ಹಳೆಯ ವಿಮಾನಗಳಿಗೆ ಹೊಸ ಶಕ್ತಿ: ‘ನೇತ್ರಾ 2’ ಕ್ರಾಂತಿ

ಆತ್ಮನಿರ್ಭರ (ಸ್ವಾವಲಂಬಿ) ಭಾರತವನ್ನು ಸಾಧಿಸುವ ಮಹತ್ವಾಕಾಂಕ್ಷೆಗೆ ನೇತ್ರಾ2 ಬಹುದೊಡ್ಡ ಮೈಲಿಗಲ್ಲು. ಇದಕ್ಕೆ ಸಂಬಂಧಿಸಿದ ಬಹುತೇಕ ಯೋಜನಾ ವ್ಯವಸ್ಥೆಗಳನ್ನು ಭಾರತದೊಳಗೇ ಅಭಿವೃದ್ಧಿ ಪಡಿಸಲಾಗಿದ್ದು, ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಿದೆ.
ಭಾರತ ತನ್ನ ವೈಮಾನಿಕ ಕಣ್ಗಾವಲು ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಸೆಂಟರ್ ಫಾರ್ ಏರ್‌ಬಾರ್ನ್ ಸಿಸ್ಟಮ್ಸ್ (ಸಿಎಬಿಎಸ್), ಡಿಆರ್‌ಡಿಒ ಮತ್ತು ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ನಡುವೆ ಬೆಂಗಳೂರಿನಲ್ಲಿ ಸಹಿ ಹಾಕಲಾದ ಈ ಒಪ್ಪಂದ, ಭಾರತದ ಮುಂದಿನ ತಲೆಮಾರಿನ ಏರ್‌ಬಾರ್ನ್ ಅರ್ಲಿ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಮ್ (ಎಇಡಬ್ಲ್ಯುಸಿ) ಅಭಿವೃದ್ಧಿ ಮತ್ತು ಉತ್ಪಾದನೆಗೆ ಚಾಲನೆ ನೀಡಿದೆ. ಇದನ್ನು ‘ನೇತ್ರಾ2’ ಎಂದು ಕರೆಯಲಾಗಿದೆ.
ಇದು ಇನ್ನೊಂದು ರಕ್ಷಣಾ ಯೋಜನೆಯಷ್ಟೇ ಅಲ್ಲ. ಇದೇ ಮೊದಲ ಬಾರಿಗೆ ಭಾರತದ ಒಂದು ಖಾಸಗಿ ಕಂಪೆನಿಗೆ ಇಂತಹ ಮಹತ್ವದ ವೈಮಾನಿಕ ಕಣ್ಗಾವಲು ಯೋಜನೆಯನ್ನು ನಿರ್ಮಿಸುವ ಜವಾಬ್ದಾರಿ ವಹಿಸಲಾಗಿದ್ದು, ಇದು ಭಾರತದ ದೇಶೀಯ ರಕ್ಷಣಾ ಉದ್ಯಮದ ಕುರಿತು ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಪ್ರದರ್ಶಿಸಿದೆ.
ಒಂದು ಏರ್‌ಬಾರ್ನ್ ಅರ್ಲಿ ವಾರ್ನಿಂಗ್ ಆಂಡ್ ಕಂಟ್ರೋಲ್ ಸಿಸ್ಟಮ್ (ಎಇಡಬ್ಲ್ಯುಸಿ) ಎನ್ನುವುದು ಹಾರಾಡುವ ಕಮಾಂಡ್ ಕೇಂದ್ರದಂತೆ ಕಾರ್ಯಾಚರಿಸುತ್ತದೆ. ಶಕ್ತಿಶಾಲಿ ರೇಡಾರ್‌ಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಹೊಂದಿರುವ ಈ ವ್ಯವಸ್ಥೆ ಶತ್ರು ಏರ್‌ಕ್ರಾಫ್ಟ್‌ಗಳು, ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಹಡಗುಗಳನ್ನು ನೂರಾರು ಕಿಲೋಮೀಟರ್ ದೂರದಿಂದಲೇ ಗುರುತಿಸಬಲ್ಲದು. ಇದು ಮಿತ್ರ ಯುದ್ಧವಿಮಾನಗಳನ್ನು ಪತ್ತೆ ಹಚ್ಚಬಲ್ಲದಾಗಿದ್ದು, ಯುದ್ಧ ಮತ್ತು ಶಾಂತಿ ಎರಡೂ ಸಮಯದಲ್ಲೂ ಅತ್ಯಂತ ಉಪಯುಕ್ತ ಆಸ್ತಿಯಾಗಿರಲಿದೆ.
