Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಿಕ್ಷಕರ ಹಿಂಭಡ್ತಿ ಹಾಗೂ ಖಾಲಿ ಹುದ್ದೆ...

ಶಿಕ್ಷಕರ ಹಿಂಭಡ್ತಿ ಹಾಗೂ ಖಾಲಿ ಹುದ್ದೆ ಕನ್ನಡ ಶಾಲೆಗಳಿಗೆ ಮಾರಕ

ನಿರಂಜನಾರಾಧ್ಯ ವಿ.ಪಿ.ನಿರಂಜನಾರಾಧ್ಯ ವಿ.ಪಿ.15 Nov 2024 11:20 AM IST
share
ಶಿಕ್ಷಕರ ಹಿಂಭಡ್ತಿ ಹಾಗೂ ಖಾಲಿ ಹುದ್ದೆ ಕನ್ನಡ ಶಾಲೆಗಳಿಗೆ ಮಾರಕ

ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸೇವಾ ನಿಯಮಗಳ ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾ ಬಂದಿದೆ. ಪ್ರಾರಂಭದಲ್ಲಿ 1ರಿಂದ 4ನೇ ತರಗತಿಗಳನ್ನು (ಈಗ 1ರಿಂದ 5) ಹೊಂದಿದ್ದ ಕಿರಿಯ ಪ್ರಾಥಮಿಕ ಶಾಲೆ ಮತ್ತು 1ರಿಂದ 7ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಶಿಕ್ಷಕರು ಕಲಿಸುತ್ತಾ ಬಂದಿದ್ದಾರೆ. ನೇಮಕಾತಿ ಮತ್ತು ಕಾರ್ಯನಿರ್ವಹಿಸಿದ ಆಧಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೆಂದರೆ, 1ರಿಂದ 7ನೇ ತರಗತಿಯವರೆಗೆ ಕಲಿಸುವ ಶಿಕ್ಷಕರಾಗಿರುತ್ತಾರೆ. ಕಾಲದಿಂದ ಕಾಲಕ್ಕೆ ಅವರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಹತೆ ಮತ್ತು ನೇಮಕಾತಿ ನಿಯಮಗಳ ಅನ್ವಯವೇ ನೇಮಿಸಿಕೊಳ್ಳಲಾಗಿದೆ. ಉದಾಹರಣೆಗೆ, ಸ್ವಾತಂತ್ರ್ಯಾನಂತರ ಪ್ರಾರಂಭದಲ್ಲಿ ಮೈಸೂರು ರಾಜ್ಯವು ಪೂರ್ಣ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಕಲಿತವರನ್ನು ಮತ್ತು ಮಾಧ್ಯಮಿಕ ಶಾಲೆಯಲ್ಲಿ 8ನೇ ತರಗತಿ (ಲೋವರ್ ಸೆಕೆಂಡರಿ) ಮುಗಿಸಿದ ಅಭ್ಯರ್ಥಿಗಳನ್ನು ಶಾಲಾ ಶಿಕ್ಷಕರನ್ನಾಗಿ ನೇಮಿಸಿಕೊಂಡು, ನಂತರ ಅವರಿಗೆ ಲೋವರ್ ಟೀಚರ್ ಸರ್ಟಿಪಿಕೇಟ್(ಟಿಎಸ್‌ಎಲ್)ಮತ್ತು ಹೈಯರ್ ಟೀಚರ್ ಸರ್ಟಿಪಿಕೇಟ್(ಟಿಸಿಹೆಚ್) ಶಿಕ್ಷಕರ ತರಬೇತಿಗಳನ್ನು ಪಡೆಯಲು ನಿಯೋಜಿಸುತ್ತಿತ್ತು. ಈ ರೀತಿ ಕೆಲಸಕ್ಕೆ ಸೇರಿದ ಶಿಕ್ಷಕರು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 7/8ನೇ ತರಗತಿಯ ಮಕ್ಕಳಿಗೆ ಎಲ್ಲಾ ವಿಷಯಗಳನ್ನು ಕಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರ್, ಡಾಕ್ಟರ್, ಶಿಕ್ಷಕ, ಸರಕಾರಿ ನೌಕರರಾಗಿ ಉನ್ನತ ಹುದ್ದೆಗಳಲ್ಲಿ ಇಂದು ಕೆಲಸ ನಿರ್ವಹಿಸುತ್ತಿದ್ದಾರೆ.

