ಬಡತನರೇಖೆ ಅಳೆಯುವ ಮಾನದಂಡಗಳು ಮತ್ತು ಪ್ರಭುತ್ವದ ಕ್ರೌರ್ಯ

ಭಾಗ- 2
ಇಲ್ಲಿ ಅತಿಬಡ ಕುಟುಂಬಗಳನ್ನು ಹೇಗೆ ಗುರುತಿಸಲಾಗುತ್ತದೆ? ಈ ಹಿಂದೆ ನಡೆದಂತೆ ಅರ್ಹರಿಗೆ ಈ ಯೋಜನೆ ತಲುಪದೆ ಅನರ್ಹರು ಮತ್ತು ಉಳ್ಳವರು ವಾಮಮಾರ್ಗದಿಂದ ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಗಟ್ಟುವುದಕ್ಕೆ ಯಾವ ನಿಯಂತ್ರಣ ನೀತಿಸಂಹಿತೆಗಳಿವೆ? (ಮೇಲ್ಜಾತಿಗಳು ಸೃಷ್ಟಿಸಿದ ಸುಳ್ಳು ಜಾತಿ ಪ್ರಮಾಣ ಪತ್ರಗಳು, ಮಧ್ಯಮವರ್ಗ ಸೃಷ್ಟಿಸಿಕೊಂಡ ನಕಲಿ ಬಿಪಿಎಲ್ ಕಾರ್ಡ್‌ಗಳ ಉದಾಹರಣೆ ನಮ್ಮ ಮುಂದಿದೆ)
ಉದಾಹರಣೆಗೆ ಅಧ್ಯಯನದ ಪ್ರಕಾರ ಕೂಲಿ ಕಾರ್ಮಿಕರು ತಮ್ಮ ಕಷ್ಟದ ದೈಹಿಕ ದುಡಿಮೆಗಾಗಿ ಅಧಿಕ ಮಟ್ಟದ ಶಕ್ತಿಯನ್ನು ವ್ಯಯಿಸುತ್ತಾರೆ. ಈ ಶಕ್ತಿಗಾಗಿ ಈ ಕೂಲಿ ಕಾರ್ಮಿಕರಿಗೆ ಗರಿಷ್ಠ ಮಟ್ಟದ ಕ್ಯಾಲರಿಗಳ ಅವಶ್ಯಕತೆ ಇದೆ. ಈ ಅಪಾರ ದೈಹಿಕ ಶ್ರಮಕ್ಕೆ ಒಳಗಾಗುವ ಕೂಲಿ ಕಾರ್ಮಿಕರ ಅವಶ್ಯಕತೆಗೆ ಅನುಗುಣವಾಗಿಯೇ ಬಡತನ ರೇಖೆಯ ಮಟ್ಟವನ್ನು ನಿರ್ಧರಿಸಬೇಕಾಗುತ್ತದೆ. ಅಂತರ್‌ರಾಷ್ಟ್ರೀಯ ಆರೋಗ್ಯ ಸಂಸ್ಥೆಯು 1985ರಲ್ಲಿ ತನ್ನ ಅಧ್ಯಯನದಲ್ಲಿ ವಿವರಿಸಿದ ಪ್ರಕಾರ ‘ಗಂಡು ಕೂಲಿ ಕಾರ್ಮಿಕನೊಬ್ಬ ಕಾರ್ಖಾನೆಗಳಲ್ಲಿ, ಹೊಲಗಳಲ್ಲಿ ಅತ್ಯಂತ ಕ್ಲಿಷ್ಟಕರವಾದ ಕೆಲಸವನ್ನು ನಿಭಾಯಿಸುವುದರಿಂದ ಆತನಿಗೆ ಕನಿಷ್ಠ 2,700 ಕ್ಯಾಲರಿಯಷ್ಟು ಆಹಾರ ಬೇಕಾಗುತ್ತದೆ. ಅದೇ ಬಗೆಯಲ್ಲಿ ಪ್ರತಿಯೊಬ್ಬ ಮಹಿಳಾ ಕಾರ್ಮಿಕರಿಗೆ ಕನಿಷ್ಠ 2,235 ಕ್ಯಾಲರಿ ಆಹಾರ ಬೇಕಾಗುತ್ತದೆ. ಗಣಿಗಳಲ್ಲಿ ದುಡಿಯುವ ಪ್ರತಿಯೊಬ್ಬ ಕಾರ್ಮಿಕರಿಗೆ ಕನಿಷ್ಠ 3,550 ಕ್ಯಾಲರಿ ಆಹಾರ ಬೇಕಾಗುತ್ತದೆ. ಮೇಲ್ಕಾಣಿಸಿದ ಕ್ಯಾಲರಿಯ ಮಟ್ಟವೇನಾದರೂ ಒಂದು