ಮರುನಾಮಕರಣ ವ್ಯರ್ಥ ಕಸರತ್ತು

ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಮಾಡಲು ಬೇರೆ ಕೆಲಸ ಮತ್ತು ಮನಸ್ಸು ಇಲ್ಲದಾಗ ಏನೇನೋ ಉಪಾಯಗಳು ತಲೆಯಲ್ಲಿ ಬರುತ್ತವೆ. ಅದರ ಹಿಂದೆ ಅವರದ್ದೇ ಆದ ಲೆಕ್ಕಾಚಾರಗಳು ಇರುತ್ತವೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಆಲೋಚನೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಬಂದಿದೆ.ಇದಕ್ಕೆ ಅವರು ಕೊಡುವ ಸಮಜಾಯಿಷಿ ಏನೆಂದರೆ ನ್ಯೂಯಾರ್ಕ್ ಜನರಿಗೆ ತುಮಕೂರು ಜಿಲ್ಲೆ ಎಂದರೆ ಗೊತ್ತಾಗುವುದಿಲ್ಲವಂತೆ.
ಇದನ್ನು ಹೀಗೇ ಮುಂದುವರಿಸಿದರೆ ತುಮಕೂರು ದಾಟಿ ದಾವಣಗೆರೆಯನ್ನು ಉತ್ತರ ಬೆಂಗಳೂರು, ಕಿತ್ತೂರು ಕರ್ನಾಟಕವನ್ನು ಕಿತ್ತೂರು ಬೆಂಗಳೂರು, ಕಲ್ಯಾಣ ಬೆಂಗಳೂರು ಕರಾವಳಿಯನ್ನು ಕರಾವಳಿ ಬೆಂಗಳೂರು, ಮಲೆನಾಡು, ಬೆಂಗಳೂರು ನೈರುತ್ಯ ಬೆಂಗಳೂರು, ಈಶಾನ್ಯ ಬೆಂಗಳೂರು ಹೀಗೆ ಏನೇನೋ ಮಾಡಬಹುದು.
ಒಟ್ಟಾರೆ ಎಲ್ಲವೂ ಬೆಂಗಳೂರುಮಯ ಮಾಡುವುದು ನಮ್ಮ ಮಂತ್ರಿಗಳ ಹೊಸ ಆಲೋಚನೆಯಾಗಿದೆ. ಇದೆಲ್ಲ ಮಾಡುವ ಬದಲಾಗಿ ಕರ್ನಾಟಕವನ್ನು ದಕ್ಷಿಣ ಬೆಂಗಳೂರು ಮತ್ತು ಉತ್ತರ ಬೆಂಗಳೂರು ಎಂದು ಹೆಸರಿಟ್ಟರೆ ಸಾಕು.ಅದನ್ನೂ ಇವರು ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಹೊಸದೇನನ್ನೂ ಸಾಧಿಸಲಾಗದ ಮನಸ್ಸುಗಳು ಮರುನಾಮಕರಣದ ಕೆಲಸಕ್ಕೆ ಕೈ ಹಾಕುತ್ತವೆ.