ಭಾರತ ಈಗ ಎರಡು ವಾಯುಗಾಮಿ ಕಣ್ಗಾವಲು ವ್ಯವಸ್ಥೆಗಳನ್ನು ಬಳಸುತ್ತಿದೆ. ರಶ್ಯನ್ ನಿರ್ಮಾಣದ ಐಎಲ್-76 ವಿಮಾನಗಳಿಗೆ ಅಳವಡಿಸಿರುವ ದೊಡ್ಡದಾದ ಫಾಲ್ಕನ್ ಎಡಬ್ಲ್ಯುಎಸಿಎಸ್‌ಗಳು ಇಸ್ರೇಲಿ ರೇಡಾರ್ ವ್ಯವಸ್ಥೆಯ ಜೊತೆಗೂಡಿ, ತನ್ನ ವಿಶಿಷ್ಟವಾದ ಸುತ್ತುವ ರೇಡೋಮ್ ಮೂಲಕ 360 ಡಿಗ್ರಿ ಚಿತ್ರಣವನ್ನು ಒದಗಿಸುತ್ತದೆ. ಈ ವಿಮಾನಗಳು ದೀರ್ಘ ವ್ಯಾಪ್ತಿಯ ಕಣ್ಗಾವಲು ಮತ್ತು ಕಮಾಂಡ್ ಸಾಮರ್ಥ್ಯವನ್ನು ಒದಗಿಸುತ್ತವೆ.
ಇನ್ನು ಎರಡನೇ ವ್ಯವಸ್ಥೆ ಎಂದರೆ ದೇಶೀಯ ನಿರ್ಮಾಣದ ನೇತ್ರಾ ಎಇಡಬ್ಲ್ಯುಸಿ ಆಗಿದ್ದು, ಇದನ್ನು ಸಣ್ಣದಾದ ಎಂಬ್ರಾಯರ್ ಇಆರ್‌ಜೆ-145 ವಿಮಾನದಲ್ಲಿ ಅಳವಡಿಸಲಾಗುತ್ತದೆ. ಇದು ಅತ್ಯಂತ ಸಮರ್ಥವಾಗಿದ್ದರೂ, ಒಂದು ಮುಖ್ಯ ಇತಿಮಿತಿಯನ್ನು ಹೊಂದಿದೆ. ಅದೇನೆಂದರೆ, ಇದು ಬಹುತೇಕ 240 ಡಿಗ್ರಿಯಷ್ಟು ಕಣ್ಗಾವಲು ಒದಗಿಸುತ್ತಿದ್ದು, ಪೂರ್ಣ ಸಾಮರ್ಥ್ಯದ ಎಡಬ್ಲ್ಯುಎಸಿಎಸ್‌ಗೆ ಹೋಲಿಸಿದರೆ ಒಂದಷ್ಟು ವ್ಯಾಪ್ತಿಯನ್ನು ಉಳಿಸುತ್ತದೆ.
ಪಾಕಿಸ್ತಾನ ಮತ್ತು ಚೀನಾ ಎರಡರಿಂದಲೂ ಭದ್ರತಾ ಸವಾಲುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಭಾರತೀಯ ವಾಯುಪಡೆಗೆ ವಿವಿಧ ಅಪಾಯಗಳನ್ನು ಏಕಕಾಲದಲ್ಲಿ ಗಮನಿಸಬಲ್ಲ ಹೆಚ್ಚು ಶಕ್ತಿಶಾಲಿ ವಾಯುಗಾಮಿ ಕಣ್ಗಾವಲು ವ್ಯವಸ್ಥೆಗಳ ಅಗತ್ಯವಿದೆ. ಇಂತಹ ಅವಶ್ಯಕತೆಯೇ ನೇತ್ರಾ2ರ ಅಭಿವೃದ್ಧಿಗೆ ಹಾದಿ ಮಾಡಿಕೊಟ್ಟಿತು.
ಹೊಸದಾಗಿ ನಿರ್ಮಾಣವಾಗುವ ಏರ್‌ಕ್ರಾಫ್ಟ್ ಗಳಿಗಾಗಿ ನಾಲ್ಕರಿಂದ ಐದು ವರ್ಷಗಳ ಕಾಲ ಕಾಯುವ ಬದಲು, ಭಾರತ ಒಂದು ನವೀನ ವಿಧಾನವನ್ನು ಆರಿಸಿಕೊಂಡಿತು. ಏರ್ ಇಂಡಿಯಾದ ಮೇಲಿನ ಹೂಡಿಕೆ ಹಿಂಪಡೆತವಾದ ಬಳಿಕ, ಹಲವಾರು ಏರ್‌ಬಸ್ ಎ321 ವಿಮಾನಗಳು ಲಭ್ಯವಾದವು. ಸರಕಾರ ಈ ವಿಮಾನಗಳನ್ನು ಮಿಲಿಟರಿ ಕಣ್ಗಾವಲು ವೇದಿಕೆಗಳಾಗಿ ಪರಿವರ್ತಿಸುವ ಸಲುವಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತು.
