ಪಿವಿಟಿಜಿ ಕೊರಗ ಸಮುದಾಯಕ್ಕೆ ಬೇಕಿದೆ ಪ್ರತ್ಯೇಕ ಒಳಮೀಸಲಾತಿ

ಕೊರಗರನ್ನು ಕರಾವಳಿಯ ಜನಸಮುದಾಯಗಳೆಲ್ಲವೂ ತೀರಾ ಅಮಾನವೀಯವಾಗಿ ನಡೆಸಿಕೊಂಡಿವೆ. ಇದರ ಪರಿಣಾಮವಾಗಿಯೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಇವರು ಹಿಂದುಳಿದಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಕೊರಗ ಸಮುದಾಯವು ಕ್ಷಯ, ರಕ್ತಹೀನತೆ, ಬಂಜೆತನ, ಅಪೌಷ್ಟಿಕತೆಯಂತಹ ಸಮಸ್ಯೆಗೆ ಒಳಗಾಗಿದ್ದಾರೆ. ಶತಶತಮಾನಗಳ ನಿರಂತರ ಶೋಷಣೆಯಿಂದ, ಅಜಲು ಪದ್ಧತಿಗಳಿಂದ ಕೊರಗರ ದೇಹವೆಂಬುದು ಕಾಯಿಲೆಗಳ ಗೂಡಾಗಿದೆ. ಕೊರಗ ಗರ್ಭಿಣಿಯರ ಅಪೌಷ್ಟಿಕತೆಯಿಂದ ಮಕ್ಕಳು ಹುಟ್ಟುತ್ತಲೇ ಸಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಕೊರಗರೇ ನಶಿಸಿ ಹೋಗುತ್ತಿದ್ದಾರೆ.
ಭಾಗ - 1
ಬುಡಕಟ್ಟು ಕೊರಗರಿಗೆ ಪ್ರತ್ಯೇಕ ಒಳ ಮೀಸಲಾತಿ ಬೇಕು ಎಂದು ಕೊರಗರು ಆಗ್ರಹಿಸುತ್ತಿದ್ದಾರೆ. ‘ಕೊರಗರನ್ನು 51 ಬುಡಕಟ್ಟುಗಳೊಂದಿಗೆ ತುರುಕಿಸಿ ಅವರ ಅಭಿವೃದ್ಧಿಯ ಕನಸು ಕಾಣಲಾಗುತ್ತಿದೆ. ವಾಲ್ಮೀಕಿ, ಮರಾಟಿ ನಾಯ್ಕರಂತಹ ಬಲಾಢ್ಯ ಸಮುದಾಯಗಳೊಂದಿಗೆ ಸ್ಪರ್ಧಿಸಿ ನಮ್ಮ ಪಾಲನ್ನು ಪಡೆಯುವುದು ಅಸಾಧ್ಯ’ ಎಂದು ಕೊರಗ ಸಮುದಾಯದ ಚಿಂತಕ ಸಾಹಿತಿ ಪಾಂಗಳ ಬಾಬು ಕೊರಗ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇವರ ಈ ನೋವು ವಿಧಾನಸೌಧಕ್ಕೆ ಕೇಳಬೇಕಿದೆ.
