ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ

ರಾಯಚೂರು, ಫೆ.4: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮದ ಭಾಗವಾಗಿ ಸರಕಾರಿ ಶಾಲೆಯ ಮಕ್ಕಳು ಹೆಲಿಕಾಪ್ಟರ್‌ನಲ್ಲಿ ಕೂತು ಬಾನಂಗಳದಲ್ಲಿ ಸುತ್ತಾಡುವ ಕನಸು ನನಸು ಮಾಡಿಕೊಂಡರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ರಾಯಚೂರು ಬೈಸ್ಕಯ್’ ಎಂಬ ವಿಶೇಷ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮದಲ್ಲಿ ಸರಕಾರಿ ಶಾಲಾ ಮಕ್ಕಳು ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಬಾನಂಗಳ ಸುತ್ತಾಡಿದ್ದು ಅವರ ಸಂತಸಕ್ಕೆ ಪಾರವೇ ಇರಲಿಲ್ಲ.
ಜೀವನದಲ್ಲಿ ಒಮ್ಮೆಯಾದರು ಬಾನಂಗಳದಲ್ಲಿ ಹಾರಾಡಬೇಕು ಎಂಬ ವಿದ್ಯಾರ್ಥಿಗಳ ಕನಸು ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮದಿಂದ ನನಸು ಮಾಡಿತು. ಆ ಮೂಲಕ ಮಕ್ಕಳ ಮನಸ್ಸಿನಲ್ಲಿ ಮರೆಯಲಾಗದ ಅನುಭವವಾಗಿ ಉಳಿಯಿತು.
ಸ್ಟೇಷನ್ ಬಜಾರ್, ಬಾಲ ಮಂದಿರ ವಸತಿ ನಿಲಯ ಹಾಗೂ ಇತರೆ ಸರಕಾರಿ ಶಾಲಾ ಮಕ್ಕಳು ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಕುಳಿತು ಆನಂದಿಸಿದರು.
ಜೀವನದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಹತ್ತಿದ ಕ್ಷಣದಿಂದಲೇ ಮಕ್ಕಳ ಕಣ್ಣುಗಳಲ್ಲಿ ಅಚ್ಚರಿ, ಕುತೂಹಲ ಮತ್ತು ಅಪಾರ ಖುಷಿ ಹೊಳೆಯುತ್ತಿತ್ತು. ಹೆಲಿಕಾಪ್ಟರ್ ಮೇಲಕ್ಕೆ ಏರಿದಾಗ ಕೆಳಗಿರುವ ಊರು, ರಸ್ತೆಗಳು, ಮರಗಳು ಚಿಕ್ಕದಾಗಿ ಕಾಣುತ್ತಿದ್ದಂತೆ ಮಕ್ಕಳು ಸಂತಸದಿಂದ ಕೈಚಾಚಿ, ಉಲ್ಲಾಸದ ನಗು ಹಂಚಿಕೊಂಡರು.
‘‘ನಾವು ಹಾರುತ್ತಿದ್ದೇವೆ’’ ಎಂಬ ಆ ಕ್ಷಣ ಮಕ್ಕಳಿಗೆ ಕೇವಲ ಪ್ರವಾಸವಲ್ಲ, ಅದು ಒಂದು ಕನಸಿನ ಸಾಕಾರವಾಗಿತ್ತು. ಬಡ ಕುಟುಂಬ ಹಿನ್ನೆಲೆಯಿಂದ ಬಂದ ಹಲವಾರು ಮಕ್ಕಳು ಮೊದಲ ಬಾರಿಗೆ ಆಕಾಶದಿಂದ ತಮ್ಮ ಊರನ್ನು ನೋಡುವ ಅನುಭವ ಪಡೆದರು. ಆ ಅನುಭವ ಅವರ ಮನಸ್ಸಿನಲ್ಲಿ ಹೊಸ ಆಸೆ, ಹೊಸ ಗುರಿಗಳನ್ನು ಮೂಡಿಸುವಂತಾಗಿತ್ತು.
ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಹೆಲಿಕಾಪ್ಟರ್ ರೈಡ್ ಮಾಡಲು ಕಳೆದ ವಾರದಿಂದಲೇ ಆನ್ ಲೈನ್ ನಲ್ಲಿ ಹೆಸರು ನೋಂದಣಿಗೆ ಅವಕಾಶ ಮಾಡಲಾಗಿತ್ತು. ಒಂದು ಟಿಕೆಟ್ ಗೆ ರೂ.3500 ದರ ನಿಗದಿ ಮಾಡಿದ್ದು 2 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಮಂಗಳವಾರದವರೆಗೆ ಸುಮಾರು 200ಕ್ಕೂ ಹೆಚ್ಚು ಜನ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡಿದ್ದರು. ಬೆಳಿಗ್ಗೆಯೇ ಕಾರ್ಯಕ್ರಮ ಆಯೋಜಿಸಿದ್ದ ಜಿಲ್ಲಾ ಕ್ರೀಡಾಂಗಣಕ್ಕೆ ಜನರ ದಂಡು ಹರಿದು ಬಂದಿತ್ತು. ಚಾಲನೆ ನೀಡುವ ಮೊದಲೇ ಕ್ರೀಡಾಂಗಣದ ಬಳಿ ಜಮಾವಣೆಗೊಂಡಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.
