Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ

ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ

ನಾ. ದಿವಾಕರನಾ. ದಿವಾಕರ26 Jan 2026 9:30 AM IST
share
ಗಣತಂತ್ರದ ಆದ್ಯತೆಗಳೂ ಜನತಂತ್ರದ ಆತಂಕಗಳೂ

ಭಾರತದಲ್ಲಿ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲೇ, ಸಂವಿಧಾನದ ಚೌಕಟ್ಟಿನಲ್ಲೇ ಫ್ಯಾಶಿಸಂ ಏಕೆ ತಳಮಟ್ಟದ ಕಟ್ಟಕಡೆಯ ವ್ಯಕ್ತಿಯನ್ನೂ ಸಹ ಸಮ್ಮೋಹನಗೊಳಿಸಿದೆ ಎಂಬ ಜಟಿಲ ಪ್ರಶ್ನೆಗೆ ಉತ್ತರ ನಮ್ಮೊಳಗೇ ಇದೆ. ಜನಸಾಮಾನ್ಯರನ್ನು ಈ ಸಮ್ಮೋಹನಾಸ್ತ್ರದಿಂದ ಮುಕ್ತಗೊಳಿಸಬೇಕಾದರೆ, ಅವರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಪ್ರಾಚೀನ ಮೌಲ್ಯಗಳನ್ನು ಹೋಗಲಾಡಿಸಬೇಕು. ಈ Social Engineering ರಾಜಕೀಯ ಪಕ್ಷಗಳ, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ಹಾಗೂ ಸಾಹಿತ್ಯಿಕ ಪರಿಚಾರಕರ ಆದ್ಯತೆಯಾಗಬೇಕು.

76ವಸಂತಗಳನ್ನು ಪೂರೈಸಿರುವ ಭಾರತೀಯ ಗಣತಂತ್ರವನ್ನು ಸಂಭ್ರಮಿಸುವ ಗಣರಾಜ್ಯೋತ್ಸವ ದಿನದಂದು, ದೇಶ ನಡೆದು ಬಂದ ಹಾದಿಯನ್ನು ಹಾಗೂ ಸಾಧನೆಯನ್ನು ವೈಭವೀಕರಿಸುವುದು ಸಹಜ ಪ್ರಕ್ರಿಯೆ. ಆದರೆ ಈ ಆಚರಣೆ ಮತ್ತು ವೈಭವೀಕರಣಗಳ ನಡುವೆ ಸದ್ದಿಲ್ಲದೆ ನುಸುಳಿ ಹೋಗುವ, ಕಂಡರೂ ಕಾಣದಂತೆ ಮರೆಯಾಗಿಬಿಡುವ ಸಮಾಜಗಳು ಈ ದೇಶದಲ್ಲಿ ಇಂದಿಗೂ ಸಹ ಇಣುಕಿ ನೋಡುತ್ತಿರುವುದನ್ನು ಗಮನಿಸಿದಾಗ, ಈ ಸಂಭ್ರಮಾಚರಣೆಯಿಂದಾಚೆಗೂ ನಮ್ಮ ದೃಷ್ಟಿಯನ್ನು ಹಾಯಿಸುವುದು ಅತ್ಯವಶ್ಯ ಎನಿಸುತ್ತದೆ. ಏಕೆಂದರೆ ಈ ಸಮಾಜದಲ್ಲಿ ಅವಕಾಶಗಳಿಗಾಗಿ ಹಪಹಪಿಸುತ್ತಿರುವ, ದೌರ್ಜನ್ಯಗಳಿಂದ ತತ್ತರಿಸುತ್ತಿರುವ, ತಾರತಮ್ಯದಿಂದ ಬೇಸತ್ತಿರುವ, ಹಿಂಸೆಯಿಂದ ಬೆಂದು ನೊಂದಿರುವ ಸಮುದಾಯಗಳು ತಮ್ಮ ಆತಂಕ ಮತ್ತು ದುಗುಡಗಳನ್ನು ಬಗಲಲ್ಲಿಟ್ಟುಕೊಂಡೇ ಜೀವನ ನಡೆಸುತ್ತಿವೆ.

