ಬಜೆಟ್‌ನಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ: ಒಳಿತು ಹಾಗೂ ಆತಂಕಗಳ ಮಿಶ್ರಣ

ಕರ್ನಾಟಕದಲ್ಲಿ ಹೊಸ ಬಗೆಯ ಅಭಿವೃಧ್ಧಿ ಮಾದರಿ ಯನ್ನು ಕಟ್ಟಿಕೊಳ್ಳಲು ಬುನಾದಿಯಾಗಬಹುದಾದ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಸಾಧಿಸುವತ್ತ ಉತ್ತಮ ಸಾಧನವಾಗಬಹುದಾದ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಹಾಗೂ ಹಕ್ಕು ಆಧಾರಿತ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಇಂದಿನ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಹಾಗೂ ಭರವಸೆಯನ್ನು ಇಟ್ಟುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ, ಇಂದು ಸನ್ಮಾನ್ಯ ಮುಖ್ಯ ಮಂತ್ರಿಗಳು ಮಂಡಿಸಿದ ಬಜೆಟ್ ಶಾಲಾ ಶಿಕ್ಷಣದ ಪಾಲಿಗೆ ಒಳಿತು ಹಾಗೂ ಆತಂಕಗಳ ಮಿಶ್ರಣವಾಗಿದೆ.
ಈ ಬಾರಿಯ ಬಜೆಟ್ ಗಾತ್ರ 4,48,004 ಕೋಟಿ ರೂ.ಯಾಗಿದ್ದು ಅದರಲ್ಲಿ ಶಾಲಾ ಶಿಕ್ಷಣದ ಪಾಲು 47,224 ಕೋಟಿ ರೂ. ಕಳೆದ ಬಾರಿ ಶಿಕ್ಷಣಕ್ಕೆ ದೊರೆತ ಬಜೆಟ್‌ಗೆ ಹೋಲಿಸಿದರೆ ಈ ಬಾರಿ ಶಿಕ್ಷಣಕ್ಕೆ1,935 ಕೋಟಿ ರೂ. ಹೆಚ್ಚಳವಾಗಿದೆ. ಶೇಕಡಾವಾರು ಲೆಕ್ಕದಲ್ಲಿ ಇದು ಶೇಕಡ 4.28 ರಷ್ಟು ಹೆಚ್ಚಳ ಕಂಡಿದೆ. ಒಟ್ಟು ಬಜೆಟ್‌ನಲ್ಲಿ ಶಿಕ್ಷಣದ ಪಾಲಿನ ಶೇಕಡಾವಾರು ಲೆಕ್ಕದಲ್ಲಿ ನೋಡಿದಾಗ ಶೇಕಡ 10ರಷ್ಟಿರುವ ಶಿಕ್ಷಣದ ಬಜೆಟ್ ಕಳೆದ ಬಾರಿಯಷ್ಟೇ ಇದೆ.
ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ 565 ಕೋಟಿ ರೂ., ಶೌಚಾಲಯ ನಿರ್ಮಾಣಕ್ಕಾಗಿ75 ಕೋಟಿ ರೂ., ಶಾಲೆಗಳಿಗೆ ಪೀಠೋಪಕರಣಗಳನ್ನು ಖರೀದಿಸಲು25 ಕೋಟಿ ರೂ. ಮತ್ತು ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂ.ಗಳ ಅನುದಾನವನ್ನು ಒದಗಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ.
