ಸಾವಿನಲ್ಲೂ ಸಾರ್ಥಕತೆ ಸಿಗುವ ಅಂಗದಾನ

✍️ ಡಾ. ಕರವೀರಪ್ರಭು ಕ್ಯಾಲಕೊಂಡ
ಮರಣದ ನಂತರ ‘‘ನನ್ನ ದೇಹವು ದಾನವಾಗಿ ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಲಿ’’ ಎಂದು ಘೋಷಿಸುವುದು ಮರಣೋತ್ತರ ದೇಹದಾನ ಎಂದು ಕರೆಯಲ್ಪಡುವುದು. ಮರಣ ಪತ್ರದ ಮೂಲಕ ಈ ಇಚ್ಛೆಯನ್ನು ಪ್ರಕಟಗೊಳಿಸುವುದಾಗಿದೆ. ಇಂಥವರ ಅಮೂಲ್ಯ ಅಂಗಗಳನ್ನು ಅವರು ತೀರಿಹೋದ 4-6 ತಾಸುಗಳಲ್ಲಿ ಸಂಗ್ರಹಿಸಿ, ಅವಶ್ಯವಿದ್ದವರಿಗೆ ನಿಗದಿತ ವೇಳೆಯೊಳಗೆ ಮರು ಜೋಡಣೆ ಮಾಡಿದಲ್ಲಿ ಸಾವಿನ ಅಂಚಿನಲ್ಲಿದ್ದವರು ಆ ಅಂಗಗಳನ್ನು ಪಡೆದು ಬದುಕಬಲ್ಲರು.
ಪ್ರತಿ ವರ್ಷ ಆಗಸ್ಟ್ 13ರಂದು ‘ವಿಶ್ವ ಅಂಗ ದಾನ ದಿನ’ವನ್ನು ಜನರಲ್ಲಿ ಅರಿವು ಮೂಡಿಸುವ ಹಾಗೂ ಅಂಗದಾನದ ಪ್ರಾಮುಖ್ಯತೆ ತಿಳಿಸುವ ಸಲುವಾಗಿ ಆಚರಿಸಲಾಗುತ್ತದೆ. ರೋನಾಲ್ಡ್ ಲೀ ಹೆರಿಕ್ ಅಂಗದಾನ ಮಾಡಿದ ಪ್ರಪಂಚದ ಪ್ರಥಮ ವ್ಯಕ್ತಿ. ಅವನು ತನ್ನ ಸಹೋದರನ ಸಲುವಾಗಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ. ವೈದ್ಯ ವಿಜ್ಞಾನಿ ಡಾ. ಜೋಸೆಪ್ ಮುರ್ರೆ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದರು. 1990ರಲ್ಲಿ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾದರು.
ಅಂಗದಾನ ವೆಂದರೇನು?
ಅಂಗದಾನದಲ್ಲಿ ಎರಡು ಪ್ರಕಾರಗಳಿವೆ. ಅವೆಂದರೆ
1.ಜೀವಂತ ವ್ಯಕ್ತಿಗಳು ಮಾಡುವ ದಾನ.
2.ಮರಣೋತ್ತರ ಅಥವಾ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳಿಂದ ಆಗುವ ದಾನ.
ಜೀವಂತ ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಶಗಳು, ಜೀವಕೋಶಗಳು ಮತ್ತು ದ್ರವ್ಯಗಳನ್ನು ದಾನಮಾಡುವುದು ಮೊದಲನೇ ಪ್ರಕಾರಕ್ಕೆ ಸೇರುತ್ತದೆ. ಉದಾ: ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ತಿಮಜ್ಜೆ ದಾನ ಇತ್ಯಾದಿ. ದೇಹದ ಯಾವುದಾದರೂ ಅಂಗಗಳನ್ನು ಇನ್ನೊಬ್ಬರಿಗೆ ದಾನ ಮಾಡುವುದೂ ಈ ವಿಧದಲ್ಲಿ ಸೇರಿದೆ. ಉದಾ: ಎರಡು ಕಿಡ್ನಿಗಳಲ್ಲಿ ಒಂದನ್ನು ದಾನಮಾಡುವುದು. ಯಕೃತ್ತಿನ ಸ್ವಲ್ಪ ಭಾಗ ಅಥವಾ ಸಣ್ಣಕರುಳಿನ ಒಂದು ಭಾಗವನ್ನು ದಾನಮಾಡುವುದು ಇತ್ಯಾದಿ.