1871ರ ಮೊದಲ ಜನಗಣತಿ ವರದಿಯಲ್ಲಿ ಕೊರಗರನ್ನು ‘No Hill Tribes’ ಎಂದು ಉಲ್ಲೇಖಿಸಲಾಗಿದೆ. 1881ರ ಜನಗಣತಿ ವರದಿಯಲ್ಲಿ ಅವರನ್ನು ‘ಆದಿವಾಸಿಗಳು’ ಎಂದು ಗುರುತಿಸಲಾಗಿದೆ. 1891ರ ಜನಗಣತಿಯಲ್ಲಿ ಕೊರಗರನ್ನು ‘ದಕ್ಷಿಣ ಕೆನರಾದ ಅರಣ್ಯ ಮತ್ತು ಬೆಟ್ಟದ ಬುಡಕಟ್ಟುಗಳು’ ಎಂದು ಕರೆಯಲಾಗಿದೆ. 1921, 1931 ಮತ್ತು 1941ರ ಜನಗಣತಿಯಲ್ಲಿ ಅವರನ್ನು ‘ತುಳಿತಕ್ಕೊಳಗಾದ ವರ್ಗಗಳು’ ಎಂದು ಪರಿಗಣಿಸಲಾಗಿದೆ. 1951ರ ಜನಗಣತಿಯಲ್ಲಿ ‘ಪರಿಶಿಷ್ಟ ಜಾತಿ’ ಎಂದು ಕರೆದರೆ, 1956ರಿಂದ 1986ರ ಜನಗಣತಿ ವರದಿಯಲ್ಲಿ ಕೊರಗರನ್ನು ‘ಪರಿಶಿಷ್ಟ ಬುಡಕಟ್ಟುಗಳು’ ಎನ್ನಲಾಯಿತು. 1986ರಲ್ಲಿ ಅವರನ್ನು ‘ಪ್ರಾಚೀನ ಬುಡಕಟ್ಟು’ ಎಂದು ಹೇಳಲಾಯಿತು. 2006ರಲ್ಲಿ, ಭಾರತ ಸರಕಾರವು PTG (Primitive Tribal Group) (ಆದಿಮ ಬುಡಕಟ್ಟು)ಗಳನ್ನು ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ ((PVTGs/ Particularly Vulnerable Tribal Groups) ಎಂದು ಮರು ನಾಮಕರಣ ಮಾಡಿತು. ಕರ್ನಾಟಕದಲ್ಲಿ 50ಕ್ಕೂ ಹೆಚ್ಚಿನ ಬುಡಕಟ್ಟು ಪಂಗಡಗಳಿವೆ. ಈ ಪೈಕಿ 12 ಅರಣ್ಯ ಮೂಲ ಬುಡಕಟ್ಟುಗಳಿವೆ. ಅವುಗಳಲ್ಲಿ ಕೊರಗರು ಮತ್ತು ಕೊಡಗಿನ ಜೇನು ಕುರುಬರು Pಖಿಉ (ಆದಿಮ ಬುಡಕಟ್ಟು) ಪೈಕಿ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTGs/ Particularly Vulnerable Tribal Groups) ಎಂದು ಸರಕಾರ ಗುರುತಿಸಿದೆ. ಆದರೆ ಇಂತಹ Pಗಿಖಿಉ’sಗಳಿಗೆ ಪ್ರತ್ಯೇಕ ಮೀಸಲಾತಿ ನೀಡದೆ ಅವರಿಗಿಂತ ಬಲಿಷ್ಠ 51 ಬುಡಕಟ್ಟುಗಳೊಂದಿಗೆ ಕೊರಗರನ್ನು ಸ್ಪರ್ಧೆಗಿಳಿಸಲಾಗಿದೆ. ಇದು ಅನ್ಯಾಯ ಎನ್ನುವುದಕ್ಕೆ ಎರಡನೇ ಬಾರಿ ಯೋಚಿಸಬೇಕಿಲ್ಲ.
ಕೊರಗರದ್ದು ಯಾಕೆ ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ ಅನ್ನಿಸಿಕೊಂಡಿದೆ? ಕೊರಗರು ಕರಾವಳಿಯ ಮೂಲನಿವಾಸಿಗಳು. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರಿನ ಕೆಲ ಭಾಗ ಮತ್ತು ಕೇರಳದ ಉತ್ತರ ಭಾಗ(ಕಾಸರಗೋಡು)ದಲ್ಲಿ ಕೊರಗ ಸಮುದಾಯ ವಾಸಿಸುತ್ತಿದೆ. ಒಂದು ಕಾಲದಲ್ಲಿ ಕೊರಗರೇ ಕರಾವಳಿ ಜಿಲ್ಲೆಗಳ ಆಧಿಪತ್ಯವನ್ನು ಹೊಂದಿದ್ದರು. ಬ್ರಾಹ್ಮಣ, ಬಂಟರು, ಜೈನರು ಸೇರಿದಂತೆ ಹಲವು ಬಲಿಷ್ಠ ಸಮುದಾಯಗಳು ಕರಾವಳಿಗೆ ವಲಸೆ ಬಂದ ನಂತರ ಮೂಲನಿವಾಸಿ ಕೊರಗರು ಅಸ್ಪಶ್ಯರಾದರು. ಅಂದರೆ ಆ ಬಳಿಕ ಬಂದ ಜಾತಿ ವ್ಯವಸ್ಥೆ/ಸಾಮಾಜಿಕ ವ್ಯವಸ್ಥೆಯು ಕೊರಗರನ್ನು ಅಸ್ಪಶ್ಯರನ್ನಾಗಿ ಮಾಡಿತ್ತು.
