Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡತನ, ಅಸಮಾನತೆ ಮತ್ತು ಸಮೀಕ್ಷೆ: ನೂರಾರು...

ಬಡತನ, ಅಸಮಾನತೆ ಮತ್ತು ಸಮೀಕ್ಷೆ: ನೂರಾರು ತಲೆಗಳ ಕತ್ತಲು

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್15 July 2025 9:30 AM IST
share
ಬಡತನ, ಅಸಮಾನತೆ ಮತ್ತು ಸಮೀಕ್ಷೆ: ನೂರಾರು ತಲೆಗಳ ಕತ್ತಲು
ಇಲ್ಲಿನ ಮಾಧ್ಯಮಗಳು ಕೇವಲ ಖರ್ಚುವೆಚ್ಚವನ್ನು ಆಧರಿಸಿ ಗಿನಿ ಸೂಚ್ಯಂಕ 25.5ರಷ್ಟಿದೆ ಎಂದು ವರದಿ ಮಾಡುತ್ತಿವೆ. ಆದರೆ ವಾಸ್ತವದಲ್ಲಿ ಸೂಚ್ಯಂಕವನ್ನು ತಲಾ ಆದಾಯ ಆಧರಿಸಿ ಅಳೆಯಬೇಕು. ಕಳೆದ ಹತ್ತು ವರ್ಷಗಳಲ್ಲಿ ಆರ್ಥಿಕ ಹಿಂಜರಿಕೆ, ನಿರುದ್ಯೋಗ, ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆಯ ಕಾರಣ ಭಾರತೀಯರ ವೇತನ/ಆದಾಯದಲ್ಲಿ ಏರಿಕೆಯಾಗಲಿಲ್ಲ, ಬದಲಿಗೆ ಉದ್ಯೋಗ ಕಳೆದುಕೊಂಡವರ ಪ್ರಮಾಣ ಹೆಚ್ಚಾಗುತ್ತಿದೆ, ಇದೇ ಸಂದರ್ಭದಲ್ಲಿ ವರ್ಷಗಳು ಕಳೆದಂತೆ ಹಣದುಬ್ಬರವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಚುವೆಚ್ಚದ ಪ್ರಮಾಣದಲ್ಲಿಯೂ ಹೆಚ್ಚಾಗುತ್ತಿದೆ. ಹೆಚ್ಚಿಗೆ ವೆಚ್ಚ ಮಾಡುತ್ತಿದ್ದಾರೆ ಎಂದರೆ ಜೀವನ ಮಟ್ಟ ಸುಧಾರಿಸಿದೆ ಅಂತಲ್ಲ, ಬದಲಿಗೆ ಅವಶ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರ್ಥ. ಈ ಕಾರಣದಿಂದ ಖರ್ಚುವೆಚ್ಚ ಆಧರಿಸಿ ಅಸಮಾನತೆಯನ್ನು ಅಳೆಯುವುದು ದೋಷಪೂರಿತವಾಗಿದೆ.

ಇತ್ತೀಚಿನ ವಿಶ್ವಬ್ಯಾಂಕ್‌ನ ಸ್ಪ್ರಿಂಗ್ 2025 ಬಡತನ ಮತ್ತು ಸಮಾನತೆಯ ಸಂಕ್ಷಿಪ್ತ ವರದಿಯ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ 171(17.1 ಕೋಟಿ) ಮಿಲಿಯನ್ ಭಾರತೀಯರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ದಿನಕ್ಕೆ 2.15 ಯುಎಸ್‌ಡಿ(ರೂ.191) ಜಾಗತಿಕ ಬಡತನ ರೇಖೆಯ ಆಧಾರದ ಮೇಲೆ ಭಾರತದ ತೀವ್ರ ಬಡತನ ಪ್ರಮಾಣವು ಶೇ.16.2ರಿಂದ ಶೇ.2.3ಕ್ಕೆ ಇಳಿದಿದೆ. ‘ದ ವೈರ್’ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ವಿಶ್ವಬ್ಯಾಂಕ್‌ನ ವರದಿಯು ‘ಭಾರತದ ಖರ್ಚುವೆಚ್ಚವನ್ನು ಆಧರಿಸಿದ ಗಿನಿ ಸೂಚ್ಯಂಕವು 2011-12ರಲ್ಲಿ 28.8ರಿಂದ 2022-23ರಲ್ಲಿ 25.5ಕ್ಕೆ ಸುಧಾರಿಸಿದೆ, ಆದರೆ ದತ್ತಾಂಶದ ಮಿತಿಯಿಂದಾಗಿ ಅಸಮಾನತೆಯನ್ನು ಕಡಿಮೆ ಅಂದಾಜು ಮಾಡಿರಬಹುದು. ಇದಕ್ಕೆ ವಿರುದ್ಧವಾಗಿ ಜಾಗತಿಕ ಅಸಮಾನತೆಯ ಡೇಟಾಬೇಸ್ ಪ್ರಕಾರ ಆದಾಯ ಅಸಮಾನತೆಯು 2004ರಲ್ಲಿ 52ರ ಗಿನಿ ಸೂಚ್ಯಂಕದಿಂದ 2023ರಲ್ಲಿ 62ಕ್ಕೆ ಏರಿದೆ. ವೇತನ ವ್ಯತ್ಯಾಸವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. 2023-24ರಲ್ಲಿ ಶೇ.10ರಷ್ಟು ಮೇಲ್ವರ್ಗದ ಸರಾಸರಿ ಗಳಿಕೆಯು ಶೇ.10ರಷ್ಟು ಕೆಳವರ್ಗದ ಗಳಿಕೆಗಿಂತ 13 ಪಟ್ಟು ಹೆಚ್ಚಾಗಿದೆ’ ಎಂದು ಹೇಳುತ್ತದೆ.