ಮರಣೋತ್ತರ ಅಥವಾ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಹೃದಯ, ಶ್ವಾಸಕೋಶ, ಸಣ್ಣಕರುಳು, ಕಾರ್ನಿಯಾ, ಮೂಳೆಗಳು, ಹೃದಯದ ಕವಾಟಗಳು, ಮೇದೋಜಿರಕಾಂಗ, ಪಿತ್ತಜನಕಾಂಗ ಇತ್ಯಾದಿ ಅಂಗಗಳು ಅಥವಾ ಅವುಗಳ ಭಾಗಗಳನ್ನು ತೆಗೆದು ಮತ್ತೊಬ್ಬ ರೋಗಿಗೆ ಅಳವಡಿಸುವುದು ಎರಡನೇ ಪ್ರಕಾರಕ್ಕೆ ಸೇರುತ್ತದೆ. ಒಬ್ಬ ವ್ಯಕ್ತಿಯಿಂದ 8 ಜೀವಿಗಳನ್ನು ಉಳಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆಯನ್ನು ತೆಗೆದೊಡನೆಯೇ ಸಾವನ್ನಪ್ಪುತ್ತಾರೆ. ಅದಕ್ಕೂ ಮುನ್ನ ಹೀಗೆ ಅಂಗಾಂಗ ದಾನ ಮಾಡಿದಲ್ಲಿ, ಮತ್ತೊಬ್ಬ ವ್ಯಕ್ತಿಯಲ್ಲಿ ಮರುಹುಟ್ಟು ಪಡೆಯುತ್ತಾರೆ. ಸತ್ತ ಬಳಿಕವೂ ಮತ್ತೊಬ್ಬರ ಮುಖಾಂತರ ಬದುಕಿರುತ್ತಾರೆ. ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳ ಬೆಳಗುತ್ತವೆ.
ಮೂತ್ರಪಿಂಡ, ಯಕೃತ್‌ನ್ನು ದಾನ ಮಾಡಿ ಉಳಿದವರು ಬದುಕುವಂತೆ ಮಾಡಬಹುದು. ದೇಹದಲ್ಲಿಯ ರಕ್ತವನ್ನು ಸತ್ತ ತಕ್ಷಣ ಹೀರಿ ತೆಗೆದರೆ ಸಾಕಷ್ಟು ರಕ್ತ ದೊರೆತು ರಕ್ತದ ಅಭಾವವೇ ಇಲ್ಲದಂತಾಗುವುದು. ಅಸ್ಥಿಮಜ್ಜೆಯನ್ನು ಹೀರಿ ತೆಗೆದು ಬೇಕಾದ ವ್ಯಕ್ತಿಗಳಿಗೆ ಪೂರಣೆ ಮಾಡಬಹುದು. ಇದರಿಂದ ರಕ್ತದ ಕ್ಯಾನ್ಸರ್ ಆಗಿ ಮರಣ ಶಯ್ಯೆಯಲ್ಲಿರುವ ರೋಗಿಗಳಿಗೆ ಜೀವದಾನ ಮಾಡಿದಂತಾಗುವುದು.
ಇಂದಿನ ಅಪಘಾತ ಯುಗದಲ್ಲಿ ಎಲುಬು ಕಸಿ ಮಾಡುವಿಕೆ ಬಹಳ ಮಹತ್ವ ಪಡೆಯುತ್ತಿದೆ. ಮೃತರ ದೇಹದಲ್ಲಿಯ ಎಲುಬುಗಳನ್ನು ತೆಗೆದು ರೋಗಿಗಳಿಗೆ ಕೃತ್ರಿಮ ಎಲುಬುಗಳ ಬದಲಾಗಿ ಮನುಷ್ಯರ ಎಲುಬುಗಳನ್ನೇ ಜೋಡಿಸಬಹುದು. ಅಲ್ಲದೆ ಇತ್ತೀಚೆಗೆ ಮೃತರ ತ್ವಚೆಯನ್ನು ಉಪಯೋಗಿಸಲು ಪ್ರಯತ್ನಗಳು ನಡೆದಿವೆ. ಒಂದು ವೇಳೆ ಇದು ಸಾಧ್ಯವೆಂದಾದರೆ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ದೊಡ್ಡ ಪರಿಹಾರ ದೊರೆತಂತಾಗುವುದು. ಸುಟ್ಟು ಹೋದ ಚರ್ಮವನ್ನು ತೆಗೆದು ಹೊಸ ಆರೋಗ್ಯವಂತ ಚರ್ಮವನ್ನು ಅಲ್ಲಿ ಕಸಿ ಮಾಡಿದರೆ ರೋಗಿ ಬೇಗನೆ ಗುಣವಾಗುತ್ತಾನೆ. ಮೃತರ ಅಂಗಗಳಿಂದ ಇಂಥ ಇನ್ನೂ ಹತ್ತಾರು ಉಪಯೋಗಗಳು ಮುಂದೆ ಸಾಧ್ಯವಾಗಬಹುದು!
