ನಿರ್ವಹಣೆ ಕೊರತೆ ಎದುರಿಸುತ್ತಿರುವ ಉದ್ಯಾನವನ

ಶಿಡ್ಲಘಟ್ಟ, ಆ.31: ತಾಲೂಕಿನ ಜಂಗಮಕೋಟೆ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಗ್ರಾಮ ಪಂಚಾಯತ್‌ನವರು ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಉದ್ಯಾನವನ ನಿರ್ವಹಣೆಯ ಕೊರತೆ ಎದುರಿಸುತ್ತಿದೆ.
ಉದ್ಯಾನವನದ ಒಳಗೆ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ವಿಶ್ರಾಂತಿ ಪಡೆಯಲು, ಹಾಗೂ ಗ್ರಾಮದ ಜನರು, ಪ್ರತಿನಿತ್ಯ ವಾಯುವಿಹಾರ ನಡೆಸುವುದರ ಜೊತೆಗೆ, ವಿಶ್ರಾಂತಿ ಪಡೆಯಲೆಂದು ಉದ್ಯಾನವನದಲ್ಲಿ, ವಿವಿಧ ಜಾತಿಯ ಅಲಂಕಾರಿಕ ಗಿಡಗಳನ್ನು ನಾಟಿ ಮಾಡಲಾಗಿದೆ.
ಇದರ ಜೊತೆಗೆ ಕೆಲವು ಔಷಧಿಯ ಸಸ್ಯಗಳನ್ನು ನಾಟಿ ಮಾಡಿದ್ದಾರೆ. ವಾಯುವಿಹಾರ ನಡೆಸಲು ಪ್ರತ್ಯೇಕವಾಗಿ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಪ್ರತಿನಿತ್ಯ ಇಲ್ಲಿಗೆ ಬರುವ ರೋಗಿಗಳು, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಿದ್ದಾಗ, ನೇರವಾಗಿ ಬಂದು ಉದ್ಯಾನವನದಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಆದರೆ, ಇತ್ತಿಚೆಗೆ ಇಲ್ಲಿನ ವೈದ್ಯಾಧಿಕಾರಿ ಡಾ.ಅಂಬಿಕಾ ಅವರು ವರ್ಗಾವಣೆಯಾದ ನಂತರ, ಇಲ್ಲಿ ನಿರ್ವಹಣೆ ಮಾಡುವವರೂ ಇಲ್ಲ, ಗ್ರಾಮ ಪಂಚಾಯತ್‌ನವರೂ ಈ ಕಡೆಗೆ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ವಾಯುವಿಹಾರ ನಡೆಸುತ್ತಿದ್ದ ಟ್ರ್ಯಾಕ್‌ನಲ್ಲಿ ಹುಲ್ಲು ಬೆಳೆದಿದ್ದು, ಉದ್ಯಾನವನಕ್ಕೆ ಪ್ರವೇಶ ಮಾಡುವ ಗೇಟಿನ ಮುಂಭಾಗದಲ್ಲೂ ಕಳೆಗಿಡಗಳು ಬೆಳೆದಿವೆ. ಈಗ ಒಳಗೆ ಹೋಗುವುದಕ್ಕೂ ಭಯವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು. ಕೂಡಲೇ ಉದ್ಯಾನವನದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ವಾಯುವಿಹಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇತ್ತಿಚೆಗೆ ಮಳೆ ಹೆಚ್ಚಾಗಿ ಬಿದ್ದಿರುವ ಕಾರಣ, ಹುಲ್ಲು ಮತ್ತು ಗಿಡಗಂಟಿಗಳು ಹೆಚ್ಚಾಗಿ ಬೆಳೆದು ನಿಂತಿವೆ. ಗಿಡಗಳಿಗೆ ಕಳೆನಾಶಕ ಔಷಧಿಯನ್ನು ಸಿಂಪಡಣೆ ಮಾಡಿಸಲಾಗುತ್ತದೆ. ಇದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿರ್ವಹಣೆ ಮಾಡಲಾಗುವುದು.
-ಸವಿತಾ ಜಂಗಮಕೋಟೆ, ಗ್ರಾಮ ಪಂಚಾಯತ್ ಪಿಡಿಒ







