ಕೈಕೊಟ್ಟ ಮಳೆ; ಬೆಳೆ ಉಳಿಸಿಕೊಳ್ಳಲು ರೈತರ ಹೆಣಗಾಟ

ಯಾದಗಿರಿ: ಪೂರ್ವ ಮುಂಗಾರು ಮಳೆಯನ್ನು ನಂಬಿ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕೈಗೊಂಡ ಜಿಲ್ಲೆಯ ರೈತರು ಇದೀಗ ಮಳೆಯ ನಿರೀಕ್ಷೆಯಲ್ಲಿ ಮುಗಿಲಿನತ್ತ ಕಣ್ಣಿಟ್ಟಿದ್ದಾರೆ.
ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯಿಂದ ಉತ್ಸಾಹಗೊಂಡ ರೈತರು ಬಿತ್ತನೆ ನಡೆಸಿದರೂ, ಕಳೆದ ಕೆಲ ದಿನಗಳಿಂದ ಮಳೆ ಕೈಕೊಟ್ಟಿರುವುದರಿಂದ ಸಸಿಯೊಡೆದ ಹತ್ತಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.
2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,01,869.88 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಜೂನ್ 10ರ ವೇಳೆಗೆ 69,932 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದ್ದು, ಒಟ್ಟಾರೆ ಶೇ.17.40ರಷ್ಟು ಪ್ರಗತಿ ದಾಖಲಾಗಿದೆ.
ತಾಲೂಕುವಾರು ಅಂಕಿ-ಅಂಶಗಳ ಪ್ರಕಾರ, 64,226 ಹೆಕ್ಟೇರ್ ಗುರಿ ಹೊಂದಿರುವ ಹುಣಸಗಿ ತಾಲೂಕಿನಲ್ಲಿ 20,078 ಹೆಕ್ಟೇರ್ ಪ್ರದೇಶದಲ್ಲಿ ಶೇ.31.26ರಷ್ಟು ಬಿತ್ತನೆ ನಡೆದಿದ್ದು, 90,967 ಹೆಕ್ಟೇರ್ ಗುರಿಯ ಶೋರಾಪುರ ತಾಲೂಕಿನಲ್ಲಿ 25,803 ಹೆಕ್ಟೇರ್ ಪ್ರದೇಶದಲ್ಲಿ ಶೇ. 28.37ರಷ್ಟು ಬಿತ್ತನೆ ಪೂರ್ಣಗೊಂಡಿದೆ. ವಡಗೇರಾ ತಾಲೂಕಿನಲ್ಲಿ 54,303.93 ಹೆಕ್ಟೇರ್ ಗುರಿಯ ಪೈಕಿ 10,351 ಹೆಕ್ಟೇರ್ ಪ್ರದೇಶದಲ್ಲಿ ಶೇ.19.06ರಷ್ಟು ಹಾಗೂ ಶಹಾಪುರ ತಾಲೂಕಿನಲ್ಲಿ 73,329.95 ಹೆಕ್ಟೇರ್ ಪ್ರದೇಶದ ಪೈಕಿ 12,216 ಹೆಕ್ಟೇರ್ನಲ್ಲಿ ಶೇ.16.66ರಷ್ಟು ಬಿತ್ತನೆ ನಡೆದಿದೆ.
ಆದರೆ, ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳಲ್ಲಿ ಬಿತ್ತನೆ ಪ್ರಗತಿ ತೀವ್ರ ಕುಂಠಿತಗೊಂಡಿದೆ. 68,140 ಹೆಕ್ಟೇರ್ ಗುರಿ ಹೊಂದಿರುವ ಯಾದಗಿರಿ ತಾಲೂಕಿನಲ್ಲಿ ಕೇವಲ 738 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.1.08ರಷ್ಟು ಪ್ರಗತಿ ದಾಖಲಾಗಿದೆ. 50,903 ಹೆಕ್ಟೇರ್ ಪ್ರದೇಶ ಗುರಿ ಹೊಂದಿರುವ ಗುರು ಮಠಕಲ್ ತಾಲೂಕಿನಲ್ಲಿ 746 ಹೆಕ್ಟೇರ್ ಪ್ರದೇಶದಲ್ಲಿ ಶೇ.1.47ರಷ್ಟು ಬಿತ್ತನೆ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ ನೀರಾವರಿ ಪ್ರದೇಶದ 30,017 ಹೆಕ್ಟೇರ್ ಹಾಗೂ ಮಳೆ ಆಶ್ರಿತ ಪ್ರದೇಶದ 39,915 ಹೆಕ್ಟೇರ್ ಸೇರಿ ಒಟ್ಟು 69,932 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಬಿತ್ತನೆಯಾಗುವ ಪ್ರಮಾಣ ಪ್ರಮಾಣ ಹೆಚ್ಚಲಿದೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಇದೇಪರಿಸ್ಥಿತಿ ಕಂಡುಬರುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಮೊಳಕೆಯೊಡೆದ ಬೆಳೆಗಳು ಸಂಪೂರ್ಣವಾಗಿ ಬಾಡುವ ಸಾಧ್ಯತೆ ಇದ್ದು, ಬಿತ್ತನೆಗೆ ಹಾಕಿದ ಶ್ರಮ ಮತ್ತು ಸಾವಿರಾರು ರೂಪಾಯಿ ವೆಚ್ಚ ನೀರು ಪಾಲಾಗುವ ಭೀತಿ ಎದುರಾಗಿದೆ. ಹೀಗಾಗಿ, ಬೆಳೆಗಳ ಉಳಿವಿಗಾಗಿ ಅನ್ನದಾತರು ಮುಗಿಲಿನತ್ತ ಕಣ್ಣಿಟ್ಟು, ಪ್ರಕೃತಿಯ ಕೃಪೆಗೆ ಎದುರು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಹೀಗಾಗಿ ರೈತರು ಹಸಿ ನೋಡಿಕೊಂಡು ಬಿತ್ತನೆ ಕೈಗೊಳ್ಳಬೇಕು. ದುಬಾರಿ ಬೀಜಗಳನ್ನು ಖರೀದಿಸಿ ಒಣ ಭೂಮಿಯಲ್ಲಿ ಬಿತ್ತನೆ ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹಸಿ (ತೇವಾಂಶ) ನೋಡಿ ಬಿತ್ತನೆ ಮಾಡುವಂತೆ ರೈತರಿಗೆ ಕಳಕಳಿಯ ಮನವಿ ಮಾಡುತ್ತೇನೆ.
-ರತೇಂದ್ರನಾಥ ಸೂಗೂರ
ಕೃಷಿ ಇಲಾಖೆ ಜಂಟಿ ನಿರ್ದೇಶಕ
ಆರಂಭದಲ್ಲಿ ಸುರಿದ ಮಳೆಯನ್ನು ನಂಬಿ ಹತ್ತಿ ಹಾಗೂ ಹೆಸರು ಬಿತ್ತನೆ ಮಾಡಿದ್ದೇವೆ. ಆದರೆ ಈಗ ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿವೆ. ಇನ್ನೆರಡು-ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುವ ಸಾಧ್ಯತೆ ಇದೆ.
-ಅಮೀನಸಾಬ್
ನಂದಿಹಳ್ಳಿ(ಜೆ) ರೈತ






