ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಸಾಗರೋತ್ತರ ಪ್ರಾಣಿಗಳ ವಿನಿಮಯ

ಆನೇಕಲ್, ಆ.10: ಸತತ ಎರಡು ಮೂರು ವರ್ಷಗಳ ಪರಿಶ್ರಮದಿಂದ ಇದೇ ಮೊದಲು ಐತಿಹಾಸಿಕ ವಿದೇಶಿ ಜೀವಿ ವಿನಿಮಯಕ್ಕೆ ಬನ್ನೇರುಘಟ್ಟ ಹೊಸ ಭಾಷ್ಯ ಬರೆದಿದ್ದು ಇದೀಗ ಯಶಸ್ಸು ಕಂಡಿದೆ.
4 ಏಷ್ಯಾದ ಆನೆಗಳಾದ ಎಂಟು ವರ್ಷದ ಸುರೇಶ್, ಒಂಬತ್ತು ವರ್ಷದ ಗೌರಿ, ಏಳು ವರ್ಷದ ಶೃತಿ, 5 ವರ್ಷದ ತುಳಸಿ ಎಂಬ ಮೂರು ಹೆಣ್ಣು ಮತ್ತು ಒಂದು ಗಂಡಾನೆಯನ್ನು ಜಪಾನಿನ ‘ಹಿಮೇಜಿ ಸೆಂಟ್ರಲ್ ಪಾರ್ಕ್’ಗೆ ಕಳುಹಿಸಿಕೊಡಲಾಗಿದೆ. ಇದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮಾತ್ರ ಸೀಮಿತವಾಗದೆ, ದೇಶಕ್ಕೆ ಹೊಸ ಹೊಸ ಪ್ರಾಣಿಗಳನ್ನ್ನು ನೇರವಾಗಿ ಪ್ರಾಣಿಪ್ರಿಯರಿಗೆ ಪರಿಚಯಿಸುವ ಅಧ್ಯಾಯವೊಂದನ್ನು ತೆರೆದಿಟ್ಟಿದೆ.
ಜು 24 ರಂದು ಬನ್ನೇರುಘಟ್ಟದಿಂದ ಹೊರಟ ನಾಲ್ಕು ದೈತ್ಯ ಆನೆಗಳು ಸತತ 20-25 ಗಂಟೆಗಳ ಪ್ರಯಾಣ ಪೂರೈಸಿ ಯಶಸ್ವಿಯಾಗಿ ಜಪಾನಿಗೆ ತಲುಪಿದ್ದವು. ಆನೆಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಸಾಕಾದ ಕಾನ್ಸೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ಏರ್‌ವೇಸ್ ಸರಕು ವಿಮಾನದಲ್ಲಿ ಜು. 25ಕ್ಕೆ ಸಾಗಿಸಲಾಗಿತ್ತು. ಅದಕ್ಕೂ ಮುನ್ನ ವಿಮಾನಯಾನದ ತರಬೇತಿಯನ್ನು 6 ತಿಂಗಳುಗಳಿಂದ ಆನೆಗಳಿಗೆ ನೀಡಲಾಗಿತ್ತು.
ಮೈಸೂರು ಮೃಗಾಲಯದಿಂದ ಮೇ 2021 ರಲ್ಲಿ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ನಂತರ ಇದು ಜಪಾನ್‌ಗೆ ಆನೆಗಳ ವಿನಿಮಯದ ಎರಡನೇ ಬ್ಯಾಚ್ ಆಗಿದೆ.
ಹಿಮೇಜಿ ಸೆಂಟ್ರಲ್ ಪಾರ್ಕ್‌ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಆನೆಗಳೊಂದಿಗೆ ಪ್ರಯಾಣಿಸಿದ್ದಾರೆ.
ಆನೆ ಮೇಲ್ವಿಚಾರಕ ಸುರೇಶ್ ಯಾನೆ ಐಪಿಎಸ್, ಬಯೋಲಾಜಿಸ್ಟ್ ಐಶ್ವರ್ಯ ಜೊತೆಗೆ ಕಾರ್ತಿಕ್, ಕಾಳಪ್ಪ, ದೇವಪ್ಪ ಮತ್ತು ಅಯ್ಯಪ್ಪ ಎಂಬ ನಾಲ್ವರು ಆನೆ ಮಾವುತರು ಇನ್ನೂ ಜಪಾನಿನಲ್ಲಿಯೇ ತನ್ನಿಷ್ಟ ಆನೆಗಳ ಪಾಲನೆಯ ಜೊತೆಗೆ ಜಪಾನಿನ ಮಾವುತರಿಗೆ ಹೊಂದಿಕೊಳ್ಳುವ ತರಬೇತಿಯಲ್ಲಿಯೇ ಇದ್ದಾರೆ.
