ಸರಕಾರಿ ಶಾಲೆ ಉಳಿಸುವ ರಮ್ಯಾ ಜಗತ್ ಮಾದರಿ

‘‘ಸರಕಾರವನ್ನು ಎಚ್ಚರಿಸುವಂತೆ ತಂದೆತಾಯಿಗಳಲ್ಲಿ ಮೂಲಭೂತ ಬದಲಾವಣೆಗಳು ಆಗಬೇಕು. ಸರಕಾರಿ ಶಾಲೆಯಲ್ಲಿ ಮಕ್ಕಳು ಹೆಚ್ಚಾದಂತೆ, ಆಯಾ ಮಕ್ಕಳ ತಂದೆತಾಯಿಗಳು ತಮ್ಮ ಮಕ್ಕಳ ಸೌಲಭ್ಯಗಳಿಗಾಗಿ ಸರಕಾರದ ಎದುರು ಬೇಡಿಕೆ ಇಡುತ್ತಾರೆ. ಹೀಗೆ ಪೋಷಕರಿಂದ ಒತ್ತಡ ಬಂದರೆ ಸರಕಾರವೂ ಸ್ಪಂದಿಸತೊಡಗುತ್ತದೆ. ನಾಲ್ಕು ಮಕ್ಕಳಿದ್ದರೆ ಶಾಲೆ ಮುಚ್ಚುತ್ತಾರೆ, ಆ ಮಕ್ಕಳು ನಲವತ್ತಾದರೆ ತೆರೆದ ಶಾಲೆ ಮುಚ್ಚುವುದಿಲ್ಲ. ಕಾರಣ ಈ ನಲವತ್ತು ಮಕ್ಕಳ ತಂದೆ ತಾಯಿಯರು ಶಾಲೆ ಮುಚ್ಚುವ ಸರಕಾರದ ಎದುರು ನಿಲ್ಲುತ್ತಾರೆ’’ ಎನ್ನುತ್ತಾರೆ ರಮ್ಯಾ ಜಗತ್.
ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಜಗತ್ ಎನ್ನುವವರ ಒಂದು ವೀಡಿಯೋ ವೈರಲ್ ಆಯಿತು. ಈ ವೀಡಿಯೋ ಮೈಸೂರು ತಾಲೂಕಿನ ಧನಗಳ್ಳಿ ಗ್ರಾಮಪಂಚಾಯತ್‌ನ ಕೋಟೆಹುಂಡಿ ಗ್ರಾಮದ ಸರಕಾರಿ ಶಾಲೆಗೆ ಸಂಬಂಧಿಸಿದ್ದು. ರಮ್ಯಾ ಜಗತ್ ಎನ್ನುವ ಇಂಜಿನಿಯರ್, ಯೂಟ್ಯೂಬರ್ ಇಲ್ಲಿನ ಸರಕಾರಿ ಶಾಲೆಯನ್ನು ಇದೇ 2026ರ ಎಪ್ರಿಲ್‌ನಲ್ಲಿ ದತ್ತು ಪಡೆದು ಐದು ತಿಂಗಳಲ್ಲಿ ಮೂಲ ಶಾಲೆ ಗುರುತು ಸಿಗದಂತೆ ಬದಲಾಯಿಸಿದ್ದಾರೆ. ಇದಕ್ಕಾಗಿ ರಮ್ಯಾ ಅವರು ಈ ತನಕ 31 ಲಕ್ಷ ರೂ. ಗಳನ್ನು ಖರ್ಚು ಮಾಡಿದ್ದಾರೆ. ಇದೇ ಶಾಲೆಯಲ್ಲಿ ಹೈಸ್ಕೂಲ್ ಪ್ರಾರಂಭಿಸುವ ಚರ್ಚೆಯಲ್ಲಿ ಕೆಲವರ ಭಿನ್ನಮತದಿಂದ ರಮ್ಯಾ ಶಾಲೆಯಿಂದ ಹೊರ ನಡೆದರು. ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೆ ಅಪಾರ ಬೆಂಬಲ ಸಿಕ್ಕಿತು. ಶಿಕ್ಷಣ ಮಂತ್ರಿಗಳನ್ನು ಒಳಗೊಂಡಂತೆ ಕ್ಷೇತ್ರದ ಎಂ.ಪಿ., ಎಂ.ಎಲ್.ಎ., ಅಧಿಕಾರಿಗಳೂ ಬೆಂಬಲಿಸಿದರು. ನಂತರ ಊರಿನ ಹಿರಿಯರು ರಮ್ಯಾ ಅವರ ಮನವೊಲಿಸಿ ಮನಸ್ತಾಪವನ್ನು ಬಗೆಹರಿಸಿದ್ದಾರೆ. ಇದೀಗ ರಮ್ಯಾ ಮತ್ತೆ ಶಾಲೆಯ ಕೆಲಸಗಳಲ್ಲಿ ತೊಡಗಿದ್ದಾರೆ.
