ಬಡತನರೇಖೆ ಅಳೆಯುವ ಮಾನದಂಡಗಳು ಮತ್ತು ಪ್ರಭುತ್ವದ ಕ್ರೌರ್ಯ
ಭಾಗ 1

ಕೆಲ ತಿಂಗಳ ಹಿಂದೆ ನೀತಿ ಆಯೋಗವು 2013-14ರಿಂದ 2022-23ರ ಹತ್ತು ವರ್ಷಗಳಲ್ಲಿ 24.82 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿದ್ದಾರೆ, ಶೇ.5ರಷ್ಟು ಜನಸಂಖ್ಯೆ ಮಾತ್ರ ಬಡತನರೇಖೆಗಿಂತ ಕೆಳಗಿದ್ದಾರೆ ಎಂದು ವರದಿ ಪ್ರಕಟಿಸಿತು. ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಡಿಪಿಐ) ಸಮೀಕ್ಷೆ ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಇದರ ಪ್ರಕಾರ 2013-14ರಲ್ಲಿ ಶೇ.29.17ರಷ್ಟಿದ್ದ ಎಂಡಿಪಿಐ 2022-23ರಲ್ಲಿ ಶೇ.11.28ರಷ್ಟು ಕಡಿಮೆಯಾಗಿದೆ. ಆದರೆ ಈ ವಿಧಾನವು ಬಡತನದ ಸಮಗ್ರ ಸ್ಥಿತಿಯನ್ನು ಪರಿಚಯಿಸುವುದಿಲ್ಲ. ಮೋದಿ ಸರಕಾರವು ಎನ್‌ಎಸ್‌ಸಿ, ಎನ್‌ಎಸ್‌ಎಸ್‌ಒ, ಐಐಪಿಎಸ್ ಸಂಸ್ಥೆಗಳು ಬಡತನ, ಪೌಷ್ಟಿಕತೆ ಮುಂತಾದವುಗಳ ಕುರಿತಾದ ನಡೆಸಿದ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸದೆ ಸಬ್ ಚಂಗಾಸ್ ಹೈ ಎಂದು ಹೇಳುವ ತನ್ನದೇ ಆದ ಸಮೀಕ್ಷೆಯನ್ನು ಪ್ರಕಟಿಸಿರುವುದು ಸಂಶಯಾಸ್ಪದವಾಗಿದೆ.
ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರಕಟಿಸಿದ ವರದಿಯ ಪ್ರಕಾರ 2011-12 ರಿಂದ 2022-23ರ ಅವಧಿಯಲ್ಲಿ ತೀವ್ರವಾದ ಬಡತನದ ಪ್ರಮಾಣವು ಶೇ.16.2ರಿಂದ ಶೇ.2.3ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರಸಕ್ತ ಭಾರತದಲ್ಲಿ ಕೇವಲ 3.2 ಕೋಟಿ ಜನಸಂಖ್ಯೆ ಬಡತನರೇಖೆಗಿಂತ ಕೆಳಗಿದ್ದಾರೆ. ಈ ಸಂಸ್ಥೆಯೂ ಸಹ ಭಾರತ ಸರಕಾರದಂತೆ ಬಡತನವನ್ನು ಅಳೆಯಲು ಖರ್ಚು/ವೆಚ್ಚವನ್ನು ಮಾನದಂಡವಾಗಿ ಬಳಸುತ್ತಾರೆ, ಆದಾಯವನ್ನಲ್ಲ. ಈ ಮಾದರಿಯ ಮಾಪನದ ಪ್ರಕಾರ ಪ್ರತೀ ದಿನ ಪ್ರತಿ ವ್ಯಕ್ತಿ ರೂ.180 ಖರ್ಚು ಮಾಡುವುದನ್ನು ರೆಫೆರೆನ್ಸ್ ಆಗಿ ಬಳಸಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ನೀತಿ ಆಯೋಗವು 2013-14ರಿಂದ 2022-23ರ ಹತ್ತು ವರ್ಷಗಳಲ್ಲಿ 24.82 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿದ್ದಾರೆ, ಶೇ.5ರಷ್ಟು ಜನಸಂಖ್ಯೆ ಮಾತ್ರ ಬಡತನರೇಖೆಗಿಂತ ಕೆಳಗಿದ್ದಾರೆ ಎಂದು ವರದಿ ಪ್ರಕಟಿಸಿತು. ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಡಿಪಿಐ) ಸಮೀಕ್ಷೆ ಆಧರಿಸಿ ಈ ವರದಿ ಪ್ರಕಟಿಸಲಾಗಿದೆ. ಇದರ ಪ್ರಕಾರ 2013-14ರಲ್ಲಿ ಶೇ.29.17ರಷ್ಟಿದ್ದ ಎಂಡಿಪಿಐ 2022-23ರಲ್ಲಿ ಶೇ.11.28ರಷ್ಟು ಕಡಿಮೆಯಾಗಿದೆ. ಆದರೆ ಈ ವಿಧಾನವು ಬಡತನದ ಸಮಗ್ರ ಸ್ಥಿತಿಯನ್ನು ಪರಿಚಯಿಸುವುದಿಲ್ಲ. ಮೋದಿ ಸರಕಾರವು ಎನ್‌ಎಸ್‌ಸಿ, ಎನ್‌ಎಸ್‌ಎಸ್‌ಒ, ಐಐಪಿಎಸ್ ಸಂಸ್ಥೆಗಳು ಬಡತನ, ಪೌಷ್ಟಿಕತೆ ಮುಂತಾದವುಗಳ ಕುರಿತಾದ ನಡೆಸಿದ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸದೆ ಸಬ್ ಚಂಗಾಸ್ ಹೈ ಎಂದು ಹೇಳುವ ತನ್ನದೇ ಆದ ಸಮೀಕ್ಷೆಯನ್ನು ಪ್ರಕಟಿಸಿರುವುದು ಸಂಶಯಾಸ್ಪದವಾಗಿದೆ.
ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕದ (ಜಿಎಂಡಿಪಿಐ) ಚೌಕಟ್ಟನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡು ಸಮೀಕ್ಷೆ ನಡೆಸಿ 2022ರಲ್ಲಿ ಎನ್‌ಎಂಡಿಪಿಐ (ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ) ಪ್ರಕಟಿಸಿರುವ ವರದಿಯ ಪ್ರಕಾರ ಭಾರತದಲ್ಲಿ 2005-06ರಲ್ಲಿ ಶೇ.54ರಷ್ಟಿದ್ದ ಎಂಪಿಡಿಐ 2015-16ರಲ್ಲಿ ಶೇ.27.9ಕ್ಕೆ, 2019-21ರಲ್ಲಿ ಶೇ.16ಕ್ಕೆ ಕಡಿಮೆಯಾಗಿದೆ ಎಂದು ಹೇಳಿದೆ. ಜಿಎಂಡಿಪಿಐಯ ವಿಧಾನವನ್ನು ಬದಲಾಯಿಸಿದ ಎನ್‌ಎಂಡಿಪಿಐ ಶೇ.18ರಷ್ಟು ಜನಸಂಖ್ಯೆಯಿರುವ 6-14ನೇ ವಯಸ್ಸಿನ ಮಕ್ಕಳನ್ನು ತನ್ನ ಸಮೀಕ್ಷೆಯಲ್ಲಿ ಹೊರಗಿಟ್ಟಿದೆ. ಆದರೆ ಗುಂಪಿನ ಮುಕ್ಕಾಲು ಪಾಲು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಎನ್‌ಎಂಡಿಪಿಐ ಸಮೀಕ್ಷೆಯಲ್ಲಿ ಇದು ಒಳಗೊಂಡಿಲ್ಲ. ವಿಶ್ವಸಂಸ್ಥೆಯು ಪ್ರಕಟಿಸಿದ ವಿಶ್ವ 2023ರಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಕುರಿತ ವರದಿಯ ಅನುಸಾರ ಭಾರತದಲ್ಲಿ 104.3 ಕೋಟಿ (ಶೇ.74.1) ಜನಸಂಖ್ಯೆಯು ಗುಣಮಟ್ಟದ ಆಹಾರ ಸೇವಿಸುತ್ತಿಲ್ಲ. ಇದು ಎನ್‌ಎಂಡಿಪಿಐ ಸಮೀಕ್ಷೆಯಲ್ಲಿ ಪ್ರತಿಫಲಿತವಾಗಿಲ್ಲ.
