇವಲ 2 ಎಕರೆ ಉಳಿದಿದೆ. ಮಳೆ ಬಂದರೆ ಕೆಸರು ಗದ್ದೆಯಾಗಿ ಮಾರ್ಪಡಾಗುತ್ತದೆ. ಈ ಎರಡು ಎಕರೆ ಜಾಗದಲ್ಲಿಯೇ ತರಕಾರಿ ಮಾರುಕಟ್ಟೆ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ವಸತಿ ಗೃಹವನ್ನು ತೆರವುಗೊಳಿಸಿ ತರಕಾರಿ ಮಾರುಕಟ್ಟೆ ಮಾಡುವ ಅವಶ್ಯಕತೆ ಇಲ್ಲ. ಅದೇ ಸ್ಥಳದಲ್ಲಿ ಈಗಾಗಲೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಉಪಯೋಗಕ್ಕೆ ಬಾರದೆ ಅವು ಸಹ ಪಾಳುಬಿದ್ದಿವೆ. ಜನರಿಗೆ ಉಪಯೋಗವಾಗುವಂತ ಕಟ್ಟಡಗಳನ್ನು ನಿರ್ಮಿಸಬೇಕೆ ವಿನಹ ಸರಕಾರದ ಅನುದಾನ ತಂದು ವ್ಯರ್ಥ ಮಾಡುವುದು ಎಷ್ಟು ಸರಿ
- ಜಹೀರುದ್ದೀನ್ ಗೌಸ್, ಮುಸ್ಲಿ ಮುಖಂಡ, ಲಿಂಗಸುಗೂರು.
ವಸತಿ ಗೃಹವನ್ನು ತೆರವುಗೊಳಿಸಿ ಅಲ್ಲಿ ತರಕಾರಿ ಮಾರುಕಟ್ಟೆ ಮಾಡುವುದಕ್ಕಾಗಿ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಆದೇಶ ಬಂದ ತಕ್ಷಣ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ವಸತಿ ಗೃಹಕ್ಕೆ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ.
ಉಮೇಶ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ಲಿಂಗಸುಗೂರು