ಅಸಲಿಗೆ ಏನಿದು ಪ್ರಕರಣ? ರಮ್ಯಾ ಏಕೆ ಸರಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು 31 ಲಕ್ಷದಷ್ಟು ಹಣ ವ್ಯಯಿಸಿದರು? ಇದರ ಹಿಂದಿನ ವಾಸ್ತವ ಅರಿಯಲು ಸ್ವತಃ ರಮ್ಯಾ ಅವರೊಂದಿಗೆ ಚರ್ಚಿಸಿದೆ. ರಮ್ಯಾ ಅವರು ತಮ್ಮ ಕನಸು ಕಾಣ್ಕೆಯನ್ನು ಮುಕ್ತವಾಗಿ ಹಂಚಿಕೊಂಡರು. ಈ ಮಾತುಗಳನ್ನು ಕೇಳಿದಾಗ ರಮ್ಯಾ ಅವರು ಕರ್ನಾಟಕದಲ್ಲಿ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಒಂದು ಹೊಸ ಮಾದರಿಯನ್ನು ಪರಿಚಯಿಸಿದ್ದಾರೆ.
ರಮ್ಯಾ ಅವರಿಗೆ ಬಾಲ್ಯದಿಂದಲೂ ಒಂದು ಕನಸಿತ್ತು. ಗ್ರಾಮೀಣ ಭಾಗದಲ್ಲಿ ಒಂದು ಹೈಟೆಕ್ ಶಾಲೆಯನ್ನು ಕಟ್ಟಬೇಕು. ಅಲ್ಲಿ ಎಲ್ಲಾ ಮಕ್ಕಳು ಸಮಾನವಾಗಿರಬೇಕು. ಈ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಸಿಗಬೇಕು. ವಿವಿಧ ಜಾತಿ, ಧರ್ಮದ ಬಡ ಮಕ್ಕಳು ಈ ಶಾಲೆಯಲ್ಲಿ ಖುಷಿಯಿಂದ ಕಲಿಯಬೇಕು ಎನ್ನುವುದಾಗಿತ್ತು. ಈ ಕನಸು ಶಾಲೆಕಟ್ಟಿ ದುಡ್ಡು ಮಾಡುವ ರೀತಿಯದಲ್ಲ. ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗರಿಷ್ಠ ಗುಣಮಟ್ಟದ ಸಮಾನ ಶಿಕ್ಷಣವನ್ನು ಕೊಡಿಸುವುದಾಗಿತ್ತು. ಈ ಕನಸು ಈಡೇರಲು ಪ್ರತ್ಯೇಕ ಶಾಲೆ ಕಟ್ಟುವಷ್ಟು ಸಾಮರ್ಥ್ಯ ಇಲ್ಲದ ಕಾರಣ, ಅದು ಕನಸಿಗಿಂತ ದುಬಾರಿ ಎಂದುಕೊಂಡಾಗ ತಕ್ಷಣಕ್ಕೆ ಹೊಳೆದದ್ದು ಈಗಾಗಲೇ ಇರುವ ಸರಕಾರಿ ಶಾಲೆಯೊಂದನ್ನು ದತ್ತು ಪಡೆಯುವ ಯೋಚನೆ. ಹೀಗೆ ರಮ್ಯಾ ಶಾಲೆಯೊಂದನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಮುಖ್ಯವಾಗಿ ಇಷ್ಟವಿಲ್ಲದೆ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ತನ್ನ ಮಗನನ್ನೂ ಇದೇ ಶಾಲೆಯಲ್ಲಿ ಸೇರಿಸಿ ಮೊದಲಿಗೆ ತಾನೇ ಮಾದರಿಯಾಗಬೇಕು ಎಂದುಕೊಳ್ಳುತ್ತಾರೆ. ಹೀಗಾಗಿ ತನ್ನ ಮನೆ ಮತ್ತು ಕಚೆೇರಿಗೆ ಸಮೀಪ ಇರುವಂತಹ ಸರಕಾರಿ ಶಾಲೆಗಳ ಹುಡುಕಾಟ ಆರಂಭಿಸುತ್ತಾರೆ. ಒಂದಷ್ಟು ಶಾಲೆಗಳ ಪಟ್ಟಿ ಹಿಡಿದು ಈ ಕ್ಷೇತ್ರದ ಬಿಇಒ ಪ್ರಕಾಶ್ ಅವರನ್ನು ಸಂಪರ್ಕಿಸುತ್ತಾರೆ. ‘‘ಒಳ್ಳೆಯ ಕೆಲಸ ತಡ ಆಗೋದು ಬೇಡ ಬನ್ನಿ’’ ಎಂದು ಅವರು ಪ್ರೋತ್ಸಾಹಿಸುತ್ತಾರೆ. ಕೂಲಂಕಶವಾಗಿ ಪರಿಶೀಲಿಸಿದ ನಂತರ ಸರಕಾರದ ನಿಯಮಾನುಸಾರ ಕೋಟೆಹುಂಡಿ ಶಾಲೆಯನ್ನು 2026ರ ಎಪ್ರಿಲ್ ಕೊನೆ ವಾರದಲ್ಲಿ ದತ್ತು ಪಡೆದುಕೊಳ್ಳುತ್ತಾರೆ.
ರಮ್ಯಾ ಇಂಜಿನಿಯರ್ ಪದವೀಧರೆ. ಬದುಕಿಗಾಗಿ ಹಲವು ತೆರನಾದ ಸಣ್ಣ ಸಣ್ಣ ಬ್ಯುಝಿನೆಸ್ ಮಾಡಿಕೊಂಡಿದ್ದಾರೆ. ಅವರ ಯೂಟ್ಯೂಬ್ ಕೂಡ ಆದಾಯದ ಮೂಲವಾಗಿದೆ. ಹೀಗೆ ಹಲವು ಮೂಲಗಳಿಂದ ಒಂದು ನಿರ್ದಿಷ್ಟ ಆದಾಯವಿದ್ದು, ಮನೆಯ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿ ಉಳಿದ ಹಣವನ್ನು ಸರಕಾರಿ ಶಾಲೆಯ ಅಭಿವೃದ್ಧಿಗೆ ಬಳಸುವುದಾಗಿ ನಿರ್ಧರಿಸುತ್ತಾರೆ. ಮೊದಲಿಗೆ ಪೋಷಕರು ಯಾಕೆ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ, ತಂದೆ ತಾಯಿಯರನ್ನು ಆಕರ್ಷಿಸುವ ಸಂಗತಿಗಳಾವುವು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಶಾಲೆಯ ಭೌತಿಕ ಪರಿಸರವನ್ನು ಬದಲಾಯಿಸಲು ತೊಡಗುತ್ತಾರೆ.