ಆನಂತರ, ಕಾಲಕಾಲಕ್ಕೆ ಬದಲಾದ ನಿಯಮಗಳ ಅನ್ವಯ ಎಸೆಸೆಲ್ಸಿ-ಟಿಸಿಹೆಚ್, ಪಿಯುಸಿ-ಡಿಎಡ್ ಮತ್ತು ಪದವಿ -ಬಿಎಡ್ ವಿದ್ಯಾರ್ಹತೆಗಳನ್ನು ಶಿಕ್ಷಕರ ನೇಮಕಾತಿಗೆ ಸರಕಾರ ಅನುಸರಿಸುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ನೀತಿಯಲ್ಲಿನ ಬದಲಾವಣೆ ಸ್ವಾಗತಾರ್ಹ. ಆದರೆ, ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ, ಬದಲಾದ ಯಾವುದೇ ಕಾನೂನು-ನೀತಿ-ನಿಯಮಗಳನ್ನು ಪೂರ್ವಾನ್ವಯಗೊಳಿಸಿ ಶಿಕ್ಷಕರ ಘನತೆ ಅಥವಾ ವೃತ್ತಿ ಗೌರವಕ್ಕೆ ಧಕ್ಕೆ ತರುವ ಮೂಲಕ ಶಾಲಾ ಹಂತದಲ್ಲಿ ಮಕ್ಕಳ ಶಿಕ್ಷಣಕ್ಕೆ ಸರಕಾರವೇ ಅಡ್ಡಿಯಾಗಿದ್ದ ಉದಾಹರಣೆಗಳಿಲ್ಲ. ಬದಲಿಗೆ, ತರಬೇತಿ ಹೊಂದಿಲ್ಲದ ಶಿಕ್ಷಕರನ್ನು ಸರಕಾರ ತನ್ನದೇ ಖರ್ಚಿನಲ್ಲಿ ತರಬೇತಿಗೆ ನಿಯೋಜನೆ ಮಾಡಿದ್ದು ಹಾಗೂ ಸೇವಾ ಜ್ಯೇಷ್ಠತೆ ಮತ್ತು ಸೇವಾ ಅವಧಿಯಲ್ಲಿ ಪಡೆದ ಹೆಚ್ಚಿನ ವಿದ್ಯಾರ್ಹತೆಗಳನ್ನು ಪರಿಗಣಿಸಿ ಅವರಿಗೆ ಮುಂಭಡ್ತಿಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸಿದ ಬಗ್ಗೆ ಹಲವು ಉದಾಹರಣೆಗಳಿವೆ.

ಶಿಕ್ಷಕರ ನೇಮಕಾತಿ ಮತ್ತು ವೃತ್ತಿ ಘನತೆಯ ಎತ್ತಿ ಹಿಡಿಯುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಸರಾಗಿದ್ದ ಕರ್ನಾಟಕದ ಪರಂಪರೆಯನ್ನು ಸರಕಾರ ಪಲ್ಲಟಗೊಳಿಸಿದೆ. ಸರಕಾರ ದಿನಾಂಕ 19.05.2017ರಲ್ಲಿ ಹೊರಡಿಸಿ ಇತ್ತೀಚೆಗೆ ಜಾರಿಗೊಳಿಸಿದ ಅವೈಜ್ಞಾನಿಕ, ಕಾನೂನು ಬಾಹಿರ ಮತ್ತು ಕನಿಷ್ಠ ವಿವೇಚನೆಯೂ ಇಲ್ಲದ ಆದೇಶ, ಈ ಹಿಂದೆ 1ರಿಂದ 7/8ನೇ ತರಗತಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾಗಿದ್ದ ಸರಿಸುಮಾರು 1,08,915 ಶಿಕ್ಷಕರನ್ನು ಏಕಾಏಕಿಯಾಗಿ ಪುನರ್ವಿಂಗಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರೆಂದು (1ರಿಂದ 5ನೇ ತರಗತಿ) ಮರು ಪದನಾಮಕರಿಸಿ ಹಿಂಭಡ್ತಿಗೊಳಿಸುವ ಮೂಲಕ ಕನ್ನಡ ಶಾಲೆಗಳಲ್ಲಿ ಕಲಿಕೆಯನ್ನು ಅಸ್ಥಿರಗೊಳಿಸಿದೆ. ಈ ಆಘಾತ, ಅವಮಾನ, ನೋವು ಮತ್ತು ಮಾನಸಿಕ ಹಿಂಸೆಯಿಂದ ಶಿಕ್ಷಕರು ಕಲಿಕೆಯಲ್ಲಿ ಪೂರ್ಣ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ತಮ್ಮ ವೃತ್ತಿಯಲ್ಲಿ ಶಾಂತಿ, ನೆಮ್ಮದಿ ಮತ್ತು ಲವಲವಿಕೆಯಿಲ್ಲದ ಶಿಕ್ಷಕರು ಏನು ತಾನೇ ಕಲಿಸಲು ಸಾಧ್ಯವೆಂಬುದು ಮೂಲಭೂತ ಪ್ರಶ್ನೆಯಾಗಿದೆ!