ಎನ್‌ಎಂಡಿಪಿಐ ಸಮೀಕ್ಷೆಯಲ್ಲಿ ವಿಶ್ವಾಸಾರ್ಹವಲ್ಲದ ತೂಕ ಮತ್ತು ವಯಸ್ಸನ್ನು ಆಧರಿಸಿ ಅಪೌಷ್ಟಿಕತೆಯನ್ನು ಅಳೆದರೆ ಜಿಎಂಡಿಪಿಐ ಸಮೀಕ್ಷೆಯಲ್ಲಿ ಕುಬ್ಜತೆ ಮತ್ತು ವಯಸ್ಸನ್ನು ಆಧರಿಸಿ ಅಪೌಷ್ಟಿಕತೆಯನ್ನು ಅಳೆಯುತ್ತಾರೆ. ಕುಬ್ಜತೆ ಮತ್ತು ಅಪೌಷ್ಟಿಕತೆಗೆ ನೇರ ಸಬಂಧವಿದೆ. ನವೆಂಬರ್ 2024ರಲ್ಲಿ ಬಿಡುಗಡೆಯಾದ ಎನ್‌ಎಫ್‌ಎಚ್‌ಎಸ್(ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ವರದಿಯ ಪ್ರಕಾರ 1,93,886 ಮಕ್ಕಳ ಪೈಕಿ (0-9 ತಿಂಗಳು ವಯಸ್ಸಿನ) ಶೇ.39.60 ಪ್ರಮಾಣದ ಪರಿಶಿಷ್ಟ ಸಮುದಾಯದ ಮಕ್ಕಳಲ್ಲಿ ಕುಬ್ಜತೆ ಇದೆ. ಪರಿಶಿಷ್ಟ ಸಮುದಾಯಗಳು ಮತ್ತು ಇತರರ ನಡುವೆ ಶೇ.68.9ರಷ್ಟು ಕುಬ್ಜತೆಯ ಅಸಮಾನತೆ ಇದೆ. ಇದಕ್ಕೆ ಸಂಪತ್ತಿನ ಅಸಮಾನತೆ(ಶೇ.41.3), ತಾಯಂದಿರ ಬಿಎಂಐ(ಶೇ.11.02), ಶೌಚಾಲಯ ಸೌಲಭ್ಯ(ಶೇ.4.26), ಹೆರಿಗೆಯ ಶೈಲಿ(ಶೇ.1.49) ಕಾರಣ ಎಂದು ವರದಿಯಲ್ಲಿ ಹೇಳಿದ್ದಾರೆ. ಆದರೆ ನಮ್ಮಲ್ಲಿನ ಸಂಸ್ಥೆಗಳು ಇದನ್ನು ನಿರ್ಲಕ್ಷಿಸಿ ತೂಕವನ್ನು ಮಾತ್ರ ಪರಿಗಣಿಸುತ್ತಾರೆ. ಇದು ವೈಜ್ಞಾನಿಕವಲ್ಲವೆಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ.
ಆರ್ಥಿಕ ತಜ್ಞ ಸಂತೋಷ್ ಮೆಹ್ರೋತ್ರ ಅವರು ಗರ್ಭಿಣಿಯರು ಪರಿಣಿತರಲ್ಲದ ಸೂಲಗಿತ್ತಿಯರ ಕೈಯಲ್ಲಿ ಹೆರಿಗೆ ಮಾಡಿಸಿಕೊಳ್ಳುವುದನ್ನು ಸೂಚ್ಯಂಕವಾಗಿ ಬಳಸಿಕೊಳ್ಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಶೇ.80ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ ಮತ್ತು ಹೆರಿಗೆ ಆಧಾರಿತ ಸಾವುಗಳು ಸಹ ಕಡಿಮೆಯಾಗಿರುತ್ತದೆ. ಆದರೆ ಸಾವುನೋವುಗಳು ತುಂಬಾ ಕಡಿಮೆ ಇರುವ ಆರೋಗ್ಯಕರ ವಿಧಾನವನ್ನು ಒಂದು ಸೂಚ್ಯಂಕವಾಗಿ ಬಳಸಿಕೊಳ್ಳುವುದರಿಂದ ಇಲ್ಲಿ ಸಹಜವಾಗಿಯೇ ಉತ್ತಮ ಫಲಿತಾಂಶ ದೊರಕುತ್ತದೆ ಎಂದು ಬರೆಯುತ್ತಾರೆ. ಅಂದರೆ ಸುಸಂಬದ್ಧವಾಗಿರುವ ಅಂಶಗಳನ್ನೇ ಸಮೀಕ್ಷೆಗೆ ಬಳಸಿಕೊಳ್ಳುವುದರಿಂದ ಸಹಜವಾಗಿಯೇ ಎಂಡಿಪಿಐ ಕಡಿಮೆಯಾಗಿದೆ ಎನ್ನುವ ಫಲಿತಾಂಶ ಬರುತ್ತದೆ. ಇದು ಸಹ ವಂಚನೆಯಾಗಿದೆ. (ಉದಾಹರಣೆಗೆ ರಾಜ್ಯದ ಶೈಕ್ಷಣಿಕ ಪ್ರಗತಿ ಸಮೀಕ್ಷೆಗೆ ಬೆಂಗಳೂರಿನ ಹಿಂದುಳಿದ, ಸ್ಲಂ ನಿವಾಸಿಗಳು ಹೆಚ್ಚಾಗಿರುವ ಯಾರಬ್ ನಗರ, ಡಿ.