ಸಮಸ್ಯೆಯ ಆಳ:
ಅಂಗಾಂಗ ದಾನಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಶೇ. ವಿಶ್ವದ 0.01 ಜನರು ಮಾತ್ರ, ತಾವು ಸತ್ತ ಮೇಲೆ ಅಂಗಾಂಗದಾನಕ್ಕೆ ಸಿದ್ಧರಾಗಿರುವವರು.
ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಎಂಭತ್ತು ಸಾವಿರ ಮಂದಿಗೆ ಯಕೃತ್ ಹಾಗೂ ಅರುವತ್ತು ಸಾವಿರ ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ. ಆದರೆ, ಇದರ ಪೈಕಿ ಕೇವಲ ಶೇ.5ರಷ್ಟು ರೋಗಿಗಳಿಗೆ ಬದಲಿ ಅಂಗಗಳನ್ನು ಜೋಡಿಸುವುದು ಸಾಧ್ಯವಾಗಿದೆ. ಅಂಗ ದಾನದ ಅವಶ್ಯವಿರುವ ರೋಗಿ ಮತ್ತು ಅಂಗಾಂಗಗಳ ಲಭ್ಯತೆ ನಡುವೆ ದೊಡ್ಡ ಅಂತರವಿದೆ. ಶೇ.95 ರೋಗಿಗಳು ಅಂಗಗಳ ಅಲಭ್ಯತೆಯಿಂದಾಗಿ ಜೀವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಎಡ್ವಾಲ್ಡೋ ಲೀಲ್ ಅವರ ಸಂಶೋಧನೆ ಹಾಗೂ ಕೆಲವು ಸಮೀಕ್ಷೆ ಪ್ರಕಾರ ಮೂಢನಂಬಿಕೆ, ಅರಿವಿನ ಕೊರತೆ, ಮಿದುಳು ಸಾವಿನ ಬಗೆಗಿನ ತಪ್ಪು ತಿಳುವಳಿಕೆಗಳು ಅಂಗದಾನದ ಹಿಂಜರಿಕೆಗೆ ಕಾರಣವಾಗಿವೆ.
ವೈದ್ಯರು, ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಅಂಗಾಂಗದಾನದ ಪ್ರಚಾರ ಆಂದೋಲನದಲ್ಲಿ ಭಾಗಿಯಾಗಿ ಮತ್ತು ಅವರೇ ಅಂಗದಾನ ಮಾಡಿ ಇತರರಿಗೆ ಮಾದರಿಯಾಗಬೇಕು.
ದುರ್ಬಲರಿಗೆ ದುರ್ಲಭ
ಅಂಗಾಂಗ ಕಸಿಯ ತಂತ್ರಜ್ಞಾನ ಜಗತ್ತಿನಾದ್ಯಂತ ಅನೇಕ ಜೀವಗಳನ್ನು ಉಳಿಸುತ್ತಿದೆ. ಆದಾಗ್ಯೂ ಈ ವಲಯದಲ್ಲಿ ಕೆಲವು ಸಮಸ್ಯೆಗಳು, ಅಂತರಗಳು ಹಾಗೆಯೇ ಉಳಿದಿವೆ. ಜಗತ್ತಿನಾದ್ಯಂತ ಶೋಷಿತ ಜನಾಂಗಗಳು, ಸಮುದಾಯಗಳು, ವ್ಯಕ್ತಿಗಳು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಮಟ್ಟದಲ್ಲಿ ಇರುವವರಿಗೆ ಅಂಗಾಂಗ ಕಸಿ ಸೌಲಭ್ಯ ಮತ್ತು ತಂತ್ರಜ್ಞಾನ ಅಲಭ್ಯವಾಗಿಯೇ ಉಳಿದಿದೆ. ಭಾರತದಲ್ಲಿಯೂ ಪುರುಷ-ಮಹಿಳೆ, ನಗರ- ಗ್ರಾಮೀಣ, ಸರಕಾರಿ-ಖಾಸಗಿ ಆಸ್ಪತ್ರೆಗಳ ನಡುವೆ ಅಂತರಗಳಿರುವುದು ‘ದಿ ಲ್ಯಾನ್ಸೆಟ್’ ಅಧ್ಯಯನದಲ್ಲಿ ಕಂಡು ಬಂದಿದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರೆ, ಅದಕ್ಕೆ ತಕ್ಕಂತೆ ನೀತಿ ನಿರೂಪಣೆ ಮಾಡಬೇಕು ಎಂದು ವರದಿ ಹೇಳಿದೆ.