ಕೊರಗರು ತೀರಾ ಇತ್ತೀಚಿನವರೆಗೂ ಅನಿಷ್ಟಗಳಾದ ಅಜಲು ಮತ್ತು ಅಸ್ಪಶ್ಯತೆಯ ಸಮಸ್ಯೆಯಿಂದಾಗಿ ಸಾಮಾಜಿಕ ಜೀವನದಿಂದ ಪ್ರತ್ಯೇಕಿಸಲ್ಪಟ್ಟಿದ್ದರು. ದೇವಸ್ಥಾನಗಳ ಜಾತ್ರೆಯ ಸಮಯದಲ್ಲಿ ಊಟ ಮಾಡಿದ ಎಂಜಲು ಎಲೆಯನ್ನು ರಾಶಿ ಹಾಕಿದ ಬಳಿಕ ಆ ಎಲೆಗಳಲ್ಲಿ ಉಳಿದ ಆಹಾರವನ್ನು ಕೊರಗರು ಆಯ್ದುಕೊಂಡಿದ್ದನ್ನು ನಾನು 2000ನೇ ಇಸವಿಯವರೆಗೂ ಕಣ್ಣಾರೆ ಕಂಡಿದ್ದೆ. ಮೇಲ್ವರ್ಗವಾಗಿರುವ ಬಂಟರ ಸೀಮಂತದ ದಿನ ಗರ್ಭಿಣಿಗೆ ಬಡಿಸಿದ್ದ ಆಹಾರಕ್ಕೆ ಗರ್ಭಿಣಿಯ ಉಗುರು ಮತ್ತು ತಲೆಕೂದಲು ಬೆರೆಸಿ ಕೊರಗರಿಗೆ ನೀಡಲಾಗುತ್ತಿತ್ತು. ಈ ರೀತಿ ಮಾಡುವುದರಿಂದ ಗರ್ಭಿಣಿಗೆ ಬಂದೊದಗುವ ಸಂಕಷ್ಟಗಳು ಕೊರಗರಿಗೆ ದಾಟುತ್ತದೆ ಎಂಬ ಅನಿಷ್ಟ, ಅಮಾನವೀಯ, ಕೊಳಕು ಪದ್ಧತಿ ಜಾರಿಯಲ್ಲಿತ್ತು. ಈ ಪದ್ಧತಿಯ ಬಗ್ಗೆ ‘ಅಜಲು ನಿಷೇಧ’ ಸಂದರ್ಭ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಇಂತಹದ್ದೊಂದು ಪದ್ಧತಿ ಜಾರಿಯಲ್ಲಿರುವುದು ನಮ್ಮ ಕಾಲದ ಎಲ್ಲರಿಗೂ ಗೊತ್ತಿರುವಂತಹದ್ದು. ಇದಲ್ಲದೆ ಕಂಬಳ ಗದ್ದೆಯಲ್ಲಿ ಕೋಣ ಓಡುವುದಕ್ಕೂ ಮೊದಲು ಕೊರಗರನ್ನು ಕೋಣಗಳಂತೆ ಓಡಿಸಲಾಗುತ್ತಿತ್ತು. ಜಮೀನ್ದಾರರ ಕೋಣಗಳಿಗೆ ಕಲ್ಲು, ಗಾಜು ತಾಗಬಾರದು, ಕಂಬಳದ ಗದ್ದೆಯಲ್ಲಿ ಕಲ್ಲು ಗಾಜುಗಳಿದ್ದರೆ ಕೊರಗರಿಗೆ ತಾಗುವ ಮೂಲಕ ಅರಿವಿಗೆ ಬರಬೇಕು ಎಂಬ ಕೋಣಗಳ ಮೇಲಿನ ಕಾಳಜಿಯಿಂದ ಕೊರಗರನ್ನು ಕಂಬಳ ಪೂರ್ವದಲ್ಲಿ ಕಂಬಳ ಗದ್ದೆಯಲ್ಲಿ ಓಡಿಸಲಾಗುತ್ತಿತ್ತು. ಇದಲ್ಲದೇ ಕಂಬಳದ ‘ಪನಿ ಕುಲ್ಲುನು’ ಎಂಬ ಅಜಲು ಪದ್ಧತಿಯೂ ಜಾರಿಯಲ್ಲಿತ್ತು.