ಅಂಕೆಯಷ್ಟು ಕಡಿಮೆಯಾದರೂ ಸಹ ಆ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಮತ್ತು ಶೀಘ್ರದಲ್ಲಿಯೇ ಸಾವಿಗೆ ಬಲಿಯಾಗುತ್ತಾನೆೆ’ ಎಂದು ವಿವರಿಸಿದ್ದಾರೆ. ನಲವತ್ತು ವರ್ಷಗಳ ನಂತರವೂ ಇದು ನಿಜ. ಆದರೆ ನೀತಿ ಆಯೋಗದ ದತ್ತಾಂಶಗಳ ಪ್ರಕಾರ ಬಡತನದಿಂದ ಹೊರ ಬಂದಿರುವ 25 ಕೋಟಿ ಜನಸಂಖ್ಯೆಯ ಪ್ರತೀ ವ್ಯಕ್ತಿಯ ಒಪ್ಪತ್ತಿನ ಆಹಾರದಲ್ಲಿ ಪೌಷ್ಟಿಕತೆ ಸರಾಸರಿ 500-700 ಕ್ಯಾಲರಿಯಷ್ಟಿರುತ್ತದೆ. ಬದುಕಲಿಕ್ಕೆ ಅಗತ್ಯವಾದ ಕನಿಷ್ಠ 2,700 ಕ್ಯಾಲರಿಗಿಂತ 2,000 ಕ್ಯಾಲರಿ ಕಡಿಮೆ ಇರುತ್ತದೆ. ಆದರೂ ಸಹ ಇವರು ಬಡತನರೇಖೆಗಿಂತ ಹೊರಗಿದ್ದಾರೆ. ಅಂದರೆ ಉಸಿರಾಡುತ್ತಿದ್ದರೆ ಸಾಕು, ಅವರು ಬಡವರಲ್ಲ. ಇದು ಮೋದಿ ನೇತೃತ್ವ ಸರಕಾರದ ನೀತಿ.
ಪ್ರಭುತ್ವ ಮತ್ತು ಆರ್ಥಿಕ ತಜ್ಞರು ಬಡತನವನ್ನು ಅಳೆಯುವಾಗ ಪೌಷ್ಟಿಕತೆ ಮತ್ತು ಸುಸ್ಥಿರತೆಯನ್ನು ಕಡೆಗಣಿಸುತ್ತಾರೆ. ಕೆಲವೊಮ್ಮೆ ಈ ಬಡತನದ ಪ್ರಮಾಣ ಅಳೆಯುವ ಸಮೀಕ್ಷೆ ಮಾದರಿಗಳು ಬಾಲಿಶವಾಗಿರುತ್ತವೆ. ಆದರೆ ಈ ದತ್ತಾಂಶಗಳು ನಿರ್ಣಾಯಕವಾಗುವುದರಿಂದ ನಿರ್ಲಕ್ಷಿಸಲಾಗುವುದಿಲ್ಲ. ಈ ಅವೈಜ್ಞಾನಿಕ ಸಮೀಕ್ಷೆ ಮಾದರಿಗಳು, ಮಾನದಂಡಗಳು ಬಡ ವ್ಯಕ್ತಿಯನ್ನು, ಬಡ ಕುಟುಂಬವನ್ನು ಸಬ್ಸಿಡಿ ಆಹಾರದಿಂದ ವಂಚಿತಗೊಳಿಸುತ್ತದೆ. ಉದಾಹರಣೆಗೆ ಈ ಸಮೀಕ್ಷೆಗಳ ಪ್ರಕಾರ ಕುಟುಂಬವೊಂದು ಸೂರು ಮತ್ತು ಶೌಚಾಲಯ ಹೊಂದಿದ್ದರೆ, ಆ ಕುಟುಂಬದ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ಅವರಿಗೆ ಸಾಲ ದೊರಕುವಂತಿದ್ದರೆ, ವರ್ಷಕ್ಕೊಮ್ಮೆ ಮಾಂಸಾಹಾರವನ್ನು ಸೇವಿಸುತ್ತಿದ್ದರೆ ಆ ಕುಟುಂಬವು ಬಡತನರೇಖೆಯಿಂದ ಹೊರ ತಳ್ಳಲ್ಪಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಜೀವನವಿಡೀ ಕೇವಲ ಅಗ್ಗದ ಧಾನ್ಯಗಳನ್ನು ಮಾತ್ರ ಬಳಸಬೇಕಾಗುತ್ತದೆ. ಅವರೇನಾದರೂ ಗುಣಮಟ್ಟದ ಆಹಾರದ ಅವಶ್ಯಕತೆಯ ಕುರಿತಾಗಿ ಚಿಂತಿಸಿದರೆ ಸಾಕು ಅವರು ಬಡತನ ರೇಖೆಯಿಂದ ಮೇಲೇರಿಬಿಡುತ್ತಾರೆ. ಇಂತಹ ಕ್ರೌರ್ಯದ ನೀತಿಗಳನ್ನು ಅನುಸರಿಸಲಾಗುತ್ತಿದೆ
ಪ್ರಭುತ್ವವೂ ‘ಇಂದಿಗೂ 80 ಕೋಟಿ ಜನಸಂಖ್ಯೆ ಉಚಿತ ಪಡಿತರ ಪಡೆಯುತ್ತಿದ್ದಾರೆ, ಹಾಗಿದ್ದರೆ ಇವರು ಬಡವರಲ್ಲವೇ?’ ಎನ್ನುವ ಪ್ರಶ್ನೆಗೆ ಉತ್ತರಿಸುವುದಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳು, ಉಚಿತ ಪಡಿತರ ಒದಗಿಸುತ್ತಿರುವುದರಿಂದ ಬಡತನರೇಖೆ ಅಳೆಯುವಾಗ ಈ ಸೌಲಭ್ಯಗಳನ್ನು ಸಹ ಪರಿಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ಇವರ ಮಾನದಂಡಗಳಲ್ಲಿ ಶಿಕ್ಷಣದ ಪ್ರಗತಿ, ಆರೋಗ್ಯ ಪರಿಗಣಿತವಾಗುವುದಿಲ್ಲ.
ಸಾಂಖ್ಯಿಕ ಸಂಸ್ಥೆಗಳ ನಿಷ್ಕ್ರಿಯತೆ
ಮೋದಿ ನೇತೃತ್ವದ ಸರಕಾರ ಹೇಳುವ ದತ್ತಾಂಶಗಳೇ ಅಂತಿಮವಾಗುವಂತಹ ದುರಂತಕ್ಕೆ ಇಂಡಿಯಾ ತಲುಪಿದೆ. ಇವರ ಆಡಳಿತದಲ್ಲಿ ಯೋಜನಾ ಆಯೋಗವನ್ನೇ ರದ್ದುಪಡಿಸಲಾಗಿದೆ. ನೀತಿ ಆಯೋಗವು ಬಿಜೆಪಿಯ ಪ್ರಣಾಳಿಕೆಯನ್ನು ಜಾರಿಗೊಳಿಸುವಲ್ಲಿ ನಿರತವಾಗಿದೆ. ಇತರ ಸರಕಾರಿ ಸಂಸ್ಥೆಗಳಿಂದ ಯಾವುದೇ ಬಗೆಯ ಸಮೀಕ್ಷೆ, ದತ್ತಾಂಶಗಳು ಪ್ರಕಟವಾಗುತ್ತಿಲ್ಲ. ಇಂದು ಬಡತನ ರೇಖೆ ಅಳೆಯುವ ವೈಜ್ಞಾನಿಕ ಮಾನದಂಡಗಳನ್ನು ತಿರಸ್ಕರಿಸಲಾಗಿದೆ. ಇಂಡಿಯಾದಲ್ಲಿ ಇದುವರೆಗೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಂಖ್ಯಿಕ ಸಂಸ್ಥೆಗಳನ್ನು ಬರಖಾಸ್ತು ಮಾಡುತ್ತಿದ್ದಾರೆ. ತಮ್ಮ ಸರಕಾರದ ಅಸಮರ್ಥ ಸಾಮಾಜಿಕ-ಆರ್ಥಿಕ ನಿರ್ವಹಣೆಯನ್ನು, ವೈಫಲ್ಯವನ್ನು, ಭ್ರಷ್ಟಾಚಾರವನ್ನು ಸಂಶೋಧನೆ ಮತ್ತು ವರದಿಗಳ ಮೂಲಕ ನಿಷ್ಪಕ್ಷಪಾತವಾಗಿ ಪ್ರಕಟಿಸುತ್ತಿದ್ದ ಸಾರ್ವಜನಿಕ ಸಾಂಖ್ಯಿಕ, ಅಂಕಿಅಂಶಗಳ, ದತ್ತಾಂಶ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡುತ್ತಿರುವ ಮೋದಿ ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಸಾಂಖ್ಯಿಕ ಆಯೋಗ, ಕೇಂದ್ರ ಸಾಂಖ್ಯಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಉದ್ಯಮಗಳ ಉತ್ಪಾದನೆಯ ಸೂಚ್ಯಂಕವನ್ನು (ಇಲ್ಲಿಯೂ ತುಂಬಾ ಮಿತಿಗಳಿವೆ) ಆಧರಿಸಿ ಜಿಡಿಪಿಯನ್ನು ಅಳೆಯುವ ಕಾರ್ಯವಿಧಾನವನ್ನೇ ಬದಲಿಸಿ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯು ಖಾಸಗಿ ಕಂಪೆನಿಗಳ, ಕಾರ್ಪೊರೇಟ್‌ಗಳ ವರದಿಯನ್ನು ಆಧರಿಸಿ ಸಿದ್ಧಪಡಿಸುವ ಕರಡನ್ನು ಮಾನದಂಡವಾಗಿ ಬಳಸಿ ಜಿಡಿಪಿಯನ್ನು ನಿರ್ಧರಿಸಲಾಗುತ್ತಿದೆ. ಇದು ವಿಶ್ವಾಸಾರ್ಹತೆ ಇಲ್ಲದ ನೀತಿಯಾಗಿದೆ. ಬೇರೆ ಯಾವುದೇ ಆರ್ಥಿಕ ದಿಕ್ಸೂಚಿ ಬಳಸದೆ ಕೇವಲ ಖಾಸಗಿ ಕಂಪೆನಿಗಳು ನೀಡುವ ಅನುಮಾನಾಸ್ಪದವಾದ ವರದಿಗಳನ್ನು ಆಧರಿಸುವುದು ಅನೈತಿಕತೆಯಾಗಿದೆ. ಇದೇ ಸಂದರ್ಭದಲ್ಲಿ ಸರಾಸರಿ ಅಭಿವೃದ್ಧಿ ಸೂಚ್ಯಂಕವನ್ನು ಮೌಲ್ಯಮಾಪನ ಮಾಡುತ್ತಿದ್ದ ರಾಷ್ಟ್ರೀಯ ಸಾಂಖ್ಯಿಕ ಆಯೋಗದ (ಎನ್‌ಎಸ್‌ಸಿ) ಅಂತರ್ಜಾಲ ತಾಣದಲ್ಲಿರುವ ಎಲ್ಲಾ ದತ್ತಾಂಶಗಳನ್ನು ತೆಗೆದು ಹಾಕಲಾಯಿತು. ನಂತರ ಈ ಆಯೋಗಕ್ಕೆ ತಾನು ಬದಲಿಸಿದ ಹೊಸ ಮಾದರಿಯ ಸಮೀಕ್ಷೆಯನ್ನು ಸಿದ್ಧಪಡಿಸಲು ಸೂಚಿಸಿ ಆ ಮೂಲಕ ಯುಪಿಎ ಕಾಲದಲ್ಲಿ ಜಿಡಿಪಿ ಪ್ರಮಾಣ ಕಡಿಮೆ ಇತ್ತು, ತಮ್ಮ ಕಾಲದಲ್ಲಿ ಹೆಚ್ಚಾಗಿದೆ ಎಂದು ಸುಳ್ಳು ವರದಿಗಳನ್ನು ಬಿಡುಗಡೆ ಮಾಡಿದೆ.