ತುಮಕೂರು, ದಾವಣಗೆರೆ, ಹುಬ್ಬಳ್ಳಿ_ ಧಾರವಾಡ, ಬೆಳಗಾವಿ ,ಉತ್ತರ ಕನ್ನಡ , ದಕ್ಷಿಣ ಕನ್ನಡ, ಕೊಡಗು, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ, ಬಾಗಲಕೋಟ, ಬಳ್ಳಾರಿ, ಶಿವಮೊಗ್ಗ, ಮಂಡ್ಯ, ಮೈಸೂರು , ಚಾಮರಾಜನಗರ, ಗದಗ, ಉಡುಪಿಗಳಿಗೆ ಅವುಗಳದೇ ಆದ ಇತಿಹಾಸವಿದೆ. ಈ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ನೆಲೆಸಿ ಬದುಕು ಕಟ್ಟಿಕೊಂಡವರಿಗೆ ಭಾವನಾತ್ಮಕ ಸಂಬಂಧವಿದೆ. ಆ ಅಸ್ಮಿತೆಯನ್ನು ಅಳಿಸಿ ಹಾಕಿ ಎಲ್ಲವನ್ನೂ ಬೆಂಗಳೂರುಮಯ ಮಾಡುವುದು ಬೆಂಗಳೂರಿಗೂ ಒಳ್ಳೆಯದಲ್ಲ, ಆ ಜಿಲ್ಲೆಗಳಿಗೂ ಸರಿಯೆನಿಸುವುದಿಲ್ಲ. ಬೇರೆ ಊರುಗಳಿಂದ ಸದರಿ ಊರುಗಳಿಗೆ ವ್ಯಾಪಾರ, ವಹಿವಾಟು ಮಾಡಲು ಬಂದವರಿಗೇನೋ ಅಭ್ಯಂತರವಿರಲಿಕ್ಕಿಲ್ಲ. ಆದರೆ ನೂರಾರು ವರ್ಷಗಳಿಂದ ಅದೇ ಮಣ್ಣಿನಲ್ಲಿ ಜನಿಸಿ,ಅಲ್ಲಿಯ ಮಣ್ಣಿನಲ್ಲೇ ಬದುಕಿನ ಪಯಣವನ್ನು ಮುಗಿಸಲು ಬಯಸುವವರಿಗೆ ಮರುನಾಮಕರಣದ ಈ ಕಸರತ್ತು ಇಷ್ಟವಾಗುವುದಿಲ್ಲ. ಇದರ ಜೊತೆ ಜೊತೆಗೆ ರೈಲು ನಿಲ್ದಾಣ, ವಿಮಾನ ನಿಲ್ದಾಣ, ರಸ್ತೆ, ಬಡಾವಣೆಗಳಿಗೆ ಇತಿಹಾಸದ ಮಹಾ ಪುರುಷರನ್ನು ಹುಡುಕಿ ಅವರ ಹೆಸರನ್ನು ಇಡುವ ಹೊಸ ಚಾಳಿ ಆರಂಭವಾಗಿದೆ.ಮಹಾಪುರುಷರನ್ನು ಒಂದೊಂದು ಜಾತಿಗೆ ತಳಕು ಹಾಕಿ ಈ ಮರುನಾಮಕರಣದ ವ್ಯರ್ಥ ಕಸರತ್ತು ನಡೆಸಲಾಗುತ್ತಿದೆ.
ಭಾರತದ ರಾಜಕಾರಣಿಗಳಿಗೆ ಈಗ ಮಾಡಲು ಬೇರೇನೂ ಕೆಲಸವಿದ್ದಂತಿಲ್ಲ. ತಲೆಯಲ್ಲಿ ಮೆದುಳಿರಬೇಕಾದ ಜಾಗದಲ್ಲಿ ಬೇರೇನೋ ಇದ್ದಂತೆ ಕಾಣುತ್ತದೆ. ದೇಶದ ಕೋಟ್ಯಂತರ ಜನರ ಬದುಕಿನ ಜ್ವಲಂತ ಪ್ರಶ್ನೆಗಳನ್ನು ಬಗೆಹರಿಸಲು, ಅವರ ಬದುಕಿಗೆ ಹೊಸ ದಾರಿ ತೋರಿಸಲು ಅಧಿಕಾರಕ್ಕೆ ಬಂದ ರಾಜಕಾರಣಿಗಳು ಮಾಡುವ ಕೆಲಸ ಬಿಟ್ಟು ಕೆಲಸಕ್ಕೆ ಬಾರದ ಎಲ್ಲವನ್ನೂ ಮಾಡುತ್ತಿದ್ದಾರೆ.
ಈ ಚಾಳಿ ಆರಂಭವಾಗಿದ್ದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಲ್ಲಿ ತಯಾರಾದ ರಾಜಕೀಯ ನಾಯಕರಿಂದ, ಅದೇ ಗರಡಿಯಿಂದ ಬಂದ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿ ಇದ್ದಾಗ ಎಷ್ಟೇ ಒತ್ತಡ ಬಂದರೂ ಅಂತಹ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ. ಈಗ ಬಂದ ವಿಶ್ವಗುರುಗಳು ಏಕೈಕ ಕಾರ್ಯಕ್ರಮವೆಂದರೆ ಹೊಸದೇನನ್ನು ಸೃಷ್ಟಿಸಲಾಗದಿದ್ದರೂ ಇರುವ ಹೆಸರುಗಳನ್ನು ಬದಲಿಸುವುದೊಂದೇ ಅವರ ಸಾಧನೆಯಾಗಿದೆ. ರೈಲುಗಳಿಗೆ, ರಸ್ತೆಗಳಿಗೆ, ಶಾಲೆಗಳಿಗೆ, ನಿಲ್ದಾಣಗಳಿಗೆ, ಯೋಜನೆಗಳಿಗೆ ತಮ್ಮ ಐಕಾನ್‌ಗಳಾದ ದೀನದಯಾಳ್ ಉಪಾಧ್ಯಾಯ, ವಿನಾಯಕ ದಾಮೋದರ ಸಾವರ್ಕರ್ ಹೆಸರಿಡತೊಡಗಿದರು. ದಿಲ್ಲಿಯ ಔರಂಗಜೇಬ್
ಮಾರ್ಗದ ಹೆಸರನ್ನು ಬದಲಿಸಿದರು. ಯೋಜನಾ ಆಯೋಗದ ಮರು ನಾಮಕರಣ ಮಾಡಿದರು. ವಿಶ್ವ ವಿದ್ಯಾನಿಲಯಗಳ ಧನ ಸಹಾಯ ಆಯೋಗದ ಹೆಸರನ್ನು ಬದಲಿಸಿದರು. ಈಗಂತೂ ಅವರ ಚಾಳಿ ಬಿಜೆಪಿಯೇತರ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಹೆಸರು ಬದಲಿಸುವ ಹುಚ್ಚು ಅವರಿಗೂ ಹಿಡಿದಿದೆ.
ಬಸವಣ್ಣನವರು ಜನಿಸಿದ ಬಿಜಾಪುರ ಜಿಲ್ಲೆಯನ್ನು ‘ಬಸವ ಜಿಲ್ಲೆ’ ಎಂದು ಮರು ನಾಮಕರಣ ಮಾಡಬೇಕೆಂದು ರಾಜಕಾರಣಿಯೊಬ್ಬರು ಕೆಲವು ತಿಂಗಳ ಹಿಂದೆ ಆಗ್ರಹಪಡಿಸಿದ್ದರು.ಬಸವಣ್ಣನವರು ಒಂದು ಜಾತಿಗೆ, ಪ್ರದೇಶಕ್ಕೆ, ರಾಜ್ಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿ ನಂತರ ಮಹಾರಾಷ್ಟ್ರದ ಮಂಗಳವೇಡ, ಕರ್ನಾಟಕದ ಬಸವ ಕಲ್ಯಾಣಗಳನ್ನು ತಮ್ಮ ಕರ್ಮ ಭೂಮಿಯನ್ನಾಗಿ ಮಾಡಿಕೊಂಡು ಕಂದಾಚಾರಿಗಳನ್ನು ಎದುರು ಹಾಕಿಕೊಂಡು ಜಾತಿ ರಹಿತ ಮದುವೆ ಮಾಡಿ ಕೊನೆಗೆ ಕೂಡಲ ಸಂಗಮಕ್ಕೆ ಹೋಗಿ ಸಂಶಯಾಸ್ಪದವಾಗಿ ತಮ್ಮ ಬದುಕಿಗೆ ಅಂತ್ಯ ಹೇಳಿದರು. ಅದನ್ನು ನಾವು ಗೌರವಯುತವಾಗಿ ಐಕ್ಯರಾದರು ಎಂದು ಕರೆದೆವು. ಬದುಕಿದ್ದಾಗ ಅವರನ್ನು