ಆರಂಭಕ್ಕೆ ಚಳಿ, ಮಳೆ, ಬಿಸಿಲು ಅಡ್ಡಿಯಾಗದಂತೆ ಎಲ್ಲಾ ಮಕ್ಕಳು ಒಂದು ಸೂರಿನಡಿ ಸೇರಲು 90 ಅಡಿ ಉದ್ದದ ಸಭಾಂಗಣ ಸಿದ್ಧಗೊಳ್ಳುತ್ತದೆ. ಶಾಲಾ ಕಚೇರಿ ನವೀಕರಣವಾಗುತ್ತದೆ. ತೆರೆದ ಗ್ರಂಥಾಲಯ ತಲೆಯೆತ್ತುತ್ತದೆ. ಒಂದು ಇಂಗ್ಲಿಷ್ ಒಳಗೊಂಡಂತೆ ನಾಲ್ಕು ಕನ್ನಡ ಪತ್ರಿಕೆಗಳು ಗ್ರಂಥಾಲಯಕ್ಕೆ ಬರುತ್ತವೆ. ಪೋಷಕರ ಆಕರ್ಷಣೆಗಾಗಿ ಶಾಲಾ ಪರಿಸರ ಗ್ರೀನರಿಯಾಗುತ್ತದೆ. ಬೇಸಾಯದ ಪಾಠಕ್ಕಾಗಿ ಕಾಂಪೌಂಡಿನ ಒಳಗೆ ಒಂದಷ್ಟು ನೆಲ ಹದಗೊಳ್ಳುತ್ತದೆ. ಮಕ್ಕಳೇ ಸೊಪ್ಪು ಬೆಳೆಯತೊಡಗುತ್ತಾರೆ. ಇದನ್ನು ಕಟಾವು ಮಾಡಿ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೂ, ಶಿಕ್ಷಕಿಯರಿಗೂ ಮಾರಾಟ ಮಾಡಿ, ಉಳಿತಾಯ ಮಾಡುತ್ತಾರೆ. ಸ್ವಚ್ಛ, ಸುವ್ಯವಸ್ಥಿತ ಶೌಚಾಲಯ, ಸುಣ್ಣ ಬಣ್ಣದ ನವೀಕರಣ, ಪೋಷಕರನ್ನು ಆಕರ್ಷಿಸಲು ಫೌಂಟೇನ್, ಶಾಲೆಯ ಹೆಸರಿನ ಒಳ್ಳೆಯ ಬೋರ್ಡು, ಇದನ್ನು ಆಕರ್ಷಕಗೊಳಿಸಲು ಅದಕ್ಕೊಂದು ಗೋಪುರ ಹೀಗೆ ಭೌತಿಕವಾಗಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇರದಂತೆ ಹೈಟೆಕ್ ಶಾಲೆಯಂತೆ ಕಾಣತೊಡಗುತ್ತದೆ.
ಇದೀಗ ಭೌತಿಕ ಸೌಂದರ್ಯ ಮಾತ್ರವಲ್ಲದೆ ಶಾಲೆಯನ್ನು ಒಳಗಿನಿಂದಲೂ ಸದೃಢ ಮಾಡಬೇಕಿತ್ತು. ಅದಕ್ಕಾಗಿ ರಮ್ಯಾ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಯೂನಿಫಾರಂ ಒದಗಿಸುವವರನ್ನು ಸಂಪರ್ಕಿಸಿ ಅದೇ ಗುಣಮಟ್ಟದ ಬ್ಲೆಸರ್ ಒಳಗೊಂಡಂತೆ ಸಮವಸ್ತ್ರವನ್ನು ಮಕ್ಕಳಿಗೆ ಒದಗಿಸುತ್ತಾರೆ. ಎಲ್ಲರಿಗೂ ಒಂದೇ ತೆರನಾದ ತಟ್ಟೆ, ಲೋಟ ಬಂದವು. ಒಂದೇ ಗುಣಮಟ್ಟದ ಸ್ಕೂಲ್ ಬ್ಯಾಗ್, ಎಲ್ಲರಿಗೂ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಿಂಟ್ ಮಾಡಿದ ಸ್ಟೀಲ್ ವಾಟರ್ ಬಾಟಲ್, ಡಿಜಿಟಲ್ ಬೋರ್ಡ್, ಸೌಂಡ್ ಸಿಸ್ಟಮ್, ಪ್ರೊಜೆಕ್ಟರ್, ಮ್ಯೂಸಿಕ್ ಬ್ಯಾಂಡ್ ಸೆಟ್ ಹೀಗೆ ಎಲ್ಲಾ ವಿಧದಲ್ಲೂ ಖಾಸಗಿ ಶಾಲೆಯನ್ನು ಮೀರಿಸುವಂತೆ ಕೋಟೆಹುಂಡಿ ಶಾಲೆ ಸಿದ್ಧಗೊಳ್ಳುತ್ತದೆ. ಅಕಾಡಮಿಕ್ ಆಗಿ ಮಕ್ಕಳನ್ನು ಚೆನ್ನಾಗಿ ರೂಪಿಸಲು ಸ್ಪೋಕನ್ ಇಂಗ್ಲೀಷ್, ಸೈನ್ಸ್, ಡ್ರಾಯಿಂಗ್, ಜನರಲ್ ನಾಲೆಡ್ಜ್, ಕರಾಟೆ, ಡಾನ್ಸ್, ಯೋಗ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಿಸಿದರು. ರಮ್ಯಾ ಅವರೇ ಮೋರಲ್ ಎಜುಕೇಷನ್ ಮತ್ತು ಕಂಪ್ಯೂಟರ್ ಕ್ಲಾಸ್ ತೆಗೆದುಕೊಳ್ಳತೊಡಗಿದರು. ಪರಿಣಾಮ ಮಕ್ಕಳಲ್ಲಿ ನಿಧಾನಕ್ಕೆ ಬದಲಾವಣೆಗಳು ಕಾಣತೊಡಗಿದವು. ಮಕ್ಕಳು ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಕಿರು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ಕೊಡುವುದರಿಂದ ಮಕ್ಕಳಲ್ಲಿ ಓದುವ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ.
ಪರಿಣಾಮ ನಿಧಾನಕ್ಕೆ ಶಾಲೆಯು ಕೋಟೆಹುಂಡಿಯ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ. ಖಾಸಗಿ ಶಾಲೆಯಲ್ಲಿ ಓದಿಸಬೇಕೆಂದು ಕನಸು ಕಾಣುತ್ತಿದ್ದ ತಂದೆ ತಾಯಿಗಳು ಮಕ್ಕಳನ್ನು ಈ ಶಾಲೆಗೆ ಸೇರಿಸಲು ಮುಂದಾಗುತ್ತಾರೆ. ಈ ಹಿಂದೆ ಖಾಸಗಿ ಶಾಲೆಗೆ ಸೇರಿಸಿದ ಮಕ್ಕಳನ್ನು ಬಿಡಿಸಿ ತಮ್ಮೂರ ಶಾಲೆಗೆ ಸೇರಿಸುವ ಮನಸ್ಸು ಮಾಡುತ್ತಾರೆ. ಪರಿಣಾಮ ಮೊದಲಿಗೆ ಮೂವತ್ತೆಂಟು ಸಂಖ್ಯೆ ಇದ್ದ ವಿದ್ಯಾರ್ಥಿಗಳು ಅರುವತ್ತಕ್ಕೆ ಏರುತ್ತದೆ. ಅರ್ಧದಷ್ಟು ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಬರೋಬ್ಬರಿ 31 ಲಕ್ಷ ವೆಚ್ಚ ರಮ್ಯಾ ಅವರ ನಿರಂತರ ತೊಡಗುವಿಕೆ, ಊರಿನ ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲಾ ಶಿಕ್ಷಕ-ಶಿಕ್ಷಕಿಯರ ಬೆಂಬಲ, ಆಡಳಿತದ ಸಕಾರಾತ್ಮಕ ಪ್ರೋತ್ಸಾಹ ಈ ಎಲ್ಲದರ ಕೂಡುಶಕ್ತಿಯಿಂದ ಇಂಥದ್ದೊಂದು ಪವಾಡ ಸಂಭವಿಸುತ್ತದೆ.
ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ತಮ್ಮದೇ ಅನುಭವದಿಂದ ರಮ್ಯಾ ಕೆಲವು ಸಂಗತಿಗಳನ್ನು ಕಂಡುಕೊಂಡಿದ್ದಾರೆ. ‘‘ನನ್ನಂತೆ ದೊಡ್ಡ ಮೊತ್ತವನ್ನು ಖರ್ಚುಮಾಡಿ ಶಾಲೆಯನ್ನು ಬದಲಿಸಿ ಎಂದು ಹೇಳುವುದಿಲ್ಲ, ಬದಲಾಗಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪೋಷಕರು ಒಟ್ಟಾಗಿ ಖಾಸಗಿ ಶಾಲೆಗೆ ಕಟ್ಟುವ ದುಬಾರಿ ಫೀಸ್‌ನ ಅಧರ್ದಷ್ಟು ಸರಕಾರಿ ಶಾಲೆಗೆ ಹಾಕಿ ಅಭಿವೃದ್ಧಿ ಪಡಿಸಿ ತಮ್ಮ ಮಕ್ಕಳನ್ನು ಅದೇ ಶಾಲೆಗೆ ಸೇರಿಸಬೇಕಷ್ಟೆ’’ ಎನ್ನುತ್ತಾರೆ. ಮುಂದುವರಿದು, ‘‘ಸರಕಾರವನ್ನು ಎಚ್ಚರಿಸುವಂತೆ ತಂದೆತಾಯಿಗಳಲ್ಲಿ ಮೂಲಭೂತ ಬದಲಾವಣೆಗಳು ಆಗಬೇಕು. ಸರಕಾರಿ ಶಾಲೆಯಲ್ಲಿ ಮಕ್ಕಳು ಹೆಚ್ಚಾದಂತೆ, ಆಯಾ ಮಕ್ಕಳ ತಂದೆತಾಯಿಗಳು ತಮ್ಮ ಮಕ್ಕಳ ಸೌಲಭ್ಯಗಳಿಗಾಗಿ ಸರಕಾರದ ಎದುರು ಬೇಡಿಕೆ ಇಡುತ್ತಾರೆ. ಹೀಗೆ ಪೋಷಕರಿಂದ ಒತ್ತಡ ಬಂದರೆ ಸರಕಾರವೂ ಸ್ಪಂದಿಸತೊಡಗುತ್ತದೆ. ನಾಲ್ಕು ಮಕ್ಕಳಿದ್ದರೆ ಶಾಲೆ ಮುಚ್ಚುತ್ತಾರೆ, ಆ ಮಕ್ಕಳು ನಲವತ್ತಾದರೆ ತೆರೆದ ಶಾಲೆ ಮುಚ್ಚುವುದಿಲ್ಲ. ಕಾರಣ ಈ ನಲವತ್ತು ಮಕ್ಕಳ ತಂದೆ ತಾಯಿಯರು ಶಾಲೆ ಮುಚ್ಚುವ ಸರಕಾರದ ಎದುರು ನಿಲ್ಲುತ್ತಾರೆ’’ ಎನ್ನುತ್ತಾರೆ.
ಪಾರಂಪರಿಕವಾಗಿ ಗ್ರಾಮದೇವತೆ ಚಾಮುಂಡೇಶ್ವರಿಯ ಆರಾಧನೆ, ಚೌಡಮ್ಮನಾಗಿ ಅದೇ ‘ಚೌಡಹಳ್ಳಿ’ ಎಂಬ ಊರಾಗಿತ್ತು. ಈ ಚೌಡಹಳ್ಳಿಗೆ ಮುಂದೆ ಮೈಸೂರು ಅರಸರ ಕಾಲದಲ್ಲಿ ಊರಿನ ಸುತ್ತ ರಕ್ಷಣಾ ಕೋಟೆ ಕಟ್ಟಿದ್ದ ಕಾರಣ ‘ಕೋಟೆಹುಂಡಿ’ಯಾಗಿ ಬದಲಾಗುತ್ತದೆ. 2011ರ ಜನಗಣತಿಯ ಪ್ರಕಾರ 482 ಮನೆಗಳಿರುವ ಈ ಊರಿನಲ್ಲಿ ಶೇ. 29.56ರಷ್ಟು ಅಂದರೆ 724 ಜನ ಪರಿಶಿಷ್ಟ ಜಾತಿಯವರಿದ್ದು, ಶೇ. 3.18ರಷ್ಟು ಪರಿಶಿಷ್ಟ ಪಂಗಡದವರನ್ನು ಒಳಗೊಂಡಂತೆ ಹೆಚ್ಚು ಒಕ್ಕಲಿಗರಿರುವ ಒಟ್ಟು 2,449ರಷ್ಟು ಜನಸಂಖ್ಯೆ ಇರುವ ಊರಿದು. ಇದೀಗ ಈ ಊರು ಬೃಹತ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೇರಿದ ಕಾರಣ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಕುಕ್ಕುತ್ತಿದೆ. ಮೈಸೂರು ರಿಂಗ್ ರೋಡಿಗೆ ಒಂದು ಕಿಲೋಮೀಟರ್ ದೂರದಲ್ಲಿರುವ ಈ ಊರಿನಲ್ಲಿ ಗೇಟೆಡ್ ಕಮ್ಯುನಿಟಿಗಳ ವಸತಿ ಫ್ಲ್ಯಾಟ್ ಲೇಔಟ್‌ಗಳೂ ತಲೆಯೆತ್ತುತ್ತಿವೆ. ನಿಧಾನಕ್ಕೆ ನಗರದ ಚಹರೆಯನ್ನು ಪಡೆಯುತ್ತಿರುವ ಕೋಟೆಹುಂಡಿ ಶಾಲೆಯೂ ಹೈಟೆಕ್ ಆಗುತ್ತಿರುವುದು ಕಾಕತಾಳೀಯವಾಗಿದೆ.
ಕರ್ನಾಟಕದಲ್ಲಿ ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಪರಿಪಾಠವಿದೆ. ನಿಖಿಲ್ ಕಾಮತ್ ಮತ್ತು ‘ಯುವ ಅನ್‌ಸ್ಟಾಪಬಲ್ ಯಂಗ್‌ಇಂಡಿಯಾ ಫಿಲಾಂತ್ರೋಪಿಕ್ ಪ್ಲೆಡ್ಜ್’ ಅಡಿಯಲ್ಲಿ ‘ಕರ್ನಾಟಕ ಮಾಡೆಲ್ ಸ್ಕೂಲ್ ಪಾತ್‌ವೇಸ್ ಪ್ರೋಗ್ರಾಂ’ ಮೂಲಕ ತುಮಕೂರು, ದಾವಣಗೆರೆ, ಹಾವೇರಿ, ಯಾದಗಿರಿ ಮತ್ತು ಚಿತ್ರದುರ್ಗ ಜಿಲ್ಲೆಗಳ 210 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಮಹೇಶ್ ಫೌಂಡೇಷನ್ ಸಂಸ್ಥೆಯು ಬೆಳಗಾವಿ ನಗರದ ನಾಲ್ಕು ಸರಕಾರಿ ಶಾಲೆಗಳನ್ನು ದತ್ತು ಪಡೆದಿದೆ. ರಮೇಶ್ ಬಾಲಸುಂದರಂ ಮತ್ತು ಬಿನುವರ್ಮಾ ಅವರ ನೇತೃತ್ವದ ‘ಬಾಲ್‌ಉತ್ಸವ್’ ಸಂಸ್ಥೆಯು ಕರ್ನಾಟಕದ 200ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದಿದೆ. ಅಲ್ಲದೆ ರಾಜ್ಯದ 34 ವಿಶ್ವವಿದ್ಯಾನಿಲಯಗಳು, 18 ಸ್ವಾಯತ್ತ ಕಾಲೇಜುಗಳೇ 380 ಸರಕಾರಿ ಶಾಲೆಗಳನ್ನು ದತ್ತು ಪಡೆದಿವೆ. 2020-21ನೇ ಸಾಲಿನಲ್ಲಿ ರಾಜ್ಯದ 224 ಶಾಸಕರು ಅವರ ಕ್ಷೇತ್ರದ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಸರಕಾರ ನಿರ್ಧರಿಸಿತ್ತು. ಹೀಗೆ ಶಾಸಕರು, ಸಂಸದರು, ಪರಿಷತ್ ಸದಸ್ಯರನ್ನು ಒಳಗೊಂಡಂತೆ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಯೋಜನೆಗಳಿವೆ. ಈಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಾಸಗಿ ಶಾಲೆಗಳು ಗ್ರಾಮೀಣ ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ಕರೆ ಕೊಟ್ಟಿದ್ದಾರೆ. ಇದು ತೋಳಕ್ಕೆ ಕುರಿಯ ಉಸ್ತುವಾರಿಗೆ ಕರೆ ಕೊಟ್ಟಂತಾಗಬಾರದು.
ಇಷ್ಟೆಲ್ಲದರ ಮಧ್ಯೆಯೂ ದೇಶದಲ್ಲಿ ಸರಕಾರಿ ಶಾಲೆಗಳು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆಗಸ್ಟ್ 2026ರಲ್ಲಿ ಬಿಡುಗಡೆಯಾದ ಕೇಂದ್ರ ಸರಕಾರದ ನೀತಿ ಆಯೋಗದ ವರದಿ ಪ್ರಕಾರ 2014-15ರಿಂದ 2024-25ರ ಹತ್ತು ವರ್ಷದಲ್ಲಿ 94 ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ. ದೇಶದಲ್ಲಿ ದಿನಕ್ಕೆ 25 ಸರಕಾರಿ ಶಾಲೆಗಳು ಮುಚ್ಚುತ್ತಿವೆ. 2005ರಲ್ಲಿ ಶೇ. 71ರಷ್ಟಿದ್ದ ಶಾಲಾ ದಾಖಲಾತಿ ಶೇ. 49.24ಕ್ಕೆ ಕುಸಿದಿದೆ. ಈ ಅಂಕೆಸಂಖ್ಯೆಗಳು ದೇಶದಲ್ಲಿ ಸರಕಾರಿ ಶಾಲೆಗಳು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವುದಕ್ಕೆ ಕನ್ನಡಿಯಾಗಿದೆ.
ಕರ್ನಾಟಕದ ವಿದ್ಯಮಾನವೂ ಬೇರೆಯಾಗಿಲ್ಲ. 2020-21 ರಿಂದ 2025-26ರ ಅವಧಿಯಲ್ಲಿ ಒಟ್ಟು 46,750 ಸರಕಾರಿ ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ 3,617 ಶಾಲೆಗಳನ್ನು ಮುಚ್ಚಲಾಗಿದೆ. ಸರಕಾರಿ ಶಾಲೆಗಳಲ್ಲಿ ಒಟ್ಟು 42,92,351 ವಿದ್ಯಾರ್ಥಿಗಳು ಓದುತ್ತಿದ್ದು, ಇದೀಗ 6,158 ಸರಕಾರಿ ಶಾಲೆಗಳಲ್ಲಿ ಕೇವಲ ಒಬ್ಬರು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿರುವ 46,112 ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 22,078 ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ. 18,196 ಶಾಲೆಗಳಿಗೆ ಆಟದ ಮೈದಾನವಿಲ್ಲ. ಒಟ್ಟಾರೆ ಶೇ. 47.87 ರಷ್ಟು ಶಾಲೆಗಳು ದುಸ್ಥಿತಿಯಲ್ಲಿವೆ. ಹೀಗೆ ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿರುವಾಗ ರಮ್ಯಾ ಜಗತ್ ಅವರು ಸರಕಾರಿ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ರೀತಿ ನಿಜಕ್ಕೂ ಕತ್ತಲಿನಲ್ಲಿ ಮಿಣುಕು ಹುಳದಂತೆ ಕಾಣುತ್ತಿದೆ. ಈ ಬೆಳಕು ನಾಡಿನಾದ್ಯಾಂತ ಹರಡಲಿ ಎಂದು ಆಶಿಸೋಣ.
(ಅಂಕಣಕಾರರು ಪ್ರಾಧ್ಯಾಪಕರು ಮತ್ತು ಜನಪದ ಸಂಶೋಧಕರು)