ಕೊರಗರನ್ನು ಕರಾವಳಿಯ ಜನಸಮುದಾಯಗಳೆಲ್ಲವೂ ತೀರಾ ಅಮಾನವೀಯವಾಗಿ ನಡೆಸಿಕೊಂಡಿವೆ. ಇದರ ಪರಿಣಾಮವಾಗಿಯೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಇವರು ಹಿಂದುಳಿದಿದ್ದಾರೆ. ಇವೆಲ್ಲದರ ಪರಿಣಾಮವಾಗಿ ಕೊರಗ ಸಮುದಾಯವು ಕ್ಷಯ, ರಕ್ತಹೀನತೆ, ಬಂಜೆತನ, ಅಪೌಷ್ಟಿಕತೆಯಂತಹ ಸಮಸ್ಯೆಗೆ ಒಳಗಾಗಿದ್ದಾರೆ. ಶತಶತಮಾನಗಳ ನಿರಂತರ ಶೋಷಣೆಯಿಂದ, ಅಜಲು ಪದ್ಧತಿಗಳಿಂದ ಕೊರಗರ ದೇಹವೆಂಬುದು ಕಾಯಿಲೆಗಳ ಗೂಡಾಗಿದೆ. ಕೊರಗ ಗರ್ಭಿಣಿಯರ ಅಪೌಷ್ಟಿಕತೆಯಿಂದ ಮಕ್ಕಳು ಹುಟ್ಟುತ್ತಲೇ ಸಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಕೊರಗರೇ ನಶಿಸಿ ಹೋಗುತ್ತಿದ್ದಾರೆ.
ಹೀಗೆ ಕೊರಗ ಸಮುದಾಯವು ಅಳಿವಿನಂಚಿಗೆ ಬರಲು ಕಾರಣವೇನು? ಯುದ್ಧ, ಅಸ್ತ್ರಗಳಿಲ್ಲದೆಯೇ ಕೊರಗರ ಮಾರಣಹೋಮ ನಡೆಸಿದವರು ಯಾರು? ಈ ಸಮಾಜದ ಕಾರಣಕ್ಕಾಗಿ ಕೆಲವೇ ಸಾವಿರ ಸಂಖ್ಯೆಯಲ್ಲಿರುವ ಕೊರಗರು ಹಸಿವಿನಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ‘ಮಾನವ ಅಭಿವೃದ್ಧಿ ಸೂಚ್ಯಂಕವು ಕೊರಗ ಸಮುದಾಯದ ಶಿಕ್ಷಣ, ಮರಣ, ಜೀವಿತಾವಧಿ ಮತ್ತು ಜೀವನಮಟ್ಟ ಮುಂತಾದ ಅತ್ಯಂತ ಸೂಕ್ಷ್ಮ ವಿವರಗಳನ್ನು ತೋರಿಸುತ್ತದೆ, ಕೊರಗರಲ್ಲಿ ಮಕ್ಕಳು ಹುಟ್ಟುತ್ತಲೇ ಸಾವನ್ನಪ್ಪುವ ಪ್ರಮಾಣವು ತುಂಬಾ ಹೆಚ್ಚಾಗಿದೆ, 90 ಶೇಕಡಾ ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆ ಹೊಂದಿದ್ದಾರೆ, ಸಾಕ್ಷರತೆ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಕೊರಗರ ಜೀವಿತಾವಧಿ ಅಂದಾಜು ಕೇವಲ 40 ವರ್ಷಗಳು. ಅವರ ಮುಖ್ಯ ಉದ್ಯೋಗ ಬುಟ್ಟಿ ಹೆಣೆಯುವುದು ಮತ್ತು ತೋಟಗಳ ಕಾರ್ಮಿಕರಾಗಿರುವುದು. ಇನ್ನುಳಿದ ದಲಿತ ಸಮುದಾಯಗಳಿಗೂ ಅವರು ಅಸ್ಪಶ್ಯರು. ಪ್ರಸ್ತುತ ಕೊರಗರು ತಮ್ಮ ಅಸ್ತಿತ್ವಕ್ಕೆ ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ, ಅವರ ಜನಸಂಖ್ಯೆಯು ಜನಗಣತಿಯಿಂದ ಜನಗಣತಿಗೆ ಕ್ಷೀಣಿಸುತ್ತಿದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ವಜೀದಾ ಬಾನು ಅವರು THE INTERNATIONAL JOURNAL OF HUMANITIES & SOCIAL STUDIESಗೆ ಬರೆದಿರುವ ವರದಿಯಲ್ಲಿ ಹೇಳುತ್ತಾರೆ.
