ಬಾಬಾಸಾಹೇಬರನ್ನು ಸ್ಮರಿಸುವುದೆಂದರೆ...

ಅಂಬೇಡ್ಕರ್ ಅವರೊಬ್ಬರೇ ಅಂಬೇಡ್ಕರ್‌ವಾದಿಯಾಗಿದ್ದರು. ಯಾಕೆಂದರೆ, ಅಂಬೇಡ್ಕರ್ ತಮ್ಮ ನಡೆಗೂ-ನುಡಿಗೂ ಸಂಬಂಧವಿರಿಸಿಕೊಂಡವರು. ತಮ್ಮ ಶೀಲವಂತಿಕೆಯಿಂದಲೇ ತಮ್ಮ ಸೈದ್ಧಾಂತಿಕ ವಿರೋಧಿಗಳಿಗೂ ಮೆಚ್ಚುಗೆಯಾಗುವಂತಹ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಪ್ರಶ್ನಾತೀತ ನಾಯಕರಾಗುತ್ತಲೇ ಸಕಲಕೋಟಿ ಜೀವಿಗಳಿಗೂ ಆಸರೆಯಾಗಿ, ಮಾದರಿಯಾಗಿದ್ದರು. ತಾವು ಪಡೆದ ಶಿಕ್ಷಣ, ಜ್ಞಾನ, ಅನುಭವಗಳನ್ನು ಮಾನವ ಸಮುದಾಯ ಮತ್ತು ದೇಶದ ಒಳಿತಿಗಾಗಿ ಬಳಸಿದರು. ಭಾರತದ ಜಾತಿಪದ್ಧತಿಯಲ್ಲಿದ್ದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಅಸಮಾನತೆಗಳ ಪರಿವರ್ತನೆಗಾಗಿ ಶ್ರಮಿಸಿದರು.
1956 ಡಿಸೆಂಬರ್ 6ರಂದು ಬಾಬಾಸಾಹೇಬರು ದೈಹಿಕವಾಗಿ ಇನ್ನಿಲ್ಲವಾದ ದಿನ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿರುವ ಸಂಘಟನೆಗಳು, ಪ್ರತಿಮೆಗಳು ಬಹುಶಃ ಭಾರತದ ಇನ್ಯಾವ ರಾಷ್ಟ್ರನಾಯಕನ ಹೆಸರಿನಲ್ಲಿ ಇಲ್ಲ. ಬಾಬಾಸಾಹೇಬರ ಹುಟ್ಟಿನ ಹಾಗೂ ಪರಿನಿಬ್ಬಾಣದ ದಿನವನ್ನು ಆಚರಿಸುವಷ್ಟು ಪರಿಯಲ್ಲಿ ಬೇರೆ ಯಾವೊಬ್ಬ ನಾಯಕನನ್ನು ಆಚರಿಸುವುದಿಲ್ಲ. ಸ್ವತಃ ಬಾಬಾಸಾಹೇಬರೇ ನನಗೆ ಅಭಿಮಾನಿಗಳು ಬೇಡ, ಅನುಯಾಯಿಗಳು ಬೇಕು ಎನ್ನುತ್ತಾರೆ. ಈ ಮಾತಿನ ನಾಡಿಮಿಡಿತ ಹಿಡಿದು ಅವರ ಹೋರಾಟಗಳ ದಿಕ್ಕು-ದೆಸೆ ನೋಡಿದಾಗ ನಮಗೆ ಇನ್ನಷ್ಟು ಅರ್ಥವಾಗುತ್ತಾರೆ.
