ರಾಯಚೂರು: ಸ್ವಚ್ಛ ಭಾರತ ಮಿಷನ್ ಶೌಚಾಲಯಗಳ ಸ್ಥಿತಿಗತಿ ವರದಿ ನೀಡಲು ಜಿಪಂ ಸಿಇಒ ಸೂಚನೆ
ವಾರ್ತಾಭಾರತಿ ಫಲಶ್ರುತಿ

ರಾಯಚೂರು : ಸ್ವಚ್ಛ ಭಾರತ ಮಿಷನ್ ನಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದ ದೂರಿಗೆ ಸಂಬಂಧಿಸಿದಂತೆ ಶುಕ್ರವಾರ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಪಿಡಿಒಗಳ ಸಭೆ ಕರೆದು ಶೌಚಾಲಯಗಳ ಸ್ಥಿತಿಗತಿ, ಅವುಗಳ ಬಳಕೆ ಹಾಗೂ ನಿರುಪಯುಕ್ತವಾಗಿರುವ ಶೌಚಾಲಯಗಳ ಕುರಿತು ಸಮರ್ಪಕವಾಗಿ ಸಮೀಕ್ಷೆ ನಡೆಸಿ ನಿಖರ ಮಾಹಿತಿಯೊಂದಿಗೆ ಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸ್ವಚ್ಛ ಭಾರತ ಮಿಷನ್‌ನಲ್ಲಿ ನಡೆದ ಭ್ರಷ್ಟಾಚಾರದ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಸೆ.16ರಂದು ‘ಸ್ವಚ್ಛ ಭಾರತ ಮಿಷನ್‌ನಲ್ಲಿ ಭಾರಿ ಅವ್ಯವಹಾರ’ ಅಶ್ವಿನಿ ಕೊಲೆ ಪ್ರಕರಣದಿಂದ ಬಯಲಾದ ವಾಸ್ತವ; ವರದಿ ನೀಡಲು ಜಿ.ಪಂ. ಗೆ ಸೂಚನೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಬಳಿಕ ಜಿ.ಪಂ ಸಿಇಒ ಅವರು ಸಭಾಂಗಣದಲ್ಲಿ ಜಿಲ್ಲೆಯ ಪಿಡಿಒಗಳ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ಮಾಡಿ ಸ್ಥಳೀಯ ಮಟ್ಟದ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿರುವ ಶೌಚಾಲಯಗಳನ್ನು ಕುಟುಂಬಗಳು ಸಮರ್ಪಕವಾಗಿ ಬಳಕೆ ಮಾಡುತ್ತಿವೆಯೇ, ನಿರುಪಯುಕ್ತ ವಾಗಿವೆಯೇ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಬೇಕು. ಇತ್ತೀಚೆಗೆ ಮಾನವಿ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಶೌಚಾಲಯಗಳ ವಾಸ್ತವ ಸ್ಥಿತಿಗತಿ ಹಾಗೂ ಅವುಗಳ ಬಳಕೆಯ ಕುರಿತು ನಿಖರ ಮಾಹಿತಿ ಪಡೆಯುವುದು ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯ ಎಷ್ಟು ಗ್ರಾಮಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ, ಎಷ್ಟು ಕುಟುಂಬಗಳು ಅವುಗಳನ್ನು ಬಳಕೆ ಮಾಡುತ್ತಿವೆ, ನಿರ್ಮಾಣಗೊಂಡಿದ್ದರೂ ಬಳಕೆ ಮಾಡದಿರುವ ಶೌಚಾಲಯಗಳ ಸಂಖ್ಯೆ ಎಷ್ಟು, ಬಳಕೆ ಮಾಡದಿರುವುದಕ್ಕೆ ಕಾರಣವೇನು, ಶೌಚಾಲಯದ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಹಾಗೂ ಇನ್ನೂ ಶೌಚಾಲಯ ನಿರ್ಮಾಣವಾಗದ ಕುಟುಂಬಗಳಿವೆಯೇ ಎಂಬ ಕುರಿತು ಸಮೀಕ್ಷೆಯ ಮೂಲಕ ಮಾಹಿತಿ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಶೌಚಾಲಯಗಳ ವಾಸ್ತವ ಸ್ಥಿತಿ, ಶೌಚಾಲಯ ಬಳಕೆಯ ಪ್ರಮಾಣ ಹಾಗೂ ಶೌಚಾಲಯ ಬಳಕೆಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.ಶೌಚಾಲಯಗಳ ಸ್ಥಿತಿಗತಿ ಕುರಿತು ಸಮರ್ಪಕ ವಾಗಿ ಸಮೀಕ್ಷೆ ನಡೆಸಿ, ಎಲ್ಲ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸವ, ಯೋಜನಾಧಿಕಾರಿ ಟಿ. ರೋಟಿ, ಜಿಪಂ ಉಪ ಕಾರ್ಯದರ್ಶಿ ಹಾಲ್ ಸಿದ್ದಪ್ಪ ಪೂಜಾರಿ, ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ್ ಸೇರಿದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.