ನೆಮ್ಮದಿಯಾಗಿರಲು ಬಿಡಲಾಗದವರು ನಾವು ಅಂದರೆ ನಮ್ಮ ಪೂರ್ವಜರು. ಈಗ ಅವರ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದೇವೆ. ಇಲ್ಲಿ ಜಾತಿ ಮಾತ್ರವಲ್ಲ ಉಪಜಾತಿಗಳ ರಾಜಕೀಯವೂ ಎದ್ದು ಕಾಣುತ್ತಿದೆ. ಕಿತ್ತೂರಿನ ರಾಣಿ ಚೆನ್ನಮ್ಮ ತನ್ನ ದಂಡನಾಯಕನನ್ನಾಗಿ ಮಾಡಿಕೊಳ್ಳಲು ಸಂಗೊಳ್ಳಿ ರಾಯಣ್ಣನ ಜಾತಿಯನ್ನು ನೋಡಲಿಲ್ಲ. ಈಗ ಈಕೆಯನ್ನು ಲಿಂಗಾಯತ ಪಂಚಮಸಾಲಿ ನಾಯಕಿಯನ್ನಾಗಿ ಮಾಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಕೆಲವರು ಹೊರಟಿದ್ದಾರೆ.
ನಮ್ಮ ಈಗಿನ ರಾಜಕಾರಣಿಗಳಿಗೆ ಭಾರತದ ಇತಿಹಾಸ ಹಾಗೂ ಪರಂಪರೆಯೇ ಅಪಥ್ಯವಾಗಿದೆ ಅಥವಾ ಆಡಳಿತ ನಡೆಸಲಾಗದ, ಸಮಸ್ಯೆಗಳನ್ನು ಬಗೆಹರಿಸಲಾಗದ ಅನರ್ಹತೆ ಅವರನ್ನು ಹೆಸರು ಬದಲಾವಣೆಯ ಸುತ್ತ ಗಿರಕಿ ಹೊಡೆಯುವಂತೆ ಮಾಡಿದೆ. ಯಾವುದೇ ನಗರದ, ಊರಿನ ಹೆಸರಿಗೆ ಒಂದು ಇತಿಹಾಸವಿರುತ್ತದೆ. ಚರಿತ್ರೆಯ ನಿರ್ದಿಷ್ಟ ಕಾಲಘಟ್ಟದಲ್ಲಿ ಹೆಸರು ಬಂದಿರುತ್ತದೆ. ಉದಾಹರಣೆಗೆ ಬೆಂಗಳೂರಿನ ಶಿವಾಜಿನಗರಕ್ಕೆ ಆ ಹೆಸರು ಏಕೆ ಬಂತು ಎಂಬುದು ಈಗಿನವರಿಗೆ ಗೊತ್ತಿಲ್ಲ. ಮೈಸೂರಿನ ಹೆಸರಿನ ಸುತ್ತ ವಾದ ವಿವಾದಗಳು ನಡೆದಿವೆ. ಬೆಂಗಳೂರಿನ ವಿಮಾನ ನಿಲ್ದಾಣ ಕೆಂಪೇಗೌಡ ನಿಲ್ದಾಣವಾಗಿದೆ. ರೈಲು ನಿಲ್ದಾಣ ಸಂಗೊಳ್ಳಿ ರಾಯಣ್ಣ ನಿಲ್ದಾಣವಾಗಿದೆ. ಈ ಮಹಾಪುರುಷರ ಕೊಡುಗೆಯ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೆ ಈಗಿನ ರಾಜಕಾರಣಿಗಳು ಕೆಂಪೇಗೌಡರ ಇಲ್ಲವೇ ಸಂಗೊಳ್ಳಿ ರಾಯಣ್ಣನವರ ಮೇಲಿನ ನಿಜವಾದ ಪ್ರೀತಿಯಿಂದ, ಅಭಿಮಾನದಿಂದ ಆ ಹೆಸರುಗಳನ್ನು ಇಟ್ಟರೆಂದು ಹೇಳಿದರೆ ಜನ ನಗುತ್ತಾರೆ. ವಾಸ್ತವ ಕಟು ಸತ್ಯವೆಂದರೆ ಈ ಮಹಾಪುರುಷರನ್ನು ಒಂದೊಂದು ಜಾತಿಗೆ, ಮತಕ್ಕೆ ಸೀಮಿತಗೊಳಿಸಿ ಅವರ ಹೆಸರಿನಲ್ಲಿ ವೋಟ್ ಬ್ಯಾಂಕ್ ನಿರ್ಮಿಸಿಕೊಂಡು ರಾಜಕೀಯ ಅಧಿಕಾರ ಹಿಡಿಯುವುದು ಈಗಿನ ರಾಜಕಾರಣಿಗಳ ಚಾಳಿಯಾಗಿದೆ.