ಆಡಳಿತಾತ್ಮಕ ಮತ್ತು ಗ್ರಾಂಥಿಕ ಪರಿಭಾಷೆಯ ವ್ಯಾಖ್ಯಾನಗಳು ಈ ತಲ್ಲಣಿಸಿರುವ ಸಮಾಜಗಳಿಗೆ ತಲುಪಿದೆಯೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಏಕೆಂದರೆ ಆಚರಣೆಯ ಆಡುಂಬೊಲಗಳಲ್ಲಿ ಈ ತಳಸ್ತರದ ಸಮುದಾಯಗಳು ಸದಾ ಪ್ರೇಕ್ಷಕರಾಗಿರುತ್ತವೆ. ಬ್ಯಾರಿಕೇಡ್ ಅಥವಾ ಬೇಲಿಗಳಿಂದಾಚೆಗೆ ನಿಂತು ನೋಡುತ್ತಿರುತ್ತವೆ. ಬೆಂದ ಹೊಟ್ಟೆಗೆ, ನೊಂದ ಮನಸ್ಸಿಗೆ ಗ್ರಾಂಥಿಕ ಪರಿಭಾಷೆ ಅರ್ಥವಾದರೂ ಸಹ ಅರ್ಥಹೀನ ಎನಿಸುತ್ತವೆ. ಏಕೆಂದರೆ ಇವರ ನಾಳೆಗಳು ಅನಿಶ್ಚಿತ

ವಾಗಿವೆ. ಇಂದು ಮತ್ತು ನಾಳೆಯ ನಡುವೆ ಅಂತರ ಹೆಚ್ಚಾದಂತೆಲ್ಲಾ ಸಾಮಾನ್ಯರ ಬದುಕು ಹೆಚ್ಚು ತಲ್ಲಣಿಸುವುದು ವಾಸ್ತವ. ಈ ಸಂದಿಗ್ಧತೆಯ ನಡುವೆಯೇ ಈ ಜನರೂ ಸಂಭ್ರಮಿಸುತ್ತಾರೆ. ಒಂದು ದಿನದ ಮಟ್ಟಿಗೆ ನೋವುಗಳನ್ನು ಮರೆಯುತ್ತಾರೆ.

ಈ ಚೌಕಟ್ಟಿನೊಳಗೆ ಗಣತಂತ್ರದ ಭವಿಷ್ಯವನ್ನು ಕುರಿತು ಯೋಚಿಸುವಾಗ, ಕಳೆದ ಹತ್ತು ವರ್ಷಗಳ ಸಾರ್ವಜನಿಕ-ಶೈಕ್ಷಣಿಕ (ಂಛಿಚಿಜemiಛಿ) ಸಂಕಥನಗಳು ವಿಶಿಷ್ಟವಾಗಿ ಕಾಣುತ್ತವೆ. ಒಂದು ಮಗ್ಗುಲಲ್ಲಿ ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲಿದೆ, ಅತ್ಯಂತ

‘ಬಲಿಷ್ಠ’ ದೇಶವಾಗಲಿದೆ, ಆರ್ಥಿಕತೆಯಲ್ಲಿ ಏರುಗತಿಯಲ್ಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ದೇಶದಲ್ಲಿ ನಿರುದ್ಯೋಗ, ಅಸಮಾನತೆ, ಬಡತನ, ಮಹಿಳಾ-ದಲಿತ ದೌರ್ಜನ್ಯ, ಅಲ್ಪಸಂಖ್ಯಾತರ ಕಡೆಗಣನೆ ಮತ್ತು ಪರಿಸರ ನಾಶದ ಕೂಗು ಕೇಳಿಬರುತ್ತದೆ. ಈ ಎರಡನ್ನೂ ಸಮಚಿತ್ತದಿಂದ ಗಮನಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಸಾಧನೆಗಳನ್ನು ನಿರಾಕರಿಸದೆ ವೈಫಲ್ಯಗಳನ್ನು ಗುರುತಿಸುವ ಮತ್ತು ಆತಂಕಗಳನ್ನು ಮನಗಾಣುವ ಕ್ಷಮತೆ ರೂಢಿಸಿಕೊಳ್ಳಬೇಕಿದೆ.

