ರಾಯಚೂರು ಎಪಿಎಂಸಿಗೆ ದಾಖಲೆ ಪ್ರಮಾಣದಲ್ಲಿ ಭತ್ತದ ಆವಕ
23 ಕೋಟಿ ರೂ. ಸೆಸ್ ಪಾವತಿ

ರಾಯಚೂರು : ದೇಶದಲ್ಲೇ ಅತ್ಯಂತ ದೊಡ್ಡ ಎಪಿಎಂಸಿ ಎಂಬ ಹೆಗ್ಗಳಿಕೆ ಹೊಂದಿರುವ ರಾಯಚೂರು ಎಪಿಎಂಸಿಯಲ್ಲಿ ಭತ್ತದ ಆವಕ ಹೆಚ್ಚಾಗಿದ್ದು, ಒಂದೇ ದಿನ 32,790 ಚೀಲದಿಂದ 50,255 ಸಾವಿರ ಚೀಲಗಳು ಮಾರುಕಟ್ಟೆಗೆ ಬಂದಿದ್ದು ದಾಖಲೆಯಾಗಿ ಖಜಾನೆ ತುಂಬುವಂತಾಗಿದೆ. ಪ್ರಾಂಗಣದಲ್ಲಿ ಜಾಗವಿಲ್ಲದೇ ರಸ್ತೆಬದಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆ ಹೊರತುಪಡಿಸಿ ಸುತ್ತಲಿನ ಪ್ರದೇಶಗಳಲ್ಲಿ ದೊಡ್ಡದಾದ ಮಾರುಕಟ್ಟೆಯಿಲ್ಲ, ಹೀಗಾಗಿ ನೆರೆಯ ಆಂಧ್ರಪ್ರದೇಶದ ಮಾದವರಂ, ಐಜಾ, ತೆಲಂಗಾಣದ ಗದ್ವಾಲ್, ನಾರಾಯಣಪೇಟ್ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ ರೈತರು ಭತ್ತದ ಮಾರಾಟಕ್ಕೆ ರಾಯಚೂರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತದ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಬಾರಿ ಕನಿಷ್ಠ 1,875ರಿಂದ ಗರಿಷ್ಠ 2,175ರ ಆಗಿದೆ. ಭತ್ತಕ್ಕೆ ಗರಿಷ್ಠ ಬೆಲೆ ದಾಖಲೆಯಾಗಿದೆ.
ಪ್ರಸ್ತುತ ರಾಯಚೂರು ಎಪಿಎಂಸಿಯಲ್ಲಿ ಭತ್ತದ ದರ ಕ್ವಿಂಟಾಲ್ ಗೆ ಕನಿಷ್ಠ 1,875 ರೂ. ಹಾಗೂ ಗರಿಷ್ಠ 2,175 ರೂ. ಹಾಗೂ ಮಾದರಿ ದರ 1,989 ರೂ. ಇದೆ. ನೆರೆಯ ರಾಜ್ಯಗಳಲ್ಲಿ ಇದಕ್ಕಿಂತ ಕಡಿಮೆ ದರವಿದ್ದು ಅಲ್ಲಿ ಭತ್ತ ಮಾರಾಟ ಮಾಡಿದರೆ ಭತ್ತದ ಹಣ ರೈತರ ಕೈ ಸೇರಲು ಕನಿಷ್ಠ ಒಂದು ವಾರವಾಗುತ್ತದೆ. ಆದರೆ ರಾಯಚೂರು ಎಪಿಎಂಸಿಯಲ್ಲಿ ಮಾರಾಟ ಮಾಡಿದ ತಕ್ಷಣವೇ ಹಣ ಪಾವತಿಯಾಗುತ್ತದೆ. ಎಷ್ಟೇ ಲಕ್ಷದ ಭತ್ತ ಮಾರಾಟ ಮಾಡಿದರೂ ಒಂದೇ ದಿನದಲ್ಲಿ ಹಣ ಪಾವತಿಯಾಗುವ ಕಾರಣ ರೈತರ ನೆಚ್ಚಿನ ಮಾರಾಟ ಕೇಂದ್ರವಾಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು. ಇಲ್ಲಿ ನಗದು ರೂಪದಲ್ಲಿ ಹಣ ಪಾವತಿಸಲಾಗುತ್ತದೆ, ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ. ಇದಕ್ಕೆ ಧಕ್ಕೆ ಬಾರದಂತೆ ಕಾಪಾಡಿಕೊಂಡು ರೈತರ ಸ್ನೇಹಿಯಾಗಿ ನಿರ್ವಹಣೆ ಮಾಡಲಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಆದೆಪ್ಪ ಗೌಡ ಹೇಳುತ್ತಾರೆ.
ಜಿಲ್ಲೆಯ ಸಿಂಧನೂರು, ಮಾನ್ವಿ, ದೇವದುರ್ಗ ನೀರಾವರಿ ಪ್ರದೇಶವಾಗಿದ್ದರಿಂದ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಭತ್ತಕ್ಕೆ ಉತ್ತಮ ಬೆಲೆ ಸಿಗುತ್ತಿರುವ ಕಾರಣ ರಾಯಚೂರು ಜಿಲ್ಲೆಯ ರೈತರಷ್ಟೇ ಅಲ್ಲ; ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರೂ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದು ಭತ್ತ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿಗೆ ಭತ್ತದ ಆವಕವೂ ದಾಖಲೆಯಾಗಿದೆ.
