ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಆರೋಪ: ರೋಗಿಗಳ ಪರದಾಟ

ಭಾಗ್ಯನಗರ(ಬಾಗೇಪಲ್ಲಿ) : ತಾಲೂಕಿನ ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೂಳೂರು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರವಳಿಕೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಹಿರಿಯ ದಂತ ವೈದ್ಯಾ ಧಿಕಾರಿಗಳು ಹಾಗೂ ಸಾಮಾನ್ಯ ಚಿಕಿತ್ಸಾ ವೈದ್ಯರು ಕರ್ತವ್ಯ ನಿರ್ವಹಿಸಬೇಕಾಗಿತ್ತು. ಆದರೆ ಹಿರಿಯ ದಂತ ವೈದ್ಯರು, ಸಾಮಾನ್ಯ ಚಿಕಿತ್ಸಾ ವೈದ್ಯರು ಕರ್ತವ್ಯ ನಿರ್ವ ಹಿಸುತ್ತಿದ್ದಾರೆ. ಇನ್ನು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ಅರವಳಿಕೆ ತಜ್ಞರು ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದ್ದರೂ ಜಿಲ್ಲಾ ಆರೋಗ್ಯ ಆಡಳಿತಾಧಿಕಾರಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆ ಮಾಡಿದ್ದಾರೆ.
ಮಕ್ಕಳ ತಜ್ಞರ ಹುದ್ದೆ ಖಾಲಿ ಇದ್ದು ಇನ್ನೂ ನೇಮಕವಾಗಿಲ್ಲ. ಇದರಿಂದ ನೂರಾರು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಸೂಕ್ತ ವೈದ್ಯರಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಾಲದಲ್ಲಿ ವೈದ್ಯರು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.
ನಮ್ಮ ಗೂಳೂರು ಆಸ್ಪತ್ರೆಯಲ್ಲಿ ಉತ್ತಮ ವಾತಾವರಣವಿದೆ. ಇಲ್ಲಿಗೆ ಹಲವಾರು ರೋಗಿಗಳು ಬರುತ್ತಿದ್ದಾರೆ ಆದರೆ ಅವರಿಗೆ ಚಿಕಿತ್ಸೆ ನೀಡಲು ಸೂಕ್ತ ವೈದ್ಯರಿಲ್ಲ ಕೂಡಲೇ ತಜ್ಞ ವೈದ್ಯರನ್ನು ಹಾಕಬೇಕು.
-ನಾಗರಾಜು, ಗ್ರಾಮಸ್ಥ ಗೂಳೂರು
ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ಸ್ತ್ರೀರೋಗ ತಜ್ಞರು ಮತ್ತು ಅರವಳಿಕೆ ತಜ್ಞರು ಸೇರಿದಂತೆ 4 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಬಾಗೇಪಲ್ಲಿ ಆಸ್ಪತ್ರೆಯಲ್ಲಿ 2 ದಿನ ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 5 ದಿನ ಕರ್ತವ್ಯ ನಿರ್ವಹಿಸಬೇಕು. ಶೀಘ್ರದಲ್ಲೇ ಇನ್ನೊಬ್ಬ ವೈದ್ಯರು ಬರಲಿದ್ದಾರೆ.
-ಡಾ.ಮಹೇಶ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ
ಗೂಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ತಜ್ಞರು ಬಿಟ್ಟು ಉಳಿದ ನಾನು ಸೇರಿದಂತೆ 4 ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನನ್ನನ್ನು ಮತ್ತು ಅರ್ಚನಾ ಎಂಬ ವೈದ್ಯೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು ಎಂದು ನಿಯೋಜನೆ ಮಾಡಿದ್ದಾರೆ. ನಾನು ಗೂಳೂರು ಮತ್ತು ಬಾಗೇಪಲ್ಲಿಯಲ್ಲಿ ಕೆಲಸ ಮಾಡಬೇಕಾಗಿದೆ. ಇನ್ನು 2-3 ದಿನಗಳಲ್ಲಿ ಮತ್ತೊಬ್ಬ ವೈದ್ಯರನ್ನು ಇಲ್ಲಿಗೆ ಹಾಕಿಸಿಕೊಳ್ಳುತ್ತಿದ್ದೇವೆ.
-ಡಾ.ಶಿವಕುಮಾರ್, ಗೂಳೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ







