‘ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ?: ಸಿಎಂ ಡಿಕೆಶಿ-ಸಿದ್ದರಾಮಯ್ಯ ಮುಂದಿಟ್ಟ ಪಟ್ಟಿಯನ್ನು ಒಪ್ಪದ ರಾಹುಲ್ ಗಾಂಧಿ!

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಹೊಸ ಮುಖ್ಯಗಳಿಗೆ ಆದ್ಯತೆ ನೀಡಲೇಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಎರಡು ದಿನಗಳಿಂದ ಹೊಸದಿಲ್ಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹಳೆಯ ಹೆಸರುಗಳನ್ನು ನೋಡಿ ಬೇಸರ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲಿ 60-40ರ ಅನುಪಾತದಂತೆ ಶೇ.40ರಷ್ಟು ಸ್ಥಾನಗಳನ್ನು ಹಿರಿಯ ಶಾಸಕರು, ಮಾಜಿ ಸಚಿವರಿಗೆ, ಇನ್ನುಳಿದ ಶೇ.60ರಷ್ಟು ಸ್ಥಾನಗಳನ್ನು ಹೊಸಬರಿಗೆ ಕೊಡಬೇಕು. ರಾಜ್ಯದಲ್ಲಿ ದ್ವಿತೀಯ ಹಂತದ ನಾಯಕತ್ವವನ್ನು ಬೆಳೆಸುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಹಲವು ಬಾರಿ ಶಾಸಕರಾದರೂ ಒಮ್ಮೆಯೂ ಸಚಿವರಾಗದ ನಾಯಕರಿಗೆ ಅವಕಾಶ ಕಲ್ಪಿಸಿಕೊಡಿ. ಸಂಭ್ಯಾವರ ಶೈಕ್ಷಣಿಕ ಹಿನ್ನೆಲೆ, ಅನುಭವ, ಸಮುದಾಯ, ಪ್ರಾದೇಶಿಕವಾರು ಆದ್ಯತೆ ನೀಡಬೇಕು. ಹೊಸ ಮುಖಗಳು 60 ವರ್ಷ ವಯೋಮಾನಕ್ಕಿಂತ ಕಡಿಮೆ ಇರಬೇಕು. ಹಿರಿಯರು 70-75 ವರ್ಷವಾದರೂ ಅಗತ್ಯವನ್ನು ಪರಿಗಣಿಸಿ ಪಟ್ಟಿ ಸಿದ್ಧಮಾಡಿ ಎಂದು ಉಭಯ ನಾಯಕರಿಗೆ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಅವಕಾಶ ವಂಚಿತರನ್ನು ಗುರುತಿಸಿ, ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಧ್ಯ. ಇದರಿಂದ, ಸರಕಾರ ಹಾಗೂ ಪಕ್ಷಕ್ಕೂ ಹೆಚ್ಚಿನ ಲಾಭ ಆಗಲಿದೆ. ಹಳೆಯ ಸಿದ್ಧ ಸೂತ್ರಕ್ಕೆ ಮಾರು ಹೋಗಬೇಡಿ. ನಮ್ಮ ಸಲಹೆಗಳ ಹಿನ್ನೆಲೆಯಲ್ಲಿ ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಿ, ಅಗತ್ಯವಿದ್ದಲ್ಲಿ ಪುನಃ ದಿಲ್ಲಿಗೆ ಕರೆದು ಚರ್ಚೆ ನಡೆಸಲಾಗುವುದು. ಇಲ್ಲದಿದ್ದರೆ, ನಾವೆ ಪಟ್ಟಿಯನ್ನು ಅಂತಿಮಗೊಳಿಸಿ ಕಳುಹಿಸಿಕೊಡುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಾರ್ಗದರ್ಶನ ಪಡೆದು ಸಿದ್ಧತೆ: ಸಿಎಂ ಡಿ.ಕೆ.ಶಿವಕುಮಾರ್
ಸಚಿವ ಸಂಪುಟದ ವಿಸ್ತರಣೆಯ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಸಾಧ್ಯವಾಗದ ಕಾರಣ, ಅವರನ್ನು ಶನಿವಾರ ಭೇಟಿ ಮಾಡಲಾಗುವುದು. ವರಿಷ್ಠರಿಂದ ಮಾರ್ಗದರ್ಶನ ಪಡೆದು ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಹೊಸದಿಲ್ಲಿ ಕಾಂಗ್ರೆಸ್ ಪಕ್ಷದ ಹಳೇ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಯಿಂದಾಗಿ ಜಿಬಿಎ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಡಿ.31 ರವರೆಗೆ ಕಾಲಾವಕಾಶವನ್ನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಸುಪ್ರೀಂ ಕೋರ್ಟ್ ಕಾಲಾವಕಾಶವನ್ನು ವಿಸ್ತರಿಸಿದೆ ಎಂದು ಹೇಳಿದರು.
ಜಿಬಿಎ ಚುನಾವಣೆಯಲ್ಲದೆ ಮಾರ್ಚ್ ಅಂತ್ಯದೊಳಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಚುನಾವಣೆಗಳನ್ನು ನಡೆಸಲಾಗುವುದು. ಗ್ರಾಮ ಪಂಚಾಯಿತಿಯಿಂದ ಕಾರ್ಪೊರೇಷನ್ ವರೆಗೆ ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಅಧಿಕಾರ ವಿಕೇಂದ್ರೀಕರಣವನ್ನು ತರಲು ಸಂವಿಧಾನಕ್ಕೆ ಮಾಡಲಾದ 73 ನೇ ಮತ್ತು 74 ನೇ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಶಿವಕುಮಾರ್ ಹೇಳಿದರು.