ಇದೇ ಸಂದರ್ಭದಲ್ಲಿ, 2026-27ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದೆಂದು ಘೋಷಿಸಲಾಗಿದೆ. ಈ ಅಂಶವನ್ನು ಸ್ವಾಗತಿಸುತ್ತಲೇ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 65,000 ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಯ ಬಗ್ಗೆ ಬಜೆಟ್ ಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಕಲ್ಯಾಣ ಕರ್ನಾಟಕವೊಂದರಲ್ಲಿಯೇ 18,317 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಮತ್ತು 4,278 ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಬಜೆಟ್ ಭಾಷಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಅಂಗೀಕರಿಸಿ ಅನುಷ್ಠಾನಗೊಳಿಸುವ ಬಗ್ಗೆ ಏನನ್ನೂ ಪ್ರಸ್ತಾಪಿಸದಿರುವುದು ಅತ್ಯಂತ ನಿರಾಶೆ ತಂದಿದೆ. ಕಳೆದ ನಾಲ್ಕು ತಿಂಗಳುಗಳಿಂದ , ಹಳ್ಳಿಗಳಲ್ಲಿನ ಶಾಲೆಗಳನ್ನು ಮುಚ್ಚುವ ಶಿಕ್ಷಣ ಸಚಿವರ ತೀರ್ಮಾನದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರೂ , ಮಾನ್ಯ ಮುಖ್ಯ ಮಂತ್ರಿಗಳು ಈ ಬಗ್ಗೆ ಏನನ್ನೂ ಭಾಷಣದಲ್ಲಿ ಪ್ರಸ್ತಾಪಿಸದಿರುವುದು ನಿರಾಶೆ ತಂದಿದೆ . ಅವೈಜ್ಞಾನಿಕ ನೆಲೆಯಲ್ಲಿ ‘ಕೆಪಿಎಸ್’ ಶಾಲೆಗಳನ್ನು ಶಾಲಾ ಶಿಕ್ಷಣದ ಎಲ್ಲಾ ಸಮಸ್ಯೆಗಳಿಗೆ ಸಂಜೀವಿನಿ ಎಂಬ ಅರ್ಥದಲ್ಲಿ ಬಿಂಬಿಸುತ್ತಿರುವುದು ಆತಂಕ ಮೂಡಿಸಿದೆ. ಬದಲಿಗೆ , ಹಕ್ಕು ಆಧಾರಿತ ಶಿಕ್ಷಣ ಹಕ್ಕು ಕಾಯ್ದೆಯನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಿ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕಿತ್ತು.
ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಬಿಆರ್ ಸಿ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸುವ ನಿರ್ಧಾರ ಮತ್ತು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯ ನಿಷೇಧವನ್ನು ಒಂದು ತಜ್ಞಸಮಿತಿಯ ರಚನೆ ಮೂಲಕ ಆಧ್ಯಯನದ ವರದಿಯನ್ನು ಆಧರಿಸಿ ಮಾಡಬೇಕಾಗಿತ್ತು. ಇದೊಂದು ಆತುರದ ತೀರ್ಮಾನದಂತಿದೆ. ಕಾರಣ, ವಾಸ್ತವದಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಅತ್ಯಂತ ಸವಾಲಿನ ಮತ್ತು ಸಂಕೀರ್ಣ ಕೆಲಸವಾಗಿದೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ತಾಣಗಳ ಪ್ರವೇಶವನ್ನು ನಿರ್ಬಂಧಿಸುವ ಜವಾಬ್ದಾರಿಯನ್ನು ಆಯಾ ಸಾಮಾಜಿಕ ಜಾಲತಾಣಗಳ ಮೆಗಾ ವೇದಿಕೆಗಳ ಕಾರ್ಪೊರೇಟ್ ಸಂಸ್ಥೆಗಳು ವಹಿಸಬೇಕಿದೆ. ತಪ್ಪಿದಲ್ಲಿ ಅವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕಿದೆ. ಮಕ್ಕಳು ಹಾಗೂ ಪಾಲಕರನ್ನು ಬಲಿಪಶು ಮಾಡುವುದು ಸರಿಯಲ್ಲ.
ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸರಳೀಕರಣಗೊಳಿಸುವ ಕ್ರಮ ಖಾಸಗೀಕರಣದ ವೇಗವನ್ನು ಮತ್ತಷ್ಟು ಹೆಚ್ಚಿ ಸುವುದಲ್ಲದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಕ್ರಮವಾಗಿದೆ.
ಶಿಕ್ಷಣ ಇಲಾಖೆ ಪೂರ್ಣವಾಗಿ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕೈವಶವಾದಂತೆ ಕಾಣಿಸುತ್ತದೆ. ಸಾಮಾಜಿಕ ನ್ಯಾಯದ ಹರಿಕಾರರಾದ ಮಖ್ಯ ಮಂತ್ರಿಗಳು, ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪ್ರತಿಪಾದಕರಾದ ಮತ್ತು ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ತಮ್ಮ ಸಂಪುಟ ಸಹೋದ್ಯೋಗಿಗಳ, ಜನ ಪ್ರತಿನಿಧಿಗಳು ಮತ್ತು ರಾಜಕೀಯ ನಂಟನ್ನು ಹೊಂದಿರುವ ಖಾಸಗಿ ಶಾಲೆಗಳ ಮಾಲಕರ ಶಕ್ತಿಗಳ ಮುಂದೆ ಸೋತಂತೆ ಕಾಣುತ್ತದೆ.