ಅಂಗ ಕಸಿಗೆ ಆಯ್ಕೆ ಹೇಗೆ ?
* ಅಂಗ ಕಸಿಯ ಸಾಮಾನ್ಯ ಯಶಸ್ಸು ರೋಗಿಯ ಮನೋದೈಹಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ. ಹೀಗಾಗಿ ಬದಲಿ ಜೋಡಣೆಗೆ ಸೂಕ್ತ ರೋಗಿಗಳನ್ನು ವೈದ್ಯರು ಆರಿಸಿಕೊಳ್ಳುತ್ತಾರೆ.
* ಶಸ್ತ್ರಚಿಕಿತ್ಸೆಯ ಕಾರಣ ಜೀವಕ್ಕೆ ಅಪಾಯ ಬರಬಹುದಾದಂತಹ ರೋಗಿಗಳನ್ನು ವೈದ್ಯರು ಅಂಗಕಸಿ ಚಿಕಿತ್ಸೆಗೆ ನಿರಾಕರಿಸಬಹುದು.
* ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವ ರನ್ನು ಸಹ ವೈದ್ಯರು ಈ ಚಿಕಿತ್ಸೆಗೆ ನಿರಾಕರಿಸಬಹುದು.
* ವೈದ್ಯರು ದಾನಿಯ ಅಥವಾ ಗ್ರಾಹಿಯ HLA ವ್ಯೆಹವನ್ನು ತಿಳಿದುಕೊಳ್ಳುತ್ತಾರೆ. ಏಕೆಂದರೆ ಮಾನವನ ದೇಹದೊಳಗಿರುವ ಮಿಲಿಟರಿ ಪಡೆ ಕಸಿ ವೈಫಲ್ಯಕ್ಕೆ ಕಾರಣವಾಗಬಹುದು. ಈ ಮಿಲಿಟರಿ ಪಡೆಯನ್ನು ನಿಗ್ರಹಿಸಿ ಕಸಿ ಊರ್ಜಿತ ಗೊಳಿಸಲು ದುಬಾರಿ ಔಷಧಗಳನ್ನು ಬಳಸುವುದು ಅನಿವಾರ್ಯ ವಾಗಬಹುದು. ಈ ಔಷಧಗಳ ಪರಿಣಾಮ ತಡೆದುಕೊಳ್ಳುವ ಶಕ್ತಿ ರೋಗಿಗೆ ಇರಬೇಕು.
* ನೀರಿನಲ್ಲಿ ಮುಳುಗಿ ಸತ್ತವರಿಂದ,ವೈರಸ್ ರೋಗಗಳಿಂದ ಸತ್ತವರಿಂದ (ಮಿದುಳು ಜ್ವರ, ಹುಚ್ಚು ನಾಯಿ ಕಡಿತ, ರಕ್ತ ನಂಜು, ಹಾಡ್ಜ್ ಕಿನ್ ರೋಗ, ಯಕೃತ್ ಉರಿಯೂತ, ಲಿಂಪೋಸಾರ್ಕೋಮ, ಹೆಪಟೈಟಿಸ್-ಬಿ, ಏಡ್ಸ್ ಇತ್ಯಾದಿ) ಅಂಗಾಂಗಗಳನ್ನು ಸ್ವೀಕರಿಸುವುದಿಲ್ಲ.







