ನೀರಿನ ವ್ಯವಸ್ಥೆಯಿಲ್ಲದ ಭಗತ್ ಸಿಂಗ್ ನಗರದ ಸಾರ್ವಜನಿಕ ಶೌಚಾಲಯ

ಹೊಸಪೇಟೆ, ಸೆ.5: ನಗರದ 29ನೇ ವಾರ್ಡ್, ಭಗತ್ ಸಿಂಗ್ ಬಡಾವಣೆಯಲ್ಲಿ 30 ವರ್ಷಗಳಿಂದ ಮೂಲ ಸೌಕರ್ಯ ಸೇರಿದಂತೆ ಇಲ್ಲಿನ ಜನಗಳು ಬಹಿರ್ದೆಸೆಗೆ ತೆರಳಲು ಶೌಚಾಲಯದ ಸಮಸ್ಯೆ ಗಂಭೀರವಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಬಡಾವಣೆಯಲ್ಲಿ ಸರಿಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ ನೀರಿನ ಮೋಟಾರ್ ವ್ಯವಸ್ಥೆ ಇದ್ದರೂ, ಸಹ ನೀರು ಬರುವುದಿಲ್ಲ, ಶೌಚಾಲಯ ಇದ್ದು ಇಲ್ಲದಂತಾಗಿದೆ. ಈ ಸಮಸ್ಯೆಯ ಬಗ್ಗೆ ನಗರ ಸಭೆ ಸದಸ್ಯರ ಗಮನಕ್ಕೆ ತಂದರೆ ಯಾವುದೇ ಪ್ರಯೋಜನ ವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಸರಿಯಾದ ರೀತಿಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯ ಪಕ್ಕದಲ್ಲೇ ಬಹಿರ್ದೆಸೆ ಅನಿವಾರ್ಯವಾಗಿದೆ. ಈ ಸ್ಥಳದಲ್ಲಿ ಗಿಡ - ಗಂಟೆ ಬೆಳೆದಿರುವುದರಿಂದ ವಿಷ ಜಂತು, ಕ್ರಿಮಿ-ಕೀಟಗಳು ಬಾಧಿಸುವ ಸಾಧ್ಯತೆ ಇದ್ದು ,ಪ್ರಾಣ ಹಾನಿಯಾಗುವ ಭಯ ನಮ್ಮಲ್ಲಿ ಕಾಡುತ್ತಿದೆ. ನಮ್ಮ ಗೋಳು ಕೇಳೋರ್ಯಾರು ಎನ್ನುವಂತಾಗಿದೆ ಎಂದು ಇಲ್ಲಿನ ಜನರು ನೇರವಾಗಿ ನಗರ ಸಭೆಯ ಪೌರಯುಕ್ತರ ಮತ್ತು ಸದಸ್ಯರ ವಿರುದ್ಧ ಆಕ್ರೋಶ ಹೊರ ಹಾಕಿದರು.
ತ್ವರಿತವಾಗಿ ಶೌಚಾಲಯ ಮತ್ತು ಮೂಲಭೂತ ಸೌಕರ್ಯದ ಸಮಸ್ಯೆಗಳನ್ನು ಸರಿಪಡಿಸದಿದ್ದರೆ 29ನೇ ವಾರ್ಡ್ ಗೆ ಸಂಬಂದಿಸಿದ ನಗರಸಭೆ ಸದಸ್ಯ ರಮೇಶ್ ಗುಪ್ತಾ ಮನೆಯ ಎದುರು ಖಾಲಿ ಚೆಂಬು ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಸದಸ್ಯರಿಗೆ ಮಾಧ್ಯಮದ ಮುಖಾಂತರ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದರು.
ಈ ಹಿಂದೆ ನಮ್ಮ ತಂದೆಯವರು 29ನೇ ವಾರ್ಡ್‌ನ ನಗರಸಭೆ ಸದಸ್ಯರಾಗಿದ್ದಾಗ ಸ್ಥಳೀಯರ ಸಮಸ್ಯೆಗಳಿಗೆ ಸಂದ್ಪಿಸುತ್ತಿದ್ದರು. ಈಗ ಅವರಿಲ್ಲ ಆದರೆ ಅವರ ಮಗನಾದ ನಾನು ಇವರ ಕಷ್ಟಕ್ಕೆ ನೆರವಾಗುತ್ತಾನೆ. ಹೊಸಪೇಟೆ ನಗರ ಪೌರಾಯುಕ್ತರು ಹಾಗೂ ಅಧಿಕಾರಿಗಳು ಆದಷ್ಟು ಬೇಗನೆ ಇಲ್ಲಿನ ಸಮಸ್ಯೆ ಬಗೆಹರಿಯದಿದ್ದರೆ ನಗರಸಭೆಯ ಎದುರು ಸ್ಥಳೀಯ ನಿವಾಸಿಗಳ ನೇತೃತ್ವದಲ್ಲಿ ಧರಣಿ ನಡೆಸಲಾಗುವುದು.
-ತಳವಾರ್ ನಾಗರಾಜ್, ಜಿಲ್ಲಾಧ್ಯಕ್ಷ, ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ
ನಾನು ಈ ಹಿಂದೆ ಶೌಚಾಲಯ ಸ್ಥಳಕ್ಕೆ ಭೇಟಿನೀಡಿ ನೀರು ಹಾಗೂ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಸ್ವಯಂಪ್ರೆರೇಪಿತಾರಾಗಿ ಕಾಪಾಡಲು ತಿಳಿಸಿದ್ದೆವು. ಇದನ್ನು ನಿರ್ಲಕ್ಷಿಸಿದ್ದರಿಂದ ಮತ್ತು ಮೋಟಾರ್‌ಅನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಸಮಸ್ಯೆ ಉಂಟಾಗಿದೆ. ಸಮಸ್ಯೆ ಕುರಿತು ಪೌರಾಯುಕ್ತರಿಗೆ ತಿಳಿಸಿದ್ದೇನೆ. ಆದಷ್ಟು ಬೇಗನೆ ಹೊಸ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು.
-ರಮೇಶ್ ಗುಪ್ತಾ, 29ನೇ ವಾರ್ಡ್ ಸದಸ್ಯ
ಹೊಸಪೇಟೆ ನಗರದ 29ನೇ ವಾರ್ಡ್ ನಲ್ಲಿ ಶೌಚಾಲಯ ಸಮಸ್ಯೆ ಇದೆ. ನಾವು ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದ್ದೇವೆ. ಆದಷ್ಟು ಬೇಗನೆ ಶೌಚಾಲಯ ಮತ್ತು ಮೂಲಭೂತ ಸೌಕರ್ಯದ ಸಮಸ್ಯೆ ಬಗೆಹರಿಸುತ್ತೇವೆ.
-ಶಿವಕುಮಾರ್, ಪೌರಾಯುಕ್ತ, ಹೊಸಪೇಟೆ ನಗರಸಭೆ







