ಖೋಟಾ ನೋಟುಗಳ ಹಾವಳಿ: ಸಾರ್ವಜನಿಕರಲ್ಲಿ ಆತಂಕ

ಲಿಂಗಸುಗೂರು: ಸ್ಥಳೀಯ ಮಾರುಕಟ್ಟೆಯಲ್ಲಿ ಮತ್ತೆ ಖೋಟಾ ನೋಟುಗಳ ಚಲಾವಣೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಅಸಲಿ ನೋಟುಗಳ ನಡುವೆ ಬೆರೆಸಿ ಚಲಾವಣೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಲಿಂಗಸುಗೂರು ಪಟ್ಟಣದಲ್ಲಿ ಕೇಳಿಬರುತ್ತಿವೆ.
ಲಿಂಗಸುಗೂರು ಪಟ್ಟಣದ ಬಟ್ಟೆ ಅಂಗಡಿಗಳು ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಲ್ಲಿ ಖರೀದಿ ನಡೆಸಿ, ಅಸಲಿ ನೋಟುಗಳ ಜೊತೆ ನಕಲಿ ನೋಟುಗಳನ್ನು ಬೆರೆಸಿ ನೀಡಲಾಗುತ್ತಿದೆ ಎನ್ನಲಾಗಿದೆ. ವ್ಯಾಪಾರ ವ್ಯವಹಾರದ ಒತ್ತಡದಲ್ಲಿ ವ್ಯಾಪಾರಿಗಳು ಗಮನಿಸದೇ ಆ ನೋಟುಗಳು ಗಲ್ಲಾಪೆಟ್ಟಿಗೆಯಲ್ಲಿ ಸೇರಿಸಿಕೊಳ್ಳುತ್ತಿವೆ.
ವ್ಯಾಪಾರಿಗಳು ದಿನದ ವಹಿವಾಟಿನ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಲು ತೆರಳಿದಾಗಲೇ ಖೋಟಾ ನೋಟುಗಳ ಅಸಲಿ ಬಣ್ಣ ಬಯಲಾಗುತ್ತಿದೆ. ಬ್ಯಾಂಕ್ ಸಿಬ್ಬಂದಿ ಹಣವನ್ನು ಯಂತ್ರದಲ್ಲಿ ಎಣಿಸುವ ವೇಳೆ ಖೋಟಾ ನೋಟುಗಳು ಪತ್ತೆಯಾಗುತ್ತಿವೆ. ಲಿಂಗಸುಗೂರಿನ ಯೂನಿಯನ್ ಬ್ಯಾಂಕ್‌ನಲ್ಲಿ ಶನಿವಾರ 500 ರೂ. ನೋಟಿನ ಕಂತೆಯಲ್ಲಿ ಒಂದು ನಕಲಿ ನೋಟು ಪತ್ತೆಯಾದ ಘಟನೆ ನಡೆದಿದೆ. ಬಳಿಕ ಬ್ಯಾಂಕ್ ಸಿಬ್ಬಂದಿ ಆ ನೋಟನ್ನು ಸಂಬಂಧಿಸಿದ ವ್ಯಾಪಾರಿಗೆ ಹಿಂದಿರುಗಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ.
ಅಸಲಿಯನ್ನೇ ಮೀರಿಸುವಂತಿರುವ ನಕಲಿ ನೋಟು
ನಕಲಿ ನೋಟುಗಳು ಮೊದಲ ನೋಟಕ್ಕೆ ಅಸಲಿಯಂತೆಯೇ ಕಾಣಿಸುತ್ತಿವೆ. ನೋಟಿನ ಸಂಖ್ಯೆ, ಸ್ಟಿಕ್ಕರ್, ಗಾಂಧೀಜಿ ಚಿತ್ರ, ಕಟ್ಟಡದ ವಿನ್ಯಾಸ ಸೇರಿದಂತೆ ಬಹುತೇಕ ಅಂಶಗಳನ್ನು ಹೋಲಿಕೆಯ ರೀತಿಯಲ್ಲಿ ಮುದ್ರಿಸಲಾಗಿದೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾತ್ರ ನಕಲಿ ಎಂಬುದು ಗೊತ್ತಾಗುತ್ತದೆ. ವಿಶೇಷವಾಗಿ ಕಾಗದದ ಗುಣಮಟ್ಟದಲ್ಲಿ ವ್ಯತ್ಯಾಸ ಸ್ಪಷ್ಟವಾಗುತ್ತದೆ. ಒಂದೊಂದು ನೋಟನ್ನು ಕೈಯಲ್ಲಿ ಹಿಡಿದು ನೋಡಿದರೆ ನಕಲಿ ಎಂದು ಗುರುತಿಸುವ ಸಾಧ್ಯತೆ ಇರುತ್ತದೆ. ಆದರೆ ಕಂತೆಗಳ ರೂಪದಲ್ಲಿ ಹಣ ಬಂದಾಗ ಅವುಗಳನ್ನು ಪತ್ತೆಹಚ್ಚುವುದು ಸುಲಭವಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಹೆಚ್ಚಾಗುತ್ತಿದೆ ಖೋಟಾ ನೋಟುಗಳ ಹಾವಳಿ: ಡಿಜಿಟಲ್ ಯುಗದಲ್ಲಿಯೂ ವಂಚಕರು ಅಮಾಯಕರನ್ನು ಯಾಮಾರಿಸಲು ಹೊಸಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಸಿಕ್ಕಿಬೀಳುವವರೆಗೂ ಇಂತಹ ಅಕ್ರಮ ಚಟುವಟಿಕೆಗಳು ಮುಂದುವರಿಯುತ್ತವೆ. ಕೆಲ ವರ್ಷಗಳ ಹಿಂದೆ ಲಿಂಗಸುಗೂರು ತಾಲೂಕಿನಲ್ಲಿ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿದ್ದು, ಆಡಳಿತ ಮತ್ತು ಪೊಲೀಸ್ ಇಲಾಖೆಯ ಕ್ರಮದಿಂದ ಅದು ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಅಲ್ಲಲ್ಲಿ ನಕಲಿ ನೋಟುಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಖೋಟಾ ನೋಟು ಚಲಾವಣೆ ಮಾಡುತ್ತಿರುವ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಖೋಟಾ ನೋಟುಗಳ ಪತ್ತೆಯಿಂದ ವ್ಯಾಪಾರಿಗಳು ಆತಂಕಗೊಂಡಿರುವುದರ ಜೊತೆಗೆ ಸಾಮಾನ್ಯ ಜನರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ವ್ಯಾಪಾರ ಮಾಡಿದ ಹಣವನ್ನು ಬ್ಯಾಂಕ್‌ಗೆ ಕಟ್ಟಲು ಬಂದಿದ್ದೆ. ನೋಟಿನ ಕಟ್ಟಿನಲ್ಲಿ ಒಂದು ನಕಲಿ ನೋಟು ಬಂದಿದೆ. ವ್ಯಾಪಾರದ ಗದ್ದಲದಲ್ಲಿ ಅದನ್ನು ಗಮನಿಸಿಲ್ಲ. ಯಾರು ಕೊಟ್ಟಿದ್ದಾರೋ ಗೊತ್ತಾಗಿಲ್ಲ.
<ಕೃಷ್ಣ, ವ್ಯಾಪಾರಿ ಲಿಂಗಸುಗೂರು.
ನೋಟುಗಳ ಕಂತೆಯಲ್ಲಿ ಆಗಾಗ್ಗೆ ನಕಲಿ ನೋಟುಗಳು ಬರುತ್ತವೆ. ಸಂಬಂಧಿಸಿದವರಿಗೆ ಅವನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯುತ್ತೇವೆ. ಯಂತ್ರದಲ್ಲಿ ಎಣಿಸುವಾಗ ಈ ನೋಟುಗಳು ಪತ್ತೆಯಾಗುತ್ತವೆ.
<ಹೆಸರು ಹೇಳಲಿಚ್ಛಿದ ಬ್ಯಾಂಕ್ ಸಿಬ್ಬಂದಿ, ಲಿಂಗಸುಗೂರು.