ಗಿನಿ ಗುಣಾಂಕವು ಜನಸಂಖ್ಯೆಯೊಳಗಿನ ಆದಾಯ ಅಥವಾ ಸಂಪತ್ತಿನ ಅಸಮಾನತೆಯನ್ನು ಅಳೆಯುವ ಸಾಂಖ್ಯಿಕ ಮಾಪನವಾಗಿದೆ. ಒಂದು ದೇಶದಲ್ಲಿ ಆದಾಯವು ಹೇಗೆ ವಿತರಣೆಯಾಗಿದೆ ಎಂಬುದನ್ನು ಅಳೆಯುತ್ತದೆ. ಇದು 0ರಿಂದ 1 (ಅಥವಾ ಶೇ.0ಯಿಂದ ಶೇ. 100) ವರೆಗೆ ಇರುತ್ತದೆ. ‘0’ (ಅಥವಾ ಶೇ.0) ಗಿನಿ ಗುಣಾಂಕವು ಪರಿಪೂರ್ಣ ಸಮಾನತೆಯನ್ನು ಸೂಚಿಸುತ್ತದೆ, ಇಲ್ಲಿ ಎಲ್ಲರಿಗೂ ಒಂದೇ ಆದಾಯವಿದೆ, ಆದರೆ ‘1’ (ಅಥವಾ ಶೇ. 100) ಗುಣಾಂಕವು ಗರಿಷ್ಠ ಅಸಮಾನತೆಯನ್ನು ಪ್ರತಿನಿಧಿಸುತ್ತದೆ, ಇದು ಆದಾಯ ಅಥವಾ ಸಂಪತ್ತಿನ ವಿತರಣೆಯ ಅಸಮಾನತೆಗಳನ್ನು ಪ್ರಮಾಣೀಕರಿಸಲು ವ್ಯಾಪಕವಾಗಿ ಬಳಸಲಾಗುವ ಸಾಧನವಾಗಿದೆ. ಭಾರತದ ಇತ್ತೀಚಿನ ಸ್ಕೋರ್ ಅಭಿವೃದ್ಧಿ ಹೊಂದಿದ ದೇಶಗಳಾದ ಚೀನಾದ 3.57 ಮತ್ತು ಯುಎಸ್‌ನ 4.1 ಗುಣಾಂಕಕ್ಕಿಂತ ಮತ್ತು ಎಲ್ಲಾ ಜಿ7 ಮತ್ತು ಜಿ20 ರಾಷ್ಟ್ರಗಳಿಗಿಂತ ಹೆಚ್ಚಿದೆ.