ಜಿ. ಹಳ್ಳಿಯನ್ನು ಪರಿಗಣಿಸದೆ ಪ್ರತಿಷ್ಠಿತ ಸದಾಶಿವ ನಗರದಲ್ಲಿ ವಾಸಿಸುವ ಮೇಲ್ವರ್ಗದ ಮಕ್ಕಳನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮಕ್ಕಳ ದಾಖಲಾತಿ, ಉತ್ತೀರ್ಣದ ಪ್ರಮಾಣ ಶೇ.100ರಷ್ಟಿದೆ ಎಂದು ವರದಿ ಮಾಡಿದಂತೆ)
ಎಪ್ರಿಲ್ 2025ರ ಇಪಿಡಬ್ಲ್ಯು ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ 2011-12ರಲ್ಲಿ 25 ಕೋಟಿ ಜನಸಂಖ್ಯೆ ಬಡತನದಲ್ಲಿದ್ದರೆ, 2022-23ರಲ್ಲಿ 22.5 ಕೋಟಿ ಜನಸಂಖ್ಯೆ ಬಡತನದಲ್ಲಿದ್ದಾರೆ. ಈ ವರದಿಯು ಸರಕಾರ ಪ್ರಾಯೋಜಿತ ದತ್ತಾಂಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ವರದಿ ನೀಡುತ್ತದೆ
ಬಡತನ ರೇಖೆ ಕುರಿತಾದ ರಾಜಕೀಯ
ಮೊದಲನೆಯದಾಗಿ: 2011-12ರ ನಂತರದ ಹತ್ತು ವರ್ಷಗಳ ಅವಧಿಯಲ್ಲಿ ಬಡತನ ರೇಖೆ ಕುರಿತು ಸಮೀಕ್ಷೆ ನಡೆಸಿಲ್ಲ. 2022-23ರಲ್ಲಿ ನಡೆಸಿದ್ದಾರೆ. ಪ್ರತೀ ಐದು ವರ್ಷಗಳಿಗೆ ಒಮ್ಮೆ ಸಮೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಆಗ ಮಾತ್ರವೇ ತೌಲನಿಕವಾಗಿ ಮತ್ತು ನಿಖರವಾಗಿ ಅಧ್ಯಯನ ಮಾಡಬಹುದು. ಅದರೆ ಮೋದಿ ಸರಕಾರವು ಹತ್ತು ವರ್ಷಗಳ ನಂತರ ಸಮೀಕ್ಷೆ ನಡಸಿದ್ದಾರೆ. ಅಂದರೆ ಇವರು ಪ್ರಸ್ತುತ ದತ್ತಾಂಶಗಳನ್ನು ಹತ್ತು ವರ್ಷಗಳ ಹಿಂದಿನ ದತ್ತಾಂಶಗಳಿಗೆ ಹೋಲಿಸುತ್ತಿದ್ದಾರೆ. ಬದಲಾದ ಉದ್ಯೋಗ ಮಾರುಕಟ್ಟೆ, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮುಂತಾದ ಕಾರಣಗಳಿಂದ ಹತ್ತು ವರ್ಷಗಳ ಅಂತರವನ್ನು ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ. ನೀತಿ ಆಯೋಗದ ವರದಿಯು ಈ ಅಂಶವನ್ನು ನಿರ್ಲಕ್ಷಿಸಿದೆ.
