ಮಳೆ ಕೊರತೆ: ಆಳಂದ ತಾಲೂಕಿನಲ್ಲಿ ಶೇ.43 ಬಿತ್ತನೆ

ಆಳಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಆಳಂದ ತಾಲೂಕಿನ ಕೃಷಿ ಚಟುವಟಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆಯಾದ ಬೆಳೆಗಳು ಜೀವಜಲಕ್ಕಾಗಿ ಕಾಯುವಂತಾಗಿದೆ. ಮಳೆ ಕೊರತೆಯಿಂದ ನಾಟಿ ಮಾಡಿದ ಹೊಲಗಳಲ್ಲಿ ಬೆಳೆ ನೆಲಕ್ಕಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ದಿನ ಕಳೆದಂತೆ ಭವಿಷ್ಯದ ಕುರಿತು ಆತಂಕದಲ್ಲಿದ್ದಾರೆ.
ಜೂ.1ರಿಂದ ಜು.13ರವರೆಗೆ ತಾಲೂಕಿನಾದ್ಯಂತ ನಿರೀಕ್ಷಿತ 218 ಮೀ.ಮೀ. ಮಳೆಯ ಪೈಕಿ ಕೇವಲ 192 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಹಲವು ಹೋಬಳಿಗಳಲ್ಲಿ ಮಳೆ ಕೊರತೆ ಗಂಭೀರವಾಗಿದೆ. ಪರಿಣಾಮವಾಗಿ ಮುಂಗಾರು ಬಿತ್ತನೆ ನಿರೀಕ್ಷಿತ ಮಟ್ಟ ತಲುಪದೆ ಶೇ.43 ಮಾತ್ರ ಪೂರ್ಣಗೊಂಡಿದೆ.
ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ, ಆಳಂದ ಹೋಬಳಿಯಲ್ಲಿ 149 ಮೀ.ಮೀ. ಮಳೆಯ ನಿರೀಕ್ಷೆಯಿದ್ದರೆ ಕೇವಲ 87 ಮೀ.ಮೀ. ಮಳೆಯಾಗಿ ಶೇ.42 ಕೊರತೆ ದಾಖಲಾಗಿದೆ. ಖಜೂರಿ ಹೋಬಳಿಯಲ್ಲಿ 150 ಮಿ.ಮೀ. ಪೈಕಿ 90 ಮಿ.ಮೀ. ಮಳೆಯಾಗಿ ಶೇ.40 ಕೊರತೆ ಕಂಡುಬಂದಿದೆ.
ಮಾದನಹಿಪ್ಪರಗಾ ಹೋಬಳಿಯಲ್ಲಿ 145 ಮೀ.ಮೀ. ಪೈಕಿ 131 ಮೀ.ಮೀ. ಮಳೆಯಾಗಿ ಪರಿಸ್ಥಿತಿ ತುಸು ಸಮಾಧಾನಕರವಾಗಿದ್ದರೂ, ನರೋಣಾ ವಲಯದಲ್ಲಿ 154 ಮಿ.ಮೀ. ನಿರೀಕ್ಷಿತ ಮಳೆಯ ಪೈಕಿ ಕೇವಲ 25 ಮೀ.ಮೀ. ಮಳೆಯಾಗಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ನಿಂಬರಗಾ ಹೋಬಳಿಯಲ್ಲಿ 150 ಮಿ.ಮೀ. ಪೈಕಿ 66 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.
ತಾಲೂಕಿನಲ್ಲಿ ಒಟ್ಟು 1,42,500 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ಸುಮಾರು 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಶೇ.43 ಪ್ರಗತಿಗೆ ಸಮವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಬಿತ್ತನೆಯಾಗಿರುವ ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಸೇರಿದಂತೆ ಮಳೆ ಆಶ್ರಿತ ಬೆಳೆಗಳಿಗೆ ತುರ್ತಾಗಿ ಉತ್ತಮ ಮಳೆಯ ಅಗತ್ಯವಿದೆ. ಇನ್ನೂ ಒಂದು ವಾರ ಮಳೆಯಾಗದಿದ್ದರೆ ಬೆಳೆಗಳು ಒಣಗಿ ರೈತರಿಗೆ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.