ಸಂವಿಧಾನದ ರಕ್ಷಾ ಕವಚ

ಇತ್ತೀಚಿನ ಕೆಲವು ಚರ್ಚೆಗಳಲ್ಲಿ ಸಂವಿಧಾನವನ್ನು ಫ್ಯಾಶಿಸಂ ವಿರುದ್ಧ ಅಸ್ತ್ರವಾಗಿ ಬಳಸುವ ವ್ಯಾಖ್ಯಾನಗಳು ಕೇಳಿಬರುತ್ತಿವೆ. ನೆಲದ ವಾಸ್ತವಗಳನ್ನು (Ground realities) ಗಮನಿಸಿದಾಗ, ಈ ವ್ಯಾಖ್ಯಾನಕಾರರು ಸಂವಿಧಾನ ಮತ್ತು ಆಳ್ವಿಕೆಯ ನಡುವೆ ಇರುವ ಅವಿನಾಭಾವ ಸೂಕ್ಷ್ಮ ಸಂಬಂಧವನ್ನು ಮತ್ತು ಅದರ ಒಳಸುಳಿಗಳನ್ನು ಗಮನಿಸಬೇಕು ಎನಿಸುತ್ತದೆ. ಫ್ಯಾಶಿಸಂನ ಮೂಲ ಕಾರ್ಯಸೂಚಿಯನ್ನು ಸಮಾಜದ ಕಟ್ಟಕಡೆಯ ಹಂತದವರೆಗೂ ವಿಸ್ತರಿಸಲು ಅಗತ್ಯವಾದ ಸಾಂಸ್ಕೃತಿಕ ಪ್ರಭಾವಳಿಗಳನ್ನು ನಿರ್ಮಿಸಲು ಚುನಾಯಿತ ಸರಕಾರಗಳಿಗೆ ಸಂವಿಧಾನ ಆಸ್ಪದ ನೀಡುತ್ತದೆ. ಉದಾಹರಣೆಗೆ ಆಹಾರ ಸಂಸ್ಕೃತಿಯ ಮೇಲೆ ದಾಳಿ (ಗೋಹತ್ಯೆ ನಿಷೇಧ),

ಧಾರ್ಮಿಕ ಸ್ವಾತಂತ್ರ್ಯದ ಮೇಲೆ ದಾಳಿ (ಮತಾಂತರ ನಿಷೇಧ), ಮೂಲಭೂತ ಹಕ್ಕುಗಳ ಮೇಲೆ ದಾಳಿ (ಯುಎಪಿಎ ಮುಂತಾದ ಕರಾಳ ಕಾಯ್ದೆಗಳು) ಇವೆಲ್ಲಕ್ಕೂ ಸಂವಿಧಾನದಲ್ಲಿ ಅವಕಾಶ ಇದೆ.

ಹಾಗಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ಅರ್ಪಿಸಿದ ದಿನ ಮಾಡಿದ ಭಾಷಣದಲ್ಲಿ (25 ನವೆಂಬರ್ 1949) ‘‘ ಸಂವಿಧಾನದ ಉಳಿವು ಮತ್ತು ಯಶಸ್ಸು ಮುಖ್ಯವಾಗಿ ಆಡಳಿತಾರೂಢ ಸರಕಾರದ (ಅಂದರೆ ಅಧಿಕಾರಾರೂಢ ರಾಜಕೀಯ ಪಕ್ಷಗಳ ) ಆಡಳಿತ ನೀತಿಗಳನ್ನು, ಈ ಸರಕಾರಗಳನ್ನು ನಿರ್ವಹಿಸುವವರನ್ನು ಅವಲಂಬಿಸುತ್ತದೆ ,,,,,,’’ ಎಂದು ಹೇಳಿದ್ದರು. ಮುಂದುವರಿದು ‘‘ ಸಂವಿಧಾನ ಕೇವಲ ಒಂದು ದಸ್ತಾವೇಜು. ಅದರ ಪರಿಣಾಮ ಮತ್ತು ಪ್ರಭಾವವನ್ನು ನಿರ್ಧರಿಸುವುದು, ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಜನರು’’ ಎಂದೂ ಹೇಳಿದ್ದರು. ಈ ದಾರ್ಶನಿಕ ನುಡಿಗಳ ಒಂದು ಆಯಾಮವನ್ನು 1975ರ ತುರ್ತುಪರಿಸ್ಥಿತಿಯಲ್ಲಿ ಕಂಡಿದ್ದೆವು, ಈಗ ಮತ್ತೊಂದು ರೂಪದಲ್ಲಿ, ಸೌಮ್ಯ ಮಾದರಿಯಲ್ಲಿ ಕಾಣುತ್ತಿದ್ದೇವೆ. ಈ ವಿದ್ಯಮಾನವನ್ನು ಸಂವಿಧಾನದ ಲೋಪ ಅಥವಾ ನ್ಯೂನತೆ ಎಂದು ವ್ಯಾಖ್ಯಾನಿಸಬೇಕಿಲ್ಲ. 1947ರ ಸಂದರ್ಭದಲ್ಲಿ ಸ್ವತಂತ್ರ ಆಳ್ವಿಕೆಯ ಆತಂಕಗಳ ನಡುವೆ ರೂಪಿಸಲಾದ ಸಂವಿಧಾನ ಆ ಕಾಲಘಟ್ಟದ ಅವಶ್ಯಕತೆಗೆ ಅನುಗುಣವಾಗಿ ನಿಯಮಗಳನ್ನು ನಿರ್ವಚಿಸಿದೆ. ಮತದಾರ ಪ್ರಭುಗಳು ಎಂದೇ ಕರೆಯಲ್ಪಡುವ ನಾವು, ಅಂದರೆ ಸಾರ್ವಭೌಮ ಜನತೆ ಈ ಸಂವಿಧಾನವನ್ನು ಯಾರ ಕೈಗೆ ಒಪ್ಪಿಸುತ್ತಿದ್ದೇವೆ ? ಇದು ಚುನಾವಣೆಗಳಲ್ಲಿ ನಿರ್ಧಾರವಾಗುವ ಒಂದು ವಿಚಾರ.

ಆಂತರ್ಯದಲ್ಲಿ ಫ್ಯಾಶಿಸ್ಟ್ ಲಕ್ಷಣಗಳು

ಮೂಲತಃ ಫ್ಯಾಶಿಸ್ಟ್ ವ್ಯವಸ್ಥೆಯಲ್ಲಿ ಹಲವು ಪ್ರಧಾನ ಲಕ್ಷಣಗಳನ್ನು ಗುರುತಿಸಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯ ತಳಹದಿಯನ್ನೇ ಶಿಥಿಲಗೊಳಿಸುವ ಅತಿಯಾದ ಕೇಂದ್ರೀಕರಣ. ರಾಜ್ಯ ಸರಕಾರಗಳ ಮೇಲೆ ಆರ್ಥಿಕವಾಗಿ ಹಾಗೂ ಶಾಸನಾತ್ಮಕವಾಗಿ ಆಧಿಪತ್ಯವನ್ನು ಸಾಧಿಸುವುದು. ಇದಕ್ಕೆ ಪೂರಕವಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಶಸ್ತ್ರೀಕರಣಗೊಳಿಸಿ (Weaponisation) ವಿರೋಧ ಪಕ್ಷಗಳನ್ನು, ಆಡಳಿತ ವಿರೋಧಿ ಜನತೆಯನ್ನು ನಿಯಂತ್ರಿಸುವುದು. ಆರ್ಥಿಕವಾಗಿ ಉತ್ಪಾದನೆಯ ಮೂಲಗಳನ್ನು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗಿ ಬಂಡವಾಳಿಗರ ನಿಯಂತ್ರಣಕ್ಕೆ ಒಪ್ಪಿಸುವುದು. ನವ ಉದಾರವಾದದಲ್ಲಿ ಇದು ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳನ್ನು ವಾಣಿಜ್ಯೀಕರಣಗೊಳಿಸಿ, ಸರಕಾರಗಳ ಬಾಧ್ಯತೆಯಿಂದ ತಪ್ಪಿಸಿಕೊಳ್ಳುವುದು. ತಳಸ್ತರದ ಸಮಾಜದಲ್ಲಿ ಆರ್ಥಿಕ-ಸಾಮಾಜಿಕ ಅಸಮಾನತೆಗಳನ್ನು ಹೆಚ್ಚಿಸುವ ಮೂಲಕ ಶಾಶ್ವತವಾಗಿ ಪರಾವಲಂಬಿಗಳನ್ನಾಗಿ ಮಾಡುವುದು, ಇಲ್ಲಿ ಸೃಷ್ಟಿಯಾಗಬಹುದಾದ ಅಸಮಾಧಾನಗಳನ್ನು ಕಲ್ಯಾಣ ಯೋಜನೆಗಳ ಮೂಲಕ ಶಮನಗೊಳಿಸುವುದು.

ಭಾರತದ ಸಂವಿಧಾನ ಯಾವುದೇ ರೀತಿಯಲ್ಲೂ ಈ ನೀತಿ ನಿರೂಪಣೆಗೆ ಅಡ್ಡಿಯುಂಟುಮಾಡುವುದಿಲ್ಲ. ಕೆಲವು ನಿರ್ಬಂಧಗಳನ್ನು ಮಾತ್ರ ಹೇರಲು ಸಾಧ್ಯ. ಆದರೆ ಬಹುಮತದ ಸರಕಾರಕ್ಕೆ ಈ ನಿರ್ಬಂಧಗಳನ್ನೂ ಮೀರುವ ಅವಕಾಶಗಳಿರುತ್ತವೆ. ಆದರೆ ಇಲ್ಲಿ ಗಮನಿಸಬೇಕಿರುವ ಸೂಕ್ಷ್ಮ ಬೇರೆಯೇ ಇದೆ. ಫ್ಯಾಶಿಸ್ಟ್ ಎಂದು ರಾಜಕೀಯ ಪರಿಭಾಷೆಯಲ್ಲಿ ನಿರ್ವಚಿಸಲಾಗುವ ಆಡಳಿತ ವ್ಯವಸ್ಥೆಯ ಅಂತಃಶಕ್ತಿ ಇರುವುದು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಕಟ್ಟಕಡೆಯ ಸಮುದಾಯವನ್ನೂ ಆವರಿಸುವ ಸಾಮಾಜಿಕ ಮೌಲ್ಯಗಳಲ್ಲಿ. ಈ ಮೌಲ್ಯಗಳನ್ನು ತೊಡೆದುಹಾಕದ ಹೊರತು, ಮೇಲ್ಮಟ್ಟದಲ್ಲಿರುವ ಶಕ್ತಿಯುತ ಅಧಿಕಾರ ಕೇಂದ್ರಗಳನ್ನು ಅಲುಗಾಡಿಸಲೂ ಆಗುವುದಿಲ್ಲ. ‘‘ಜಾತಿ ವ್ಯವಸ್ಥೆಯ ಅಸಮಾನತೆ, ಶ್ರೇಣಿ ವ್ಯವಸ್ಥೆ ಮತ್ತು ಸಾಮಾಜಿಕ ಭ್ರಾತೃತ್ವದ ಕೊರತೆಯಿಂದಾಗಿ ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವವು ಆಳವಾಗಿ ಬೇರೂರಿಲ್ಲ? ಭಾರತೀಯ ಪ್ರಜಾಪ್ರಭುತ್ವವು ಪ್ರಜತಂತ್ರ ವಿರೋಧಿ ಭೂಮಿಯಲ್ಲಿ ಕೇವಲ ಮೇಲ್ಮೈ ಅಲಂಕಾರವಾಗಿದೆ’’ ಎಂದು ಅಂಬೇಡ್ಕರ್ ಎಚ್ಚರಿಸಿದ್ದುದನ್ನು ಸ್ಮರಿಸಬೇಕು. ಇದು 2026ರಲ್ಲೂ ಕಣ್ಣಿಗೆ ಕಾಣುವ ಸತ್ಯ.

ಸಾಮಾಜಿಕ ಲಕ್ಷಣಗಳಲ್ಲಿ ಫ್ಯಾಶಿಸಂ ಛಾಯೆ

ಭಾರತೀಯ ಸಮಾಜದಲ್ಲಿ ಆಂತರಿಕವಾಗಿ ಬೇರೂರಿರುವ ಈ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಪ್ರಧಾನವಾಗಿ ನಾಲ್ಕು ಸ್ತರಗಳಲ್ಲಿ ಕಾಣಬಹುದು. ವಿಘಟಿತ ಸಮಾಜಗಳಲ್ಲಿ ಸಾಮಾಜಿಕ ಪ್ರಾಬಲ್ಯ ಸಾಧಿಸುವ ಊಳಿಗಮಾನ್ಯ ಪದ್ಧತಿ. ಸಮಾಜದ ಶ್ರಮಿಕ ವರ್ಗದ ಮೇಲೆ ಆಧಿಪತ್ಯ ಸಾಧಿಸುವ ಯಜಮಾನಿಕೆಯ ಸಂಸ್ಕೃತಿ. ಪ್ರಾತಿನಿಧಿಕ ವ್ಯವಸ್ಥೆಯನ್ನು ನಿರಾಕರಿಸುವ ತನ್ಮೂಲಕ ಪ್ರಾತಿನಿಧ್ಯವನ್ನು ಕಡೆಗಣಿಸುವ ಪಿತೃಪ್ರಧಾನ ಧೋರಣೆ. ಇಡೀ ಸಮಾಜದ/ಸಮುದಾಯದ/ವರ್ಗದ ಮೇಲೆ ಪಾರಮ್ಯ ಸಾಧಿಸುವ ಆರ್ಥಿಕ ಹಿಡಿತ ಮತ್ತು ಪ್ರಾಬಲ್ಯ. ಶಿಕ್ಷಣ-ಕಲಿಕೆ-ಸಾಹಿತ್ಯ-ಕಲೆ ಈ ಸಾಂಸ್ಕೃತಿಕ ವಲಯಗಳ ಮೇಲೆ ಆಧಿಪತ್ಯ ಸಾಧಿಸುವ ಶ್ರೇಣೀಕರಣ, ಅದಕ್ಕೆ ನೆರವಾಗುವ ಜಾತಿ ವ್ಯವಸ್ಥೆ. ಈ ನಾಲ್ಕೂ ಮೌಲ್ಯಗಳು ಪ್ರಾಚೀನ ಅಥವಾ ಮಧ್ಯಕಾಲೀನ ಹೌದಾದರೂ, ವರ್ತಮಾನದ ಭಾರತದಲ್ಲಿ ಯಾವ ಸಮಾಜವೂ ಇದರಿಂದ ಹೊರತಾಗಿಲ್ಲ.

