ರಾಯಚೂರು: ಹದಗೆಟ್ಟ ರಸ್ತೆಗೆ ಮರುಕಾಮಗಾರಿ; ಪ್ರಮುಖ ರಸ್ತೆಗಳ ಉಬ್ಬುಗಳಿಗೆ ಬಿಳಿ ಪಟ್ಟಿ ಅಳವಡಿಕೆ

ರಾಯಚೂರು: ಹದಗೆಟ್ಟ ರಸ್ತೆಗಳು ಹಾಗೂ ಹೆಚ್ಚುತ್ತಿರುವ ಅಪಘಾತಗಳ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿದ್ದು, ರಾಯಚೂರು ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಮರು ಕಾಮಗಾರಿ ಆರಂಭಗೊಂಡಿದೆ. ನಗರದ ಗಂಜ್ ರಸ್ತೆದಿಂದ ಬೈಪಾಸ್ ರಸ್ತೆ, ಆರ್‌ಟಿಒ ವೃತ್ತ, ಮಂತ್ರಾಲಯ ರಸ್ತೆ, ಲಿಂಗಸುಗೂರು ರಸ್ತೆ, ಗೋಶಾಲ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗುರುವಾರದಿಂದಲೇ ಹಂಪ್ಸ್‌ಗಳು ಸ್ಪಷ್ಟವಾಗಿ ಕಾಣುವಂತೆ ಬಿಳಿ ಹಾಗೂ ಕೆಂಪು ಬಣ್ಣದ ಪಟ್ಟಿಗಳನ್ನು ಅಳವಡಿಸಲಾಗಿದ್ದು, ರಸ್ತೆಯ ಮಧ್ಯೆ ಶೇಖರಣೆಗೊಂಡಿದ್ದ ಧೂಳನ್ನು ಸ್ವಚ್ಛಗೊಳಿಸಲಾಗಿದೆ. ಜೊತೆಗೆ ರಸ್ತೆ ಎರಡೂ ಬದಿಯಲ್ಲಿ ಬಿಳಿ ಪೈಂಟ್ ಬಳಿಯಲಾಗುತ್ತಿದ್ದು, ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಅಳವಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಕೆಲವೆಡೆ ಗುಂಡಿಗಳಿಗೆ ಡಾಂಬರು ಹಾಕುವ ಕಾಮಗಾರಿ ಭರದಿಂದ ಸಾಗುತ್ತಿದೆ.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಂಚಾರಿ ಠಾಣೆಯ ಪೊಲೀಸರು ನಿಯೋಜನೆಗೊಂಡು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ. ಇದರಿಂದ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಹಕಾರ ದೊರಕಿದ್ದು, ಸಾರ್ವಜನಿಕರಲ್ಲೂ ಸಮಾಧಾನ ಮೂಡಿಸಿದೆ.
ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ತಾಭಾರತಿ ಪತ್ರಿಕೆಯಲ್ಲಿ ಜ.27ರಂದು ‘ಜಿಲ್ಲೆಯಲ್ಲಿ ರಸ್ತೆಗಳ ಅವ್ಯವಸ್ಥೆ, ಜನರ ಜೀವಕ್ಕಿಲ್ಲ ಬೆಲೆ’ ‘5 ವರ್ಷದಲ್ಲಿ 3,419 ರಸ್ತೆ ಅಪಘಾತ, 1,558 ಜನರ ಸಾವು’ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿಯ ಪರಿಣಾಮವಾಗಿ ಲೋಕೋಪಯೋಗಿ ಇಲಾಖೆ ರಸ್ತೆ ಸುಧಾರಣಾ ಕಾಮಗಾರಿಗಳನ್ನು ಚುರುಕುಗೊಳಿಸಿದೆ.
ನಗರದ ಮಂತ್ರಾಲಯ ರಸ್ತೆ, ಬೈಪಾಸ್ ರಸ್ತೆ, ಮನ್ಸಲಾಪುರ ರಸ್ತೆ, ರಾಂಪೂರು ರಸ್ತೆ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಸೂಚನಾ ಫಲಕ ಅಳವಡಿಕೆ ಹಾಗೂ ಹಂಪ್ಸ್‌ಗಳಿಗೆ ಬಿಳಿ ಪಟ್ಟಿ ಹಾಕುವ ಕೆಲಸ ನಡೆಯುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕಾಮಗಾರಿಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
-ವೆಂಕಟೇಶ ಗಲಗ, ಕಾರ್ಯನಿರ್ವಾಹಕ ಇಂಜಿನಿಯರ್
ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದರೂ, ನೆರೆ ರಾಜ್ಯ ಹಾಗೂ ಅನ್ಯ ಜಿಲ್ಲೆಯಿಂದ ಬರುವ ಪ್ರಯಾಣಿಕರು ಮತ್ತು ವಾಹನ ಸವಾರರು ನಗರದ ರಸ್ತೆಗಳ ಅವ್ಯವಸ್ಥೆ ಕಂಡು ಹಿಯಾಳಿಸುತ್ತಿದ್ದರು. ವಿಶೇಷವಾಗಿ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿದ್ದವು. ಈ ಬಗ್ಗೆ ವಾರ್ತಾಭಾರತಿ ವರದಿ ಪ್ರಕಟಿಸಿದ ಬಳಿಕ ರಸ್ತೆ ಸುಧಾರಣೆ ಕಾಮಗಾರಿ ಆರಂಭವಾಗಿರುವುದು ಖುಷಿಯ ವಿಚಾರ.
-ಮೌನೇಶ, ಯರಮರಸ್ ಕ್ಯಾಂಪ್ ನಿವಾಸಿ