ಇಲ್ಲಿನ ಮಾಧ್ಯಮಗಳು ಕೇವಲ ಖರ್ಚುವೆಚ್ಚವನ್ನು ಆಧರಿಸಿ ಗಿನಿ ಸೂಚ್ಯಂಕ 25.5ರಷ್ಟಿದೆ ಎಂದು ವರದಿ ಮಾಡುತ್ತಿವೆ. ಆದರೆ ವಾಸ್ತವದಲ್ಲಿ ಸೂಚ್ಯಂಕವನ್ನು ತಲಾ ಆದಾಯ ಆಧರಿಸಿ ಅಳೆಯಬೇಕು. ಕಳೆದ ಹತ್ತು ವರ್ಷಗಳಲ್ಲಿ ಆರ್ಥಿಕ ಹಿಂಜರಿಕೆ, ನಿರುದ್ಯೋಗ, ಉದ್ಯೋಗ ಮಾರುಕಟ್ಟೆಯ ಅನಿಶ್ಚಿತತೆಯ ಕಾರಣ ಭಾರತೀಯರ ವೇತನ/ಆದಾಯದಲ್ಲಿ ಏರಿಕೆಯಾಗಲಿಲ್ಲ, ಬದಲಿಗೆ ಉದ್ಯೋಗ ಕಳೆದುಕೊಂಡವರ ಪ್ರಮಾಣ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ವರ್ಷಗಳು ಕಳೆದಂತೆ ಹಣದುಬ್ಬರವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಚುವೆಚ್ಚದ ಪ್ರಮಾಣದಲ್ಲಿಯೂ ಹೆಚ್ಚಾಗುತ್ತಿದೆ. ಹೆಚ್ಚಿಗೆ ವೆಚ್ಚ ಮಾಡುತ್ತಿದ್ದಾರೆ ಎಂದರೆ ಜೀವನ ಮಟ್ಟ ಸುಧಾರಿಸಿದೆ ಅಂತಲ್ಲ, ಬದಲಿಗೆ ಅವಶ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರ್ಥ. ಈ ಕಾರಣದಿಂದ ಖರ್ಚುವೆಚ್ಚ ಆಧರಿಸಿ ಅಸಮಾನತೆಯನ್ನು ಅಳೆಯುವುದು ದೋಷಪೂರಿತವಾಗಿದೆ, ಆದಾಯವನ್ನು ಆಧರಿಸಿ ಬಡತನ ಅಳೆಯುವುದು ಸರಿಯಾದ ಮಾಪನವಾಗಿದೆ. ಇದರ ಆಧಾರದಲ್ಲಿ ಆದಾಯ ಅಸಮಾನತೆಯಲ್ಲಿ ಭಾರತದ ಗಿನಿ ಸೂಚ್ಯಂಕ ಇಪ್ಪತ್ತು ವರ್ಷಗಳಲ್ಲಿ 52ರಿಂದ 62ಕ್ಕೆ ಏರಿಕೆಯಾಗಿರುವುದು ಅಸಮಾನತೆಯ ಹೆಚ್ಚಳವನ್ನು ಸೂಚಿಸುತ್ತದೆ. ಹೀಗಿದ್ದರೆ ಬಡತನ ಹೇಗೆ ಕುಂಠಿತಗೊಂಡಿದೆ?

1990ರಿಂದ ಭಾರತದ ಅಸಮಾನತೆ ಸೂಚ್ಯಂಕ ಹೆಚ್ಚುತ್ತಲೇ ಬಂದಿದೆ. ಗಿನಿ ಸೂಚ್ಯಂಕದ ಆಧಾರದಲ್ಲಿ ಸಮಾನತೆಯ ರ್ಯಾಂಕ್‌ನಲ್ಲಿ 2019ರಲ್ಲಿ ಜಾಗತಿಕವಾಗಿ 216 ದೇಶಗಳ ಪೈಕಿ ಭಾರತ 176ನೇ ಸ್ಥಾನದಲ್ಲಿದೆ. 2009ರಲ್ಲಿ 115ನೇ ಸ್ಥಾನದಲ್ಲಿತ್ತು. ಹತ್ತು ವರ್ಷಗಳಲ್ಲಿ 61 ಸೂಚ್ಯಂಕ ಏರಿಕೆಯಾಗಿದೆ. ಅಸಮಾನತೆಯ ಗಿನಿ ಸೂಚ್ಯಂಕ 2023ರಲ್ಲಿ 62ಷ್ಟಿದೆ. ಇದು ಭಾರತದಲ್ಲಿನ ಆದಾಯ ಅಸಮಾನತೆಯ ಹೆಚ್ಚಳವನ್ನು ಸೂಚಿಸುತ್ತದೆ. ಆದರೂ ಬಹುತೇಕ ಮಾಧ್ಯಮಗಳು ಖರ್ಚುವೆಚ್ಚ ಆಧರಿಸಿದ ಗಿನಿ ಸೂಚ್ಯಂಕವನ್ನು ಮಾತ್ರ ಪ್ರಕಟಿಸಿ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿವೆ.