ಅರಗಿಸಿಕೊಳ್ಳುವುದು ಕಷ್ಟವಾದರೂ ಇಲ್ಲಿ ಗಮನಿಸಬೇಕಾದ ಕಟು ವಾಸ್ತವ ಎಂದರೆ ಭಾರತದ ಯಾವ ರಾಜಕೀಯ ಪಕ್ಷಗಳೂ, ಯಾವ ಸಂಸ್ಥೆಗಳೂ, ಜಾತಿ ಗುಂಪುಗಳೂ ಈ ಮೌಲ್ಯಗಳಿಂದ ಹೊರತಾಗಿಲ್ಲ. ಮೇಲ್ಮಟ್ಟದಿಂದ ಎಲ್ಲವನ್ನೂ ನಿಯಂತ್ರಿಸುವ ಮತ್ತು ನಿರ್ದೇಶಿಸುವ ಒಂದು ಪರಂಪರೆಯಿಂದ ನಮಗೆ ಹೊರಬರಲು ಸಾಧ್ಯವಾಗಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಮತ್ತು ಒಳಗೊಳ್ಳುವ ಪ್ರಾತಿನಿಧಿಕ ಮೌಲ್ಯಗಳಿಗಾಗಿ ಆಗ್ರಹಿಸುತ್ತಲೇ, ಆಂತರಿಕವಾಗಿ ಕೇಂದ್ರೀಕೃತ ನೀತಿಯನ್ನು ಅನುಸರಿಸುವ, ಪ್ರಾತಿನಿಧ್ಯವನ್ನು ಸಾಪೇಕ್ಷವಾಗಿ ಪರಿಗಣಿಸುವ ರಾಜಕೀಯ ಪಕ್ಷಗಳು ನಮ್ಮ ನಡುವೆ ಇದೆ. ಸಾಮಾಜಿಕ ನೆಲೆಯಲ್ಲಿ ಇದನ್ನು ಸಂವಿಧಾನದ ಫಲಾನುಭವಿ ಸಮುದಾಯಗಳಲ್ಲಿ ಗುರುತಿಸಬಹುದು. ದಲಿತರಲ್ಲೇ ಒಳಮೀಸಲಾತಿಯನ್ನು ನಿರಾಕರಿಸುವ ಒಂದು ವರ್ಗ, ಹಿಂದುಳಿದ ವರ್ಗಗಳಲ್ಲೇ ಮಂಡಲ್ ಯುಗದ ಫಲಾನುಭವಿ ವರ್ಗಗಳ ಮೇಲರಿಮೆ ಇವೆಲ್ಲವೂ ನಿದರ್ಶನವಾಗಿ ನೋಡಬಹುದು.

ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಶಿಥಿಲವಾಗುತ್ತಿರುವುದೇ ತಳಮಟ್ಟದಲ್ಲಿರುವ ಈ ದ್ವಂದ್ವ ಮತ್ತು ನ್ಯೂನತೆಗಳಿಂದ. ಸಂವಿಧಾನವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡುವುದರಿಂದ, ಅಂಬೇಡ್ಕರ್‌ರನ್ನು ರಥಯಾತ್ರಿಯನ್ನಾಗಿ ಮಾಡುವುದರಿಂದ, ಇತ್ತೀಚೆಗೆ ಕರ್ನಾಟಕದಲ್ಲಿ ಕೇಳಿಬಂದ ಕುವೆಂಪು ಅವರನ್ನು ಮನೆಮನೆಯಲ್ಲಿ ಧೂಪ ದೀಪ ಹೂಗಳ ಮೂಲಕ ಭಜಿಸುವುದರಿಂದ ಈ ಪಾತಾಳ ಕುಸಿತವನ್ನು ತಡೆಗಟ್ಟಲಾಗುವುದಿಲ್ಲ. ಭಾರತದ ಜಾತಿ ವ್ಯವಸ್ಥೆಯಲ್ಲಿ ಪ್ರತಿಯೊಂದು ಫಲಾನುಭವಿ ವರ್ಗವೂ ತನಗಿಂತಲೂ ಕೆಳಸ್ತರದಲ್ಲಿರುವವರನ್ನು ನಿಕೃಷ್ಟವಾಗಿ ನೋಡುವ ಹಾಗೆ, ವಿಶಾಲ ಸಮಾಜದಲ್ಲೂ(Broader Society) ಸಹ ವರ್ಗೀಕರಣ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ಬಲಾಢ್ಯ ವರ್ಗಗಳು ಹಂಚಿ ಬಾಳುವುದಕ್ಕಿಂತಲೂ ದೋಚಿ ಬಾಳುವುದನ್ನೇ ಗುರಿಯಾಗಿಸಿ ಮೇಲುಗೈ ಸಾಧಿಸಲು ಆಶಿಸುತ್ತವೆ. ಸಾಂವಿಧಾನಿಕ ಸವಲತ್ತುಗಳನ್ನೂ ಸಹ ಹಂಚಿಕೊಳ್ಳಲು ಮನಸ್ಸಿಲ್ಲದ ವರ್ಗ ಸಮಾಜವನ್ನು ಸ್ವತಂತ್ರ ಭಾರತ ಸೃಷ್ಟಿಸಿದೆ.

ಅರಿವು ಪ್ರಜ್ಞೆ ಮತ್ತು ಕ್ರಿಯಾಶೀಲತೆ

ಭಾರತದಲ್ಲಿ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲೇ, ಸಂವಿಧಾನದ ಚೌಕಟ್ಟಿನಲ್ಲೇ ಫ್ಯಾಶಿಸಂ ಏಕೆ ತಳಮಟ್ಟದ ಕಟ್ಟಕಡೆಯ ವ್ಯಕ್ತಿಯನ್ನೂ ಸಹ ಸಮ್ಮೋಹನಗೊಳಿಸಿದೆ ಎಂಬ ಜಟಿಲ ಪ್ರಶ್ನೆಗೆ ಉತ್ತರ ನಮ್ಮೊಳಗೇ ಇದೆ. ಜನಸಾಮಾನ್ಯರನ್ನು ಈ ಸಮ್ಮೋಹನಾಸ್ತ್ರದಿಂದ ಮುಕ್ತಗೊಳಿಸಬೇಕಾದರೆ, ಅವರ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ಪ್ರಾಚೀನ ಮೌಲ್ಯಗಳನ್ನು ಹೋಗಲಾಡಿಸಬೇಕು. ಈ Social Engineering ರಾಜಕೀಯ ಪಕ್ಷಗಳ, ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳ ಹಾಗೂ ಸಾಹಿತ್ಯಿಕ ಪರಿಚಾರಕರ ಆದ್ಯತೆಯಾಗಬೇಕು. ವಿಶೇಷವಾಗಿ ಈ ಸಮ್ಮೋಹನಕ್ಕೊಳಗಾಗಿರುವ ಮಿಲೆನಿಯಂ ಸಮಾಜವನ್ನು ಕತ್ತಲ ಕೂಪದಿಂದ ಹೊರಗೆಳೆಯಬೇಕು. ಈ ಯುವ ಸಮಾಜದಲ್ಲಿ ಬೆಳಕು ಕಾಣದಂತೆ ಮಾಡುವ ಉದ್ದೇಶದಿಂದಲೇ ಇತಿಹಾಸವನ್ನು ತಿರುಚಲಾಗುತ್ತಿದೆ, ಪುರಾಣ-ಮಿಥ್ಯೆಗಳನ್ನು ಚರಿತ್ರೆ ಎಂದು ಬಿಂಬಿಸಲಾಗುತ್ತಿದೆ. ಚಾರಿತ್ರಿಕ ಸತ್ಯಗಳನ್ನು ಸುಳ್ಳು ಎಂದು ವಾದಿಸಲಾಗುತ್ತಿದೆ.