ಈ ನಿರ್ಧಾರ ಹಲವಾರು ಅನುಕೂಲತೆಗಳನ್ನು ಒದಗಿಸಿತು. ಈ ವಿಮಾನಗಳು ಇನ್ನೂ ಬಹುತೇಕ 30 ವರ್ಷಗಳ ಕಾರ್ಯಾಚರಣಾ ಆಯುಷ್ಯ ಹೊಂದಿದ್ದು, ನಿಯೋಜನೆ ಹೆಚ್ಚುತ್ತಿದ್ದರೂ ಖರೀದಿ ವೆಚ್ಚಗಳು ಕಡಿಮೆಯಾಗುತ್ತಿವೆ. ನಾಗರಿಕ ವಿಮಾನಗಳನ್ನೂ ಹೇಗೆ ಯುದ್ಧ ಅಥವಾ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹಳ ಬೇಗನೆ ಇತರ ಉದ್ದೇಶಗಳಿಗೆ ಬಳಸಬಹುದು ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಇದು ದೇಶಕ್ಕೆ ಒಂದು ಕಾರ್ಯತಂತ್ರದ ಮೀಸಲನ್ನೂ ನಿರ್ಮಿಸುತ್ತದೆ.
ಏರ್‌ಬಸ್ ಎ321 ಸಹ ಎಂಬ್ರಾಯರ್‌ಗಿಂತ ಹೆಚ್ಚು ಸಮರ್ಥವಾಗಿದೆ. ಇದು ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸಬಲ್ಲದು, ಹೆಚ್ಚು ಭಾರದ ಕಾರ್ಯಾಚರಣಾ ಉಪಕರಣಗಳನ್ನು ಒಯ್ಯಬಲ್ಲದು, ಹೆಚ್ಚಿನ ಕಾಲ ಗಾಳಿಯಲ್ಲೇ ಉಳಿಯಬಲ್ಲದು ಮತ್ತು ಹೆಚ್ಚು ವಿಸ್ತಾರವಾದ ಪ್ರದೇಶಗಳನ್ನು ವೀಕ್ಷಿಸಬಲ್ಲದು. ಈ ಸಾಮರ್ಥ್ಯ ಇದನ್ನು ಮುಂದಿನ ತಲೆಮಾರಿನ ವಾಯುಗಾಮಿ ಕಣ್ಗಾವಲು ವ್ಯವಸ್ಥೆಗೆ ಸೂಕ್ತ ವೇದಿಕೆಯನ್ನಾಗಿಸಿದೆ.
ಈ ಯೋಜನೆಯ ಇನ್ನೊಂದು ಮುಖ್ಯವಾದ ಅಂಶವೆಂದರೆ, ನಾಗರಿಕ ವಿಮಾನಗಳನ್ನು ಅತ್ಯಾಧುನಿಕ ಮಿಲಿಟರಿ ವೇದಿಕೆಗಳನ್ನಾಗಿ ಪರಿವರ್ತಿಸುವಲ್ಲಿ ಭಾರತೀಯ ಉದ್ಯಮಗಳು ನಿರ್ವಹಿಸುವ ಪಾತ್ರ. ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎಐಇಎಸ್‌ಎಲ್) ಹಳೆಯ ಏರ್ ಇಂಡಿಯಾ ಏರ್‌ಬಸ್ ಎ321 ವಿಮಾನಗಳನ್ನು ‘ಗ್ರೀನ್ ಏರ್ ಫ್ರೇಮ್’ ಎಂದು ಕರೆಯುವ ವ್ಯವಸ್ಥೆಗಳಾಗಿ ಪರಿವರ್ತಿಸುವ ಜವಾಬ್ದಾರಿ ಹೊಂದಿದೆ. ಅಂದರೆ, ವಿಮಾನದ ಪ್ರಯಾಣಿಕ ಆಸನಗಳು, ಮೇಲ್ಭಾಗದ ಸಂಗ್ರಹಣಾ ಕ್ಯಾಬಿನ್‌ಗಳು, ಕ್ಯಾಬಿನ್ ವ್ಯವಸ್ಥೆಗಳು, ವೈರಿಂಗ್ ಮತ್ತು ಇತರ ಏರ್‌ಲೈನ್ ಉಪಕರಣಗಳು ಸೇರಿದಂತೆ ಅದರ ವಾಣಿಜ್ಯಿಕ ಒಳಾಂಗಣ ವ್ಯವಸ್ಥೆಗಳನ್ನು ತೆಗೆದು, ಕೇವಲ ವಿಮಾನದ ಚೌಕಟ್ಟನ್ನು ಮಾತ್ರವೇ ಉಳಿಸಿಕೊಳ್ಳಲಾಗುತ್ತದೆ. ಹೀಗೆ ಉಳಿಯುವ ಚೌಕಟ್ಟನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅವಶ್ಯಕತೆ ಇರುವಲ್ಲಿ ಅದನ್ನು ಬಲಪಡಿಸಿ, ಬಳಿಕ ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಔದ್ಯಮಿಕ ಪಾಲುದಾರರು ಆಧುನಿಕ ಮಿಲಿಟರಿ ಉಪಕರಣಗಳನ್ನು ಅಳವಡಿಸಲು ಸೂಕ್ತವಾಗುವಂತೆ ಮಾಡಲಾಗುತ್ತದೆ. ಈ ಮಿಲಿಟರಿ ಉಪಕರಣಗಳಲ್ಲಿ ಶಕ್ತಿಶಾಲಿ ಕಣ್ಗಾವಲು ರೇಡಾರ್‌ಗಳು, ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳು, ಯೋಜನಾ ಕಂಪ್ಯೂಟರ್‌ಗಳು, ಕಾರ್ಯ ನಿರ್ವಾಹಕರ ವರ್ಕ್ ಸ್ಟೇಷನ್‌ಗಳು, ಸುರಕ್ಷಿತ ಸಂವಹನ ಜಾಲಗಳು, ಕ್ಷಿಪಣಿ ಎಚ್ಚರಿಕಾ ವ್ಯವಸ್ಥೆಗಳು ಮತ್ತು ಕಮಾಂಡ್ ಆಂಡ್ ಕಂಟ್ರೋಲ್ ಉಪಕರಣಗಳು ಸೇರಿವೆ. ಸರಳವಾಗಿ ಹೇಳುವುದಾದರೆ, ಎಐಇಎಸ್‌ಎಲ್ ವಿಮಾನದ ದೇಹವನ್ನು ಸಿದ್ಧಪಡಿಸಿದರೆ, ಡಿಆರ್‌ಡಿಒ ಮತ್ತು ಅದರ ಸಹಯೋಗಿಗಳು ಅದರೊಳಗೆ ಅತ್ಯಾಧುನಿಕ ಮೆದುಳು ಮತ್ತು ನರಮಂಡಲವನ್ನು ಅಳವಡಿಸುತ್ತವೆ. ಇದು ವಿಮಾನವನ್ನು ನೇತ್ರಾ2 ಎಇಡಬ್ಲ್ಯುಸಿ ವ್ಯವಸ್ಥೆಯಾಗಿ ರೂಪುಗೊಳಿಸುತ್ತದೆ.
ಒಂದು ಬಾರಿ ವಿಮಾನದ ಚೌಕಟ್ಟಿನ ಮಾರ್ಪಾಡು ಪೂರ್ಣಗೊಂಡ ಬಳಿಕ, ಡಿಆರ್‌ಡಿಒ, ಅದಾನಿ ಡಿಫೆನ್ಸ್ ಮತ್ತು ಇತರ ಹಲವು ಭಾರತೀಯ ರಕ್ಷಣಾ ಉದ್ದಿಮೆಗಳು ಅತ್ಯಾಧುನಿಕ ದೇಶೀಯ ನಿರ್ಮಾಣದ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸುತ್ತವೆ. ರೇಡಾರ್, ಇಲೆಕ್ಟ್ರಾನಿಕ್ ವಾರ್‌ಫೇರ್ ಉಪಕರಣಗಳು, ಸುರಕ್ಷಿತ ಸಂವಹನ ಮತ್ತು ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗಳು ಸೇರಿದಂತೆ ಬಹುತೇಕ ಯೋಜನಾ ಉಪಕರಣಗಳನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತದೆ.
