ಮಳೆ ಅನಾಹುತ: ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ

ಕಾಳಗಿ : ಕಳೆದ ಬಾರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ರಾಮನಗರದ ಅನೇಕ ಮನೆಗಳಿಗೆ ನೀರು ನುಗ್ಗಿ ಭಾರಿ ಹಾನಿಯುಂಟಾಗಿದ್ದು, ಮನೆಯಲ್ಲಿನ ದವಸ - ಧಾನ್ಯ, ಇತರೆ ಸಾಮಾಗ್ರಿಗಳು ನಷ್ಟಕ್ಕೀಡಾಗಿದ್ದವು. ಈ ವೇಳೆ ಅಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ನಾಲ್ಕು ತಿಂಗಳಾದರೂ ಸಂತ್ರಸ್ತರಿಗೆ ಪರಿಹಾರ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮಳೆ ನೀರು ಮನೆಗಳೊಳಗೆ ನುಗ್ಗಿ, ವಸ್ತುಗಳು, ದಾಖಲೆಗಳು ಸಂಪೂರ್ಣ ಹಾನಿಯಾಗಿದ್ದು, ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿದ್ದವು. ಮಳೆ ಸಂದರ್ಭದಲ್ಲೇ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲನೆ ಹೆಸರಿನಲ್ಲಿ ಫೋಟೋ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದರು. ಆದರೆ, ಪರಿಹಾರ ವಿತರಣೆ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಬಡಾವಣೆ ನಿವಾಸಿ ತಾಯಮ್ಮ ಒಡೆಯರಾಜ ಆರೋಪಿಸಿದ್ದಾರೆ.
ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ಘೋಷಣೆ ಕಾಗದಕ್ಕೆ ಸೀಮಿತವಾಗಿದೆ. ಸುಮಾರು ನಾಲ್ಕು ತಿಂಗಳು ಕಳೆದರೂ ಸಹ, ಸಂತ್ರಸ್ತರ ಕುಟುಂಬಗಳ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ, ಪರಿಹಾರ ಹಣಕ್ಕಾಗಿ ತಹಸೀಲ್ ಕಛೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕಳೆದ ತಿಂಗಳು ಪ್ರಗತಿ ಪರಿಶೀಲನೆ ಸಭೆಯಲ್ಲಿ ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ ಅವರು ಮಳೆಯಿಂದ ಹಾನಿಗೊಳಗಾದ ಎಲ್ಲಾ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ ಎಂದು ಮಾಹಿತಿ ಕೊಟ್ಟಿದ್ದರು. ಆದರೆ ರಾಮನಗರ ವಾರ್ಡ್‌ನ ಯಾವೊಬ್ಬ ಸಂತ್ರಸ್ತರಿಗೂ ಈವರೆಗೆ ಪರಿಹಾರ ಬಂದಿಲ್ಲ. ಇದರ ಕುರಿತು ತಹಶೀಲ್ದಾರ್ ಅವರಿಗೆ ಕೇಳಿದರೆ, ಸ್ಥಳ ಪರಿಶೀಲನೆ ದಾಖಲೆಗಳು ಸಿಗುತ್ತಿಲ್ಲ. ಎರಡು ಮೂರು ದಿನಗಳಲ್ಲಿ ಸರಿಪಡಿಸಿ ಪರಿಹಾರ ಒದಗಿಸುವ ಭರವಸೆ ಕೊಟ್ಟಿದ್ದಾರೆ. ಭರವಸೆಯಂತೆಯೇ ತಹಶೀಲ್ದಾರ್ ಅವರು ಈವರೆಗೆ ಪರಿಹಾರದ ಹಣ ಖಾತೆಗೆ ಹಾಕಾದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನಿವಾಸಿ ಶಾಂತಬಾಯಿ ಭೀಮಯ್ಯ ಒಡೆಯರಾಜ ಆಕ್ರೋಶ ವ್ಯಕ್ತಪಡಿಸಿದರು.
ಕಾಳಗಿ ಪಟ್ಟಣದ ರಾಮ ನಗರದಲ್ಲಿ ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಕೊಡುವುದು ಬಾಕಿ ಇದೆ. ವರದಿ ತರಿಸಿಕೊಂಡು ಎರಡು ಮೂರು ದಿನಗಳಲ್ಲಿ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು.
<ಪೃಥ್ವಿರಾಜ್ ಪಾಟೀಲ ತಹಸೀಲ್ದಾರ್, ಕಾಳಗಿ
‘‘ಮನೆ ಹಾನಿಯಾಗಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಅಧಿಕಾರಿಗಳು ಬಂದು ಭರವಸೆ ನೀಡಿ ಹೋದರೇ ಹೊರತು, ಇದುವರೆಗೂ ಒಂದು ರೂಪಾಯಿಯೂ ನಮಗೆ ಪರಿಹಾರ ಸಿಕ್ಕಿಲ್ಲ’’
<ಭೀಮಬಾಯಿ ಶೆಟ್ಟೆಪ್ಪ, ರಾಮನಗರ ನಿವಾಸಿ