ಫೆ.4ರಿಂದ 9ರವರೆಗೆ ಹೆಲಿಕಾಪ್ಟರ್ ರೈಡ್ ನಡೆಯಲಿದೆ. ಬೆಳಿಗ್ಗೆ ರಿಂದ 8 ರಿಂದ 12ಗಂಟೆ, ಮಧ್ಯಾಹ್ನ12:30ರಿಂದ ಸಂಜೆ 4:30 ಆಯೋಜಿಸಲಾಗಿದೆ. ಒಂದು ರೌಂಡ್ ಗೆ ಪೈಲೆಟ್ ಹೊರತುಪಡಿಸಿ 6 ಜನ ಕುಳಿತು ಹಾರಾಡಬಹುದಾಗಿದ್ದು ದಿನಕ್ಕೆ ಸುಮಾರು 650 ಜನ ರೈಡ್ ಮಾಡಬಹುದಾಗಿದೆ.
ಏನೇನು ವೀಕ್ಷಣೆ: ಬಾನಂಗಳದಲ್ಲಿ ಕನಿಷ್ಠ 10-12 ನಿಮಿಷ ಹಾರಾಡಿದ್ದು ನಗರದ ಶಕ್ತಿನಗರದ ಆರ್‌ಟಿಪಿಎಸ್, ವೈಟಿಪಿಎಸ್, ರಿಮ್ಸ್ ಆಸ್ಪತ್ರೆ, ಮಾವಿನಕೆರೆ, ಕಾಟೆ ದರ್ವಾಜಾ ಸೇರಿ ಸುತ್ತಮುತ್ತಲಿನ ನೋಟ ಕಣ್ತುಂಬಿಕೊಳ್ಳಬಹುದಾಗಿದೆ.
ಈ ವೇಳೆ ಜಿಲ್ಲಾಧಿಕಾರಿ ನಿತಿಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಗ್ಯಾರಂಟಿ ಯೋಜನೆಗಳ ಸಮಿತಿಯ ತಾಲೂಕು ಅಧ್ಯಕ್ಷ ಪವನ್ ಕುಮಾರ್ ಪಾಟೀಲ, ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಪಾಲಿಕೆಯ ಸದಸ್ಯ ಸಾಜೀದ್ ಸಮೀರ್, ಫೈಸಲ್ ಖಾನ್ ಮತ್ತಿತರರು ಇದ್ದರು.
ಸರ್ವಧರ್ಮ ಗುರುಗಳಿಗೂ ಹೆಲಿಕಾಪ್ಟರ್ ರೈಡ್
ರಾಯಚೂರು ನಗರ ಶಾಂತಿ ಸೌಹಾರ್ದತೆಗೆ ಹೆಸರುವಾಸಿ. ನಗರದಲ್ಲಿ ಬಹುಸಂಖ್ಯಾತರಾಗಿ ಮುಸ್ಲಿಮರೇ ವಾಸವಾಗಿದ್ದರೂ ಎಲ್ಲರೂ ಅನೋನ್ಯವಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ವಧರ್ಮ ಸಮಾನತೆ ಸಂದೇಶ ನೀಡುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಮುಸ್ಲಿಂ, ಹಿಂದು, ಕ್ರಿಶ್ಚಿಯನ್ ಧರ್ಮ ಗುರುಗಳಿಂದ ಹೆಲಿಕಾಪ್ಟರ್ ರೈಡ್‌ಗೆ ಚಾಲನೆ ನೀಡಿಸಲಾಯಿತು ಹಾಗೂ ಒಂದೇ ವೇದಿಕೆಯಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಲಾಯಿತು.
ಅಂದ್ರೂನ್ ಕಿಲ್ಲಾ ಬಡಾವಣೆಯ ಜಾಮಿಯ ಮಸೀದಿಯ ಹಾಫೀಜ್ ಮೊಹಮ್ಮದ್ ರಫೀಕ್ ಅನ್ವರಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು, ಫಾದರ್ ಯುವರಾಜ್ ಅವರು ಜೊತೆಗೂಡಿ ಹೆಲಿಕಾಪ್ಟರ್‌ನಲ್ಲಿ ಕುಳಿತು ಸಂತಸ ಹಂಚಿಕೊಂಡರು.
ಹೆಲಿಕಾಪ್ಟರ್‌ನಲ್ಲಿ ಕುಳಿತು ಆಕಾಶದಿಂದ ಕೆಳಗೆ ನೋಡಿದಾಗ ಮಾವಿನಕೆರೆ, ನಮ್ಮ ಶಾಲೆ, ಸ್ಟೇಡಿಯಂ ಹಾಗೂ ಗಿಡಮರಗಳ ದೃಶ್ಯ ಕಣ್ತುಂಬಿಕೊಂಡದ್ದು ಬಹಳ ಖುಷಿಯಾಯಿತು. ಗಗನಯಾನ ಮಾಡಬೇಕೆಂಬ ನನ್ನ ಕನಸು ಹೆಲಿಕಾಪ್ಟರ್ ರೈಡ್ ಮೂಲಕ ಜಿಲ್ಲಾಡಳಿತ ನನಸು ಮಾಡಿದ್ದು ಮರೆಯಲಾರೆ.
ಲಕ್ಷ್ಮೀ, ಸ್ಟೇಷನ್ ಬಜಾರ್,
ಬಾಲ ಮಂದಿರ ವಸತಿ ನಿಲಯದ ವಿದ್ಯಾರ್ಥಿನಿ