‘‘ನನ್ನ ಹೋರಾಟವೇ ನಿಮಗೆ ಸಂದೇಶ. ಹೋರಾಟ ಮಾತ್ರ ವಂಚಿತ ಸಮುದಾಯಕ್ಕೆ ಸ್ಥಾನಮಾನವನ್ನು ಕಲ್ಪಿಸಲು ಸಾಧ್ಯ. ಹೋರಾಟದಿಂದ ಅಸ್ಪಶ್ಯರಿಗೆ ಬಿಡುಗಡೆಯ ಮಾರ್ಗ ತೋರಬಲ್ಲದು. ದೃಢನಂಬಿಕೆ ಬೆಳೆಸಿಕೊಳ್ಳಿ: ಅಸ್ಪಶ್ಯರೆಲ್ಲರೂ ಒಂದು ಸಾಮೂಹಿಕ ಸಂಕಲ್ಪವನ್ನು ಅಂತರ್ಗತ ಮಾಡಿಕೊಳ್ಳಬೇಕು. ಅವರು ತಮ್ಮೊಳಗಿನ ಸಮಸ್ತ ಜಡತ್ವವನ್ನು ಬಿಟ್ಟು ಏಕತೆಯೊಂದಿಗೆ ಎದ್ದು ನಿಂತು ಪ್ರತಿಭಟಿಸುವುದನ್ನು ಕಲಿತುಕೊಳ್ಳಬೇಕು. ಜೊತೆಗೆ ತಾವು ಕೈಗೊಂಡಿರುವ ಮಹತ್ತರ ಕಾರ್ಯದ ಪಾವಿತ್ರ್ಯತೆಯ ಬಗ್ಗೆ ದೃಢನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ತಾವು ಮುಟ್ಟಬೇಕಾದ ಗುರಿಯ ಬಗ್ಗೆ ಒಂದು ಸಮಷ್ಟಿ ನಿರ್ಧಾರವನ್ನು ಸೃಷ್ಟಿಸಿಕೊಳ್ಳಬೇಕು’’ ಎಂಬ ಬಾಬಾಸಾಹೇಬರ ನುಡಿಯನ್ನು ತಮ್ಮ ನಡೆಯಲ್ಲಿ ಅನುಸರಿಸಿದ ಅಂಬೇಡ್ಕರ್‌ವಾದಿಗಳೆಷ್ಟು?
ಬಾಬಾಸಾಹೇಬರೆಂದರೆ ಚಲಾವಣೆಯಲ್ಲಿರುವ ಮೌಲ್ಯಯುತವಾದ ನಾಣ್ಯ. ನಕಲಿ ಅಂಬೇಡ್ಕರ್‌ವಾದಿಗಳು ಅವರ ಹೆಸರಿನಲ್ಲಿ ಚಂದಾ ವಸೂಲಿ ಮಾಡುತ್ತಲೇ ಅಂಬೇಡ್ಕರ್ ಸಿದ್ಧಾಂತದ ದ್ರೋಹಿಗಳಾಗಿರುವ ಹೊತ್ತಿದು. ಹೋರಾಟಗಾರ ಎನಿಸಿಕೊಂಡವರೇ ಕಂಗೆಟ್ಟಿರುವ ಸಂದರ್ಭದಲ್ಲಿ ನನಗೆ ಅನ್ನಿಸುವುದಷ್ಟೆ; ಅಂಬೇಡ್ಕರ್‌ವಾದವಿದೆ, ಆದರೆ ಅಂಬೇಡ್ಕರ್‌ವಾದಿಗಳಿಲ್ಲ. ಹಾಗೆಯೇ ಅಂಬೇಡ್ಕರ್ ಅವರೊಬ್ಬರೇ ಅಂಬೇಡ್ಕರ್‌ವಾದಿಯಾಗಿದ್ದರು. ಯಾಕೆಂದರೆ, ಅಂಬೇಡ್ಕರ್ ತಮ್ಮ ನಡೆಗೂ-ನುಡಿಗೂ ಸಂಬಂಧವಿರಿಸಿಕೊಂಡವರು. ತಮ್ಮ ಶೀಲವಂತಿಕೆಯಿಂದಲೇ ತಮ್ಮ ಸೈದ್ಧಾಂತಿಕ ವಿರೋಧಿಗಳಿಗೂ ಮೆಚ್ಚುಗೆಯಾಗುವಂತಹ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಪ್ರಶ್ನಾತೀತ ನಾಯಕರಾಗುತ್ತಲೇ ಸಕಲಕೋಟಿ ಜೀವಿಗಳಿಗೂ ಆಸರೆಯಾಗಿ, ಮಾದರಿಯಾಗಿದ್ದರು. ತಾವು ಪಡೆದ ಶಿಕ್ಷಣ, ಜ್ಞಾನ, ಅನುಭವಗಳನ್ನು ಮಾನವ ಸಮುದಾಯ ಮತ್ತು ದೇಶದ ಒಳಿತಿಗಾಗಿ ಬಳಸಿದರು. ಭಾರತದ ಜಾತಿಪದ್ಧತಿಯಲ್ಲಿದ್ದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಅಸಮಾನತೆಗಳ ಪರಿವರ್ತನೆಗಾಗಿ ಶ್ರಮಿಸಿದರು. ಅದಕ್ಕಾಗಿ ಸಂಘಸಂಸ್ಥೆಗಳನ್ನು ಸ್ಥಾಪಿಸಿದರು. ಬಹಿಷ್ಕಾರ ಹಿತಕಾರಿಣಿ ಸಭಾ, ಸಮತಾ ಸೈನಿಕ ದಳ, ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿಗಳ ಒಕ್ಕೂಟ, ಭಾರತೀಯ ಬೌದ್ಧ ಮಹಾಸಭಾ, ಟ್ರೈನಿಂಗ್ ಸ್ಕೂಲ್ ಫಾರ್ ಪಾಲಿಟಿಕ್ಸ್, ಪೀಪಲ್ಸ್ ಎಜುಕೇಷನ್ ಸೊಸೈಟಿ ಇವೆಲ್ಲವನ್ನು ಅಂಬೇಡ್ಕರ್ ಅವರ ‘‘ನನ್ನ ಜನ ಆಳುವ ವರ್ಗವಾಗಬೇಕು’’ ಎಂಬ ಮಾತಿನ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ.
ವೈವಿಧ್ಯದೊಂದಿಗೆ ಸಂಕೀರ್ಣತೆಯಿಂದ ಕೂಡಿರುವ ನಮ್ಮ ದೇಶದ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗ ಅಸಮಾನತೆ, ವರ್ಣತಾರತಮ್ಯ ಇವುಗಳ ಕಾರಣಗಳನ್ನು ಸಂಶೋಧನಾತ್ಮಕವಾಗಿ ತಮ್ಮ ಬರಹಗಳ ಮೂಲಕ ಸ್ಪಷ್ಟಪಡಿಸುವ ಜೊತೆಗೆ ಅವುಗಳ ನಿರ್ಮೂಲಕ್ಕೆ ಅಗತ್ಯ ಮತ್ತು ಅನಿವಾರ್ಯವಾದ ಕಾರ್ಯಸೂಚಿಗಳನ್ನು ಕಾನೂನಿನ ಮುಖೇನ ಕೊಡುಗೆಯಾಗಿ ನೀಡಿದರು. ಇತಿಹಾಸ, ಪುರಾಣ, ಸಮಾಜ, ಸಾಹಿತ್ಯ, ರಾಜಕಾರಣ, ತತ್ವಶಾಸ್ತ್ರ ಹೀಗೆ ಹಲವಾರು ವಿಷಯಗಳ ಬಗೆಗೆ ಆಳವಾದ ಜ್ಞಾನಪಂಡಿತರಾಗಿದ್ದರು. ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಸ್ಥಾಪಿಸಲು ಹಾಗೂ ರಾಷ್ಟ್ರದ ಏಕತೆಗಾಗಿ ಜೀವಿಸಿದರು. ಬ್ರಿಟಿಷ್ ಸರಕಾರ ಮತ್ತು ಸ್ವತಂತ್ರ ಭಾರತದಲ್ಲಿ ಒದಗಿಬಂದ ಅಧಿಕಾರಗಳ ಆಮಿಷಗಳ ಸಂದರ್ಭದಲ್ಲಿಯೂ ರಾಜಿಯಾಗದೆ, ಅಧಿಕಾರದ ದರ್ಪದಲ್ಲಿ ಮೆರೆಯದೆ ತಮ್ಮ ತತ್ವಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿದರು. ಅಂಬೇಡ್ಕರ್ ಅವರ ಹೆಸರು ಹೇಳುತ್ತಿರುವ ನಮಗೆ ಈ ಬದ್ಧತೆ ಇರಬೇಕಲ್ಲವೇ?
