ಪಾಲಿಕೆ ಆಯುಕ್ತ ಜುಬೀನ್ ವರ್ಗಾವಣೆಗೆ ವಿರೋಧ; ರಾಜಕೀಯ ಹಸ್ತಕ್ಷೇಪ ಆರೋಪ

ರಾಯಚೂರು: ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರು ಯಾದಗಿರಿ ಜಿಲ್ಲೆಗೆ ಜಿಪಂ ಸಿಇಒ ಆಗಿ ವರ್ಗಾವಣೆ ಮಾಡಿರುವ ಸರಕಾರದ ಕ್ರಮದ ವಿರುದ್ಧ ಸಾರ್ವಜನಿಕರು, ಸಂಘ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಜೊತೆಗೆ ಜಿಲ್ಲೆಯ ರಾಜಕೀಯನಾಯಕರ ಹಸ್ತಕ್ಷೇಪದಿಂದ ಅಧಿಕಾರಿಗಳಿಗೆ ಬರೆ ಎಳೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ರಾಯಚೂರು ಜಿಲ್ಲೆಗೆ ಅಧಿಕಾರಿಗಳು ಅನ್ಯ ಜಿಲ್ಲೆಯಿಂದ ವರ್ಗವಾಗಿ ಬಂದಾಗ ಇಲ್ಲಿನ ಸ್ಥಿತಿಗತಿ, ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಕಂಡು ಹೀಯಾಳಿಸುವುದೇ ಹೆಚ್ಚು. ಇಂತಹದರ ಮಧ್ಯೆ ಮಹಾನಗರ ಪಾಲಿಕೆಯ ಆಯುಕ್ತರಾಗಿ ಆಗಮಿಸಿದ್ದ ಐಎಎಸ್ ಅಧಿಕಾರಿ ಜುಬಿನ್ ಮೊಹಪಾತ್ರ ಭಿನ್ನವಾಗಿದ್ದರು. ಅವರು ಹಲವು ಯೋಜನೆಗಳನ್ನು ಪೂರ್ಣಗೊಳಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದ್ದಾರೆ.
ಅನೇಕ ಅಧಿಕಾರಿಗಳು ವರ್ಗವಾಗಿ ಬಂದಾಗ ರಾಯಚೂರು ನಗರವನ್ನು ಅತ್ಯಂತ ಕೊಳಕು ನಗರ, ಕಸದ ತೊಟ್ಟಿ ಎಂದೆೆಲ್ಲ ಹೀಯಾಳಿಸಿದ್ದು ಉಂಟು. ಆದರೆ ಜುಬಿನ್ ಮೊಹಪಾತ್ರ ಅವರು ಭಾಷಣ, ಭರವಸೆಗಳನ್ನು ನೀಡದೆ ರಾಯಚೂರನ್ನು ಸ್ವಚ್ಛ ಹಸಿರು ನಗರ ನಿರ್ಮಾಣಕ್ಕೆ ಕೆಲಸ ಮಾಡಿದ್ದಾರೆ. ಬಿಸಿಲುನಾಡು ರಾಯಚೂರನ್ನು ಕೂಲ್ ರಾಯಚೂರು ಮಾಡಲು ಪ್ರಮುಖ ರಸ್ತೆಗಳ ಮಧ್ಯೆ ಡಿವೈಡರ್, ಕೆರೆ ಜಾಗ ಸೇರಿದಂತೆ ಪ್ರಮುಖ ಬಡಾವಣೆ ಗಳಲ್ಲಿ 5 ಲಕ್ಷ ಗಿಡಗಳನ್ನು ನೆಡುವ ಯೋಜನೆ ಕೈಗೊಂಡಿದ್ದು, ಈಗಾಗಲೇ ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ಹೊರವಲಯದ ಯಕ್ಲಾಸಪೂರು ಬಡಾವಣೆಯಲ್ಲಿ ಘನತ್ಯಾಜ್ಯ ನಿರ್ವಾಹಣೆ ಘಟಕದಲ್ಲಿ ಬೆಟ್ಟದೆತ್ತರದ ಕಸದ ಗುಡ್ಡೆಗಳನ್ನು ತೆರವು ಮಾಡಿಸಿದ್ದಾರೆ. ಪಾಲಿಕೆಯ ಸಿಬ್ಬಂದಿಗೆ ತರಬೇತಿ, ಸಮವಸ್ತ್ರ ವಿತರಣೆ, ವೈಯಕ್ತಿಕ ಸೌಲಭ್ಯ ನೀಡಿ ನೆರವಾಗಿದ್ದಾರೆ. ನಗರಸಭೆ ಆಡಳಿತವಿದ್ದಾಗ ಅವೈಜ್ಞಾನಿಕ ಕಾರ್ಯವಿಧಾನದಿಂದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಲುಷಿತ ಗಾಳಿ, ವಾಸನೆಯಿಂದ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇತ್ತು. ಜುಬೀನ್ ಅವರು ಬಂದ ನಂತರ ದೊಡ್ಡದಾದ ಮೂರು ಗುಂಡಿಗಳನ್ನು ನಿರ್ಮಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ. ಗಬ್ಬು ನಾರುತ್ತದ್ದ ಘಟಕದಲ್ಲಿ ಸುಂದರವಾದ ಜಪಾನ್ ಮಾದರಿಯ ಮಿಯಾವಾಕಿ ಮಿನಿ ಫಾರೆಸ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ, ರಾಜಕಾಲುವೆಗಳ ಹೂಳು ತೆಗೆಯಲು ಆಧುನಿಕ ಯಂತ್ರಗಳು, ಸಲಕರಣೆಗಳು, ಯುಜಿಡಿ ನಿರ್ವಹಣೆಗೆ ರೊಬೋಟ್ ತಂತ್ರಜ್ಞಾನ ಪರಿಚಯಿಸಿ ಅಳವಡಿಸಿಕೊಂಡಿದ್ದಾರೆ.
ಆರ್‌ಆರ್‌ಆರ್: ನಗರದ ಅನೇಕ ಬಡಾವಣೆಗಳಲ್ಲಿ ಕಸವನ್ನು ಹಸಿಕಸ ಮತ್ತು ಒಣಕಸವನ್ನಾಗಿ ವಿಭಾಗಿಸಿ ನೀಡುತ್ತಿರಲಿಲ್ಲ. ಈ ಕುರಿತು ಪಾಲಿಕೆಯ ವಾಹನಗಳಲ್ಲಿ ಜಾಗೃತಿಮೂಡಿಸಿದ್ದಾರೆ, ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಸುಸ್ಥಿರಘನ-ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿರುವ ಆರ್‌ಆರ್‌ಆರ್ (ರೆಡ್ಯೂಸ್, ರೀ-ಯೂಸ್, ರೀ-ಸೈಕಲ್) ಸೆಂಟರ್‌ಗಳನ್ನು ರಾಯಚೂರು ನಗರದ ಹಲವೆಡೆ ಸ್ಥಾಪಿಸಿದ್ದಾರೆ. ಘನ-ತ್ಯಾಜ್ಯದ ಸಂಗ್ರಹದ ಪ್ರಮಾಣವನ್ನು ಕಡಿಮೆಗೊಳಿಸುವುದರ ಜೊತೆಗೆ ಅಗತ್ಯವಾದ ವಸ್ತುಗಳನ್ನು ಮರಳಿ ಬಳಕೆ ಮಾಡುವುದು ಹಾಗೂ ಪರಿಸರ ಸ್ನೇಹಿ ನಗರವನ್ನಾಗಿಸಲು ಯೋಜನೆ ರೂಪಿಸಿದ್ದಾರೆ.
ಕೆಳ ಹಂತದ ಅಧಿಕಾರಿಗಳಿಗೆ ಚುರುಕು: ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದರೂ ಕೆಳ ಹಂತದ ಅಧಿಕಾರಿಗಳ ನಿರಾಸಕ್ತಿ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರವನ್ನು ಕಡಿಮೆಗೊಳಿಸಿ, ಮದ್ಯವರ್ತಿಗಳ ಹಾವಳಿ ಕಡಿಮೆ ಮಾಡಿ ಜನಸ್ನೇಹಿಯಾಗಿ ಕೆಲಸ ಮಾಡಿ ಮಾದರಿಯಾಗಿದ್ದಾರೆ. ಸಾರ್ವಜನಿಕರ, ಸಂಘ ಸಂಸ್ಥೆಗಳ ಮುಖಂಡರು ತಮ್ಮ ದೂರು, ಅಹವಾಲು ಸಲ್ಲಿಸಲು ಕಚೇರಿಯಲ್ಲಿ ಕುಂದುಕೊರತೆ ವಿಭಾಗ ಸ್ಥಾಪಿಸಿದ್ದಲ್ಲದೆ ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ, ವಾಟ್ಸಪ್ ಮಾಡಿದರೂ ಸ್ಪಂದಿಸಿ ಕೆಳ ಹಂತದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ.
ಅನೇಕ ವರ್ಷಗಳಿಂದ ಕಟ್ಟಡ, ಮನೆಯ ಕರ, ನಳದ ಕರ ಪಾವತಿಸದೆ ಲಕ್ಷಾಂತರ ರೂಪಾಯಿ ವರೆಗೆ ಆದಾಗ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಕರ ಪಾವತಿಗೆ ಅನುಕೂಲ ಮಾಡಿ ಪಾಲಿಕೆಯ ಖಜಾನೆ ತುಂಬಿಸಿದ್ದಾರೆ. ಮಳೆಗಾಲದಲ್ಲಿ ಅನೇಕ ತಗ್ಗುಪ್ರದೇಶಗಳು ಜಲಾವೃತ್ತವಾಗುವುದನ್ನು ತಡೆಯಲು ಒತ್ತುವರಿ ತೆರವು ಮಾಡಿದ್ದಾರೆ. ಅನೇಕ ವರ್ಷಗಳಿಂದ ಸ್ವಚ್ಛಗೊಳಿಸಲಾಗದ ರಾಜಕಾಲುವೆಗಳು, ಚರಂಡಿಗಳನ್ನು ಸ್ವಚ್ಛಗೊಳಿಸಿ ಟನ್ ಗಟ್ಟಲೇ ಹೂಳು ತೆಗೆಸಿದ್ದಾರೆ.