ಎರಡನೆಯದಾಗಿ: ಎನ್‌ಎಸ್‌ಎಸ್‌ಒ(ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ) ನಡೆಸುವ ಬಡತನ ರೇಖೆ ಗುರುತಿಸುವ ಸಮೀಕ್ಷೆಗೆ ವ್ಯಕ್ತಿ/ಕುಟುಂಬದ ಆದಾಯವನ್ನು ಪರಿಗಣಿಸದೆ ಅವರ ಖರ್ಚು/ವೆಚ್ಚವನ್ನು ಮಾನದಂಡವಾಗಿ ಬಳಸಿಕೊಳ್ಳುತ್ತಾರೆ. ಇದು ಅವೈಜ್ಞಾನಿಕ ಮತ್ತು ಸಮಂಜಸವಲ್ಲ. ಉದಾಹರಣೆಗೆ ಹತ್ತು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರ ಮಾಸಿಕ ವೇತನ ರೂ.20,000 ಮತ್ತು ಮಾಸಿಕ ಖರ್ಚು/ವೆಚ್ಚ ರೂ.15,000 ಇದ್ದರೆ ಹತ್ತು ವರ್ಷಗಳ ನಂತರ ಅವರ ವೇತನದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಖರ್ಚು/ವೆಚ್ಚದಲ್ಲಿ ಮಾತ್ರ ಏರಿಕೆಯಾಗಿ ರೂ.20,000ರಷ್ಟಾಗುತ್ತದೆ. ಅಂದರೆ ಹತ್ತು ವರ್ಷಗಳಲ್ಲಿ ಶೂನ್ಯ ಆದಾಯ ಮತ್ತು ವೆಚ್ಚದಲ್ಲಿ ರೂ.5,000ದಷ್ಟು ಹೆಚ್ಚಳವಾಗಿರುತ್ತದೆ. ಬಡತನರೇಖೆ ಅಳೆಯುವಾಗ ಖರ್ಚು/ವೆಚ್ಚವನ್ನು ಮಾತ್ರ ಪರಿಗಣಿಸಿ ಹತ್ತು ವರ್ಷಗಳಲ್ಲಿ ಅವರ ವೆಚ್ಚದಲ್ಲಿ ರೂ.5,000ರಷ್ಟು ಹೆಚ್ಚಾಗಿದೆ, ಈ ಕಾರಣದಿಂದ ಅವರು ಬಡತನರೇಖೆಯಿಂದ ಹೊರಗಿದ್ದಾರೆ ಎಂದು ಮೋದಿ ಸರಕಾರ ನಿರ್ಧರಿಸುತ್ತದೆ. ಆದಾಯ ಏರಿಕೆಯಾಗದೆ, ವೆಚ್ಚ ಮಾತ್ರ ಏರಿಕೆಯಾಗುವ ಬೆಳವಣಿಗೆಯನ್ನು ಬಡತನದಿಂದ ಹೊರಗಿದ್ದಾರೆ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಹತ್ತು ವರ್ಷಗಳ ಹಣದುಬ್ಬರವನ್ನು ಪರಿಗಣಿಸಿದರೆ ವೆಚ್ಚ ಮತ್ತೂ ಹೆಚ್ಚಾಗಿರುತ್ತದೆ. ವೇತನ ಹೆಚ್ಚಳವಾಗಿರುವುದಿಲ್ಲ. ಆದರೆ ಮೋದಿ ಸರಕಾರ ಇಂತಹ ಮೂಲಭೂತ ಮಾನದಂಡಗಳನ್ನು ಕಡೆಗಣಿಸಿ ಅವೈಜ್ಞಾನಿಕ ಮತ್ತು ಅಮಾನವೀಯ ಅಳತೆ ನಡೆಸುತ್ತದೆ.
ಮೂರನೆಯದಾಗಿ: ಇಂದಿಗೂ ಬಡತನ ರೇಖೆಯನ್ನು ಅಳೆಯಲು 2005ರಲ್ಲಿ ರಚನೆಯಾದ ಇಪ್ಪತ್ತು ವರ್ಷಗಳ ಹಿಂದಿನ ತೆಂಡುಲ್ಕರ್ ಸಮಿತಿಯ ವರದಿಯ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಸಮಿತಿಯ ವರದಿಯ ಪ್ರಕಾರ (ಇಪ್ಪತು ವರ್ಷಗಳ ಹಿಂದೆ) ಭಾರತದಲ್ಲಿ ಶೇ.21.9ರಷ್ಟು ಬಡತನವಿದೆ. ಆಗಿನ 108 ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದಾಗ 22.6 ಕೋಟಿ ಜನಸಂಖ್ಯೆ ಬಡತನದಲ್ಲಿದ್ದರು. ಈ ಸಮಿತಿಯು ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ರೂ.447, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ತಿಂಗಳು ರೂ.579 ಸಾಕು ಎಂದು ನಿರ್ಧರಿಸಿತು. ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.2,235, ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.2,895 ಸಾಕಾಗುತ್ತದೆ. ಇದನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಈ ದತ್ತಾಂಶಗಳು ಲೋಪದೋಷಗಳಿಂದ ಕೂಡಿತ್ತು.
