ಕೃಷಿಯನ್ನೇ ಬಂಗಾರ ಮಾಡಿಕೊಂಡ ಪೃಥ್ವಿ: ಕಡಿಮೆ ಭೂಮಿಯಲ್ಲಿ ಸಮಗ್ರ ವ್ಯವಸಾಯ

ಶಿವಮೊಗ್ಗ: ತಂತ್ರಜ್ಞಾನದಲ್ಲಿ ದೇಶವು ಎಷ್ಟೇ ಮುನ್ನಡೆದರೂ ಹಸಿವು ನೀಗಿಸಲು ಅಹಾರ ಬೇಕು. ಇದನ್ನು ಯಾವ ತಂತ್ರಜ್ಞಾನದ ಮೂಲಕ ಉತ್ಪತ್ತಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಿ.ಎ. ಪದವೀಧರೆಯಾದರೂ ಕೃಷಿ ಕಾಯಕದಲ್ಲಿ ತೊಡಗಿರುವ ಮಹಿಳೆಯೋರ್ವರು 4 ಎಕರೆ 10 ಗುಂಟೆ ಪ್ರದೇಶದ ಜಮೀನಿನಲ್ಲಿ ಸಮಗ್ರ ಕೃಷಿ ಯನ್ನು ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಹೊಸನಗರ ತಾಲೂಕಿನ ಹುಂಚಾ ಹೋಬಳಿ ವಾರಂಬಳ್ಳಿ ಗ್ರಾಮದ ಪೃಥ್ವಿ ಎಂಬ ಮಹಿಳೆ ಅತಿ ಕಡಿಮೆ ಭೂಮಿಯಲ್ಲಿ ಸಮಗ್ರ ಕೃಷಿ ಮಾಡಿಕೊಂಡು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಇರುವ ಕಡಿಮೆ ಭೂಮಿಯಲ್ಲೇ ಭತ್ತದ ಜೊತೆ ಮಿಶ್ರ ಬೆಳೆಯಾಗಿ ತೆಂಗು, ಅಡಿಕೆ ಚಿಕ್ಕು ಲವಂಗ, ಕರಿಮೆಣಸು, ಏಲಕ್ಕಿ ಬೆಳೆಯುತ್ತಿರುವ ಇವರು, ಹೊಲದ ಸುತ್ತ ಅರಣ್ಯ ಕೃಷಿ ಕೈಗೊಂಡು ಸಾಗುವಾನಿ, ಸಿಲ್ವರ್ ಮರಗಳನ್ನು ಬೆಳೆಯುತ್ತಿದ್ದಾರೆ. ನೈಸರ್ಗಿಕ ಕೃಷಿಯನ್ನು ಆಧರಿಸಿ ತೋಟಗಾರಿಕೆ, ಅರಣ್ಯ, ಬೆಳೆಗಳನ್ನು ಬೆಳೆಯುತ್ತಿರುವ ಪೃಥ್ವಿ, ಸಾವಯವ ಕೃಷಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ ಮತ್ತು ಇದರ ಜೊತೆಗೆ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ.
ವಾಣಿಜ್ಯ ಬೆಳೆಗಳಾದ ಕರಿಮೆಣಸು, ಏಲಕ್ಕಿ, ಲವಂಗ ಇತರ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಲಾಭವಿದೆ ಎಂದು ಪೃಥ್ವಿ ಹೇಳುತ್ತಾರೆ.
ಗಮನಾರ್ಹ ಅಂಶ: ಸಮಗ್ರ ಕೃಷಿಯೊಂದಿಗೆ ಕೋಳಿ ಸಾಕಣೆ ಮಾಡುತ್ತಿರುವ ಇವರು ಕೋಳಿ ಸಾಕಣೆ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ.
ಪ್ರಶಸ್ತಿಗಳು: ಪೃಥ್ವಿ ಅವರಿಗೆ ಕೃಷಿ ಇಲಾಖೆ ವತಿಯಿಂದ 2022-23ನೇ ಸಾಲಿನ ತಾಲೂಕು ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ ಜಿ.ಕೆ.ವಿ.ಕೆ. ಬೆಂಗಳೂರು ಇವರ ವತಿಯಿಂದ 2023-24ನೇ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ.







