ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿ ಮೂರು ವರ್ಷ ಕಳೆದರೂ ಗುತ್ತಿಗೆದಾರರ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ

ಡಾ.ಬಿ.ಆರ್.ಅಂಬೇಡ್ಕರ್
ಗುಡಿಬಂಡೆ : ತಾಲೂಕಿನ ಬೀಚಗಾನಹಳ್ಳಿ ಗ್ರಾಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಭವನ ಮಂಜೂರಾಗಿ ಅನುದಾನ ಬಿಡುಗಡೆ ಮಾಡಿದ್ದರೂ ಭವನವನ್ನು ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನ ಬೀಚಗಾನಹಳ್ಳಿ ಗ್ರಾಪಂ ಕೇಂದ್ರ ಸ್ಥಾನವಾದ ಬೀಚಗಾನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು ಸರಕಾರ 2022-23ನೇ ಸಾಲಿನಲ್ಲಿ ಮಂಜೂರಾತಿಯನ್ನು ನೀಡಿ ಆದೇಶವನ್ನು ಮಾಡಿ 10 ಲಕ್ಷ ರೂ. ಅನುದಾನವನ್ನು ಸಹ ಸಂಬಂಧಪಟ್ಟ ಇಲಾಖೆಗೆ ಬಿಡುಗಡೆ ಮಾಡಿತ್ತು.
ಪಂಚಾಯತ್ರಾಜ್ ಇಂಜಿನಿಯರ್ ಇಲಾಖೆಯ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ಟೆಂಡರ್ ಕರೆದು ಸ್ಥಳೀಯ ಶಾಸಕ ಸುಬ್ಬಾರೆಡ್ಡಿಯವರಿಂದ ಭವನಕ್ಕೆ ನೀಡಿದ್ದ ಜಾಗದಲ್ಲಿ ಗುದ್ದಲಿ ಪೂಜೆ ಮಾಡಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಭವನದ ಕಾಮಗಾರಿಯನ್ನು ಸಂಬಂಧಪಟ್ಟ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯವರು ಪ್ರಾರಂಭ ಮಾಡದೆ ಬೇಜವಾಬ್ದಾರಿ ತೋರಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಪಂನವರು ಭವನ ನಿರ್ಮಾಣ ಸ್ಥಳವನ್ನು ನಿಗದಿ ಮಾಡಿ ಸಂಬಂಧಪಟ್ಟ ಇಲಾಖೆಯವರಿಗೆ ತೋರಿಸಿ ಆ ಸ್ಥಳವನ್ನು ಹಸ್ತಾಂತರ ಮಾಡಿದ್ದರು. ಭವನ ನಿರ್ಮಾಣ ಮಾಡಲು ಬೇಕಾದಷ್ಟು ಸ್ಥಳ ಇದ್ದರೂ ಅಧಿಕಾರಿಗಳ ಬೇಜವಾಬ್ದಾರಿಯನ್ನು ಕಾಣಬಹುದಾಗಿದೆ. ಸರಕಾರ ಗ್ರಾಮೀಣ ಭಾಗಗಳಲ್ಲಿ, ನಗರ ಪ್ರದೇಶಗಳಲ್ಲಿ ಜನರ ಅನುಕೂಲಕ್ಕೆ ಮಹನೀಯರ ಹೆಸರಿನಲ್ಲಿ ಭವನಗಳನ್ನು ನಿರ್ಮಾಣ ಮಾಡಲು ಅವಕಾಶಗಳನ್ನು ನೀಡಿದರೆ ಇಲ್ಲಿನ ಅಧಿಕಾರಿಗಳು ಮಾತ್ರ ಬಡಜನರ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ನಿರ್ಲಕ್ಷ್ಯ ತೋರಿರುವುದು ಗೋಚರಿಸುತ್ತಿದೆ.
ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಟೆಂಡರ್ ಆಗಿದ್ದು, ನಮ್ಮ ಇಲಾಖೆಯಿಂದ ಕಾಮಗಾರಿಯನ್ನು ಮಾಡಿಸಲು ಆಗುವುದಿಲ್ಲ ಎಂದು ಮೇಲಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ.
-ಅನಿಲ್ ಕುಮಾರ್, ಪಂಚಾಯತ್ರಾಜ್ ಇಂಜಿನಿಯರ್
ಅಂಬೇಡ್ಕರ್ ಭವನ ಮಂಜೂರು ಆಗಿ ಮೂರು ನಾಲ್ಕು ವರ್ಷಗಳು ಕಳೆದರೂ ಗುತ್ತಿಗೆದಾರರಿಂದ ಕಾಮಗಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಭವನದಿಂದ ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೇ ಕಾಮಗಾರಿಯನ್ನು ಪ್ರಾರಂಭಿಸಲಿ.
-ಬಿ.ಆರ್.ಮಹೇಶ್, ವಕೀಲರು ಬೀಚಗಾನಹಳ್ಳಿ