ಆತಂಕದ ವಿಷಯವೆಂದರೆ 2001ರ ಜನಗಣತಿಯ ಪ್ರಕಾರ, ಕೊರಗ ಬುಡಕಟ್ಟಿನ ಒಟ್ಟು ಜನಸಂಖ್ಯೆ 11,656 ಇತ್ತು. 2011ರ ಜನಗಣತಿಯ ಪ್ರಕಾರ ಕೊರಗರ ಜನಸಂಖ್ಯೆ ಕೇವಲ 4,858 ಮಾತ್ರ! ಈ ಮಟ್ಟಿಗೆ ಕೊರಗರ ಸಂತತಿ ನಾಶವಾಗುತ್ತಿದೆ.
ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಶತಶತಮಾನಗಳಿಂದ ನಡೆದ ಈ ಶೋಷಣೆ, ದೌರ್ಜನ್ಯಗಳಿಗೆ ಈಡಾಗಿ ಕೊರಗ ಸಮುದಾಯವೇ ಅಳಿವಿನಂಚಿಗೆ ಬಂದು ನಿಂತಿದೆ. ಇದಕ್ಕೆ ಕಾರಣ ಪ್ರತಿಯೊಬ್ಬ ಮೇಲ್ವರ್ಗದ ವ್ಯಕ್ತಿಯ ತಲೆಯೊಳಗೆ ಹೊಕ್ಕಿರುವ ಅದೃಶ್ಯ ಮನುಸ್ಮತಿ, ವರ್ಣ, ಜಾತಿ ಪದ್ಧತಿಗಳು! ಇಂತಹ ಸಾಮಾಜಿಕ ಕಾರಣದಿಂದಲೇ ಕೊರಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಮತ್ತು ಅದಕ್ಕೆ ಅಷ್ಟೇ ಅಮಾನವೀಯವಾಗಿ ಸಮರ್ಥನೆಯನ್ನು ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಮೇಲ್ವರ್ಗಗಳು ಮಾಡುತ್ತಿವೆ.
ನಿಜಕ್ಕೂ ಕೊರಗರು ಈಗಲೂ ನಾಲ್ಕಾರು ಸಾವಿರ ಸಂಖ್ಯೆಯಲ್ಲಾದರೂ ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಡಾ. ಪೀರ್ ಮುಹಮ್ಮದ್, ಡಾ. ವಜೀದಾ ಬಾನು, ಮುಹಮ್ಮದ್ ಗುತ್ತಿಗಾರ್ ಎಂಬ ಸಂಶೋಧಕರು! ಡಾ. ಪೀರ್ ಮುಹಮ್ಮದ್ ಅವರು ಕೊರಗರ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ವರದಿ ನೀಡಿದ್ದರಿಂದ ಕೊರಗ ಸಂಘಟನೆಗಳ ಹೋರಾಟಕ್ಕೆ ಬಲ ಬಂದಿತ್ತು. ಈ ವರದಿ-ಹೋರಾಟಗಳ ಫಲವಾಗಿ ರಾಜ್ಯ ಸರಕಾರವು ಅಜಲು ನಿಷೇಧ ಕಾಯ್ದೆ ಜಾರಿಗೆ ತಂದು ಅಜಲು ಪದ್ಧತಿಯನ್ನು ನಿಷೇಧಿಸಿತು ಮತ್ತು ಕೊರಗರ ಮೇಲೆ ಅಜಲು ಪದ್ಧತಿಯನ್ನು ಹೇರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಘೋಷಿಸಿತು. ಈ ಕಾನೂನಿನ ಪ್ರಕಾರ ಕೊರಗರನ್ನು ಕಂಬಳದ ಗದ್ದೆಯಲ್ಲಿ ಕೋಣಗಳಂತೆ ಓಡಿಸುವುದು, ಊಟದಲ್ಲಿ ಕೂದಲು ಮತ್ತು ಉಗುರು ಬೆರೆಸಿ ಕೊಡುವುದನ್ನು ನಿಷೇಧಿಸಿ ಶಿಕ್ಷಾರ್ಹವೆಂದು ಘೋಷಿಸಲಾಗಿದೆ.
