ಮಳೆ ಕೊರತೆ: ಮಡಕೆ ಮೂಲಕ ನೀರುಣಿಸುತ್ತಿರುವ ರೈತರು

ಯಾದಗಿರಿ: ಆಕಾಶ ನೋಡುತ್ತಾ ಕಾದಿರುವ ರೈತನ ಕಣ್ಣಲ್ಲಿ ಈಗ ಆತಂಕ ಸೃಷ್ಟಿಯಾಗಿದ್ದು, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಗುರುಮಠಕಲ್ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಮಡಿಕೆಗಳ ಮೂಲಕ ನೀರುಣಿಸುವ ಅನಿವಾರ್ಯ ಸ್ಥಿತಿ ಎದುರಾಗಿದೆ.
ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆ ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿವೆ. ಹೊಲದಲ್ಲಿರುವ ಬೆಳೆಗಳು ಸಂಪೂರ್ಣ ಒಣಗದಂತೆ ರೈತರು ಮಡಿಕೆಗಳಲ್ಲಿ ನೀರು ತಂದು ಒಂದೊಂದೇ ಗಿಡಕ್ಕೆ ನೀರುಣಿಸುತ್ತಿದ್ದಾರೆ. ಮಳೆಯ ಅಭಾವದಿಂದ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ.
ಬೀಜ, ರಸಗೊಬ್ಬರ, ಉಳುಮೆ ಹಾಗೂ ಬಿತ್ತನೆಗಾಗಿ ಸಾಲ ಮಾಡಿ ಕೃಷಿ ಕಾರ್ಯ ಕೈಗೊಂಡಿರುವ ರೈತರು ಈಗ ಬೆಳೆ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಈ ಬಾರಿಯೂ ಪ್ರಕೃತಿ ಸಂಕಷ್ಟ ತಂದೊಡ್ಡಿದೆ.
ಮಳೆಯ ನಿರೀಕ್ಷೆಯಲ್ಲಿರುವ ರೈತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಕಪ್ಪೆ ಮದುವೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಮಳೆಯಾಗದಿದ್ದರೆ ಬೆಳೆ ಹಾನಿಯಾಗುವ ಸಾಧ್ಯತೆ ಇದ್ದು, ಸರಕಾರ ಬೆಳೆ ಪರಿಸ್ಥಿತಿ ಪರಿಶೀಲಿಸಿ ಅಗತ್ಯ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಮಡಿಕೆ ಮೂಲಕ ನೀರು ಹಾಕುವಂತಹ ದುಸ್ಥಿತಿ ರೈತರಿಗೆ ಬಂದಿದೆ. ಸರಕಾರ ತಕ್ಷಣ ಬರ ಘೋಷಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು.
-ಅಂಜಪ್ಪ ತಾತಾಳಗೇರಾ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸೇನೆ ಗುರುಮಠಕಲ್ ತಾಲೂಕು
ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಮಳೆ ಬಾರದ ಕಾರಣ ಬೆಳೆಗಳು ಒಣಗಿ ಹೋಗುತ್ತಿವೆ. ಸರಕಾರ ಕೂಡಲೇ ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು. ಇಲ್ಲವಾದರೆ ಸಾಲ ತೀರಿಸಲು ಬೆಂಗಳೂರು, ಮುಂಬೈ, ಪುಣೆ ಸೇರಿದಂತೆ ಹೊರರಾಜ್ಯಗಳಿಗೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.
-ಈಶಪ್ಪ ರೈತ ರಾಮಸಮುದ್ರ ರೈತ
ಸರಕಾರ ರೈತರ ಸಾಲವನ್ನು ಕೂಡಲೇ ಮನ್ನಾ ಮಾಡಬೇಕು. ಸರಕಾರ ಸಮಯಕ್ಕೆ ಸರಿಯಾಗಿ ನೆರವು ನೀಡಿದರೆ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಬಹುದು. ಜೊತೆಗೆ ರೈತರಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆಯನ್ನು ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ. ಸರಕಾರ ರೈತರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಕಾಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ರಾಚಣ್ಣ ಗೌಡ ಮುದ್ನಾಳ ಬಿಜೆಪಿ ಮುಖಂಡ