ಈಗಾಗಲೇ ಕೆಲವರ ಬೆಳೆಗೆ ಮಳೆ ತೇವಾಂಶ ಕೊರತೆಯಾಗಿ ಬಿತ್ತನೆಯಾದ ಬೆಳೆ ಸಾಗುಮಾಡಿದ್ದಾರೆ. ಅಲ್ಲದೆ, ನೀರಾವರಿ ಸೌಲಭ್ಯ ಹೊಂದಿರುವ ರೈತರು ಬೋರ್‌ವೆಲ್ ಹಾಗೂ ಬಾವಿಗಳ ನೀರನ್ನು ಬಳಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಮಳೆ ಆಶ್ರಿತ ಕೃಷಿಯನ್ನು ಅವಲಂಬಿಸಿರುವ ಬಹುತೇಕ ರೈತರು ಮಾತ್ರ ಆಕಾಶದತ್ತ ಚಿತ್ತ ಹರಿಸಿದ್ದಾರೆ.
ಮುಂಗಾರು ಹಂಗಾಮಿನ ಪರಿಸ್ಥಿತಿಯನ್ನು ಅವಲೋಕಿಸಿದ ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ವಿ., ರೈತರು ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮಳೆಯಾದ ತಕ್ಷಣ ಅಂತರ ಬೇಸಾಯ, ಕಳೆ ನಿಯಂತ್ರಣ ಸೇರಿದಂತೆ ಅಗತ್ಯ ಕೃಷಿ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಒಟ್ಟಾರೆ, ಆಳಂದ ತಾಲೂಕಿನಲ್ಲಿ ಮುಂಗಾರು ಕೈಕೊಟ್ಟಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬೆಳೆ ಹಾನಿಯೊಂದಿಗೆ ಕೃಷಿ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಎದುರಾಗಿದೆ.
ಮುಂಗಾರು ಆರಂಭವಾದಾಗಉತ್ತಮ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಈಗ ಮಳೆ ಕೈಕೊಟ್ಟಿರುವುದರಿಂದ ಬೆಳೆ ಒಣಗುವ ಹಂತಕ್ಕೆ ಬಂದಿದೆ. ಸರಕಾರ ತಕ್ಷಣ ಬರ ಘೋಷಿಸಿ ಬೆಳೆ ವಿಮೆ ಹಾಗೂ ಪರಿಹಾರ ಬಿಡುಗಡೆ ಮಾಡಿದರೆ ಮಾತ್ರ ರೈತರಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ.
-ಶ್ರೀಶೈಲ ಪಾಟೀಲ ರೈತ ಆಳಂದ
ತಾಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಕೆಲ ಭಾಗಗಳಲ್ಲಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರುತ್ತಿದೆ. ಕೃಷಿ ಇಲಾಖೆ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ರೈತರಿಗೆ ಬೆಳೆ ಸಂರಕ್ಷಣೆ ಕುರಿತು ಅಗತ್ಯ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾದರೆ ಹೆಚ್ಚಿನ ಬೆಳೆಗಳನ್ನು ಉಳಿಸಿಕೊಳ್ಳಬಹುದು. ಮಳೆ ಕೊರತೆ ಮುಂದುವರಿದರೆ ಸರಕಾರದ ಮಾರ್ಗಸೂಚಿಯಂತೆ ಬೆಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು.
-ತಿಪ್ಪೇಸ್ವಾಮಿ.ವಿ, ಸಹಾಯಕ ಕೃಷಿ ನಿರ್ದೇಶಕರು, ಆಳಂದ
ಆಳಂದ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗೆ ಮಾಡಿದ ವೆಚ್ಚವೂ ಮರಳಿ ಬಾರದ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ತಕ್ಷಣ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಹಿಂದಿನ ವರ್ಷದ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡಬೇಕು. ಈಗಿನ ಪರಿಹಾರವೂ ನೀಡಲು ಕ್ರಮಕೈಗೊಳ್ಳಬೇಕು. ಕ್ಷೇತ್ರದಲ್ಲಿನ ಸಾವಿರಾರು ಎಕರೆ ಬೆಳೆ ಒಣಗಿ ರೈತರಿಗೆ ಅಪಾರ ನಷ್ಟವಾಗಲಿದೆ. ಸರಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡದೆ ಕೂಡಲೇ ಮುಖ್ಯಮಂತ್ರಿಗಳು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
-ಮಹೇಶ್ವರಿ ಎಸ್.ವಾಲಿ, ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆ






