ಆನ್ಲೈನ್ ನೋಂದಣಿಗೆ ಸಿಗದ ಅವಕಾಶ : ಪದವೀಧರರ ಮತದಾರರ ಸಂಖ್ಯೆ ಕುಸಿತ

ಸಾಂದರ್ಭಿಕ ಚಿತ್ರ | Photo credit : AI
ಹುಬ್ಬಳ್ಳಿ : ಉನ್ನತ ಶಿಕ್ಷಣ ಪಡೆದ ಪದವೀಧರರು ವಿಧಾನ ಪರಿಷತ್ ಚುನಾವಣೆಯಿಂದ ದೂರ ಉಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಪದವೀಧರರ ನೋಂದಣಿ ಪ್ರಕ್ರಿಯೆ ಹಾಗೂ ಮತದಾನದ ಕುರಿತು ಜಾಗೃತಿಯ ಕೊರತೆಯ ಚರ್ಚೆ ಮುನ್ನೆಲೆಗೆ ಬಂದಿದೆ.
ಪ್ರತಿ ಚುನಾವಣೆಯ ಸಂದರ್ಭದಲ್ಲೂ ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಸಿ ಕೊಳ್ಳಬೇಕಿರುವುದು, ಆನ್ಲೈನ್ ನೋಂದಣಿಗೆ ಅವಕಾಶವಿಲ್ಲದಿರುವುದು ಹಾಗೂ ಸಮರ್ಪಕ ಮಾಹಿತಿ ದೊರೆಯದಿರುವುದು ಅನೇಕ ಅರ್ಹರು ಮತದಾನದಿಂದ ದೂರ ಉಳಿಯಲು ಕಾರಣವಾಗುತ್ತಿದೆ.
ಪದವೀಧರರ ಸಂಖ್ಯೆ ಹೆಚ್ಚು; ನೋಂದಣಿ ಕಡಿಮೆ :
ಇತ್ತೀಚೆಗೆ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 97,400 ಮತದಾರರು ನೋಂದಣಿಯಾಗಿದ್ದರು. ಆದರೆ, ಅರ್ಹ ಪದವೀಧರರ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ. ನೋಂದಣಿ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ ಅನೇಕರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುತ್ತಿಲ್ಲ.
ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ನಡೆಯುವಂತೆ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲೂ ವ್ಯಾಪಕ ಜಾಗೃತಿ ಅಭಿಯಾನ ನಡೆಯುತ್ತಿಲ್ಲ ಎಂಬ ಅಸಮಾಧಾನವಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರಿಚಯಸ್ಥರನ್ನು ಗುರುತಿಸಿ ನೋಂದಣಿ ಮಾಡಿಸುವ ಪ್ರಯತ್ನ ನಡೆಸಿದರೂ, ಎಲ್ಲ ಅರ್ಹರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವವರನ್ನಷ್ಟೇ ನೋಂದಣಿ ಮಾಡಿಸುವ ಪ್ರವೃತ್ತಿಯೂ ಕಂಡುಬರುತ್ತಿದೆ ಎಂಬ ಆರೋಪವಿದೆ.
ಆನ್ಲೈನ್ ನೋಂದಣಿಗೆ ಆಗ್ರಹ :
ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆನ್ಲೈನ್ ಸೌಲಭ್ಯವಿದೆ. ಆದರೆ, ಪದವೀಧರರ ಕ್ಷೇತ್ರದ ನೋಂದಣಿ ಪ್ರಕ್ರಿಯೆಯಲ್ಲಿ ಇದೇ ರೀತಿಯ ಸರಳ ವ್ಯವಸ್ಥೆ ಇಲ್ಲದಿರುವುದು ಉದ್ಯೋಗಸ್ಥರು ಹಾಗೂ ದೂರದ ಪ್ರದೇಶಗಳಲ್ಲಿರುವ ಪದವೀಧರರಿಗೆ ತೊಂದರೆಯಾಗಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು, ದಾಖಲೆಗಳನ್ನು ಅಪ್ಲೋಡ್ ಮಾಡಲು ಹಾಗೂ ನೋಂದಣಿ ಸ್ಥಿತಿ ಪರಿಶೀಲಿಸಲು ಅವಕಾಶ ಕಲ್ಪಿಸಿದರೆ ಹೆಚ್ಚಿನವರು ನೋಂದಣಿಗೆ ಮುಂದಾಗಬಹುದು. ಜತೆಗೆ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಪದವೀಧರರ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸುವ ಅಗತ್ಯವಿದೆ.