ಡಾ. ಪೀರ್ ಮುಹಮ್ಮದ್, ಡಾ. ವಜೀದಾ ಬಾನು, ಮುಹಮ್ಮದ್ ಗುತ್ತಿಗಾರ್ ವರದಿಯ ಆಧಾರದಲ್ಲಿ ಕೊರಗ ಸಮುದಾಯ ಹೋರಾಟದ ಹಾದಿ ಹಿಡಿಯಿತು ಅಥವಾ ಧ್ವನಿಯಿಲ್ಲದ ಕೊರಗರ ಹೋರಾಟಕ್ಕೊಂದು ಈ ಮೂವರ ವರದಿಗಳು ದಾರಿ ತೋರಿದವು.
ಸರಕಾರವೇ ನೇಮಿಸಿದ ಡಾ. ಪೀರ್ ಮುಹಮ್ಮದ್ ಅವರು (Social, Economic and educational Conditions of Koragas - An Action Plan,/A Project Report submitted to the Zilla Parishad, Dakshina Kannada District/ Department of Sociology, Mangalore University) ಕೊರಗ ಸಮುದಾಯದ ಅಧ್ಯಯನ ಮಾಡಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಿದ್ದರೂ, ಡಾ. ಪೀರ್ ಶಿಫಾರಸಿನ ಯಾವ ಅಂಶಗಳೂ ಜಾರಿಯಾಗಲಿಲ್ಲ. ಮುಖ್ಯವಾಗಿ ಪ್ರತೀ ಕೊರಗರ ಕುಟುಂಬಕ್ಕೆ ತಲಾ 2.50 ಎಕರೆ ಭೂಮಿ ನೀಡಬೇಕು ಎಂಬ ಶಿಫಾರಸನ್ನು ಸರಕಾರ ತಕ್ಷಣ ಜಾರಿ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ಕೊರಗರು ಕೃಷಿ ಭೂಮಿಯ ಒಡೆಯರಾಗುವುದು ದೂರದ ಮಾತು. ಕೊರಗ ಸಮುದಾಯದ ಒಟ್ಟು ಜನಸಂಖ್ಯೆಯ ಶೇ. 95ರಷ್ಟು ಮಂದಿ ವಸತಿಹೀನರು.
ಮುಹಮ್ಮದ್ ಪೀರ್ ವರದಿ ನೀಡಿ 30 ವರ್ಷಗಳಾಗಿವೆ. ಪೀರ್ ವರದಿಯನ್ನು ಜಾರಿಗೊಳಿಸುವುದರ ಜೊತೆ ಕೊರಗರು ವರ್ತಮಾನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬೇಡಿಕೆ ಪಟ್ಟಿಗೆ ಸೇರಿಸಬೇಕಿದೆ.
1. ಭೂಮಿ ಹಕ್ಕು
ಡಾ. ಮುಹಮ್ಮದ್ ಪೀರ್ ವರದಿಯಂತೆ ಪ್ರತೀ ಕೊರಗ ಕುಟುಂಬಕ್ಕೆ 2.50 ಎಕರೆ ಕೃಷಿ ಭೂಮಿ ನೀಡಬೇಕು. ಕೊರಗರ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಗಳನ್ನು ಸರಕಾರ ಉಚಿತವಾಗಿ ಕಲ್ಪಿಸಬೇಕು. ಮನೆ ನಿವೇಶನಗಳನ್ನು ಮಂಜೂರು ಮಾಡಬೇಕು. ಈಗಾಗಲೇ ಮಂಜೂರಾಗಿರುವ ನಿವೇಶನಗಳ ಹಂಚಿಕೆಗೆ ಗೋಮಾಳ ಜಮೀನು, ಅರಣ್ಯ ಇಲಾಖೆಯ ಜಮೀನು ಎಂದು ಹತ್ತಾರು ತಕರಾರುಗಳನ್ನು ಎತ್ತಲಾಗುತ್ತಿವೆ. ಇವೆಲ್ಲವನ್ನೂ ಬಗೆಹರಿಸಿ ಮನೆ ನಿವೇಶನ ಮತ್ತು ಕೃಷಿ ಭೂಮಿ ನೀಡಬೇಕಿದೆ.
