‘ಕುದುರೆಮುಖ’ದಲ್ಲಿ ಅರಳಿದ ಅಪರೂಪದ ಹೂವುಗಳು
ಶೋಲಾ ಅರಣ್ಯದಲ್ಲಿ ಸ್ಟ್ರೋಬಿಲಾಂಥೆಸ್ ಜಾತಿಯ ನೀಲಿ ಹೂವುಗಳ ಆಕರ್ಷಣೆ

ಉಡುಪಿ: ಪಶ್ಚಿಮಘಟ್ಟದ ಜೀವವೈವಿಧ್ಯಗಳ ಪ್ರಮುಖ ಹಾಟ್ ಸ್ಪಾಟ್ ಆಗಿರುವ ಕುದುರೆಮುಖದಲ್ಲಿ ಸ್ಟ್ರೋಬಿಲಾಂಥೆಸ್ ಜಾತಿಗೆ ಸೇರಿದ ಹಲವು ಪ್ರಭೇದದ ಹೂವುಗಳು ಅರಳಿ ನಿಂತಿವೆ. ಇದರಿಂದ ಹಸಿರು ಹೊದಿಕೆಯಂತಿರುವ ಶೋಲಾ ಕಾಡುಗಳು ಭಾಗಶಃ ನೀಲಿ ಹಾಗೂ ನೆರಳೆ ಬಣ್ಣಗಳಿಂದ ಕಂಗೊಳಿಸುತ್ತಿವೆ.
ಸ್ಟ್ರೋಬಿಲಾಂಥೆಸ್ ಜಾತಿಯ ಸುಮಾರು 450 ಪ್ರಭೇದಗಳಿದ್ದು, ಭಾರತದಲ್ಲಿ 160ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ ಸುಮಾರು 72 ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಸ್ಥಳೀಯ ಪ್ರಬೇಧವಾಗಿವೆ. ಈ ಕುಟುಂಬದ ಸಸ್ಯಗಳು ಸಾಮಾನ್ಯವಾಗಿ ಪ್ರತೀ ವರ್ಷ, ಕೆಲವು ಏಳು, ಇನ್ನು ಕೆಲವು 12 ಮತ್ತು ಅಪರೂಪದ ಸದಸ್ಯ 32 ವರ್ಷಗಳಿಗೊಮ್ಮೆ ಹೂವು ಬಿಡುತ್ತವೆ.
ಮುಖ್ಯವಾಗಿ ಕರ್ನಾಟಕದ ಪಶ್ಟಿಮಘಟ್ಟಗಳಲ್ಲಿ ಈ ಕುಟುಂಬಕ್ಕೆ ಸೇರಿದ ನೀಲ ಕುರುಂಜಿ, ಬುಟ್ಟಿ ಕಾರ್ವಿ, ಕರುಣ್ ಕುರುಂಜಿ, ಕುರು ಕುರುಂಜಿ ಹೀಗೆ ನಾನಾ ವಿಧದ ಕುರುಂಜಿ ಹೂವುಗಳು ಕಂಡುಬರುತ್ತವೆ. ಸದ್ಯ ಈ ವರ್ಷ ಕೆಲವು ಕಡೆ ನೀಲ ಕುರುಂಜಿ, ಬುಟ್ಟಿ ಕಾರ್ವಿಗಳು ಹೂವು ಬಿಟ್ಟು ಇಡೀ ಬೆಟ್ಟಗುಡ್ಡಗಳನ್ನು ನೆರಳೆ ಬಣ್ಣಗಳಿಂದ ಆವರಿಸಿಕೊಂಡಿದೆ. ಇದರೊಂದಿಗೆ ಪ್ರತೀ ವರ್ಷ ಹೂವು ಬಿಡುವ ಕುರುಂಜಿಗಳು ಕೂಡ ಆಕರ್ಷಕವಾಗಿ ಕಾಣುತ್ತಿವೆ.
ನೀಲ ಕುರುಂಜಿ ನೇರಳೆ ಬಣ್ಣದ ಹೂಗಳನ್ನು ಬಿಡುವ ಪೊದೆ ಸಸ್ಯಗಳಾಗಿದ್ದು, ಇದರ ವೈಜ್ಞಾನಿಕ ಹೆಸರು ಸ್ಟ್ರೋಬಿಲಾಂಥೆಸ್ ಕುಂಥಿಯಾನಾ. ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿ ಬೆಟ್ಟಗಳ ಪ್ರದೇಶಗಳಲ್ಲಿ ಕಂಡುಬರುವ ಈ ಪ್ರಭೇದಗಳು 12 ವರ್ಷಗಳ ಅಂತರದಲ್ಲಿ ಸಾಮೂಹಿಕವಾಗಿ ಹೂಬಿಡುತ್ತವೆ. ಹೂಬಿಡುವ ಸಂದರ್ಭದಲ್ಲಿ ಇಡೀ ಬೆಟ್ಟದ ಪ್ರದೇಶವೇ ನೇರಳೆ-ನೀಲಿ ಬಣ್ಣದ ಹೂಗಳ ಹಾಸಿನಂತೆ ಕಾಣುತ್ತದೆ. ಹೂಬಿಡುವಿಕೆಯು ಸುಮಾರು ಮೂರು ತಿಂಗಳವರೆಗೆ ಮುಂದುವರಿಯತ್ತದೆ. ಈ ಸಸ್ಯ ಕೆಲವೊಮ್ಮೆ 30ರಿಂದ 60 ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತದೆ.
ಪಶ್ಚಿಮ ಘಟ್ಟಗಳ ಶೋಲಾ ಅರಣ್ಯಗಳು ಮತ್ತು ಹುಲ್ಲುಗಾ ವಲುಗಳು ಈ ಸಸ್ಯಗಳಿಗೆ ಪ್ರಮುಖ ಆವಾಸಸ್ಥಾನಗಳಾಗಿವೆ. ಸಮುದ್ರಮಟ್ಟದಿಂದ ಸುಮಾರು 6,000ರಿಂದ 7,000 ಅಡಿ ಎತ್ತರದಲ್ಲಿ ಬೆಳೆಯುವ ಈ ಹೂವು ಪ್ರಕಾಶಮಾನವಾದ ನೀಲಿ ಬಣ್ಣದ, ಗಂಟೆಯಾಕಾರದ ಹೂವಾಗಿದೆ. ಈ ಸಸ್ಯ ಹೂವು ಬಿಡುವ ಅಪರೂಪದ ನೈಸರ್ಗಿಕ ವಿದ್ಯಮಾನ ಪ್ರವಾಸಿಗರು, ಸಸ್ಯಶಾಸ್ತ್ರಜ್ಞರು ಹಾಗೂ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ.
ಈ ವರ್ಷ ಕುದುರೆಮುಖ ಶಿಖರಗಳಲ್ಲಿ ಸ್ಟ್ರೋಬಿಲಾಂಥೆಸ್ ಸೆಸ್ಸಿಲಿಸ್ ಹೂವುಗಳು ಹೇರಳವಾಗಿ ಕಂಡುಬಂದಿವೆ. ಇದರ ಸಾಮಾನ್ಯ ಹೆಸರು ಮಲ್ ಕಾರ್ವಿ. ಕನ್ನಡದಲ್ಲಿ ಬುಟ್ಟಿ ಕಾರ್ವಿ ಎಂಬುದಾಗಿ ಕರೆಯಲಾಗುತ್ತದೆ. ಒಂದು ಸಣ್ಣ ಪೊದೆಸಸ್ಯವಾಗಿದ್ದು, ಸಾಮಾನ್ಯವಾಗಿ ಇದು ಸುಮಾರು ಅರ್ಧ ಮೀಟರ್‌ನಿಂದ ಎರಡು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ ವಿಶೇಷವೇನೆಂದರೆ ಈ ಹೂವು ಏಳು ವರ್ಷಗಳಿಗೊಮ್ಮೆ ಅರಳುತ್ತದೆ. ಈ ಸಸ್ಯದ ಅತ್ಯಂತ ಆಕರ್ಷಕ ಭಾಗವೇ ಇದರ ನೇರಳೆ ಬಣ್ಣದ ಹೂಗಳು. ಇವು ಸುಮಾರು 3-8 ಸೆಂ.ಮೀ. ಉದ್ದದ ಹೂಗೊಂಚಲುಗಳಲ್ಲಿ ಅರಳುತ್ತವೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲಿ ಅಥವಾ ಕಾಂಡದ ತುದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಹೂವುಗಳು ಗಂಟೆ ಯಾಕಾರದಲ್ಲಿದ್ದು, ದಳಗಳು ಹೊರಭಾಗಕ್ಕೆ ಹರಡಿಕೊಂಡಿರುತ್ತವೆ. ಪ್ರತೀ ಹೂವಿನಲ್ಲಿ 6 ಕೇಸರಗಳು ಇದ್ದು, ಅವು ಹೂವಿನ ಒಳಗಡೆಯೇ ಉಳಿಯುತ್ತವೆ. ಆಗಸ್ಟ್-ನವೆಂಬರ್ ತಿಂಗಳು ಈ ಸಸ್ಯ ಹೂವು ಬಿಡುವ ಕಾಲ ಆಗಿದೆ.
ಅದೇ ರೀತಿ ಕನ್ನಡದಲ್ಲಿ ಕರೆಯಲಾಗುವ ಕರುಣ್ ಕುರುಂಜಿ ಹೂವು ಕೂಡ ಈ ವರ್ಷ ಧಾರಳವಾಗಿ ಹೂಬಿಟ್ಟು ಪಶ್ಚಿಮಘಟ್ಟದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಇದರ ಸಾಮಾನ್ಯ ಹೆಸರು ಹಾಪ್ ಕೋನ್‌ಫ್ಲವರ್. ವೈಜ್ಞಾನಿಕ ಹೆಸರು ಸ್ಟ್ರೋಬಿಲಾಂಥೆಸ್ ಲುಪುಲಿನಾ.
ಇದು ಕೂಡ ಒಂದು ಪೊದೆಸಸ್ಯವಾಗಿದ್ದು, ಸಾಮಾನ್ಯವಾಗಿ 2-3 ಹೂಗೊಂಚಲುಗಳು ಒಂದೇ ಹೂದಂಡದ ಮೇಲೆ ಕಾಣಿಸಿ ಕೊಳ್ಳುತ್ತವೆ. ಹೂಗೊಂಚಲುಗಳು ಮೊಟ್ಟೆಯಾಕಾರ ಅಥವಾ ಗೋಲಾಕಾರದಲ್ಲಿದ್ದು, ಸುಮಾರು 2ರಿಂದ 1.5 ಸೆಂ.ಮೀ. ಗಾತ್ರ ಹೊಂದಿರುತ್ತವೆ. ಪ್ರತೀ ಹೂಗೊಂ ಚಲಿನಲ್ಲಿ ಸಾಮಾನ್ಯವಾಗಿ 4-10 ಹೂಗಳು ಇರುತ್ತವೆ. ಹೂವು ಸುಮಾರು 2.5 ಸೆಂ.ಮೀ. ಉದ್ದವಿದ್ದು, ನೀಲಿ ನೇರಳೆ ಬಣ್ಣದಲ್ಲಿರುತ್ತದೆ. ಇದರ ವಿಶಿಷ್ಟ ಹಾಪ್‌ನಂತಹ ಹೂಗೊಂಚಲುಗಳು ಸಸ್ಯಕ್ಕೆ ವಿಶೇಷ ಆಕರ್ಷಣೆ ನೀಡುತ್ತವೆ. ಅಕ್ಟೋಬರ್-ಡಿಸೆಂಬರ್ ಹೂಬಿಡುವ ಕಾಲವಾಗಿದೆ.
ಹೀಗೆ ಪಶ್ಚಿಮಘಟ್ಟಗಳ ಶೋಲಾ ಕಾಡು ಹಾಗೂ ಹುಲ್ಲುಗಾವಲು ಇಂತಹ ಹೂವುಗಳಿಂದ ತುಂಬಿ ಎಲ್ಲರನ್ನು ಆಕರ್ಷಿಸುತ್ತಿದೆ. ಪರಿಸರ ಆಸಕ್ತರು ಈ ಹೂವಿಗಾಗಿ ಈ ಶಿಖರಗಳತ್ತ ಟ್ರೆಕ್ಕಿಂಗ್ ಹೋಗುತ್ತಿದ್ದಾರೆ. ಈ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಕುದುರೆಮುಖ ಸುತ್ತಮುತ್ತಲಿನ ಬೆಟ್ಟಗುಡ್ಡಗಳಿಗೆ ಚಾರಣ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಸ್ಟ್ರೋಬಿಲಾಂಥೆಸ್ ಜಾತಿಗೆ ಸೇರಿದ ಹಲವು ಪ್ರಭೇದದ ಗಿಡಗಳು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಜಾತಿಯ ಸಸ್ಯಗಳಲ್ಲಿ ಕೆಲವು ಒಂದು ವರ್ಷಕ್ಕೊಮ್ಮೆ ಹೂವು ಬಿಟ್ಟರೆ, ಇನ್ನೂ ಕೆಲವು, 12 ವರ್ಷ, 32 ವರ್ಷಗಳಿಗೊಮ್ಮೆ ಹೂವು ಬಿಡುತ್ತವೆ. ಇದೀಗ ಕೆಲವು ಜಾತಿಯ ಸಸ್ಯಗಳು ಹೂವು ಬಿಟ್ಟಿವೆ. ಬಹುತೇಕ ಕುರುಂಜಿ ಜಾತಿಗೆ ಸೇರಿದ ಸಸ್ಯಗಳ ಹೂವುಗಳು ನೀಲಿ ಬಣ್ಣದಾಗಿರುತ್ತವೆ. ಆದರೆ ನೀಲಿ ಬಣ್ಣವಿರುವ ಎಲ್ಲಾ ಹೂವುಗಳು ನೀಲ ಕುರುಂಜಿ ಅಲ್ಲ. ಕೆಲವರು ಇದೇ ಜಾತಿಗೆ ಸೇರಿದ ಬೇರೆ ನೀಲಿ ಬಣ್ಣದ ಹೂವುಗಳನ್ನು ತಪ್ಪಾಗಿ ಗ್ರಹಿಸಿ ನೀಲ ಕುರುಂಜಿ ಎಂದು ಹೇಳುತ್ತಾರೆ. ಆದರೆ ನೀಲ ಕುರುಂಜಿ ಪಶ್ಚಿಮಘಟ್ಟದ ಸೀಮಿತ ಪ್ರದೇಶದಲ್ಲಿ ಮಾತ್ರ ಕಂಡುಬರುವ ಅಪರೂಪದ ಹೂವಾಗಿದೆ’
-ಪ್ರೊ.ಹನೀಫ್, ಸಸ್ಯಶಾಸ್ತ್ರಜ್ಞರು, ಕಾಸರಗೋಡು