ಭಾರತದ 80 ಕೋಟಿ ಜನಸಂಖ್ಯೆ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿವೆ, 2024ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 127 ದೇಶಗಳಲ್ಲಿ 105ನೇ ಸ್ಥಾನದಲ್ಲಿದೆ. ಹಸಿವು ಸೂಚ್ಯಂಕದ ಮೌಲ್ಯ 27.3 ಆಗಿದೆ. ಇದನ್ನು 2024ರ ವರದಿಯಲ್ಲಿ ‘ಗಂಭೀರ’ ಸ್ಥಿತಿಯೆಂದು ವರ್ಗೀಕರಿಸಲಾಗಿದೆ. ಭಾರತದಲ್ಲಿ ಎತ್ತರಕ್ಕೆ ತಕ್ಕ ತೂಕ (child wasting) ಶೇ.18.7ರಷ್ಟಿದೆ. ಇದು ಜಾಗತಿಕವಾಗಿ ಅತ್ಯಧಿಕವಾಗಿದೆ. ಮಕ್ಕಳ ಬೆಳವಣಿಗೆಯ ಕೊರತೆ ಶೇ.35.5, ಪೌಷ್ಟಿಕಾಂಶದ ಕೊರತೆ ಶೇ.13.7 ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಶೇ.2.9ರಷ್ಟಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯು ಭಾರತದ ‘ಗಂಭೀರ’ ಹಸಿವಿನ ವರ್ಗೀಕರಣಕ್ಕೆ ಕಾರಣವಾಗಿವೆ. ಮೇಲಿನಂತೆ ವಾಸ್ತವ ದತ್ತಾಂಶಗಳಿದ್ದರೂ ಸಹ ಅದನ್ನು ಮರೆಮಾಚಿ ಭಾರತವು ಬಡತನವನ್ನು ಕೊನೆಗೊಳಿಸಿದೆ, ನಾಲ್ಕನೇ ಸ್ಥಾನದಲ್ಲಿದೆ ಎಂದು ಸುಳ್ಳುಗಳನ್ನು ಪ್ರಚಾರ ಮಾಡಲಾಗುತ್ತಿದೆ.

ಭಾರತ ಸರಕಾರವು ನೀತಿ ಆಯೋಗ, ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ(ಯುಎನ್‌ಡಿಪಿ) ಮತ್ತು ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಇನಿಷಿಯೇಟಿವ್(ಒಪಿಎಚ್‌ಐ) ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕವನ್ನು(ಎನ್‌ಎಂಪಿಐ) ಬಳಸಿಕೊಂಡು ಬಡತನ ಕಡಿಮೆಯಾಗಿದೆ ಎಂಬುದನ್ನು ತೋರಿಸುವುದು ಒಂದು ಕಾರ್ಯತಂತ್ರವಾಗಿದೆ. ವಾಸ್ತವದಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO) ನಡೆಸುವ ಸಮೀಕ್ಷೆ ಭಾರತದಲ್ಲಿ ಆರ್ಥಿಕ ಬಡತನದ ಅಂದಾಜಿನ ಆಧಾರಸ್ತಂಭವಾಗಿದೆ. ಆದರೆ ಮೋದಿ ಸರಕಾರವು 2017-18ರ ಸಮೀಕ್ಷೆಯನ್ನು ರದ್ದುಗೊಳಿಸಿದೆ. 2014 ರಿಂದ 2022ರವರೆಗೆ ಗ್ರಾಹಕ ವೆಚ್ಚ ಸಮೀಕ್ಷೆಗಳ ದತ್ತಾಂಶ ಲಭ್ಯವಿಲ್ಲ. ಆದಾಯ-ಆಧಾರಿತ ಬಡತನದ ಸ್ಥಿತಿಗತಿಗಳ ಸಮೀಕ್ಷೆ ನಡೆಸದಿರಲು ಅಥವಾ ಬಿಡುಗಡೆ ಮಾಡದಿರಲು ಮೋದಿ ಸರಕಾರ ತೆಗೆದುಕೊಂಡ ನಿರ್ಧಾರವು ಬಡತನ ಅಳೆಯುವ ಸಾಮರ್ಥ್ಯವನ್ನು ಸೀಮಿತಗೊಳಿಸುತ್ತದೆ.

ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರಾ ‘‘2014ರಿಂದ 2022ರವರೆಗೆ ಗ್ರಾಹಕ ವೆಚ್ಚ ಸಮೀಕ್ಷೆಗಳ ಅಲಭ್ಯತೆಯ ಹೊರತಾಗಿಯೂ ಎನ್‌ಎಂಪಿಐಯನ್ನು ಭಾರತದ ಬಡತನ ಸೂಚಕವಾಗಿ ಬಳಸುವ ಉದ್ದೇಶವು ರಾಜಕೀಯ ತಂತ್ರದ ಭಾಗವಾಗಿದೆ. ವಾಸ್ತವದಲ್ಲಿ ವೇತನಗಳು ಆರು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು, ಇದು ಗ್ರಾಹಕರ ಕೊಳ್ಳುವಿಕೆ, ಬೇಡಿಕೆಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿತು ಮತ್ತು ಇದು ಬಡತನ ಮಟ್ಟದ ಕಡಿಮೆಯಾಗುವಿಕೆಗೆ ತಾಳೆಯಾಗುವುದಿಲ್ಲ. ವಿಧಾನಶಾಸ್ತ್ರ ಮತ್ತು ಅದರ ಫಲಿತಾಂಶಗಳು ಹೆಚ್ಚಿನ ಪರೀಕ್ಷೆಗೆ ತೆರೆದುಕೊಳ್ಳುತ್ತವೆಯೇ? ಎನ್‌ಎಂಪಿಐಗೆ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲು ಸಾಧ್ಯವಾಗಿದೆಯೇ?... ಚುನಾವಣೆಗಳ ಮುಂಚೆ ಅಥವಾ ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್‌ಡಿಜಿ) ಗುರಿ 1.2ನಂತಹ (2030ರ ವೇಳೆಗೆ ಬಹು ಆಯಾಮದ ಬಡತನವನ್ನು ಅರ್ಧಕ್ಕೆ ಇಳಿಸುವುದು) ಜಾಗತಿಕ ಬದ್ಧತೆಗಳ ಮುಂಚೆ ಬಡತನ ಕಡಿಮೆಯಾಗಿದೆ ಎಂದು ತೋರಿಸಲು ಎನ್‌ಎಂಪಿಐಯನ್ನು ಬಳಸಿಕೊಳ್ಳುವುದು ರಾಜಕೀಯ ಕಾರ್ಯಸೂಚಿಯಾಗಿದೆ. ಎನ್‌ಎಂಪಿಐನ ಆದ್ಯತೆಯು ಆದಾಯೇತರ ಸೂಚಕಗಳ ಮೇಲಿದೆ. ಇವು ಸರಕಾರಿ ಯೋಜನೆಗಳಿಂದ (ಉದಾಹರಣೆಗೆ, ಸ್ವಚ್ಛ ಭಾರತ ಮತ್ತು ಉಜ್ವಲ ಯೋಜನೆ) ಜನಜೀವನ ಸುಧಾರಣೆಗೊಂಡಿದೆ, ಇದು ಸರಕಾರದ ನೀತಿಗಳ ಯಶಸ್ಸು ಎಂದು ತೋರಿಸಿಕೊಳ್ಳುವ ಉದ್ದೇಶವಿದೆ. ಆದರೆ ಆದಾಯದಲ್ಲಿ ಸ್ಥಗಿತವನ್ನು ನಿರ್ಲಕ್ಷಿಸಲಾಗಿದೆ. ಇದು ಚರ್ಚೆಯಾಗುತ್ತಿಲ್ಲ’’ ಎಂದು ಬರೆಯುತ್ತಾರೆ