ಆನೆಗಳ ಪಳಗಿಸುವಿಕೆಯಲ್ಲಿ ಭಾರತೀಯ-ಜಪಾನಿ ಮಾವುತರ ವ್ಯತ್ಯಾಸ :
ಭಾರತೀಯ ಮಾವುತರು ಕೈಯಲ್ಲಿ ಚೂಪಾದ ಕೋಲು ಹಿಡಿದು ಆನೆಗಳ ವರ್ತನೆ ಮೇಲೆ ಹಿಡಿತ ಸಾಧಿಸುತ್ತಾರೆ. ಆದರೆ ಜಪಾನಿನ ಮಾವುತರು ಆನೆ ಮೇಲೆ ಕರುಣೆ ತೋರುವುದಲ್ಲದೆ ಸಣ್ಣ ಕಿರುಕುಳವೂ ನೀಡದಂತೆ ಸಲೀಸಾಗಿ ಅವುಗಳನ್ನು ಒಲಿಸಿಕೊಳ್ಳುವಲ್ಲಿ ಹಣ್ಣುಗಳನ್ನು ನೀಡುತ್ತಾರೆ. ಸಹಕರಿಸದಿದ್ದಲ್ಲಿ ಹಣ್ಣು ನೀಡದೆ ಸತಾಯಿಸಿದರೆ ಆನೆಗೆ ಇಂತಹ ವರ್ತನೆ ಮಾವುತನಿಗೆ ಇಷ್ಟವಿಲ್ಲ ಎಂದು ಅರಿತೊಡನೆ ಆತನಿಗೆ ತಕ್ಕ ವರ್ತನೆ ತೋರಿ ಬಹುಮಾನವಾಗಿ ಹಣ್ಣನ್ನು ಪಡೆಯುವ ಮೂಲಕ ಮಾನವನ ವರ್ತನೆಯನ್ನು ಆನೆಗಳು ಒಗ್ಗಿಕೊಳ್ಳುವುದನ್ನು ಕರಗತ ಮಾಡಿಕೊಂಡಿವೆ.
ಮತ್ತೊಂದು ಗಣನೀಯ ವ್ಯತ್ಯಾಸವೆಂದರೆ ನಮ್ಮಲ್ಲಿ ಆನೆ ಮೇಲೆ ಕೂತು ಸವಾರಿ ಮಾಡಿ ಆನೆಗಳ ದಿಕ್ಕನ್ನು ನಿರ್ಧರಿಸುತ್ತೇವೆ. ಆದರೆ ಜಪಾನಿನಲ್ಲಿ ಆನೆಗಳ ಮೇಲೆ ಕೂರುವುದಾಗಲಿ ಅವುಗಳ ಮೇಲೆ ಜೋರು ದನಿಯಿಂದ ಗರ್ಜಿಸುವುದಾಗಲಿ ಮಾಡುವುದಿಲ್ಲ. ಬದಲಾಗಿ ಪೀಪಿ ಊದುವ ಮುಖಾಂತರ ಅವುಗಳ ಭಾವನೆಯನ್ನ ನಿಯಂತ್ರಿಸಲಾಗುತ್ತದೆ. ಬನ್ನೇರುಘಟ್ಟ ಆನೆ ಕಾವಲಿನಲ್ಲೂ ಜಪಾನ್ ಪ್ರಾಣಿ ಪಾಲಕರು ಇಂತಹ ತರಬೇತಿಯನ್ನು ಈ ನಾಲ್ಕು ಆನೆಗಳಿಗೆ ನೀಡಿದ್ದು. ಇದೀಗ ಜಪಾನಿನಲ್ಲಿ ಅವುಗಳು ಬಹು ಬೇಗ ಹೊಂದಿಕೊಳ್ಳಲು ಸಹಕಾರಿಯಾಗಿವೆ.
ಅಲ್ಲದೆ ಅಲ್ಲಿನ ಹುಲ್ಲು ಹಸಿರು ಮರಗಳೆಡೆಗೆ ಸಾವಕಾಶವಾಗಿ ಆನೆಗಳನ್ನ್ನು ಕರೆದೋಯ್ದು ಅವುಗಳ ಇಷ್ಟಾನುಸಾರ ಇರಲು ಬಿಟ್ಟಿರುವುದು ಒಂದು ನಮ್ಮ ಗಜಪಡೆಯ ಸಂತಸಕ್ಕೆ ಕಾರಣವಾಗಿದೆ. ಕೆಲವು ತಿಂಗಳ ಕಾಲ ಭಾರತದ ಆಹಾರ ಪದ್ದತಿಯಂತೇ ರಾಗಿ ಅಕ್ಕಿ ಮೂಲದ ಆಹಾರವನ್ನೇ ಅವುಗಳಿಗೆ ನೀಡಿ ಅನಂತರ ಜಪಾನಿ ಪದ್ಧತಿಗೆ ಹಂತಹಂತವಾಗಿ ಹೊಂದಿಕೊಳ್ಳುವಂತೆ ಪರಿವರ್ತಿಸುವುದಲ್ಲದೆ ಇದರಿಂದ ಅಲ್ಲಿನ ಜೀವ ವೈವಿದ್ಯತೆಗೆ ತಕ್ಕ ಹಾಗೆ ಮಾರ್ಪಾಡಿಸಲಾಗುತ್ತದೆ.
ಜೊತೆಗೆ ಜಪಾನಿನಲ್ಲಿ ಈಗ ಬಿರು ಬೇಸಿಗೆ ಕಾಲ ಹೀಗಾಗಿ ಆನೆಗಳಿಗೆ ಸುಸಜ್ಜಿತ ಬೃಹತ್ ಶೆಡ್ ಹಾಕಲಾಗಿದ್ದು, ದೊಡ್ಡ ದೊಡ್ಡ ಬೀಸು ಫ್ಯಾನ್, ಬಿಸಿಲಿನ ಝಳಕ್ಕೆ ಮೇಲಿನಿಂದ ನೀರು ಚಿಮ್ಮುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು ಆನೆಗಳಿಗೆ ಉಲ್ಲಾಸವಾಗಿದೆೆ. ಅದರೊಂದಿಗೆ ಬೃಹತ್ ಆನೆ ಈಜುಕೊಳ ನಿರ್ಮಿಸಲಾಗಿದ್ದು ತಂಪಾಗಿ ನೀರಿಗಿಳಿದು ಜಲಕ್ರೀಡೆಯಲ್ಲಿ ತೊಡಗಿವೆ.







