ಸಾರ್ವಜನಿಕ ಶೌಚಾಲಯಕ್ಕೆ ದಾರಿ, ನೀರಿನ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳು: ಆರೋಪ

ಬೀದರ್, ಸೆ.7: ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡಗಾಂವ್ ಗ್ರಾಮದಲ್ಲಿ ಸರಕಾರದಿಂದ ಎರಡು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಎರಡು ಶೌಚಾಲಯಕ್ಕೂ ನೀರು ಇಲ್ಲ, ದಾರಿಯೂ ಇಲ್ಲದಾಗಿದೆ.
ಎರಡು ಶೌಚಾಲಯಗಳು 2013-14 ರ ಅವಧಿಯಲ್ಲಿಯೇ ನಿರ್ಮಿಸಲಾಗಿದೆ ಎನ್ನುವುದು ಶೌಚಾಲಯಗಳ ಮೇಲೆ ಬರೆದ ಬೋರ್ಡ್‌ನಿಂದಾಗಿ ತಿಳಿದು ಬರುತ್ತಿದೆ. ಅಂದರೆ ಒಂದು ಶೌಚಾಲಯದ ಉದ್ಘಾಟನೆ ಅಥವಾ ಉಪಯೋಗ ಆಗದಿದ್ದರೂ ಕೂಡ ಇನ್ನೊಂದು ಶೌಚಾಲಯ ನಿರ್ಮಿಸಲಾಗಿದೆ. ಒಂದು ಶೌಚಾಲಯ ಶಾಸಕರ ಅನುದಾನದ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ನಿರ್ಮಿಸಿದರೆ, ಇನ್ನೊಂದು ಶೌಚಾಲಯವು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗಿದೆ.
ಶಾಸಕರ ಅನುದಾನದ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ನಿರ್ಮಿಸಿದ ಶೌಚಾಲಯಕ್ಕೆ ಸುಮಾರು 5 ಲಕ್ಷ ರೂ. ಖರ್ಚು ಮಾಡಿದರೆ, ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಶೌಚಾಲಯಕ್ಕೆ ಸುಮಾರು 10 ಲಕ್ಷ ರೂ. ಖರ್ಚು ಮಾಡಲಾಗಿದೆ. ಆದರೆ ಈ ಎರಡು ಶೌಚಾಲಯಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದರೂ ಉಪಯೋಗಕ್ಕೆ ಬಾರದಾಗಿವೆ. ಕಾರಣ ಎರಡು ಶೌಚಾಲಯಗಳಿಗೆ ಹೋಗುವುದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದಾರಿ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಗ್ರಾಮದಲ್ಲಿ ಎರಡು ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ ಕಟ್ಟಡ ಕಟ್ಟಿದರೂ ಕೂಡ ಅದಕ್ಕೆ ಮೂಲಭೂತ ಸೌಕರ್ಯವಿಲ್ಲದೆ ಪಾಳು ಬಿದ್ದಿವೆ. ಹೀಗಾಗಿ ಈ ಗ್ರಾಮದ ಜನರು ಸಾರ್ವಜನಿಕ ಶೌಚಾಲಯ ಇದ್ದರೂ ಬಯಲು ಶೌಚಕ್ಕೆ ಹೋಗುತ್ತಿರುವುದು ವಿಪರ್ಯಾಸವಾಗಿದೆ.
ಮನೆಯಲ್ಲಿ ಶೌಚಾಲಯ ಇದ್ದವರಿಗೆ ಸಮಸ್ಯೆ ಇಲ್ಲ. ಆದರೆ ಬಹುತೇಕ ಜನರ ಮನೆಯಲ್ಲಿ ಶೌಚಾಲಯವಿಲ್ಲ. ಹಾಗಾಗಿ ಶೌಚಾಲಯಕ್ಕೆ ಬಯಲಿಗೆ ಹೋಗುವುದು ಅನಿವಾರ್ಯವಾಗಿದೆ. ಹೆಣ್ಣುಮಕ್ಕಳಿಗಂತೂ ತುಂಬಾ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಎರಡು ಶೌಚಾಲಯಗಳಿಗೆ ರಸ್ತೆ ಮತ್ತು ನೀರಿನ ವ್ಯವಸ್ಥೆ ಮಾಡಿದರೆ ಉಪಯೋಗ ಮಾಡಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಶೌಚಾಲಯಗಳು ಯಾವ ಇಲಾಖೆಯಿಂದ ನಿರ್ಮಾಣವಾಗಿವೆ ಎಂದು ನಮಗೆ ಮಾಹಿತಿ ಇಲ್ಲ. ಗ್ರಾಮ ಪಂಚಾಯತ್‌ನ ಯಾವುದೇ ಅನುದಾನದಡಿ ಅವು ನಿರ್ಮಾಣವಾಗಿಲ್ಲ. ಸರಕಾರದ ಯಾವುದೇ ಅನುದಾನದಡಿ ಅವು ನಿರ್ಮಾಣವಾದರೆ, ಅವು ಗ್ರಾಮ ಪಂಚಾಯತ್ ಗೆ ಹಸ್ತಾಂತರ ಕೂಡ ಆಗಿಲ್ಲ. ನಮ್ಮ ಪಂಚಾಯತ್‌ನಡಿಯಲ್ಲಿ ಆಗಿದ್ದರೆ ನಮ್ಮಲ್ಲಿ ಮಾಹಿತಿ ರುತ್ತಿತ್ತು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವೇಂದ್ರ ತಿಳಿಸಿದ್ದಾರೆ.
ನಮ್ಮೂರಲ್ಲಿ ಶೌಚಾಲಯ ಕಟ್ಟಿದಾಗಿನಿಂದ ಅದಕ್ಕೆ ನೀರಿನ ವ್ಯವಸ್ಥೆ ಮಾಡಿಲ್ಲ. ದಾರಿ ವ್ಯವಸ್ಥೆ ಕೂಡ ಇಲ್ಲ. ದಾರಿ ಮತ್ತು ನೀರಿನ ವ್ಯವಸ್ಥೆ ಮಾಡಿದರೆ ಗ್ರಾಮಸ್ಥರು ಶೌಚಾಲಯದ ಉಪಯೋಗ ಮಾಡಬಹುದು.
-ಶೇಷಣ್ಣ, ರಾಚಪ್ಪಗೌಡಗಾಂವ್ ಗ್ರಾಮಸ್ಥ
ಈ ಶೌಚಾಲಯಗಳು ಯಾವ ಅನುದಾನದಡಿಯಲ್ಲಿ ನಿರ್ಮಾಣವಾಗಿವೆ ಎನ್ನುವ ಮಾಹಿತಿ ನಮಗಿಲ್ಲ. ಸರಕಾರದ ಬೇರೆ ಅನುದಾನದಡಿ ನಿರ್ಮಾಣವಾದರೆ ಅವು ಗ್ರಾಮ ಪಂಚಾಯತ್ ಗೆ ಹಸ್ತಾಂತರ ಕೂಡ ಆಗಲಿಲ್ಲ. ಸಾಧ್ಯವಾದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಶೌಚಾಲಯಗಳ ದುರಸ್ಥಿ ಕೆಲಸ ಮಾಡಲಾಗುವುದು.
-ದೇವೇಂದ್ರ, ಪಿಡಿಒ, ರಾಚಪ್ಪಗೌಡಗಾಂವ್ ಗ್ರಾಪಂ