ಕುಟುಂಬಗಳು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಸುಸ್ಥಿರ ಆದಾಯವನ್ನು ಅವಲಂಬಿಸಿವೆ. ಸಿಎಂಐಇನ(ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಇಕಾನಮಿ) ಅಧ್ಯಯನಗಳು 2014ರಿಂದ 2020ರವರೆಗೆ ಗ್ರಾಮೀಣ ಕೂಲಿ ಕಾರ್ಮಿಕರು ಮತ್ತು ನಗರ ಕಾರ್ಮಿಕರ ವಾಸ್ತವಿಕ ವೇತನದಲ್ಲಿ ಹೆಚ್ಚಳವಾಗದೆ ಸ್ಥಗಿತಗೊಂಡಿರುವುದು ಅಥವಾ ಕಡಿಮೆಯಾಗಿರುವುದನ್ನು ಸೂಚಿಸುತ್ತವೆ. ಅಂದರೆ ಆದಾಯ ಕುಂಠಿತಗೊಂಡಿದೆ. ಈ ಬೆಳವಣಿಗೆಯು ವಿಶೇಷವಾಗಿ ಕಡಿಮೆ ಆದಾಯದ ಗುಂಪುಗಳಿಗೆ ಗ್ರಾಹಕ ಬೇಡಿಕೆಯನ್ನು ಮಿತಿಗೊಳಿಸಿತು. ಆದಾಯದ ಮಿತಿಯ ಕಾರಣ ಗ್ರಾಹಕರ ಬೇಡಿಕೆ ದುರ್ಬಲಗೊಂಡಿರುವುದು ಎನ್‌ಎಂಪಿಐನ ಬಡತನ ಕಡಿಮೆಯಾಗಿದೆ ಎಂಬ ಹೇಳಿಕೆಗೆ ಸವಾಲಾಗಿದೆ. ಮತ್ತೊಂದೆಡೆ ಎನ್‌ಎಂಪಿಐ ಆದಾಯ ಅಥವಾ ಗ್ರಾಹಕ ವೆಚ್ಚವನ್ನು ನೇರವಾಗಿ ಅಳೆಯುವುದಿಲ್ಲ, ಬದಲಿಗೆ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಕೊರತೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಕ್ಷೇತ್ರಗಳಲ್ಲಿ ಸುಧಾರಣೆಗಳು (ಉದಾಹರಣೆಗೆ, ವಿದ್ಯುತ್ ಅಥವಾ ಸ್ವಚ್ಛತೆಗೆ ಪ್ರವೇಶ) ಸರಕಾರದ ಹಸ್ತಕ್ಷೇಪಗಳ ಮೂಲಕ ಜನತೆಯ ಆದಾಯ ಹೆಚ್ಚಳ/ಕಡಿಮೆ ಆಗದೆಯೂ ಸಂಭವಿಸಬಹುದು. ಇದು ವಾಸ್ತವ ಆರ್ಥಿಕತೆ ಮತ್ತು ಬಹು ಆಯಾಮದ ಬಡತನ ಮಾಪನಗಳ ನಡುವೆ ತಾಳೆ ಆಗದಿರುವುದನ್ನು ಸೂಚಿಸುತ್ತದೆ.

ಲೇಖಾ ಚಕ್ರವರ್ತಿ ‘‘ಆರೋಗ್ಯ, ಶಿಕ್ಷಣ ಮತ್ತು ಜೀವನ ಗುಣಮಟ್ಟವನ್ನು ಅಳೆಯುವ ಮಾನದಂಡವನ್ನು ತಾಯಿಯ ಆರೋಗ್ಯ ಮತ್ತು ಬ್ಯಾಂಕ್ ಖಾತೆಯೊಂದಿಗೆ ಸಮಾನವಾಗಿ ಪರಿಗಣಿಸುವುದು ಹಾದಿ ತಪ್ಪಿಸುವ ಕ್ರಮವಾಗಿದೆ. 2015-16ರ ವೇಳೆಗೆ ಬಹುತೇಕ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿವೆ. ಇದು ಸಹಜವಾಗಿ ಬದುಕಿನ ಗುಣಮಟ್ಟದ ಅಳತೆಯಲ್ಲಿ ಹೆಚ್ಚಿನ ಅಂಕಗಳನ್ನು ನೀಡುತ್ತದೆ. ಆದರೆ ಇದನ್ನು ಅಳೆಯುವ ಮಾನದಂಡವನ್ನು ಶಿಕ್ಷಣ, ಆರೋಗ್ಯ, ಜೀವನಮಟ್ಟಕ್ಕೆ ಅನ್ವಯಿಸಿದರೆ ಈ ವಲಯಗಳಲ್ಲಿಯೂ ಸುಧಾರಣೆ ಕಂಡುಬರುತ್ತದೆ. ಆದರೆ ಇದು ಸತ್ಯವಲ್ಲ. ಬ್ಯಾಂಕ್ ಖಾತೆ ಹೊಂದಿರುವ ಕೋಟ್ಯಂತರ ಜನಸಂಖ್ಯೆ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಆರೋಗ್ಯದ ಕೊರತೆಯಿಂದ, ಹಸಿವಿನಿಂದ ಬದಕುತ್ತಿದ್ದಾರೆ. ಆದರೆ ಈ ಅಂಶಗಳು ಬಡತನ ಅಳೆಯುವ ಮಾಪನದಲ್ಲಿ ಪರಿಗಣಿಸಲ್ಪಡುವುದಿಲ್ಲ..’’ ಎಂದು ಹೇಳುತ್ತಾರೆ. ಹಾಗೆಯೇ ಜನನ ಪ್ರಮಾಣ ಕಡಿಮೆಯಾಗಿರುವುದರಿಂದ ತಾಯಿಯ ಆರೋಗ್ಯವನ್ನು ಅಳೆಯುವ ಮಾನದಂಡ ಬದಲಾಗಬೇಕಾಗುತ್ತದೆ, ಅಪೌಷ್ಟಿಕತೆಯನ್ನು ಪರಿಗಣಿಸಬೇಕಾಗುತ್ತದೆ. 2015-16ರಲ್ಲಿ ಶೇ.20ರಷ್ಟಿದ್ದ ಮಹಿಳೆಯರ ಅಪೌಷ್ಟಿಕತೆ 2021-22ರ ವೇಳೆಗೆ ಶೇ.30ರಷ್ಟಾಗಿದೆ. ಆದರೆ ಎನ್‌ಎಂಪಿಐ ಇದನ್ನು ನಿರ್ಲಕ್ಷಿಸಿ ಬಾಣಂತಿ ಆರೋಗ್ಯ ಎನ್ನುವ ಮಾನದಂಡವನ್ನು ಮಾತ್ರ ಬಳಸಿಕೊಂಡು ಗುಣಮಟ್ಟದ ಸೂಚ್ಯಂಕವನ್ನು ಹೆಚ್ಚಿಸುತ್ತದೆ. ಇದು ವಂಚನೆಯಾಗಿದೆ. ಇಂತಹ ದೋಷಪೂರಿತ ಸಮೀಕ್ಷೆಗಳನ್ನು ಮಾಧ್ಯಮಗಳು, ಆರ್ಥಿಕ ತಜ್ಞರು ವರದಿ ಮಾಡುವುದಿಲ್ಲ.