ಪದವೀಧರರ ನಿರಾಸಕ್ತಿಯೂ ಕಾರಣ: ನೋಂದಣಿ ಪ್ರಕ್ರಿಯೆಯ ತೊಡಕುಗಳ ಜತೆಗೆ ಪದವೀಧರರ ನಿರಾಸಕ್ತಿಯೂ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ. ವಿಧಾನ ಪರಿಷತ್ತಿನಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವಿದ್ದರೂ, ಅನೇಕರು ಅದನ್ನು ಬಳಸಿಕೊಳ್ಳುತ್ತಿಲ್ಲ. ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ನೋಂದಣಿ ಪ್ರಕ್ರಿಯೆಯನ್ನು ಸರಳ ಗೊಳಿಸಿ ಜಾಗೃತಿ ಮೂಡಿಸುವುದರ ಜತೆಗೆ, ಪದವೀಧರರೂ ತಮ್ಮ ಮತದಾನದ ಹಕ್ಕಿನ ಮಹತ್ವ ಅರಿತು ನೋಂದಣಿಗೆ ಮುಂದಾಗಬೇಕಿದೆ.
ಮನೆಮನೆಗೆ ತೆರಳಿ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರೂ ಅನೇಕರು ಅಗತ್ಯ ದಾಖಲೆಗಳನ್ನು ಒದಗಿಸುವುದಿಲ್ಲ. ನಾನು ವೈಯಕ್ತಿಕವಾಗಿ 200 ಜನರಿಗೆ ಅರ್ಜಿ ವಿತರಿಸಿದ್ದೆ. ಆದರೆ, ಕೇವಲ 40 ಜನರು ಮಾತ್ರ ಅರ್ಜಿ ಭರ್ತಿ ಮಾಡಿ ನೀಡಿದ್ದಾರೆ. ನಮ್ಮ ಕಾರ್ಯಕರ್ತರಿಗೂ ಇದೇ ಅನುಭವವಾಗಿದೆ. ಪದವೀಧರರು ಆಸಕ್ತಿ ವಹಿಸಿ ನೋಂದಣಿ ಮಾಡಿಸಿಕೊಂಡು ಮತದಾನದಲ್ಲಿ ಪಾಲ್ಗೊಳ್ಳಬೇಕು.
-ಸದಾನಂದ ವಿ.ಡಂಗನವರ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ.
ಪ್ರತಿ ಚುನಾವಣೆಯ ಸಂದರ್ಭದಲ್ಲೂ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕಿರುವುದರಿಂದ ಅನೇಕ ಪದವೀಧರರು ಆಸಕ್ತಿ ತೋರುತ್ತಿಲ್ಲ. ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ವಿಧಾನ ಪರಿಷತ್ ಚುನಾವಣೆಯ ಬಗ್ಗೆ ಜಾಗೃತಿ ಕಡಿಮೆಯಿದೆ. ಆನ್ಲೈನ್ ನೋಂದಣಿಗೆ ಅವಕಾಶ ಕಲ್ಪಿಸಿದರೆ ಹೆಚ್ಚಿನವರು ನೋಂದಣಿ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ.
-ಸೋಮನಗೌಡ, ಪದವೀಧರ
ಅರ್ಜಿ ಸಲ್ಲಿಸಿದರೂ ಪಟ್ಟಿಯಲ್ಲಿ ಹೆಸರಿಲ್ಲ! :
ನೋಂದಣಿ ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಕೆಲವೆಡೆ ರಾಜಕೀಯ ಪಕ್ಷಗಳ ಮುಖಂಡರ ಮೂಲಕ ಅರ್ಜಿ ಸಲ್ಲಿಸಿದ್ದರೂ ಹೆಸರು ನೋಂದಣಿಯಾಗಿಲ್ಲ ಎನ್ನಲಾಗಿದೆ. ಕಳೆದ ಬಾರಿ ಮತ ಚಲಾಯಿಸಿದ್ದ ಕೆಲವರು ಈ ಬಾರಿಯೂ ನೋಂದಣಿ ಮಾಡಿಸಿಕೊಂಡರೂ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಅರ್ಜಿ ಸಲ್ಲಿಸಿದ ಬಳಿಕ ಅದರ ಸ್ಥಿತಿಗತಿ ತಿಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೂ ಸಮಸ್ಯೆಯಾಗಿದೆ. ಹೀಗಾಗಿ ಅರ್ಜಿ ಪರಿಶೀಲನೆ, ನೋಂದಣಿ ದೃಢೀಕರಣ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವ್ಯವಸ್ಥೆಯನ್ನು ಸುಧಾರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.






