ಬಿಸಿಲಿನ ತಾಪಕ್ಕೆ ಬೇಯುತ್ತಿರುವ ರಾಯಚೂರು

ರಾಯಚೂರು: ‘ಬಿಸಿಲೂರು’ ಎಂದೇ ಕರೆಯಲ್ಪಡುವ ರಾಯಚೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದೇ ಇರುವುದರಿಂದ ಜನರು ತೀವ್ರ ಬಿಸಿಲಿನ ತಾಪಕ್ಕೆ ಹೈರಾಣಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಗರಿಷ್ಠ ತಾಪಮಾನ 40ರಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಅರಣ್ಯ ಪ್ರದೇಶದ ಕೊರತೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ನಿರಾಸಕ್ತಿ, ಪರಿಸರ ಮಾಲಿನ್ಯ ಹಾಗೂ ಅರಣ್ಯ ಭೂಮಿ ಒತ್ತುವರಿಯೇ ಉಷ್ಣಾಂಶ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಕೇವಲ ಶೇ.4.6ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಸುಮಾರು 1 ಲಕ್ಷ ಎಕರೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ 2023ರಿಂದ 2025ರವರೆಗೆ ಅರಣ್ಯ ಪ್ರಮಾಣ ಕೇವಲ 2 ಶೇಕಡಾ ಮಟ್ಟದಲ್ಲಿ ಮಾತ್ರ ಹೆಚ್ಚಳ ಕಂಡಿದೆ ಎನ್ನಲಾಗಿದೆ. ಸರಕಾರ ಹಾಗೂ ಅರಣ್ಯ ಇಲಾಖೆ ಹಸಿರೀಕರಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಅವುಗಳ ಪರಿಣಾಮ ನೆಲಮಟ್ಟದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.
ಜಿಲ್ಲೆಯಲ್ಲಿ ‘ಗ್ರೀನ್ ರಾಯಚೂರು’, ‘ವನಸಿರಿ ಫೌಂಡೇಶನ್’, ‘ಇಫಾ ಫೌಂಡೇಶನ್’ ಸೇರಿ ಕೆಲವೇ ಸಂಘ-ಸಂಸ್ಥೆಗಳು ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದರೆ, ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ಸಸಿ ನೆಟ್ಟು ಫೋಟೋ ತೆಗೆಸಿಕೊಳ್ಳುವುದರಿಂದ ಮಾತ್ರ ಪರಿಸರ ಉಳಿಯುವುದಿಲ್ಲ. ನೆಟ್ಟ ಸಸಿಗಳನ್ನು ಮರಗಳಾಗಿ ಬೆಳೆಸುವ ಜವಾಬ್ದಾರಿ ಎಲ್ಲರದ್ದೂ ಆಗಬೇಕು. ಪರಿಸರ ಸಂರಕ್ಷಣೆ ಒಂದು ದಿನದ ಕಾರ್ಯಕ್ರಮವಾಗದೇ ನಿರಂತರ ಚಳವಳಿಯಾಗಬೇಕು’ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಡುತ್ತಾರೆ.
ಒಂದು ಕಡೆ ಅರಣ್ಯ ಪ್ರದೇಶ ವಿಸ್ತರಣೆ ಆಗದೇ ಇರುವುದು, ಇನ್ನೊಂದು ಕಡೆ ಅರಣ್ಯ ನಾಶ ಮತ್ತು ಮಾಲಿನ್ಯ ಹೆಚ್ಚುತ್ತಿರುವುದು ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.
ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯ
ಮರಗಳು ಕೇವಲ ನೆರಳು ನೀಡುವುದಲ್ಲ; ಇಂಗಾಲ ಹೀರಿಕೊಂಡು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತವೆ. ಹವಾಮಾನ ಬದಲಾವಣೆಯ ಪರಿಣಾಮ ಕಡಿಮೆ ಮಾಡುವಲ್ಲಿ ಅರಣ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ; ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ.ಜಿಲ್ಲೆ ಸೇರಿದಂತೆ ದೇಶದ ಹಲವೆಡೆ ತಾಪಮಾನ ಹೆಚ್ಚುತ್ತಿರುವುದು ಅಪಾಯದ ಸೂಚನೆ. ನಾವು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಏರ್ ಕೂಲರ್ ಮತ್ತು ಏರ್ ಕಂಡೀಷನರ್ ಬಳಸುತ್ತಿದ್ದೇವೆ. ಆದರೆ, ಇವು ಸುತ್ತಲಿನ ಪ್ರದೇಶದ ಉಷ್ಣಾಂಶವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಇನ್ನೂ 10 ವರ್ಷಗಳ ಕಾಲ ಪರಿಸರ ಸಂರಕ್ಷಣೆಯಲ್ಲಿ ಜನರು ನಿರ್ಲಕ್ಷ್ಯ ತೋರಿದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಬಹುದು. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕನಿಷ್ಠ 10 ಸಸಿಗಳನ್ನು ಬೆಳೆಸಬೇಕು. ಸೀತಾಫಲ, ಮಾವು, ಸಪೋಟ, ಪೇರಲ ಸೇರಿದಂತೆ ಹಣ್ಣುಗಳ ಬೀಜಗಳನ್ನು ಮಣ್ಣಿನಲ್ಲಿ ನೆಟ್ಟು ಸಸಿಗಳಾಗಿ ಬೆಳೆಸಬಹುದು. ಮನೆಯಲ್ಲಿ ಜಾಗದ ಕೊರತೆ ಇದ್ದರೆ ಶಾಲೆ, ಕಾಲೇಜು, ಮಂದಿರ, ಮಸೀದಿ, ಚರ್ಚ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು. ಪರಿಸರ ಸಂರಕ್ಷಣೆ ಯುದ್ಧೋಪಾದಿಯಲ್ಲಿ ನಡೆಯಬೇಕು. ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಎರಡು ಗಂಟೆ ಪರಿಸರ ಚಟುವಟಿಕೆಗಳಿಗೆ ಮೀಸಲಿಡಬೇಕು’’ ಎಂದು ‘ಗ್ರೀನ್ ರಾಯಚೂರು’ ಸಂಚಾಲಕ ರಾಜೇಂದ್ರ ಶಿವಾಳೆ ಹೇಳುತ್ತಾರೆ.
ರಸ್ತೆ ಬದಿಯಲ್ಲಿ ನಡೆತೋಪು ನಿರ್ಮಾಣ, ಕೃಷಿ ಅರಣ್ಯ ಪ್ರೋತ್ಸಾಹಧನ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ ಹಾಗೂ ಪ್ರೋತ್ಸಾಹಧನ ನೀಡುವ ಕಾರ್ಯ ನಡೆಯುತ್ತಿದೆ. ಆದರೆ, ಈ ವರ್ಷ ಯಾವುದೇ ಹೊಸ ಯೋಜನೆ ಜಾರಿಯಾಗಿಲ್ಲ
- ಸುರೇಶ ಬಾಬು ಎಸ್.,
ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಯಚೂರು
161 ಪ್ರಕರಣ ದಾಖಲು; 742 ಎಕರೆ ಅರಣ್ಯ ಭೂಮಿ ಒತ್ತುವರಿ
ಜಿಲ್ಲೆಯಲ್ಲಿ ಅಕ್ರಮ ಮರಕಡಿತ, ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ಒಟ್ಟು 161 ಪ್ರಕರಣಗಳು ದಾಖಲಾಗಿವೆ. ಸುಮಾರು 742 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿರುವುದು ದಾಖಲಾಗಿದೆ. ಅನೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿವೆ.