‘ದ ವೈರ್’ನಲ್ಲಿ ಪ್ರಕಟವಾದ ಮತ್ತೊಂದು ವರದಿಯ ಪ್ರಕಾರ ರಂಗರಾಜನ್ ಮತ್ತು ಎಸ್. ಮಹೇಂದ್ರ ದೇವ್ ಅವರು 2022-23 ಮತ್ತು 2023-24ರ ಅಖಿಲ ಭಾರತ ಗ್ರಾಹಕ ಖರ್ಚುವೆಚ್ಚ ಸಮೀಕ್ಷೆಯ ದತ್ತಾಂಶವನ್ನು ಬಳಸಿಕೊಂಡು ಭಾರತದಲ್ಲಿ ಬಡತನವನ್ನು ಅಂದಾಜಿಸಿದ್ದಾರೆ. ಅವರ ಅಧ್ಯಯನವು ಭಾರತದಲ್ಲಿ ಬಡತನವನ್ನು ಅಂದಾಜು ಮಾಡುವ 2014ರ ರಂಗರಾಜನ್ ಸಮಿತಿಯ ಶಿಫಾರಸು ಆಧಾರಿತವಾಗಿದೆ. ಅವರ ವರದಿಯ ಪ್ರಕಾರ, ಭಾರತದಲ್ಲಿ ತೀವ್ರ ಬಡತನವು 2011-12ರಲ್ಲಿ ಶೇ.29ರಿಂದ 2022-23ರಲ್ಲಿ ಶೇ.9.5ಕ್ಕೆ ಮತ್ತು 2023-24ರಲ್ಲಿ ಶೇ.4.9ಕ್ಕೆ ಕಡಿಮೆಯಾಗಿದೆ. ಇದು ವಾಸ್ತವವಲ್ಲ. ಅಸಮಾನತೆಯ ಪ್ರಮಾಣ ಅಗಾಧ ಮಟ್ಟದಲ್ಲಿರುವುದನ್ನು ಈ ಅಧ್ಯಯನ ಕಡೆಗಣಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