ಒಂದು ವ್ಯವಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟ ಅಲ್ಲಿನ ಶಿಕ್ಷಕರ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಸರಕಾರ ತೀರ್ಮಾನಗಳನ್ನು ಕೈಗೊಳ್ಳುವಾಗ ಕನಿಷ್ಠ ವಿವೇಚನೆ ಬಳಸದೆ ತೀರ್ಮಾನಗಳನ್ನು ಕೈಗೊಂಡರೆ ಅದು ಹೇಗೆ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಪ್ರಭಾವಿಸುತ್ತದೆ ಎಂಬುದಕ್ಕೆ ಸರಕಾರದ ಹಿಂಭಡ್ತಿ ತೀರ್ಮಾನದ ಆದೇಶ ಒಂದು ಜ್ವಲಂತ ಉದಾಹರಣೆ. ಇದು ಲಕ್ಷಾಂತರ ಶಿಕ್ಷಕರಿಗೆ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕ್ಷಕಿಯರಿಗಾದ ದೊಡ್ಡ ಅನ್ಯಾಯ.

ಸರಕಾರದ ಈ ಅವೈಜ್ಞಾನಿಕ ತೀರ್ಮಾನ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇತರ ವೃಂದಗಳ ಮುಂಭಡ್ತಿಗೆ ಸಂಬಂಧಿಸಿದಂತೆ ಜಾರಿಯಿರುವ ಸೇವಾ ನಿಯಮಗಳು ಶಿಕ್ಷಕರಿಗೇಕಿಲ್ಲ ಎಂಬ ಚರ್ಚೆಯನ್ನು ಹುಟ್ಟು ಹಾಕುತ್ತದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಶಿಕ್ಷಣ ಇಲಾಖೆಯಲ್ಲಿ ಎರಡನೇ ದರ್ಜೆಯ ಗುಮಾಸ್ತರಾಗಿ ಕೆಲಸಕ್ಕೆ ಸೇರುವ ನೌಕರರು ನಂತರ ಮುಂಭಡ್ತಿ ಮೂಲಕ ಮೊದಲನೇ ದರ್ಜೆ ಗುಮಾಸ್ತ, ಅಧೀಕ್ಷಕ ಮತ್ತು ಗೆಜೆಟೆಡ್ ಸಹಾಯಕ ಅಧಿಕಾರಿಯಾಗಿ ನಿವೃತ್ತಿಯಾಗುತ್ತಾರೆ. ಕೆಪಿಎಸ್‌ಸಿ ಮೂಲಕ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿದ ಇಲಾಖೆಯ ನೌಕರರು ಬಿಇಒ, ಡಿಡಿಪಿಐ, ಜೆಡಿಪಿಐ ಮತ್ತು ರಾಜ್ಯ ನಿರ್ದೇಶಕರಾಗಿ ಸೇವೆಯಲ್ಲಿದ್ದಾರೆ, ಕೆಲವರು ನಿವೃತ್ತಿ ಹೊಂದಿದ್ದಾರೆ.