ಈ ವಿಮಾನದ ಪ್ರಮಾಣಪತ್ರ ಮತ್ತು ಪರೀಕ್ಷೆಗಳನ್ನು ಭಾರತೀಯ ವಾಯುಪಡೆ, ಸಿಇಎಂಐಎಲ್‌ಎಸಿ ಮತ್ತು ಡಿಜಿಸಿಎಗಳು ಜಂಟಿಯಾಗಿ ನಡೆಸಲಿದ್ದು, ಮಿಲಿಟರಿ ಪರಿಣಾಮ ಮತ್ತು ವೈಮಾನಿಕ ಸುರಕ್ಷತೆಗಳನ್ನು ಖಾತ್ರಿಪಡಿಸಲಿವೆ.
ಆತ್ಮನಿರ್ಭರ (ಸ್ವಾವಲಂಬಿ) ಭಾರತವನ್ನು ಸಾಧಿಸುವ ಮಹತ್ವಾಕಾಂಕ್ಷೆಗೆ ನೇತ್ರಾ2 ಬಹುದೊಡ್ಡ ಮೈಲಿಗಲ್ಲು. ಇದಕ್ಕೆ ಸಂಬಂಧಿಸಿದ ಬಹುತೇಕ ಯೋಜನಾ ವ್ಯವಸ್ಥೆಗಳನ್ನು ಭಾರತದೊಳಗೇ ಅಭಿವೃದ್ಧಿ ಪಡಿಸಲಾಗಿದ್ದು, ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಭಾರತದ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ನೇತ್ರಾ2 ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಗಡಿಗಳ ಬಳಿ ಅಪಾಯಗಳನ್ನು ಗುರುತಿಸಿ ಪ್ರತಿಕ್ರಿಯಿಸುವುದಕ್ಕೆ ಸೀಮಿತವಾಗದೆ, ಬಲು ದೂರದಿಂದಲೇ ಅವುಗಳನ್ನು ಗುರುತಿಸುವಂತೆ ಮಾಡಲಿದೆ. ಮೊದಲೇ ಮುನ್ನೆಚ್ಚರಿಕೆ ಲಭಿಸುವುದರಿಂದ, ಕಮಾಂಡರುಗಳಿಗೆ ಯುದ್ಧ ವಿಮಾನಗಳನ್ನು ನಿಯೋಜಿಸಲು, ವಾಯು ರಕ್ಷಣಾ ವ್ಯವಸ್ಥೆಗಳನ್ನು ಚಾಲ್ತಿಗೊಳಿಸಲು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಚಾಲ್ತಿಗೊಳಿಸಲು ಹೆಚ್ಚಿನ ಸಮಯಾವಕಾಶ ಲಭಿಸುತ್ತದೆ.
ನಿವೃತ್ತ ನಾಗರಿಕ ವಿಮಾನಗಳನ್ನು ಕಾರ್ಯತಂತ್ರದ ಮಿಲಿಟರಿ ಆಸ್ತಿಗಳಾಗಿ ಪರಿವರ್ತಿಸಬಹುದು, ಇದೇ ವೇಳೆ ಭಾರತದ ದೇಶೀಯ ತಾಂತ್ರಿಕ ಸಾಮರ್ಥ್ಯವನ್ನೂ ವೃದ್ಧಿಸಬಹುದು ಎನ್ನುವುದನ್ನು ಈ ಯೋಜನೆ ಸಾಬೀತುಪಡಿಸಿದೆ.
ನೇತ್ರಾ2 ಸೇವೆಗೆ ಸೇರ್ಪಡೆಯಾದಾಗ, ಅದು ಭಾರತೀಯ ವಾಯುಪಡೆಯ ಬತ್ತಳಿಕೆಗೆ ಕೇವಲ ಇನ್ನೊಂದು ವಿಮಾನವನ್ನು ಮಾತ್ರವೇ ಸೇರ್ಪಡೆಗೊಳಿಸುವುದಿಲ್ಲ. ಬದಲಿಗೆ, ದೂರದ ತನಕ ವೀಕ್ಷಿಸುವ, ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಮತ್ತು ಆತ್ಮವಿಶ್ವಾಸದಿಂದ ದೇಶದ ವಾಯು ಪ್ರದೇಶವನ್ನು ರಕ್ಷಿಸುವ ಭಾರತದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ದಿನೇ ದಿನೇ ಭದ್ರತಾ ವಾತಾವರಣ ಸಂಕೀರ್ಣ ವಾಗುತ್ತಿದ್ದು, ‘ಆಗಸದಲ್ಲಿನ ಕಣ್ಣು’ ದೇಶದ ಅತ್ಯಂತ ಮೌಲ್ಯಯುತ ಕಾರ್ಯತಂತ್ರದ ಆಸ್ತಿ ಎನಿಸಲಿದೆ.