12ನೇ ಶತಮಾನದಲ್ಲೇ ತಾನು ಮಾದಾರ ಚನ್ನಯ್ಯನ ಮಗನೆಂದು ಹೇಳಿ ಜಾತಿಯ ಪರದೆ ಹರಿದುಕೊಂಡ ಬಸವಣ್ಣನವರನ್ನೂ ಒಂದು ಜಾತಿಗೆ ತಳಕು ಹಾಕುವ ರಾಜಕೀಯ ಲಾಭದ ಲೆಕ್ಕಾಚಾರಗಳು ಆರಂಭವಾಗಿವೆ.
ಬಿಜಾಪುರ, ಬಾಗಲಕೋಟ, ರಾಯಚೂರು, ಗದಗ ಮುಂತಾದ ಜಿಲ್ಲೆಗಳ ಜನರು ಆಗಾಗ ಬರಗಾಲದಿಂದ ತತ್ತರಿಸಿ ಅಕ್ಕಪಕ್ಕದ ರಾಜ್ಯಗಳಿಗೆ ಗುಳೆ ಹೋಗುತ್ತಿರುತ್ತಾರೆ.ಅವರ ಕಷ್ಟ ಕಾಲದಲ್ಲಿ ಅವರ ಕಣ್ಣೀರು ಒರೆಸಬೇಕಾದ ರಾಜಕಾರಣಿಗಳು ಜಿಲ್ಲೆಯ, ರಾಜ್ಯದ, ಮೆಟ್ರೊ ರೈಲಿನ ಹೆಸರು ಬದಲಿಸುವ ಪ್ರಕ್ರಿಯೆಗೆ ಮೊದಲ ಆದ್ಯತೆಯನ್ನು ನೀಡಿದ್ದಾರೆ.
ಕರ್ನಾಟಕದ ಹೆಸರು ಬದಲಿಸಿ ‘ಬಸವ ನಾಡು’ ಎಂಬ ಹೆಸರನ್ನು ಇಡಬೇಕೆಂದು ಕೆಲವು ರಾಜಕಾರಣಿಗಳು ಬಿಟ್ಟಿ ಸಲಹೆಯನ್ನು ಈ ಹಿಂದೆ ನೀಡಿದ್ದರು.ಆದರೆ ಅದು ಸರಿಯಲ್ಲ. ರಾಜ್ಯದ ಹೆಸರು ಕರ್ನಾಟಕ ಎಂದೇ ಇರಲಿ, ಬಿಜಾಪುರದ ಹೆಸರು ಬಿಜಾಪುರ ಎಂದೇ ಇರಲಿ. ರಾಜಕಾರಣಿಗಳು ಅವರು ಯಾವುದೇ ಪಕ್ಷದವರಿರಲಿ ತಮ್ಮ ತೆವಲಿಗಾಗಿ ಬಸವಣ್ಣನವರ ಹೆಸರನ್ನು ದುರುಪಯೋಗ ಮಾಡಿಕೊಳ್ಳಬಾರದು. ಬಸವಣ್ಣ ನಂಬಿದ ಸಿದ್ಧಾಂತಕ್ಕಾಗಿ ಬಿಜ್ಜಳನ ಆಸ್ಥಾನದ ಮಂತ್ರಿ ಸ್ಥಾನವನ್ನು ಎಡಗಾಲಿನಿಂದ ಒದ್ದು ಹೋದವರು. ಅವರ ಯೋಗ್ಯತೆ ರಾಜಕಾರಣಿಗಳಿಗಿಲ್ಲ. ಇದು ಕುವೆಂಪು ಅವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ. ಬಸವಣ್ಣನವರು ಮಾತ್ರವಲ್ಲ ಪಂಪ, ರನ್ನ, ಜನ್ನ, ರಾಘವಾಂಕ, ಕನಕದಾಸರು, ಶಿಶುನಾಳ ಶರೀಫ ಸಾಹೇಬರು, ಆದಿಲ್‌ಶಾಹಿಗಳು, ಚಾಲುಕ್ಯರು, ರಾಷ್ಟ್ರಕೂಟರು, ಜೈನರು, ಬೌದ್ಧರು, ಮುಸಲ್ಮಾನರು, ಕ್ರೈಸ್ತರು, ಲಿಂಗಾಯತರು, ಒಕ್ಕಲಿಗರು ದಲಿತರು ಹೀಗೆ ಎಲ್ಲರಿಗೂ ಸೇರಿದ ಆದರೆ ಬಹುತೇಕ ಜನರ ಭಾಷೆ ಕನ್ನಡವಾಗಿರುವದರಿಂದ ಕರ್ನಾಟಕ ಎಂಬ ಹೆಸರೇ ಸೂಕ್ತ.