2. ಕರಕುಶಲ ವೃತ್ತಿಗೆ ಮಾರುಕಟ್ಟೆ ಮತ್ತು ಉದ್ಯೋಗ
ಲಿಡ್ಕರ್ ಮಾದರಿಯಲ್ಲಿ ಕೊರಗ ಸಮುದಾಯದ ಉತ್ಪಾದನೆಗಳಿಗೆ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಸಬೇಕು. ಅತೀ ಸೂಕ್ಷ್ಮ ಸಮುದಾಯವಾಗಿರುವ ಕೊರಗರಿಗೆ ಕರಾವಳಿ ಜಿಲ್ಲೆಗಳ ಖಾಸಗಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಆದ್ಯತೆಯ ಮೇರೆಗೆ ಉದ್ಯೋಗ ನೀಡಬೇಕು. ಖಾಸಗೀಕರಣ ಮತ್ತು ಜಾಗತೀಕರಣದ ಬಿಸಿ ಕೊರಗರಿಗೆ ತಟ್ಟದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಬೇಕು.
3. ಶಿಕ್ಷಣ:
ಕೊರಗರಿಗೆ ಸೇರಿದಂತೆ ಎಲ್ಲಾ ದಲಿತ ಸಮುದಾಯಗಳಿಗೆ ಶಿಕ್ಷಣ ಕೊಡುವುದನ್ನು ಸನಾತನಿಗಳು ವಿರೋಧಿಸುತ್ತಾರೆ. ಆ ಕಾರಣಕ್ಕಾಗಿಯೇ ಅಸೆಂಬ್ಲಿಯಲ್ಲಿಯೇ ‘ಕೊರಗರಿಗೆ ಶಿಕ್ಷಣ ಕೊಟ್ಟರೆ ಸಂಸ್ಕೃತಿ ಉಳಿಯಲ್ಲ’ ಎಂದು ಬಿಜೆಪಿ ಶಾಸಕರು ಹೇಳುತ್ತಾರೆ. ಶಿಕ್ಷಣ ಮಾತ್ರ ನಮ್ಮನ್ನು ಎಲ್ಲಾ ಸಂಕೋಲೆಗಳಿಂದ ಮುಕ್ತಗೊಳಿಸಲು ಸಾಧ್ಯ ಎಂಬುದನ್ನು ಕೊರಗರಿಗೆ ಮನವರಿಕೆ ಮಾಡುವ ಕಾರ್ಯಕ್ರಮಗಳನ್ನು ಯೋಜಿಸಬೇಕು. ಕೊರಗ ಸಮುದಾಯದ ಎಲ್ಲಾ ಮಕ್ಕಳು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಊರಿನ ಖಾಸಗಿ ಶಾಲೆಗೆ ಹಾಜರಾಗುತ್ತಿದ್ದಾರೆ ಮತ್ತು ಅವರು ಶಾಲಾ ಮಕ್ಕಳ ಮಧ್ಯೆ ಅಸ್ಪಶ್ಯತೆ ಅನುಭವಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿಗೆ ವಹಿಸಬೇಕು.
4. ಹಸಿವು ಮುಕ್ತ ಸಮುದಾಯ
ಕೊರಗರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅದರ ನಿವಾರಣೆಗೆ ಸರಕಾರ ಬದ್ಧತೆಯಿಂದ ಕೆಲಸ ಮಾಡಬೇಕು. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಗರ್ಣಿಣಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಕೊರಗರಲ್ಲಿ ಅತ್ಯಧಿಕವಾಗಿದೆ. ಕೊರಗರು ಭೂಹೀನರಾಗಿರುವುದರಿಂದ ಆಹಾರ ಸುರಕ್ಷತೆ ಇಲ್ಲದ ಜನಸಮುದಾಯವಾಗಿದೆ. ಅವರ ವೃತ್ತಿಗೆ ಸರಿಯಾದ ವೇತನವೂ ಸಿಗದೆ ಇರುವುದರಿಂದ ಕೊರಗ ಸಮುದಾಯವನ್ನು ಹಸಿವು ಮುಕ್ತಗೊಳಿಸುವ ಸಂಪೂರ್ಣ ಜವಾಬ್ದಾರಿ ಸರಕಾರದ್ದಾಗಿದೆ.