ಹಿಂದೂ ಧರ್ಮದೊಳಗಿನ ಸಾಮಾಜಿಕ ಅಸಮಾನತೆಯ ಅವಮಾನದಿಂದ ಹೊರಬರಲು ಬಾಬಾಸಾಹೇಬರು ಕೈಗೊಂಡ ದಿಟ್ಟ ಕ್ರಮಗಳಲ್ಲಿ ಬುದ್ಧದಮ್ಮ ಸ್ವೀಕಾರವೂ ಒಂದು. ಅವರ ನೋವು ಎಷ್ಟು ಅಗಾಧವಾದುದು ಎಂಬುದಕ್ಕೆ 1931ರ ಆಗಸ್ಟ್ 14ರಂದು ಗಾಂಧೀಜಿಯವರೊಂದಿಗೆ ‘‘ನನಗೊಂದು ತಾಯಿನಾಡಿಲ್ಲ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ನಮ್ಮನ್ನು ಅತ್ಯಂತ ಕೀಳಾಗಿ ಕಾಣುವ ಈ ಧರ್ಮವನ್ನು ನನ್ನ ಧರ್ಮವೆಂದು ಹೇಗೆ ಕರೆಯಲಿ? ನನ್ನ ನಾಡೆಂದು ಹೇಗೆ ಭಾವಿಸಲಿ? ಈ ವಿಷಯದಲ್ಲಿ ನನ್ನನ್ನು ದೇಶದ್ರೋಹಿ ಎಂದು ಕರೆಯುವುದಾದರೆ ಅದಕ್ಕೆ ನನ್ನ ವಿಷಾದವಿಲ್ಲ. ನಾನು ದೇಶದ್ರೋಹಿ ಎನ್ನುವುದಾದರೆ ಅದಕ್ಕೆ ಕಾರಣ ಈ ನಾಡು. ತುಳಿತಕ್ಕೊಳಗಾದ ನನ್ನ ಜನಕ್ಕೆ ಮಾನವೀಯ ಹಕ್ಕುಗಳನ್ನು ದೊರಕಿಸುವ ಹೋರಾಟದಲ್ಲಿ ದೇಶದಹಿತಕ್ಕೆ ತೊಂದರೆ ಎನ್ನುವುದಾದರೆ ಅದನ್ನು ದ್ರೋಹವೆಂದು ನಾನು ಪರಿಗಣಿಸುವುದೇ ಇಲ್ಲ’’ ಎಂದರು. 1935ರ ಯೆವೋಲಾ ಸಮ್ಮೇಳನದಲ್ಲಿ ‘‘ದುರದೃಷ್ಟವಶಾತ್ ನಾನು ಒಬ್ಬ ಹಿಂದೂವಾಗಿ ಹುಟ್ಟಿದೆ, ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ’’ ಎಂದು 1956 ಅಕ್ಟೋಬರ್ 26ರಂದು ಸ್ವತಃ ತಾವೇ ಬೌದ್ಧರಾದರು.
ಬಾಬಾಸಾಹೇಬರ ಪರಿನಿಬ್ಬಾಣದ ದಿನ ನೆರೆದು-ನೆನೆದು ಅವರನ್ನು ಸ್ಮರಿಸುವ ಪ್ರಜ್ಞಾವಂತರೆಲ್ಲರೂ ಬಾಬಾಸಾಹೇಬರೊಟ್ಟಿಗೆ ಈ ಹಾದಿಯಲ್ಲಿ ಸಾಗುವ ದೃಢಸಂಕಲ್ಪ ಮಾಡುವಂತಾದರೆ ಬಾಬಾಸಾಹೇಬರು ತಮ್ಮ ಜೀವವನ್ನೇ ಮುಡುಪಾಗಿಟ್ಟು ರೂಪಿಸಿದ ಹೋರಾಟಗಳಿಗೆ ಸಾರ್ಥಕತೆ ಬಂದಂತಾಗುತ್ತದೆ.