ಇಂದಿಗೂ ಬಡತನ ರೇಖೆಯನ್ನು ಅಳೆಯಲು 2005ರಲ್ಲಿ ರಚನೆಯಾದ ಇಪ್ಪತ್ತು ವರ್ಷಗಳ ಹಿಂದಿನ ತೆಂಡುಲ್ಕರ್ ಸಮಿತಿಯ ವರದಿಯ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸಮಿತಿಯ ವರದಿಯ ಪ್ರಕಾರ (ಇಪ್ಪತು ವರ್ಷಗಳ ಹಿಂದೆ) ಭಾರತದಲ್ಲಿ ಶೇ.21.9ರಷ್ಟು ಬಡತನವಿದೆ. ಆಗಿನ 108 ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದಾಗ 22.6 ಕೊಟಿ ಜನರು ಬಡತನದಲ್ಲಿದ್ದರು. ಈ ಸಮಿತಿಯು ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ರೂ. 447, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ರೂ. 579 ಸಾಕು ಎಂದು ನಿರ್ಧರಿಸಿತು. ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.2,235, ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.2,895 ಸಾಕಾಗುತ್ತದೆ. ಇದನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಈ ದತ್ತಾಂಶಗಳು ಲೋಪದೋಷಗಳಿಂದ ಕೂಡಿತ್ತು.

2011-12ರಲ್ಲಿ ಹಣದುಬ್ಬರವನ್ನು ಪರಿಗಣಿಸಿ ತೆಂಡುಲ್ಕರ್ ಸಮಿತಿಯ ಶಿಫಾರಸುಗಳ ನೀತಿಯಲ್ಲಿ ಬದಲಾಯಿಸದೆ ಬಡತನ ರೇಖೆಯನ್ನು ಕೊಂಚ ಬದಲಾಯಿಸಿದರು. ಇದರ ಪ್ರಕಾರ ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 27, ಪ್ರತೀ ತಿಂಗಳು ರೂ.837, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 33, ಪ್ರತೀ ತಿಂಗಳು ರೂ.1,023 ಸಾಕು ಎಂದು ನಿರ್ಧರಿಸಿದರು. ಇದರ ಅನುಸಾರ ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.4,185 ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.5,115 ಸಾಕಾಗುತ್ತದೆ.

2011ರಲ್ಲಿ ರಂಗರಾಜನ್ ಸಮಿತಿಯ ದತ್ತಾಂಶದ ಪ್ರಕಾರ ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 32, ಪ್ರತೀ ತಿಂಗಳು ರೂ.992, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 47, ಪ್ರತೀ ತಿಂಗಳು ರೂ.1,457 ಸಾಕು ಎಂದು ನಿರ್ಧರಿಸಿತು. ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.4,960, ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.7,285 ಸಾಕಾಗುತ್ತದೆ. ಈ ಸಮಿತಿಯು ಭಾರತದಲ್ಲಿ ಶೇ.29.5ರಷ್ಟು ಬಡತನವಿದೆ ಎಂದು ಹೇಳಿತ್ತು. 2011ರ ಜನಗಣತಿಯ ಪ್ರಕಾರ 121 ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದಾಗ 35.5 ಕೋಟಿ ಜನಸಂಖ್ಯೆ ಬಡತನದಲ್ಲಿತ್ತು. ಈ ಮಾನದಂಡಗಳು, ದತ್ತಾಂಶಗಳಿಂದ ಪ್ರಭುತ್ವ ಮತ್ತು ನವ ಉದಾರೀಕರಣದ ಆರ್ಥಿಕ ತಜ್ಞರು ಬಡತನದ ಸಮಾಜೋ-ಆರ್ಥಿಕ-ಶೈಕ್ಷಣಿಕ ಪರಿಸ್ಥಿತಿಯನ್ನು ಅತ್ಯಂತ ಅಮಾನವೀಯ ನೆಲೆಯಲ್ಲಿ ಅಳೆಯುತ್ತಾರೆ ಮತ್ತು ಗುರುತಿಸುತ್ತಾರೆ ಎಂದು ಸಾಬೀತಾಗುತ್ತದೆ.

ಯಾವುದೇ ನಾಗರಿಕ ಸಮಾಜ ಮೇಲಿನ ರೀತಿಯ ಮಾನದಂಡಗಳನ್ನು ಬಳಸುತ್ತದೆ ಎಂದರೆ ನಾವು ಎಂತಹ ಅಮಾನವೀಯ, ಕ್ರೌರ್ಯದ ಕಾಲದಲ್ಲಿದ್ದೇವೆ ಎಂದು ಮನದಟ್ಟಾಗುತ್ತದೆ. ಜನತೆಯನ್ನು ವಂಚಿಸುವ, ತಪ್ಪು ದಾರಿಗೆಳೆಯುವ ಇಂತಹ ವರದಿಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X