ಎನ್‌ಎಸ್‌ಸಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ ಸಂಸ್ಥೆ (ಎನ್‌ಎಸ್‌ಎಸ್‌ಒ)ಯ 2017-18 ಗ್ರಾಹಕರ ಕುರಿತಾದ ವೈಜ್ಞಾನಿಕ ಸಮೀಕ್ಷೆಗಳ ವರದಿಗಳನ್ನು ಬಿಡುಗಡೆ ಮಾಡದಂತೆ ನಿಷೇಧ ಹೇರಲಾಯಿತು. ದತ್ತಾಂಶಗಳನ್ನು ನಾಶ ಮಾಡಲಾಯಿತು. ಆದರೆ ಈ ವರದಿಯು ಸೋರಿಕೆಯಾಗಿ ಭಾರತದ ಬಡತನದ ಪ್ರಮಾಣವು 2011-12ಗಿಂತ 2017-18ರಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಮಾಹಿತಿ ಬೆಳಕಿಗೆ ಬಂದಿತು.
ಆಗಸ್ಟ್ 2023ರಲ್ಲಿ ಮುಂಬೈನಲ್ಲಿರುವ ‘ಜನಸಂಖ್ಯೆ ಅಧ್ಯಯನದ ಅಂತರ್‌ರಾಷ್ಟ್ರೀಯ ಸಂಸ್ಥೆ’ (ಐಐಪಿಎಸ್)ಯ ನಿರ್ದೇಶಕ ಕೆ.ಎಸ್. ಜೇಮ್ಸ್‌ನವರನ್ನು ಕೇಂದ್ರ ಸರಕಾರ ಅಮಾನತು ಮಾಡಿ ಆದೇಶ ಹೊರಡಿಸಿತು. ಜೇಮ್ಸ್ ಅವರು ಪರಿಣಿತ ಡೆಮಾಗ್ರಫರ್ ಆಗಿದ್ದರು ಮತ್ತು ಕಾರ್ಯಕ್ಷಮತೆ, ದಕ್ಷತೆಗೆ ಜನಪ್ರಿಯರಾಗಿದ್ದರು. ಐಐಪಿಎಸ್ ಸಂಸ್ಥೆ ನಡೆಸಿದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’(ಎನ್‌ಎಫ್‌ಎಚ್‌ಎಸ್-5)ಯ ವರದಿಗಳ ಪ್ರಕಾರ ಭಾರತದ ಜನಸಂಖ್ಯೆಯಲ್ಲಿ ರಕ್ತಹೀನತೆ (ಅನೀಮಿಯಾ) ಪ್ರಮಾಣ ಹೆಚ್ಚಾಗುತ್ತಿದೆ, ಅದರಲ್ಲಿಯೂ ಮಕ್ಕಳಲ್ಲಿ ಇದು ಜಾಸ್ತಿಯಾಗಿದೆ. 15-49ರ ವಯಸ್ಸಿನ ಮಹಿಳೆಯರಲ್ಲಿ ಇದರ ಪ್ರಮಾಣ ಹೆಚ್ಚಿದೆ. ಮತ್ತೊಂದು ವರದಿಯ ಪ್ರಕಾರ ಕುಟುಂಬಗಳು ಬಯಲು ಶೌಚಾಲಯವನ್ನು ಬಳಸುವ ಪ್ರಮಾಣ ಹೆಚ್ಚಾಗುತ್ತಿದೆ. 2005-06ರಲ್ಲಿ ಶೇ.55, 2015-16ರಲ್ಲಿ ಶೇ.39, 2019-21ರಲ್ಲಿ ಶೇ.19ರಷ್ಟು ಜನಸಂಖ್ಯೆ ಬಯಲು ಶೌಚಾಲಯವನ್ನು ಬಳಸುತ್ತಿದ್ದಾರೆ. ಇಂತಹ ಆಘಾತಕಾರಿ ವರದಿಗಳು ಸಬ್ ಚೆಂಗಾಸ್ ಹೈ, ಯಶಸ್ವೀ ಆಯುಷ್ಮಾನ್ ಭಾರತ, ಶೇ.100ರಷ್ಟು ಯಶಸ್ವಿಯಾದ ಸ್ವಚ್ಛ ಭಾರತ ಆಂದೋಲನ ಎನ್ನುವ ಮೋದಿ ಸರಕಾರದ ಪ್ರಚಾರದ ಬೆಲೂನಿಗೆ ಸೂಜಿ ಮೊನೆ ಚುಚ್ಚಿದ್ದವು. ನಿಷ್ಠಾವಂತ ಅಧಿಕಾರಿ ಜೇಮ್ಸ್ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಬಲಿಪಶುವಾದರು.
ಕಡೆಗೂ ಪಶ್ಚಿಮದ ಆರ್ಥಿಕತಜ್ಞ ಜೆ.ಎಸ್.ಮಿಲ್ ಹೇಳಿದ ‘ತಮ್ಮ ಎಲ್ಲಾ ಆಸೆಗಳನ್ನು, ಬಯಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವುದು ಸಂತೋಷದಾಯಕ ಪ್ರವೃತ್ತಿಯಲ್ಲ, ಬದಲಿಗೆ ಅವರ ಆಸೆ, ಬಯಕೆಗಳನ್ನು ಆದಷ್ಟು ಹತ್ತಿಕ್ಕಿಕೊಂಡು ಕನಿಷ್ಠ ತೃಪ್ತಿಯಲ್ಲಿ ಬದುಕುವುದು ಸಂಭ್ರಮದ ಸಂಗತಿ’ ಈ ಮಾತು ಭಾರತದಲ್ಲಿ ಬಡವರಿಗೆ ಮಾತ್ರ ಅನ್ವಯಿಸುತ್ತದೆ. ಈ ಸಿದ್ಧಾಂತದಿಂದಾಗಿ ಭಾರತದಲ್ಲಿ ಕೇವಲ 3.8 ಕೋಟಿ ಬಡವರಿದ್ದಾರೆ. ಈ ಕಾರಣಕ್ಕಾಗಿಯೇ ಶೇ.10ರಷ್ಟಿರುವ ಶ್ರೀಮಂತರು, ಅತಿ ಶ್ರೀಮಂತರ ಬಳಿ ಶೇ.50ಕ್ಕೂ ಹೆಚ್ಚಿನ ಪ್ರಮಾಣದ ಸಂಪತ್ತಿದೆ, ಇದು ಸಹಜ, ಶೇ.50ರಷ್ಟು ಕೆಳಮಧ್ಯಮವರ್ಗದ ಬಳಿ ಸರಾಸರಿ 3.5 ಲಕ್ಷ ಸಂಪತ್ತಿದೆ. ಇದೂ ಸಹಜ. ಯಾವುದೇ ಸಂದರ್ಭದಲ್ಲಿಯೂ ಇಂತಹ ಅಗಾಧ ಅಸಮಾನತೆಯೂ ಸಹ ಬಡತನರೇಖೆ ಗುರುತಿಸಲು ಮಾನದಂಡವಾಗಿ ಪರಿಗಣಿಸಲ್ಪಡುವುದಿಲ್ಲ.
ದುರಂತವೆಂದರೆ ವಿರೋಧ ಪಕ್ಷಗಳ ಬಳಿಯೂ ಸಹ ಈ ಬಿಕ್ಕಟಿಗೆ ಯಾವುದೇ ಪರಿಹಾರಗಳಿಲ್ಲ, ಪ್ರಣಾಳಿಕೆಯಿಲ್ಲ.