2011-12ರಲ್ಲಿ ಹಣದುಬ್ಬರವನ್ನು ಪರಿಗಣಿಸಿ ತೆಂಡುಲ್ಕರ್ ಸಮಿತಿಯ ಶಿಫಾರಸುಗಳ ನೀತಿಯಲ್ಲಿ ಬದಲಾಯಿಸದೆ ಬಡತನ ರೇಖೆಯನ್ನು ಕೊಂಚ ಬದಲಾಯಿಸಲಾಯಿತು. ಇದರ ಪ್ರಕಾರ ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 27, ಪ್ರತೀ ತಿಂಗಳು ರೂ.837, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 33, ಪ್ರತೀ ತಿಂಗಳು ರೂ.1,023 ಸಾಕು ಎಂದು ನಿರ್ಧರಿಸಲಾಯಿತು. ಇದರ ಅನುಸಾರ ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.4,185, ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.5,115 ಸಾಕಾಗುತ್ತದೆ. ಆಗ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಸಂತೃಪ್ತಿಯಿಂದ ಬದುಕಲು ಪ್ರತೀ ವ್ಯಕ್ತಿಗೆ ದಿನವೊಂದಕ್ಕೆ ರೂ.27 ಸಾಕಾಗುತ್ತದೆ ಎಂದು ಹೇಳಿ ಪ್ರಜ್ಞಾವಂತರನ್ನು ದಂಗುಬಡಿಸಿದ್ದರು.
2011ರಲ್ಲಿ ರಂಗರಾಜನ್ ಸಮಿತಿಯ ದತ್ತಾಂಶದ ಪ್ರಕಾರ ಸುಸ್ಥಿರ ಜೀವನ ನಡೆಸಲು ಗ್ರಾಮೀಣ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 32, ಪ್ರತೀ ತಿಂಗಳು ರೂ.992, ನಗರ ಭಾಗದಲ್ಲಿ ಪ್ರತೀ ವ್ಯಕ್ತಿಗೆ ಪ್ರತೀ ದಿನ 47, ಪ್ರತೀ ತಿಂಗಳು ರೂ. 1,457 ಸಾಕು ಎಂದು ನಿರ್ಧರಿಸಿತು. ಐದು ಸದಸ್ಯರ ಕುಟುಂಬಕ್ಕೆ ಗ್ರಾಮೀಣ ಭಾಗದಲ್ಲಿ ಪ್ರತೀ ತಿಂಗಳು ರೂ.4,960 ನಗರ ಭಾಗದಲ್ಲಿ ಪ್ರತೀ ತಿಂಗಳು ರೂ.7,285 ಸಾಕಾಗುತ್ತದೆ. ಈ ಸಮಿತಿಯು ಭಾರತದಲ್ಲಿ ಶೇ.29.5ರಷ್ಟು ಬಡತನವಿದೆ ಎಂದು ಹೇಳಿತ್ತು. 2011ರ ಜನಗಣತಿಯ ಪ್ರಕಾರ 121 ಕೋಟಿ ಜನಸಂಖ್ಯೆಯನ್ನು ಪರಿಗಣಿಸಿದಾಗ 35.5 ಕೋಟಿ ಜನಸಂಖ್ಯೆ ಬಡತನದಲ್ಲಿದ್ದರು.