ಇದಕ್ಕೆ ಬಳಕೆಯಾಗುತ್ತಿರುವುದು ಅತ್ಯಾಧುನಿಕ ತಂತ್ರಜ್ಞಾನ, ಸಂವಹನ ಮಾಧ್ಯಮಗಳು, ಸಾಧನಗಳು ಮತ್ತು ಇವುಗಳ ಮೇಲೆ ಆಧಿಪತ್ಯ ಸಾಧಿಸಿರುವ ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯ. ಮಿಲೆನಿಯಂ ಸಮಾಜವನ್ನು ಫ್ಯಾಶಿಸಂ ವಿರುದ್ಧದ ಹೋರಾಟಕ್ಕೆ ತಯಾರಿಸುವ ಮುನ್ನ ಫ್ಯಾಶಿಸಂ ಎಂದರೇನು ಎಂದು ತಿಳಿಸಬೇಕಿದೆ. ಹಿಟ್ಲರ್ ಮುಸ್ಸೋಲಿನಿಯರನ್ನು ಬದಿಗಿಟ್ಟು, ನಮ್ಮ ಸಮಾಜದ ಒಳಗೇ ಹೇಗೆ ಈ ಕ್ರೌರ್ಯ ಸದ್ದಿಲ್ಲದೆ ಮನೆಮಾಡುತ್ತಿದೆ ಎಂದು ಮನದಟ್ಟು ಮಾಡಬೇಕಿದೆ. ಚರಿತ್ರೆಯ ವೈಭವದಲ್ಲಿ ಸಂಭ್ರಮಿಸುತ್ತಿರುವ ಈ ಯುವ ಸಮಾಜಕ್ಕೆ ಮತ್ತು ಅದನ್ನು ನಿರ್ದೇಶಿಸುತ್ತಿರುವ ಫಲಾನುಭವಿ ವರ್ಗಗಳಿಗೆ , ಫ್ಯಾಶಿಸಂನಿಂದಾಗುವ ಅಪಾಯಗಳನ್ನೂ ಮನದಟ್ಟು ಮಾಡಬೇಕಿದೆ. ಸಂವಿಧಾನದ ಪಠಣ, ಓದು, ಅರಿವು ಈ ಕಲ್ಪನೆಗಳನ್ನು ದಾಟಿ ಯೋಚಿಸುವುದು ಅನಿವಾರ್ಯವಾಗಿದೆ.

ಭಾರತದ ಗಣತಂತ್ರ ಭೌತಿಕವಾಗಿ ಸುರಕ್ಷಿತವಾಗಿದ್ದರೂ, ಮೌಲಿಕವಾಗಿ ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಭವಿಷ್ಯದ ಅಪಾಯಗಳನ್ನು ಗುರುತಿಸಬೇಕಿದೆ. ಇದು ಸಾಧ್ಯವಾಗಬೇಕಾದರೆ ನಾವು ಎರಡು ನಿಲುವುಗನ್ನಡಿಗಳ ನಡುವೆ ನಿಂತು ಚಹರೆಯಲ್ಲಿರುವ ಹುಳುಕುಗಳನ್ನು, ಬೆನ್ನ ಮೇಲಿರುವ ಕಲೆಗಳನ್ನು ಗಮನಿಸಿ, ಸ್ವ ವಿಮರ್ಶೆಗೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಸಮಾಜದ ನರನಾಡಿಗಳನ್ನೂ ಆವರಿಸುತ್ತಿರುವ ಫ್ಯಾಶಿಸಂನ ಲಕ್ಷಣಗಳು, ಭಾರತದ ಪ್ರಜಾಪ್ರಭುತ್ವವನ್ನು ಚರಿತ್ರೆಯ ಪಳೆಯುಳಿಕೆಯನ್ನಾಗಿ ಮಾಡಿಬಿಡುತ್ತವೆ. ಈ ಅಪಾಯದ ನಿವಾರಣೆಗೆ ಚಿಕಿತ್ಸಕ ಮಾರ್ಗೌಷಧಗಳನ್ನು ಗಾಂಧಿ, ಅಂಬೇಡ್ಕರ್, ಠಾಗೋರ್, ಕುವೆಂಪು ಮೊದಲಾದ ದಾರ್ಶನಿಕರು ಕೊಟ್ಟುಹೋಗಿದ್ದಾರೆ. ಆದರೆ ಅದನ್ನು ಬಳಸುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕಿದೆ. ಇಲ್ಲವಾದರೆ ಔಷಧಗಳು ಕಪಾಟಿನಲ್ಲಿರುತ್ತವೆ,

ರೋಗಗ್ರಸ್ಥ ಸಮಾಜ ಅವಸಾನದತ್ತ ಸಾಗುತ್ತದೆ. ಆಯ್ಕೆ ನಮ್ಮದು, ಆದ್ಯತೆ ನಮ್ಮದು, ಮಾರ್ಗವೂ ನಮ್ಮದು.

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು

Tags

RepublicansDemocratic
share
ನಾ. ದಿವಾಕರ
ನಾ. ದಿವಾಕರ
Next Story
X