ಒಂದೆರಡು ವರ್ಷಗಳ ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಹೆಸರನ್ನು ಬದಲಿಸಲು ಕೆಲವರು ಮುಂದಾಗಿದ್ದರು. ಹೀಗೆ ಹೆಸರು ಬದಲಿಸಲು ಹೊರಟವರಿಗೆ ಕಬ್ಬನ್ ಅಂದರೆ ಯಾರೆಂದು ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ, ಕಳೆದ ಶತಮಾನದಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ಕಬ್ಬನ್ ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಗಿ ನೇಮಕಗೊಂಡು 60 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈತ ಮತ್ತೆ ವಾಪಸ್ ತನ್ನ ದೇಶಕ್ಕೆ ಹೋಗಲಿಲ್ಲ. ತನ್ನ 60 ವರ್ಷಗಳ ಸೇವಾವಧಿಯಲ್ಲಿ ಕಬ್ಬನ್ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳಲಿಲ್ಲ. ಕಬ್ಬನ್ ಅಧಿಕಾರಾವಧಿಯಲ್ಲಿ ಮೈಸೂರು ಸಂಸ್ಥಾನದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿದ್ದು ಮಾತ್ರವಲ್ಲ, ಗ್ರಾಮೀಣ ಪ್ರದೇಶದ ರಸ್ತೆ, ಸೇತುವೆಗಳನ್ನು ನಿರ್ಮಿಸಿದರು. ಈಗ ಬೆಂಗಳೂರಿಗೆ ಬರುವ ಎಲ್ಲರ ಮೆಚ್ಚಿನ ತಾಣವಾದ ಕಬ್ಬನ್ ಪಾರ್ಕ್‌ನ್ನು ಅಭಿವೃದ್ಧಿಪಡಿಸಿದ್ದು ಈ ಕಬ್ಬನ್. ರಾಜ್ಯ ಸಚಿವಾಲಯದ ಆಡಳಿತ ಕಾರ್ಯಶೈಲಿ ಈಗಲೂ ಕಬ್ಬನ್ ರೂಪಿಸಿದ ಮಾದರಿಯಲ್ಲೇ ನಡೆದಿದೆ. ರಾಜ್ಯದ ಆಡಳಿತ ಜನಭಾಷೆ ಕನ್ನಡದಲ್ಲೇ ನಡೆಯಬೇಕೆಂದು ಕಬ್ಬನ್ ಆಗಲೇ ಕ್ರಮ ಕೈಗೊಂಡು ಜಾರಿಗೆ ತಂದಿದ್ದರು. ಬೆಂಗಳೂರಿನ ಜನಸಂಖ್ಯೆ ಒಂದೂವರೆ ಕೋಟಿಗೆ ಸಮೀಪಿಸುತ್ತಿದೆ. ಆದರೂ ಪರಿಸರ ಹಾಳಾಗದಂತೆ ಕಾಪಾಡಿದ್ದು, ಪ್ರಾಣ ವಾಯು ನೀಡುತ್ತಿರುವುದು ಕಬ್ಬನ್ ಸ್ಥಾಪಿಸಿದ ಕಬ್ಬನ್ ಉದ್ಯಾನ ಮತ್ತು ಹೈದರಲಿ ಮತ್ತು ಟಿಪ್ಪು ಸುಲ್ತಾನ್ ನಿರ್ಮಿಸಿದ ಲಾಲ್‌ಬಾಗ್ ಉದ್ಯಾನಗಳೆಂಬುದನ್ನು ಮರೆಯಬಾರದು.