ಪ್ರತಿಯೊಂದು ಕೆಲಸಕ್ಕೆ ಅನುದಾನವಿಲ್ಲವೆಂದು ಕೈಚೆಲ್ಲದೆ ಸ್ಥಳೀಯ ದಾನಿಗಳಿಂದ ಮಾತ್ರವಲ್ಲದೆ ಅನ್ಯರಾಜ್ಯದ ಕಂಪನಿಗಳಿಗೆ ಭೇಟಿಯಾಗಿ ಸಿಎಸ್ ಆರ್ ಫಂಡ್ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ರಾಜಕೀಯ ನಾಯಕರ ಕಿತ್ತಾಟದಿಂದ ಜುಬಿನ್ ವರ್ಗಾವಣೆಯಾಗಿದೆಯಾ?: ಜಿಲ್ಲೆಯಲ್ಲಿ ರಾಜಕೀಯ ನಾಯಕರ ಕಿತ್ತಾಟದಿಂದ ಅನ್ಯ ಜಿಲ್ಲೆಯ ನಾಯಕರಿಗೆ ಉಸ್ತುವಾರಿ ಸಚಿವರ ನೇಮಕ ಮಾಡುವುದು ಒಂದೆಡೆಯಾದರೆ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುವ ಐಎಎಸ್ ಅಧಿಕಾರಿಗಳನ್ನು ಒಬ್ಬರು ಕರೆತಂದರೆ ಮತ್ತೊಂದು ನಾಯಕರ ಗುಂಪು ಅನ್ಯ ಜಿಲ್ಲೆಗೆ ವರ್ಗಾವಣೆ ಮಾಡಿಸುತ್ತಿದೆ ಎಂಬ ಆರೋಪವಿದೆ. ಜುಬೀನ್ ಮೊಹಪಾತ್ರ ದಿಢೀರ್ ವರ್ಗಾವಣೆಯ ಹಿಂದೆ ಕೆಲ ನಾಯಕರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ ನಗರ ವಾಸಿಗಳ ಪರಿಸ್ಥಿತಿ.
ಆದಾಯ ಸೋರಿಕೆಗೆ ಕಡಿವಾಣ
ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ, ನಳದ ಕರ ಪಾವತಿ, ಮಳಿಗೆಗಳ ಬಾಡಿಗೆಯೇ ಆದಾಯಕ್ಕೆ ಮೂಲವಾಗಿದೆ. ಆದರೆ ದರ ಪರಿಷ್ಕರಣೆ ಹಾಗೂ ಬಾಕಿ ಇರುವ ಕರ ಪಾವತಿಗೆ ಗಂಭೀರ ಚಿಂತನೆ ನಡೆಸಿ ಒಂದು ತಂಡ ರಚನೆ ಮಾಡಿದ್ದರು. ಆದರೆ ಎಸ್‌ಐಆರ್ ಕಾರ್ಯ ಆರಂಭವಾಗಿದ್ದರಿಂದ ತಾತ್ಕಾಲಿಕವಾಗಿ ನನೆಗುದಿಗೆ ಬಿದ್ದಿದೆ ಎನ್ನಲಾಗಿದೆ. ಆಸ್ತಿ ತರಿಗೆ, ಕರ ಪಾವತಿ, ವಾಣಿಜ್ಯ ಮಳಿಗೆಗೆಗಳ ದರ ಪರಿಷ್ಕರಣೆ, ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ಆದಾಯದ ಮೂಲಗಳನ್ನು ಗಟ್ಟಿಗೊಳಿಸಿದ ಪರಿಣಾಮವೇ ಕೆಲ ಪ್ರಭಾವಿ ಉದ್ಯಮಿಗಳು, ದೊಡ್ಡ ವ್ಯಾಪಾರಸ್ಥರ ಒಂದು ಗುಂಪು, ರಾಜಕೀಯ ನಾಯಕರು ಇದನ್ನು ಸಹಿಸದೆ ವರ್ಗಾವಣೆಗೆ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಪಾಲಿಕೆಯಆಯುಕ್ತ ಜುಬೀನ್ ಮೊಹಪಾತ್ರ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಇನ್ನಷ್ಟು ದಿನ ಇಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಅವಕಾಶ ಕೊಡದಿದ್ದರೆ ಹೋರಾಟ ಮಾಡುತ್ತೇವೆ.
-ಎನ್. ಮಹಾವೀರ್
ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಅಧ್ಯಕ್ಷ