5. ಭೂಸ್ವಾಧೀನದಿಂದ ರಕ್ಷಣೆ
ಭೂಮಿಯ ದಾಖಲೆಗಳನ್ನು ಹೊಂದಿಲ್ಲದ ಕೊರಗರ ಜಮೀನುಗಳು ಭೂಸ್ವಾಧೀನ ಪ್ರಕ್ರಿಯೆಯ ಅಡಿಯಲ್ಲಿ ಬರದಂತೆ ಎಚ್ಚರಿಕೆ ವಹಿಸಬೇಕು. ಕೈಗಾರಿಕೆಗಳು ಮತ್ತು ರಾಷ್ಟ್ರೀಯ ಉದ್ಯಾನವನ ಯೋಜನೆಗಳಿಗಾಗಿ ಕೊರಗರನ್ನು ಒಕ್ಕಲೆಬ್ಬಿಸಬಾರದು. ಕೊರಗರ ಭೂಸ್ವಾಧೀನತೆಯ ಅನಿವಾರ್ಯತೆ ಇದ್ದಲ್ಲಿ ಆಸ್ತಿ ಪತ್ರಗಳಿಲ್ಲದ ಕೊರಗ ಕುಟುಂಬಗಳನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಭೋಗ್ಯದ ಜಮೀನು ಸರ್ವೇ ಮಾಡಿ ಶೀಘ್ರ ಪರಿಹಾರ, ಉತ್ತಮ ಗುಣಮಟ್ಟದ ಪುನರ್ವಸತಿ ಒದಗಿಸಬೇಕು.
6. ಕಾಡುತ್ಪತ್ತಿ ಸಂಗ್ರಹಕ್ಕೆ ಅವಕಾಶ
ಕೊರಗರು ಸೇರಿದಂತೆ ಯಾವುದೇ ಆದಿವಾಸಿಗಳು ಕಾಡುತ್ಪತ್ತಿ ಸಂಗ್ರಹಿಸುವುದಕ್ಕೆ ಅಡ್ಡಿ ಮಾಡಕೂಡದು. ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತರಬೇಕು. ಬುಟ್ಟಿ ನೇಯಲು ಬೇಕಾಗುವ ಬಳ್ಳಿ, ಬಿದಿರು ಸಂಗ್ರಹ, ಡೋಲು ಮತ್ತಿತರ ಪರಿಕರಗಳಿಗೆ ಬೇಕಾದ ಕಚ್ಚಾ ಸಾಮಗ್ರಿ ಸಂಗ್ರಹಕ್ಕೆ ರಕ್ಷಿತಾರಣ್ಯ ಸೇರಿದಂತೆ ಎಲ್ಲಾ ಅರಣ್ಯ ವ್ಯಾಪ್ತಿಯಲ್ಲಿ ಅವಕಾಶ ನೀಡಬೇಕು.
7. ಕೊರಗರ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ:
ಮಂಗಳೂರು ಮಹಾನಗರ ಪಾಲಿಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳು, ಉಡುಪಿ ಜಿಲ್ಲೆಯ ನಗರ ಸಭೆ, ಜಿಲ್ಲಾ, ತಾಲೂಕು ಪಂಚಾಯತ್‌ಗಳು ವಾರ್ಷಿಕ ಬಜೆಟ್ ಮಂಡಿಸುವ ವೇಳೆಯಲ್ಲಿ ಕೊರಗರ ಅಭಿವೃದ್ಧಿಗೆಂದು ಪ್ರತ್ಯೇಕ ನಿಧಿ ಮೀಸಲಿಡಬೇಕು. ಕೊರಗರು ವಾಸ್ತವ್ಯ ಇರುವ ಪ್ರದೇಶದ ನೀರು, ರಸ್ತೆ, ವಿದ್ಯುತ್, ಕೊರಗರ ಸ್ವಉದ್ಯೋಗ, ಗುಡಿಕೈಗಾರಿಕೆಗಳಿಗೆ ಈ ನಿಧಿ ಮೀಸಲಿಡಬೇಕು.