ಈ ಮಾನದಂಡಗಳು, ದತ್ತಾಂಶಗಳಿಂದ ಪ್ರಭುತ್ವ ಮತ್ತು ನವ ಉದಾರೀಕರಣದ ಆರ್ಥಿಕ ತಜ್ಞರು ಬಡತನದ ಸಮಾಜೋ-ಆರ್ಥಿಕ-ಶೈಕ್ಷಣಿಕ ಪರಿಸ್ಥಿತಿಯನ್ನು ಅತ್ಯಂತ ಅಮಾನವೀಯ ನೆಲೆಯಲ್ಲಿ ಅಳೆಯುತ್ತಾರೆ ಮತ್ತು ಗುರುತಿಸುತ್ತಾರೆ ಎಂದು ಸಾಬೀತಾಗುತ್ತದೆ. ಆರ್ಥಿಕತಜ್ಞ ಮೋಹನ್ ಗುರುಸ್ವಾಮಿಯವರು ಹಸಿವು ದೈಹಿಕ ಸ್ಥಿತಿ, ದೈಹಿಕ ಸ್ಥಿತಿಯಾದ ಹಸಿವಿಗೆ ಕಾರಣ ಬಡತನವೆನ್ನುವ ಆರ್ಥಿಕ ಸ್ಥಿತಿ. ಇಲ್ಲಿ ಹಸಿವು ಎನ್ನುವುದು ಸ್ಥಿರವಾದದ್ದು. ಆದರೆ ಬಡತನದ ವ್ಯಾಖ್ಯಾನ ಮತ್ತು ಸ್ಥಿತಿ ಶಾಸಕಾಂಗ ಮತ್ತು ಕಾರ್ಯಾಂಗ ನೀತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ ಎಂದು ಹೇಳುತ್ತಾರೆ.
ನಾಲ್ಕನೆಯದಾಗಿ: ನವ ಉದಾರೀಕರಣದಲ್ಲಿ ಬಡತನದ ವಿಶ್ಲೇಷಣೆ ಹೇಗಿರುತ್ತದೆಯೆಂದರೆ ಅವನು/ಅವಳು ಶ್ರೀಮಂತ ಅವನ/ಅವಳ ಒಂದು ಊಟಕ್ಕೆ ರೂ. 1,000 ಖರ್ಚಾಗುತ್ತದೆ. ಅದು ಸಹಜ, ನೀನು ಬಡವ, ನಿನ್ನ ಊಟಕ್ಕೆ ರೂ.30 ಸಾಕು, ಬಡವನಾದ/ಳಾದ ನೀನು ಆ ರೂ.1,000 ಊಟಕ್ಕೆ ಪ್ರಯತ್ನಿಸುವಂತಿಲ್ಲ. ಎರಡೂ ವಾಸ್ತವವಾದ್ದರಿಂದ ದೇಶ ಸದಾ ಪ್ರಕಾಶಿಸುತ್ತದೆ ಮತ್ತು ಬಡತನದ ಪ್ರಮಾಣ ಕುಂಠಿತಗೊಳ್ಳುತ್ತಲೇ ಇರುತ್ತದೆ. 1984ರಲ್ಲಿ ಬಡತನರೇಖೆಗಿಂತ ಕೆಳಗಿರುವ ಕುಟುಂಬದ ಪ್ರಮಾಣ ಶೇ.43 ಪ್ರಮಾಣದಲ್ಲಿದ್ದಾಗ ಆ ಕುಟುಂಬದ ವ್ಯಕ್ತಿ ಸೇವಿಸುವ ಆಹಾರದ, ಪೋಷಕಾಂಶಗಳ, ಕ್ಯಾಲರಿಯ ಪ್ರಮಾಣ ಸರಾಸರಿ ಶೇ.38ರಷ್ಟಿದ್ದರೆ, 2012ರಲ್ಲಿ ಆಗಿನ ಯೋಜನಾ ಆಯೋಗದ ಅನುಸಾರ ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರಮಾಣ ಶೇ.22ಕ್ಕೆ ಕುಸಿದಾಗ ಆ ಕುಟುಂಬದ ವ್ಯಕ್ತಿ ಸೇವಿಸುವ ಪೋಷಕಾಂಶಗಳ, ಕ್ಯಾಲರಿಗಳ ಪ್ರಮಾಣ ಶೇ.24ರಷ್ಟಿದೆ. ಇಲ್ಲಿನ ವೈರುಧ್ಯವೆಂದರೆ ಬಡತನ ಕಡಿಮೆಯಾದಷ್ಟು ಬಡಜನರು ಸೇವಿಸುವ ಆಹಾರದ ಪೋಷಕಾಂಶಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಈ ಮಾದರಿಯ ಅಮಾನವೀಯ ಸಮೀಕ್ಷೆಯನ್ನು ತಿರಸ್ಕರಿಸುವ ಇಚ್ಛಾಶಕ್ತಿ ಯಾವುದೇ ರಾಜಕೀಯ ಪಕ್ಷಗಳಿಗಿಲ್ಲ.







