ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಮಸ್ಯೆಗಳ ಆಗರ: ರೋಗಿಗಳ ಪರದಾಟ

ಬೀದರ್: ನಗರದಲ್ಲಿರುವ ಬ್ರಿಮ್ಸ್ ಆಸ್ಪತ್ರೆಯು ಹಳೆ ಬಾವಿಯೊಂದರ ಮೇಲೆ ಕಟ್ಟಲಾಗಿದ್ದು, ಆ ಬಾವಿಯಿಂದ ಸದಾ ನೀರು ಜರಿಯ ಹಾಗೆ ಬರುತ್ತಿರುತ್ತವೆ. ಇದರಿಂದಾಗಿ ಆಸ್ಪತ್ರೆಯ ನೆಲಮಹಡಿ ದುರ್ಬಲಗೊಳ್ಳುತ್ತಿದೆ.
ಬೇಸಿಗೆ ಕಾಲ, ಚಳಿಗಾಲದಲ್ಲಿಯೂ ನೆಲಮಹಡಿಯಲ್ಲಿ ಸದಾ ನೀರು ನಿಂತಿರುತ್ತವೆ. ಇದರಿಂದಾಗಿ ಆಸ್ಪತ್ರೆ ಕಟ್ಟಡವು ದುರ್ಬಲಗೊಂಡು ಮುಂದಿನ ದಿನಗಳಲ್ಲಿ ಕುಸಿಯುವ ಮಟ್ಟಕ್ಕೆ ಹೋಗಬಹುದು. ಮಾತ್ರವಲ್ಲ ಇಲ್ಲಿ ಹಲವಾರು ಸಮಸ್ಯೆಗಳಿವೆ. ಇದು ಸುಮಾರು 6 ಅಂತಸ್ತಿನ ಕಟ್ಟಡವಾಗಿದ್ದು, ನೆಲ ಮಹಡಿ ಬಿಟ್ಟರೆ ಬೇರೆ ಯಾವ ಮಹಡಿಯಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ ಕಾಣುವುದಿಲ್ಲ.
ಕುಡಿಯುವ ನೀರು ಬೇಕೆಂದರೆ ರೋಗಿಗಳು ನೆಲಮಹಡಿಗೆ ಬಂದು ನೀರು ಪಡೆದುಕೊಳ್ಳಬೇಕು. ರೋಗಿಗಳ ಜೊತೆಗೆ ಪೋಷಕರು ಬಂದರೆ ಮಾತ್ರ ಅವರಿಗೆ ನೀರಿನ ವ್ಯವಸ್ಥೆ ಸರಿಯಾಗಿ ಸಿಗುತ್ತದೆ. ಮೇಲ್ಮಹಡಿಯಲ್ಲಿ ಕೆಲವು ಕಡೆ ಫಿಲ್ಟರ್ ಇದ್ದರೂ ಎಲ್ಲವೂ ಕೆಟ್ಟು ನಿಂತಿವೆ.
ಬಹುತೇಕ ಎಲ್ಲ ವಾರ್ಡ್ ಗಳ ಶೌಚಾಲಯ ಯಾವಾಗಲೂ ತುಂಬಿರುತ್ತವೆ. ಈ ಕಟ್ಟಡದ ಶೌಚಾಲಯಗಳಿಗೆ ಪೈಪ್‌ಲೈನ್ ಸರಿ ಇಲ್ಲ. ಹಾಗಾಗಿ ಅದು ತುಂಬುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ವಾರ್ಡ್ ಹೊರಗಿರುವ ಕೆಲ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಕೆಲಸಕ್ಕೆ ಬಾರದಂತಾಗಿವೆ.
ಕೆಲವು ದಿನಗಳ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಇಲ್ಲಿಗೆ ಭೇಟಿ ನೀಡಿದ್ದಾಗಲೂ ಶೌಚಾಲಯ ವ್ಯವಸ್ಥೆ ಸರಿ ಇರಲಿಲ್ಲ. ಈ ಆಸ್ಪತ್ರೆಯಲ್ಲಿರುವ ಎಲ್ಲ ಸಮಸ್ಯೆಗಳು ಜಿಲ್ಲೆಯ ಎಲ್ಲ ಅಧಿಕಾರಿ ಮತ್ತು ಜನ ಪ್ರತಿನಿಧಿಗಳಿಗೆ ಗೊತ್ತಿದ್ದು ಗೊತ್ತಿಲ್ಲದ ಹಾಗೆ ಕುಳಿತುಕೊಂಡಿದ್ದಾರೆ. ಈ ಆಸ್ಪತ್ರೆಯಲ್ಲಿರುವ ಮೂಲಭೂತ ಸಮಸ್ಯೆಯ ಜೊತೆಗೆ ಆಸ್ಪತ್ರೆಯ ಕೆಳಗಡೆ ಹರಿಯುತ್ತಿರುವ ನೀರಿಗೆ ಶಾಶ್ವತವಾಗಿ ಪರಿಹರಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.
ನನ್ನ ತಾಯಿಗೆ 13 ದಿನಗಳ ಕಾಲ ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೆವು. ಆ ವಾರ್ಡ್‌ನ ಶೌಚಾಲಯಗಳು ಸಂಪೂರ್ಣವಾಗಿ ಭರ್ತಿಯಾಗಿ ಮಲ, ಮೂತ್ರವೆಲ್ಲ ಹೊರಗಡೆ ಬಂದಿತ್ತು. ಇದರಿಂದಾಗಿ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಆಸ್ಪತ್ರೆಯ ಮೇಲ್ಮಹಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ.
-ಕಲ್ಲಪ್ಪ, ಮರೂರು ಗ್ರಾಮದ ನಿವಾಸಿ