ಯಾವುದೇ ಒಂದು ಹೆಸರಿನ ಹಿಂದೆ ಒಂದು ಇತಿಹಾಸವಿರುತ್ತದೆ. ಇತಿಹಾಸವನ್ನು ಅಳಿಸಿ ಹಾಕಲು ಹೊರಡುವುದು ಅವಿವೇಕತನದ ಪರಮಾವಧಿ. ಬೆಂಗಳೂರು ಮಹಾನಗರ ಪಾಲಿಕೆ ಕೆಲವು ವರ್ಷಗಳ ಹಿಂದೆ ಪಾಲಿಕೆ ಹತ್ತಿರವಿರುವ ಹಡ್ಸನ್ ಸರ್ಕಲ್ ಹೆಸರನ್ನು ತೆಗೆದುಹಾಕಿ ಕಿತ್ತೂರು ಚೆನ್ನಮ್ಮ ರಾಣಿಯ ಹೆಸರನ್ನು ಇಟ್ಟಿತು. ಕಿತ್ತೂರು ರಾಣಿಯ ಸ್ವಾಭಿಮಾನ, ಹೋರಾಟದ ಕೆಚ್ಚಿನ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಅವರ ಹೆಸರಿನ ಭವ್ಯವಾದ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಲಿ ತಕರಾರಿಲ್ಲ.ಆದರೆ ಹಡ್ಸನ್ ಹೆಸರನ್ನು ತೆಗೆದು ಹಾಕಿ ಮರು ನಾಮಕರಣ ಮಾಡಬಾರದಿತ್ತು. ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಬ್ರಿಟಿಷ್ ಅಧಿಕಾರಿ ಹಡ್ಸನ್ ನೀಡಿರುವ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕಾಗಿ ಡೆಪ್ಯುಟ ಚೆನ್ನಬಸಪ್ಪ ನವರು ಮಾಡಿರುವ ಮಹತ್ಕಾರ್ಯವನ್ನು ಮೈಸೂರು ಸಂಸ್ಥಾನದ ಹಡ್ಸನ್ ಮಾಡಿದರು. ಇಂಗ್ಲೆಂಡಿನಿಂದ ಬೆಂಗಳೂರಿಗೆ ಬಂದಾಗ ಹಡ್ಸನ್‌ಗೆ ಒಂದೇ ಒಂದು ಕನ್ನಡ ಅಕ್ಷರವೂ ಗೊತ್ತಿರಲಿಲ್ಲ. ಆತ ಮೂವತ್ತು ದಿನಗಳಲ್ಲಿ ಕನ್ನಡ ಭಾಷೆಯನ್ನು ಕಲಿತು ದಾಖಲೆಯನ್ನು ನಿರ್ಮಿಸಿದರು. ಆಗ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಇಲ್ಲದಿದ್ದಾಗ ತನ್ನ ಸಂಬಳದ ಹಣದಲ್ಲಿ ಉಳಿತಾಯ ಮಾಡಿ 73 ಕನ್ನಡ ಶಾಲೆಗಳನ್ನು ಆರಂಭಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕ ಎಂಬುದು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಹನ್ನೆರಡನೇ ಶತಮಾನಕ್ಕಿಂತ ಮೊದಲೇ ರಾಷ್ಟ್ರಕೂಟರು, ಚಾಲುಕ್ಯರು, ಕದಂಬರು, ಹೊಯ್ಸಳರು, ಆದಿಲ್‌ಶಾಹಿಗಳು, ಬಹಮನಿಗಳು, ಜೈನರು, ಬೌದ್ಧರು ಆನಂತರ ಬಂದ ಶೈವರು, ಬಸವಣ್ಣನವರ ಕಾಲದಲ್ಲಿ ಲಿಂಗಾಯತರು ಹೀಗೆ ಎಲ್ಲ ಸಮುದಾಯಗಳ ರಾಜರು, ಅರಸೊತ್ತಿಗೆಗಳು, ಜನಾಂಗಗಳು ಈ ಶಾಂತಿಯ ತೋಟದಲ್ಲಿ ಅರಳಿವೆ. ಕನ್ನಡ ಸಾಹಿತ್ಯಕ್ಕೆ ಜೈನರು ಕೊಟ್ಟ ಕೊಡುಗೆ ಬಗ್ಗೆ ಡಾ.ಎಂ.ಎಂ.ಕಲಬುರ್ಗಿ ಅವರು ಭಾವುಕರಾಗಿ ಹೇಳುತ್ತಿದ್ದ ಮಾತುಗಳನ್ನು ನಾನು ಕಿವಿಯಾರೆ ಕೇಳಿದ್ದೇನೆ. ಇಂಥ ಬಹುತ್ವದ ಭೂಮಿಯನ್ನು ನಿರ್ದಿಷ್ಟ ಗುಂಪಿಗೆ, ಜಾತಿಗೆ ಕಟ್ಟಿ ಹಾಕುವುದು ಬೇಡ.
ಮಂಗಳೂರು ರೈಲು ನಿಲ್ದಾಣಕ್ಕೆ ಮಂಗಳೂರು ರೈಲು ನಿಲ್ದಾಣ ಅಂದರೆ ಸಾಕು. ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಈಗ ಸಿದ್ಧಾರೂಢರ ಹೆಸರನ್ನು ಇಡಲಾಗಿದೆ. ಅಭ್ಯಂತರವಿಲ್ಲ. ಆದರೆ, ಈ ರಾಜ್ಯಕ್ಕೆ, ನೆಲಕ್ಕೆ ಸಂಬಂಧವಿಲ್ಲದ ಹೆಸರುಗಳನ್ನು ರಸ್ತೆಗಳಿಗೆ ಇಡಲಾಗುತ್ತಿದೆ.ನಾಡಿನ ಅಸ್ಮಿತೆಯಾಗಿರುವ ಪಂಪಕವಿ,ರನ್ನಕವಿ, ಜನ್ನ, ಶಿಶುನಾಳ ಶರೀಫ, ಟಿಪ್ಪು ಸುಲ್ತಾನ್ ಮುಂತಾದವರ ಹೆಸರಿನ ಬದಲಾಗಿ ಕರ್ನಾಟಕಕ್ಕೆ ಸಂಬಂಧಪಡದ ಸಾವರ್ಕರ್, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಇವೇ ಮುಂತಾದ ಹೆಸರುಗಳು ಈಗ ವಿಜೃಂಭಿಸುತ್ತಿವೆ.
ಜನಸಾಮಾನ್ಯರನ್ನು ನಿರಂತರವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಡೆಗಣಿಸಿ ರಾಜಕೀಯ ಲಾಭಗಳಿಕೆಗಾಗಿ ಊರುಗಳಿಗೆ, ಜಿಲ್ಲೆಗಳಿಗೆ, ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮತ್ತು ಮರುನಾಮಕರಣ ಮಾಡುವುದು ಸರಿಯಲ್ಲ.