ಇನ್ನು ಸಹಾಯಕ ಆಯುಕ್ತರಾಗಿ ಸೇವೆಗೆ ಸೇರುವ ಐಎಎಸ್‌ಅಧಿಕಾರಿ ಡೆಪ್ಯುಟಿ ಕಮೀಷನರ್, ನಿರ್ದೇಶಕ, ಕಾರ್ಯಕಾರಿ ನಿರ್ದೇಶಕ, ಆಯುಕ್ತ, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಂತಿಮವಾಗಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದುತ್ತಾರೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಕನ್ನಡ ಪ್ರಾಥಮಿಕ ಶಾಲೆಯ ಸಹ-ಶಿಕ್ಷಕರಾಗಿ ಸೇವೆಗೆ ಸೇರುವ ಶಿಕ್ಷಕ ಸಹ-ಶಿಕ್ಷಕನಾಗಿಯೇ ನಿವೃತ್ತಿ ಹೊಂದುವುದು ನಾವು ಆ ಹುದ್ದೆಗೆ ನೀಡುತ್ತಿರುವ ಗೌರವದ ಮಹತ್ವವನ್ನು ಸೂಚಿಸುತ್ತದೆ.

ಮೇ 2017ಕ್ಕೆ ಮುನ್ನ ಸಹ-ಶಿಕ್ಷಕರಾಗಿ ಸೇವೆಗೆ ಸೇರಿದ ಶಿಕ್ಷಕರು ತಮ್ಮ ನೇಮಕಾತಿಯ ಒಪ್ಪಂದದಂತೆ 1ರಿಂದ 7ನೇ ತರಗತಿಯವರೆಗೆ ಪಾಠ ಮಾಡುವ ಪ್ರಾಥಮಿಕ ಶಿಕ್ಷಕರಾಗಿದ್ದರು. ಈ ಮೂಲ ನೇಮಕಾತಿ ಒಪ್ಪಂದವನ್ನೇ ಮುರಿದು ಅವರನ್ನು ಕೇವಲ 1ರಿಂದ 5ನೇ ತರಗತಿಗೆ ಪಾಠ ಮಾಡಲು ಮರು ಪದನಾಮಿಕರಿಸುವ ಸರಕಾರದ ಅದೇಶ ಸಹಜ ನ್ಯಾಯ ಮತ್ತು ಮೂಲ ಒಪ್ಪಂದದ ಉಲ್ಲಂಘನೆಯಾಗಿದೆ. ಯಾವುದೇ ಹೊಸ ನಿಯಮ ಅಥವಾ ಆದೇಶಗಳನ್ನು ಪೂರ್ವಾನ್ವಯಗೊಳಿಸುವುದು ಕಾನೂನಿನ ಉಲ್ಲಂಘನೆ ಎಂಬ ಕನಿಷ್ಠ ತಿಳುವಳಿಕೆ ನೀತಿನಿರೂಪಕರಿಗಿಲ್ಲವಾಗಿದೆ.

ಮತ್ತೊಂದೆಡೆ, ರಾಜ್ಯದಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆಯ 2024-25ನೇ ಸಾಲಿನ ಅಂಕಿ-ಅಂಶಗಳ ಅನ್ವಯ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಒಟ್ಟು ಮುಂಜೂರಾದ ಶಿಕ್ಷಕರ ಹುದ್ದೆಗಳು 1,87,993. ಆದರೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ 1,44,747. ಸರಿ ಸುಮಾರು 43,246 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಮೊದಲ 5 ಜಿಲ್ಲೆಗಳೆಂದರೆ ರಾಯಚೂರು, ಚಿಕ್ಕೋಡಿ, ಕಲಬುರ್ಗಿ, ಕೊಪ್ಪಳ ಮತ್ತು ಬಳ್ಳಾರಿ. ಈ ಐದು ಜಲ್ಲೆಗಳಲ್ಲಿ ಸರಾಸರಿ ಶೇ. 35.7ರಷ್ಟು ಹುದ್ದೆಗಳು ಖಾಲಿ ಇವೆ. (ಈ ವಿವರಗಳನ್ನು ಕೋಷ್ಠಕದಲ್ಲಿ ನೀಡಲಾಗಿದೆ).

ಈ ಐದು ಜಿಲ್ಲೆಗಳಲ್ಲಿ ಮುಂಜೂರಾಗಿರುವ ಹುದ್ದೆಗಳು 38,320. ಆದರೆ ಖಾಲಿ ಇರುವ ಹುದ್ದೆಗಳು 13,302. ಈ ಜಿಲ್ಲೆಗಳಲ್ಲಿ ಸರಾಸರಿ ಶೇ. 35.7ರಷ್ಟು ಹುದ್ದೆಗಳು ಖಾಲಿ ಇವೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಸಂಖ್ಯೆ 10,747. ಅಂದರೆ, ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಕನಿಷ್ಠ ಅತಿಥಿ ಶಿಕ್ಷಕರನ್ನೂ ಕೂಡ ಒದಗಿಸಿಲ್ಲ.

ಮತ್ತೊಂದೆಡೆ, ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿಕೊಳ್ಳುವ ಬದಲು ರಾಜ್ಯ ಸರಕಾರ ಅತಿಥಿ ಶಿಕ್ಷಕರ ನೇಮಕಾತಿಯ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿ ದುರ್ಬಲಗೊಳಿಸಿದೆ. 2024-25 ನೇ ಸಾಲಿನಲ್ಲಿ ರಾಜ್ಯದಲ್ಲಿ 34,192 ಅತಿಥಿ ಶಿಕ್ಷಕರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಯಾವುದೇ ರೀತಿಯ ಸೇವಾಭದ್ರತೆಯಾಗಲಿ ಅಥವಾ ಕನಿಷ್ಠ ವೇತನವಾಗಲಿ ಅಥವಾ ಕನಿಷ್ಠ ಗೌರವವೂ ಸಿಗುತ್ತಿಲ್ಲ. ಒಮ್ಮೊಮ್ಮೆ 4-5 ತಿಂಗಳಾದರೂ ಅವರಿಗೆ ಸಿಗಬೇಕಾದ ಗೌರವಧನವೂ ಸಿಕ್ಕಿರುವುದಿಲ್ಲ.

ಒಟ್ಟಾರೆ, 1ರಿಂದ 7ನೇ ತರಗತಿಗೆ ನೇಮಕವಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5 ನೇ ತರಗತಿಗೆ ಸೀಮಿತಗೊಳಿಸುವ ಮೂಲಕ ಹಿಂಭಡ್ತಿ, ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ಅವರಿಗೆ ನೀಡುತ್ತಿರುವ ಗೌರವಧನ, ಹಲವು ವರ್ಷಗಳಿಂದ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸದಿರು ವಂತಹ ಹಲವಾರು ಸಮಸ್ಯೆಗಳು ಶಿಕ್ಷಕರ ಉತ್ಸಾಹವನ್ನು ಕುಗ್ಗಿಸಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ರಾಜ್ಯ ಸರಕಾರ ಶಿಕ್ಷಕರ ನೇಮಕಾತಿ, ವರ್ಗಾವಣೆ, ಮುಂಭಡ್ತಿ ಮತ್ತು ಸೇವಾಭದ್ರತೆ ವಿಷಯದಲ್ಲಿ ಕೈಗೊಳ್ಳುತ್ತಿರುವ ನೀತಿ-ನಿಯಮಗಳು ಸಾಕಷ್ಟು ಗೊಂದಲ ಹಾಗೂ ನ್ಯೂನತೆಗಳಿಂದ ಕೂಡಿದ್ದು, ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಗುಣಾತ್ಮಕ ಕಲಿಕೆ ನನೆಗುದಿಗೆ ಬಿದ್ದಿದೆ.

ಮೈಸೂರು ರಾಜ್ಯವು ‘ಕರ್ನಾಟಕ’ವೆಂದು ನಾಮಕರಣಗೊಂಡು 50 ವರ್ಷಗಳು ತುಂಬಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಕನ್ನಡ ಶಾಲೆಗಳಿಗೆ ಮತ್ತು ಅಲ್ಲಿ ಕಲಿಸುತ್ತಿರುವ ಶಿಕ್ಷಕರಿಗೆ ಬಂದೊದಗಿರುವ ಈ ಪರಿಸ್ಥಿತಿ ಸುವರ್ಣ ಮಹೋತ್ಸವಾಚರಣೆ ತನ್ನ ಚಿನ್ನದ ಹೊಳಪನ್ನು ಕಳೆದುಕೊಳ್ಳುವಂತೆ ಮಾಡಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಅಲೋಚಿಸಿ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕಿದೆ.

share
ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.
Next Story
X