ಗುಡಿಬಂಡೆ ತಾಲೂಕು ಆಸ್ಪತ್ರೆಯ ಕೆಲವು ಸಿಬ್ಬಂದಿಗೆ ಬಿಪಿಎಲ್ ಪಡಿತರ ಚೀಟಿ ಸೌಲಭ್ಯ: ಸಾರ್ವಜನಿಕರ ಆರೋಪ

ಗುಡಿಬಂಡೆ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕೆಲಸ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಎಲ್ಲ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೆಲ ಸಿಬ್ಬಂದಿ ಆಸ್ಪತ್ರೆಯಲ್ಲಿ ಸರಕಾರಿ ನೌಕರಿಯನ್ನು ಪಡೆದುಕೊಂಡು ಸರಿಸುಮಾರು 7-8 ವರ್ಷಗಳೇ ಕಳೆದಿವೆ. ಸರಕಾರಿ ನೌಕರಿಗೆ ಸೇರಿಕೊಂಡರೇ ಅಂತಹವರು ಅವರ ಹೆಸರಿನಲ್ಲಿ ಇದ್ದಂತಹ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿಸಿಕೊಳ್ಳಬೇಕು ಎಂದು ಸರಕಾರದ ಆದೇಶ ಇದ್ದರೂ ಸಹ ಇಲ್ಲಿನ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸವನ್ನು ಮಾಡುತ್ತಿರುವ ಸಿಬ್ಬಂದಿ ವೇತನ ಹಾಗೂ ಸರಕಾರದಿಂದ ಸಿಗುವಂತಹ ಎಲ್ಲ ಸೌಲಭ್ಯಗಳ ಜೊತೆಗೆ ಬಿಪಿಎಲ್ ಪಡಿತರ ಚೀಟಿಯಿಂದ ಸಿಗುವಂತಹ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿರುತ್ತಾರೆ.
ಈ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ರಿಂದ 12 ಜನ ಹೊರಗುತ್ತಿಗೆ ಸಿಬ್ಬಂದಿಗೆ 15 ಸಾವಿರ ರೂ.ಗೂ ಹೆಚ್ಚು ವೇತನವನ್ನು ಪಡೆದುಕೊಂಡಿರುತ್ತಾರೆ. ಹಾಗೆ ಬಿಪಿಎಲ್ ಕಾರ್ಡ್‌ಗೆ ಸಿಗುವಂತಹ ಆಹಾರ ಧಾನ್ಯಗಳು, ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸಹ ಪಡೆದುಕೊಳ್ಳುವ ಮೂಲಕ ಸರಕಾರಕ್ಕೆ ನಷ್ಟವನ್ನು ಉಂಟು ಮಾಡುತ್ತಿದ್ದರೂ, ಸಾರ್ವಜನಿಕ ಆಸ್ಪತ್ರೆಯಲ್ಲಿನ ಅಧಿಕಾರಿಗಳು ಮಾತ್ರ ಇವರ ಮೇಲೆ ಯಾವುದೇ ರೀತಿಯ ಕ್ರಮವನ್ನು ಜರಗಿಸದೇ ಮೌನಕ್ಕೆ ಶರಣಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಸರಕಾರಕ್ಕೆ ನಷ್ಟ ಮಾಡಿರುವಂತಹವರ ಮೇಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ರೀತಿಯ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಸಾರ್ವಜನಿಕರ ಮನವಿಯಾಗಿದೆ.
ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕೆಲ ಹೊರಗುತ್ತಿಗೆ ನೌಕರರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವ ಬಗ್ಗೆ ನನಗೆ ಬಂದ ದೂರಿನ ಅನ್ವಯ ಕೂಡಲೇ ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ.
-ಸಿಗ್ಬತ್ ವುಲ್ಲಾ, ತಹಶೀಲ್ದಾರ್, ಗುಡಿಬಂಡೆ
ಹೊರಗುತ್ತಿಗೆ ಹಾಗೂ ಖಾಯಂ ನೌಕರರು ಬಿಪಿಎಲ್ ಪಡಿತರ ಚೀಟಿಯನ್ನು ಹಿಂತಿರುಗಿಸಬೇಕು ಎಂಬ ಸರಕಾರದ ಆದೇಶವಿದೆ. ಆದರೇ ಗುಡಿಬಂಡೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಹಲವು ವರ್ಷಗಳಿಂದ ಬಿಪಿಎಲ್ ಪಡಿತರ ಕಾರ್ಡ್‌ಅನ್ನು ಹೊಂದುವ ಮೂಲಕ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಸರಕಾರ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು.
-ಶ್ರೀನಿವಾಸ್,ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ
ಖಾಸಗಿ ಸಂಸ್ಥೆಯವರು ಹೊರಗುತ್ತಿಗೆ ಆಧಾರದಲ್ಲಿ ಕೆಲವು ಸಿಬ್ಬಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಅವರನ್ನು ಸರಕಾರದಿಂದ ನೇಮಿಸಿಕೊಂಡಿಲ್ಲ. ಪರಿಶೀಲನೆ ನಡೆಸಿ ಮುಂದಿನ ಕ್ರಮವಹಿಸಲಾಗುವುದು
-ಡಾ.ಮಹೇಶ್ ಕುಮಾರ್, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ, ಚಿಕ್ಕಬಳ್ಳಾಪುರ







