ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚಾದ ಪೊಕ್ಸೊ ಪ್ರಕರಣಗಳು

ಸಾಂದರ್ಭಿಕ ಚಿತ್ರ
ಹರಪನಹಳ್ಳಿ: ತಾಲೂಕಿನಲ್ಲಿ ಪೊಕ್ಸೊ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 53 ಪೊಕ್ಸೊ ಪ್ರಕರಣ ದಾಖಲಾಗಿದೆ. ಭವಿಷ್ಯ ಕಟ್ಟಿಕೊಳ್ಳಬೇಕಾದ ಸಮಯದಲ್ಲೇ ಪ್ರಕರಣ, ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಸಮಸ್ಯೆ ಸುಳಿಗೆ ಸಿಲುಕಿತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬಾಲ್ಯ ವಿವಾಹ ಕೂಡಾ ಪೊಕ್ಸೊ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವರದಿಗಳು ತೋರಿಸುತ್ತಿವೆ.
ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಂದ ಶಾಲಾ ಕಾಲೇಜುಗಳಲ್ಲಿ ಅವಿರತವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರೂ ಹದಿಹರೆಯದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ.
ಪೊಕ್ಸೊ ಪ್ರಕರಣದಲ್ಲಿ ಸಿಲುಕಿದವರಿಗೆ ಸಾಕ್ಷ್ಯ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಆಗುತ್ತಿದೆ. ತನಿಖೆಗೆ ಸಂತ್ರಸ್ತರು ಹಾಗೂ ಕುಟುಂಬದಿಂದ ಸಹಕಾರ ಸಿಗದಿರುವುದೂ, ಪ್ರಕರಣ ಮುಂದುವರಿಸಿಕೊಂಡು ಹೋಗಲು ಹಿಂಜರಿಯುವುದೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಅನೇಕರು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಮತ್ತು ರಾಜಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಇದರಿಂದ ಪೊಕ್ಸೊ ಕಾಯ್ದೆ ಬಗ್ಗೆ ಭಯ ಇಲ್ಲದಂತಾಗಿದ್ದು, ಇಂಥ ಪ್ರಕರಣಗಳು ಹೆಚ್ಚಾಗಲು ಕಾರಣ ಎಂಬ ಅಭಿಪ್ರಾಯ ಕೂಡಾ ವ್ಯಕ್ತವಾಗಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು 2012ರಲ್ಲಿ ಪೊಕ್ಸೊ ಕಾಯ್ದೆ ಜಾರಿ ಮಾಡಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ 20 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ಈ ಕಾಯ್ದೆಯಡಿ ಅವಕಾಶವಿದೆ.
2024ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 29 ಪೊಕ್ಸೊ ಪ್ರಕರಣ ದಾಖಲಾಗಿವೆ. 2025ರಲ್ಲಿ 25 ಪ್ರಕರಣ ಹಾಗೂ 2026ನೇ ಸಾಲಿನಲ್ಲಿ ಇದುವರೆಗೂ 13 ಪ್ರಕರಣ ದಾಖಲಾಗಿವೆ. ಈ ಅವಧಿಯಲ್ಲಿ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ 20, ಅರಸೀಕೆರೆಯಲ್ಲಿ 18, ಚಿಗಟೇರಿಯಲ್ಲಿ 17 ಮತ್ತು ಹಲವಾಗಲು ಠಾಣೆಯಲ್ಲಿ 13 ಪ್ರಕರಣಗಳು ದಾಖಲಾಗಿವೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪೊಕ್ಸೊ ಕಾಯಿದೆ ಕುರಿತಂತೆ ಗ್ರಾಮ ಪಂಚಾಯತ್, ಅಂಗನವಾಡಿ, ಗ್ರಾಮ ಸಭೆಗಳು ಮತ್ತು ಶಾಲೆ-ಕಾಲೇಜು ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದ್ದು ನಮ್ಮ ತಾಲೂಕು ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸಲಾಗುತ್ತದೆ.
-ಅಶೋಕ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ
ಪೊಲೀಸ್ ಠಾಣೆಯಲ್ಲಿ ಇದೀಗ ಹೆಚ್ಚಿನ ಮಟ್ಟದಲ್ಲಿ ಪೊಕ್ಸೊ ಕಾಯ್ದೆ ಪ್ರಕರಣದ ಆರೋಪದ ದೂರುಗಳು ಜಾಸ್ತಿಯಾಗುತ್ತಿವೆ. ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಪ್ರೀತಿ, ಪ್ರೇಮದ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಪೋಷಕರ ನಿರ್ಲಕ್ಷ, ಪೋಷಕರು ಗುಳೆ ಹೋಗುವುದು, ಕಾನೂನಿನ ನಿರ್ಲಕ್ಷ, ಹಾಗೂ ಇತರೇ ಕೆಲಸ ಕಾರ್ಯಗಳ ಒತ್ತಡದಿಂದ ತಮ್ಮ ಮಕ್ಕಳ ಮೇಲೆ ನಿಗಾವಹಿಸದಿರುವುದು ಮತ್ತು ಬಾಲ್ಯ ವಿವಾಹಗಳು ಪೊಕ್ಸೊ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ತಾಲೂಕಿನ ಪ್ರತಿ ಶಾಲಾ-ಕಾಲೇಜುಗಳಲ್ಲಿ ನಿರಂತರವಾಗಿ ಪೊಕ್ಸೊ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನ್ನು ಮಾಡುತ್ತಿದೆ.
-ಸಂತೋಷ್ ಚೌವ್ಹಾಣ್, ಡಿವೈಎಸ್ಪಿ
ಪೋಷಕರು ತಮ್ಮ ಮಕ್ಕಳ ಮೇಲಿನ ನಿರ್ಲಕ್ಷದಿಂದಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅತಿಯಾದ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣದ ಪರಿಣಾಮದಿಂದಾಗಿ ಪ್ರೀತಿ, ಪ್ರೇಮದ ಪಾಶಕ್ಕೆ ಸಿಲುಕಿ, ದಾರಿ ತಪ್ಪುವುದೇ ಪೊಕ್ಸೊ ಪ್ರಕರಣಗಳು ಹೆಚ್ಚಳಕ್ಕೆ ಕಾರಣ.
-ಮಹಾಂತೇಶ್ ಸಜ್ಜನ್, ಸಿಪಿಐ-ಹರಪನಹಳ್ಳಿ