ಪ್ರಾಂಗಣಗಳಲ್ಲಿರುವ ಶೆಡ್‌ಗಳಲ್ಲಿ ಭತ್ತದ ಚೀಲಗಳನ್ನು ಇಡಲು ಜಾಗ ಸಾಕಾಗದೆ ರಸ್ತೆ ಮೇಲೆ ಚೀಲಗಳನ್ನು ಸಾಲುಗಟ್ಟಿ ಇಡಲಾಗಿದೆ. ಸಾಲ ಪಡೆದ ರೈತರು, ಲೀಸ್ ಮೇಲೆ ಭತ್ತದ ಗದ್ದೆ ಮಾಡಿದವರು ಎಪಿಎಂಸಿಗಳಿಗೆ ಲಾರಿಗಳಲ್ಲಿ ಭತ್ತ ತಂದು ಮಾರಾಟ ಮಾಡುತ್ತಿದ್ದಾರೆ.
900ಕ್ಕೂ ಹೆಚ್ಚು ಅಂಗಡಿಗಳು :
ರಾಯಚೂರು ಎಪಿಎಂಸಿಯಲ್ಲಿ 900 ಕ್ಕು ಹೆಚ್ಚು ಅಂಗಡಿಗಳಿವೆ, 1,000 ಜನರು ಲೈಸನ್ಸ್ ಹೊಂದಿದ್ದು, 300 ಜನ ಖರೀದಿದಾರರು ಇದ್ದಾರೆ. 80 ರೈಸ್ ಮಿಲ್‌ಗಳಿದ್ದು 50 ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲಿನ ರೈತರು ಬೆಳೆಯುವ ಸೋನಾಮಸೂರಿ ಅಕ್ಕಿಗೆ ಭಾರಿ ಬೇಡಿಕೆಯಿದ್ದು ಬಾಂಗ್ಲಾದೇಶ, ಶ್ರೀಲಂಕಾ, ದುಬೈ ಹಾಗೂ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. 2024 ಮಾರ್ಚ್‌ನಿಂದ 2025ರ ಎಪ್ರಿಲ್‌ವರೆಗೆ ರಾಯಚೂರು ಎಪಿಎಂಸಿಗೆ ಪಾವತಿಸುವ 60 ಪೈಸೆ ಸೆಸ್ ಹಣದಿಂದ 23 ಕೋಟಿ ರೂ. ರಾಜ್ಯ ಸರಕಾರಕ್ಕೆ ಪಾವತಿಯಾಗಿದೆ. ಸೆಸ್ ಹಣ ಪಾವತಿಯಲ್ಲಿ ರಾಜ್ಯದ ಯಶವಂತಪುರ ಮೊದಲನೇ ಸ್ಥಾನದಲ್ಲಿದ್ದರೆ ರಾಯಚೂರು ಎರಡನೇ ಸ್ಥಾನದಲ್ಲಿದೆ ಎನ್ನುವುದು ಜಿಲ್ಲೆಯ ಹೆಗ್ಗಳಿಕೆ.
ಮೂಲ ಸೌಲಭ್ಯದ ಕೊರತೆ :
ರಾಯಚೂರು ಎಪಿಎಂಸಿಗೆ ರೈತರು ತರುವ ಉತ್ಪನ್ನಗಳಿಂದ ಕೋಟ್ಯಂತರ ರೂಪಾಯಿ ಸೆಸ್ ಮೂಲಕ ಹಣ ಪಾವತಿಯಾಗುತ್ತಿದ್ದರೂ ಎಪಿಎಂಸಿ ಪ್ರಾಂಗಣದಲ್ಲಿ ರೈತರಿಗೆ ಕುಡಿಯುವ ನೀರು, ಸಮರ್ಪಕ, ಉಚಿತ ಶೌಚಾಲಯ ಹಾಗೂ ರಾತ್ರಿ ವೇಳೆ ಉಳಿದುಕೊಳ್ಳಲು ಸಮರ್ಪಕವಾದ ವ್ಯವಸ್ಥೆ ಇಲ್ಲ. ರೈತರಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಿದರೂ ಅನೇಕರಿಗೆ ಗೊತ್ತಿಲ್ಲ. ಇದು ಖಾಸಗಿ ವ್ಯಕ್ತಿಗಳು ನಿರ್ವಹಣೆ ಮಾಡುತ್ತಿದ್ದರಿಂದ ವಿವಾಹದಂತಹ ಶುಭ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ರೈತರ ಆರೋಪ.
ಎಪಿಎಂಸಿ ಪ್ರಾಂಗಣ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಚರಂಡಿ ತುಂಬಿ ಪ್ರಾಂಗಣಕ್ಕೆ ಬರುತ್ತದೆ ಹಾಗೂ ಮಳೆನೀರು ಮೇಲ್ಚಾವಣಿಯಿಂದ ಸರಿಯಾಗಿ ಚರಂಡಿಗೆ ಸೇರದೇ ಪ್ರಾಂಗಣದಲ್ಲಿಯೇ ಶೇಖರಣೆಯಾಗುತ್ತಿದ್ದು, ಪ್ರತೀ ವರ್ಷ ರೈತರು ತಂದ ಉತ್ಪನ್ನ ನೀರು ಪಾಲಾಗುತ್ತಿದೆ. ಮಳೆಗಾಲ ಆರಂಭವಾಗುವ ಮುಂಚೆ ಇದನ್ನು ದುರಸ್ತಿಗೊಳಿಸಬೇಕು.
-ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ







