ರಾಜಕೀಯವು ಸಂವಿಧಾನ ಬದ್ಧವೇ ಹೊರತು, ಧರ್ಮ ಅಥವಾ ಜಾತಿ ಬದ್ಧವಲ್ಲ

ದೇಶಾದ್ಯಂತ ಸಂವಿಧಾನ ದಿನಾಚರಣೆ ಕಾರ್ಯಕ್ರಮವು ನಿರೀಕ್ಷಿತ ಮಟ್ಟದಲ್ಲಿ ಜರುಗಿದೆ. ಕರ್ನಾಟಕ ಸರಕಾರವೂ ಸಹ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ಸಂವಿಧಾನದ ಜಾಗೃತಿಯ ಸಂದೇಶವನ್ನು ನಾಡಿಗೆ ಸಾರಿದೆ.
ಪ್ರತಿ ಜಿಲ್ಲೆಯಲ್ಲಿಯೂ ಕೂಡಾ ವಿಭಿನ್ನವಾಗಿ ಸಂವಿಧಾನ ಸಮರ್ಪಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಪ್ರತಿ ಬೀದಿಗಳಲ್ಲಿ ಯುವಕರು ಸಂವಿಧಾನ ಪ್ರಸ್ತಾವನೆ ಮತ್ತು ರಾಷ್ಟ್ರ ಧ್ವಜವನ್ನು ಹಿಡಿದು ನಡೆದಿರುವುದು ಅತ್ಯಂತ ವಿಶಿಷ್ಟ ಎನಿಸಿದೆ.
ಕರ್ನಾಟಕ ರಾಜ್ಯದಲ್ಲಿ 2023ರ ಇಸವಿಯ ಈಚೆಗೆ ಸಂವಿಧಾನ ಕುರಿತಂತೆ ಅಧಿಕೃತವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸಂವಿಧಾನದ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನೀಡುತ್ತಲೇ ಬರುತ್ತಿರುವ ಸರಕಾರ ಸಂವಿಧಾನವನ್ನು ಜನಜನಿತಗೊಳಿಸುವ ಪ್ರಯತ್ನ ಮಾಡುತ್ತಿದೆ.
ಸಂವಿಧಾನ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹೇಳಬೇಕೆಂಬ ನಿಯಮವನ್ನು ಜಾರಿಗೊಳಿಸಿದ ನಮ್ಮ ಸರಕಾರ, ಸಂವಿಧಾನ ಜಾಗೃತಿ ಜಾಥಾದ ಮೂಲಕ ಊರೂರಿಗೆ ಸಂವಿಧಾನದ ಬಂಡಿಯನ್ನು ಕೊಂಡೊಯ್ಯುವ ಕೆಲಸವನ್ನು ಮಾಡಿತು. ಸಂವಿಧಾನ ಪೀಠಿಕೆಯನ್ನು ವಿಶ್ವದಾದ್ಯಂತ ಏಕ ಕಾಲಕ್ಕೆ 2.3 ಕೋಟಿ ಜನರು ಓದಿದ್ದು, ಇದು ಈಗಲೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿರುವುದು ನಮ್ಮ ಸರಕಾರದ ಹೆಗ್ಗಳಿಕೆ ಆಗಿದೆ. ಇದಾದ ಬಳಿಕ ನಾವು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ವಿಶಿಷ್ಟವಾದ ಸಂದೇಶವನ್ನು ಸಾರಿದ್ದು, ಸಂವಿಧಾನದ ಕುರಿತು ಹಲವರು ಹಲವು ಬಗೆಯ ತೊಡಕು ಮಾತುಗಳನ್ನು ಆಡುವಾಗ, ಕರ್ನಾಟಕ ಸರಕಾರದ ವತಿಯಿಂದ ಸಂವಿಧಾನದ ಕುರಿತಂತೆ ಅರಿವು ಮೂಡಿಸುವ ಮಹತ್ವದ ಕೆಲಸವನ್ನು, ಮಾಡಿದ್ದು ಕಾಲದ ಅಗತ್ಯಗಳಲ್ಲಿ ಒಂದು. ಸಂವಿಧಾನದ ಅರಿವಿನ ಕುರಿತ ಸರಕಾರದ ಪ್ರಯತ್ನಗಳ ಬಗ್ಗೆ ಚಿಂತಕರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ಅದು ಇಂತಿದೆ.
ಸರಕಾರದ ವತಿಯಿಂದಲೇ ಸಂವಿಧಾನದ ಕುರಿತಂತೆ ನಿರಂತರವಾಗಿ ಮಾಡುವ ಜಾಗೃತಿಯು, ಸರಕಾರವು ಸಂವಿಧಾನಾತ್ಮಕವಾಗಿ ನಡೆಯಬೇಕೆಂಬ ಜವಾಬ್ದಾರಿ ಪ್ರಜ್ಞೆ ಹೊಂದಿರುವುದನ್ನು ಸೂಚಿಸುತ್ತದೆ. ಈ ರೀತಿಯ ಪ್ರಜ್ಞೆಯು ಒಂದು ದೇಶಕ್ಕೆ ಅಗತ್ಯ ಇರುವಂತಹ ಪ್ರಜ್ಞೆಯಾಗಿದೆ.
-ಡಾ.ಮೇಟಿ ಮಲ್ಲಿಕಾರ್ಜುನ್, ಚಿಂತಕರು.
ಸರಕಾರಗಳು ಸಂವಿಧಾನದ ಬಗ್ಗೆ ಸೀರಿಯಸ್ ಆಗಿವೆ ಎಂದರೆ, ಆ ರಾಜ್ಯದಲ್ಲಿ ಪ್ರಜಾಪ್ರಭುತ್ವವುಜೀವಂತವಾಗಿದೆ ಎಂದರ್ಥ
-ಆರಿಫ್ ರಾಜಾ, ಕವಿ
ಈ ಹಿನ್ನೆಲೆಯಲ್ಲಿ ಸಂವಿಧಾನದ ಜಾಗೃತಿಯ ವಿಷಯದಲ್ಲಿ ಇಡೀ ದೇಶಕ್ಕೆ ಮತ್ತು ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಕರ್ನಾಟಕವನ್ನೇ ಒಂದು ಮಾದರಿ ಆಗಿಸುವ ಪ್ರಯತ್ನವನ್ನು ಸರಕಾರ ಮಾಡಿದ್ದು ಇದಕ್ಕಾಗಿ ನಾನು ನಮ್ಮ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರದ ಈ ಕ್ರಮವನ್ನು ಸ್ವಾಗತಿಸಿದ ಜನರನ್ನು ಸ್ಮರಿಸುವೆ.