ಬಾಬಾಸಾಹೇಬರು ತಮ್ಮ ಬದುಕಿನುದ್ದಕ್ಕೂ ‘‘ನನ್ನ ಜನ, ನನ್ನ ಜನ’’ ಎಂದೇ ಉಸಿರಾಡಿದರು-ಹೋರಾಡಿದರು. ಆದರೆ ಅವರು ಯಾರನ್ನು ತನ್ನ ಜನರೆಂದು ತಮ್ಮ ಬದುಕನ್ನೇ ಅರ್ಪಿಸಿದರೋ ಅವರೇ ಕಡೆಗೆ ಅವರ ಕಣ್ಣೀರಿಗೂ ಕಾರಣಕರ್ತರಾದರು. ಬಾಬಾಸಾಹೇಬರು ಕಣ್ಣೀರು ಹಾಕುತ್ತಾ ತಮ್ಮ ಕೊನೆಯ ಸಂದೇಶವನ್ನು ನಾನಕ್ ಚಂದು ರತ್ತುವರೊಟ್ಟಿಗೆ ಹೀಗೆ ಹೇಳುತ್ತಾರೆ; ‘‘ಬಹಳ ಕಷ್ಟಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೆ ಮುನ್ನಡೆಯಬೇಕು. ಅದರ ಮಾರ್ಗದಲ್ಲಿ ಏನೆಲ್ಲ ಎಡರುತೊಡರುಗಳು ಎದುರಾಗಬಹುದು. ಅಡ್ಡಿ ಅಡಚಣೆಗಳು ಅಡ್ಡಬರಬಹುದು. ಚ್ಯುತಿ-ನ್ಯೂನತೆಗಳಂತಹ ಕಷ್ಟಗಳು ಅದರ ಮುನ್ನಡೆಗೆ ತೊಂದರೆ ಒಡ್ಡಬಹುದು. ಇವೆಲ್ಲವನ್ನೂ ಮೆಟ್ಟಿ ನಿಲ್ಲುತ್ತಾ ಮುಂದೆ ಸಾಗಬೇಕು. ನನ್ನ ಜನರು ಈ ಸಂದರ್ಭದ ಸವಾಲನ್ನು ಸ್ವೀಕರಿಸುವ ಧೀಮಂತಿಕೆ ತೋರಬೇಕು. ಒಂದು ಗೌರವಾರ್ಹವಾದ ಮರ್ಯಾದೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಅವರೆಲ್ಲ ಇದಕ್ಕೆ ಸಿದ್ಧರಾಗಬೇಕು. ಒಂದು ವೇಳೆ ನನ್ನ ಜನ ಹಾಗೂ ನನ್ನ ಅನುಯಾಯಿಗಳು ಈ ಆಂದೋಲನದ ರಥವನ್ನು ಮುಂದೆ ನಡೆಸುವಲ್ಲಿ ವಿಫಲರಾದರೂ ಪರವಾಗಿಲ್ಲ. ಅವರು ಮಾಡಬಹುದಾದ ಉತ್ತಮ ಕೆಲಸವೆಂದರೆ ಅದು ಎಲ್ಲಿಗೆ ಬಂದಿದೆಯೋ ಅಲ್ಲಿಯೇ ನಿಲ್ಲುವಂತಾದರೂ ನೋಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಅದು ಹಿಂದಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಇದು ನನ್ನ ಕೊನೆಯ ಸಂದೇಶ. ನನ್ನ ಈ ಮಾತಿಗೆ ಎಲ್ಲರೂ ಕಿವಿಗೊಡುವರೆಂಬ ವಿಶ್ವಾಸ ನನಗಿದೆ’’







