ಚಿಕ್ಕ ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ; ಹುಬ್ಬಳ್ಳಿಯ ಕೆಎಂಸಿ ಆರ್‌ಐ ವೈದ್ಯರಿಂದ ಸಂಶೋಧನೆ

ಹುಬ್ಬಳ್ಳಿ: ಕೋವಿಡ್ ಬಳಿಕ ಚಿಕ್ಕಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದ್ದು, ಈ ಬಗ್ಗೆ ನಿಖರ ಕಾರಣವನ್ನು ಪತ್ತೆ ಹಚ್ಚಿದ ಹುಬ್ಬಳ್ಳಿಯ ಕೆಎಂಸಿ ಆರ್‌ಐ ವೈದರು ದೇಶಲ್ಲಿಯೇ ಪ್ರಥಮ ಸಂಶೋಧನಾ ವರದಿಯನ್ನು ಸಿದ್ಧಪಡಿಸಿದ್ದಾರೆ.
ಈ ಸಂಬಂಧ ಕೆಎಂಸಿ ಆರ್‌ಐ ಆಸ್ಪತ್ರೆಯ ಬಹುವಿಭಾಗೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ ಡಾ. ರಾಮ ಕೌಲಗುಡ್ಡ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ನೇಕಾರ, ವಿಜ್ಞಾನಿಗಳಾದ ಡಾ. ಶಿವಕುಮಾರ ಬೇಲೂರ ಮತ್ತು ಡಾ. ಅರುಣ ಶೆಟ್ಟರ ಅವರ ತಂಡ ಧಾರವಾಡ ಜಿಲ್ಲೆಯ ಆರು ಶಾಲೆಗಳ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ತೂಕ ಹೆಚ್ಚಿರುವ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿವಿಧ ರೀತಿಯ ತಪಾಸಣೆಗೆ ಒಳಪಡಿಸಿತ್ತು.
ಬಹುತೇಕ ವಿದ್ಯಾರ್ಥಿಗಳಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಟ್ರೈಗ್ಲಿಸರೈಡ್ ಹೆಚ್ಚಿರುವುದು, ಹೋಮೊಸಿಸ್ಟೈನ್, ಲಿಪೊಪ್ರೋಟೀನ್ ಹೆಚ್ಚಾಗಿರುವುದು ಸೇರಿ ಆಘಾತಕಾರಿ ಅಂಶ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ ಡಾ. ರಾಮ ಕೌಲಗುಡ್ಡ, ಚಿಕ್ಕಮಕ್ಕಳು ಹೆಚ್ಚಾಗಿ ಯಾಕೆ ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬ ಬಗ್ಗೆ ದೇಶದಲ್ಲಿಯೇ ಕೆಎಂಸಿ ಆರ್ ಪ್ರಥಮ ಅಧ್ಯಯನ ಮಾಡಿದೆ. ಇಲ್ಲಿಯವರೆಗೂ ಈ ಬಗ್ಗೆ ಅಧ್ಯಯನಗಳು ಆಗಿರಲಿಲ್ಲ. ಹೀಗಾಗಿ ಇದಕ್ಕೆ ಕಾರಣ ಏನು ಎಂದು ಹುಡುಕಲು ನಾವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡಿದ್ದೇವೆ.
ಧಾರವಾಡ ಜಿಲ್ಲೆಯ ಸರಕಾರಿ ಹಾಗೂ ಖಾಸಗಿಯ 6 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಲೆಯ ಆಡಳಿತ ಮಂಡಳಿ ಹಾಗೂ ಕುಟುಂಬಸ್ಥರ ಅನುಮತಿ ಪಡೆದು ನಾನಾ ವಿಧಗಳಲ್ಲಿ ಸಂಶೋಧನೆ ಮಾಡಿದ್ದು, 8 ರಿಂದ 10 ನೇತರಗತಿ ಮಕ್ಕಳಲ್ಲಿ ಹೆಚ್ಚು ತೂಕದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಆಘಾತಕಾರಿ ಅಂಶಗಳು ಪತ್ತೆಯಾಗಿವೆ. ಅತೀ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಬಿಪಿ, ಶುಗರ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆ ಪತ್ತೆಯಾಗಿವೆ.
ವಿವಿಧ ತಪಾಸಣೆ ಮಾಡಲು ಪ್ರತಿ ವಿದ್ಯಾರ್ಥಿಗೆ 5 ಸಾವಿರ ರೂ. ವೆಚ್ಚ ತಗಲುತ್ತದೆ. ಇದು ಸರಕಾರದ ಮಟ್ಟದಲ್ಲಿ ನೀತಿ ರೂಪದಲ್ಲಿಯೇ ಅನುಷ್ಠಾನವಾದರೆ ಖಂಡಿತವಾಗಿ ಮಕ್ಕಳಲ್ಲಿನ ಹೃದಯಾಘಾತ ತಡೆಗಟ್ಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳು: ಅಧ್ಯಯನಕ್ಕೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ಹೊಂದಿದ್ದಾರೆ ಎಂಬುದು ಗೊತ್ತಾಗಿದ್ದು, ಆ ಬಗ್ಗೆ ಅವರನ್ನು ಕೌನ್ಸೆಲಿಂಗ್‌ಗೂ ಒಳಪಡಿಸಲಾಗಿದೆ. ಈ ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ ಇಲ್ಲದೆ ಇರುವುದು, ಪ್ರತಿನಿತ್ಯ ಶಾಲೆಗೆ ಹೋಗುವುದು ಹಾಗೂ ಮನೆಗೆ ಹೋಗುವುದಷ್ಟನ್ನೇ ಮಾಡುತ್ತಿದ್ದರು. ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಮಕ್ಕಳು ದೈಹಿಕ ಶ್ರಮದ ಆಟವನ್ನೇ ಆಡುತ್ತಿರಲಿಲ್ಲ. ಇದು ಬೊಜ್ಜು ಹೆಚ್ಚಾಗಲು ಕಾರಣವಾಗಿದ್ದು, ಇದರಿಂದಲೂ ಹೃದಯಾಘಾತ ಉಂಟಾಗುತ್ತಿದೆ ಎನ್ನುತ್ತಾರೆ ವೈದ್ಯರು.
1 ರಿಂದ 4 ಗಂಟೆ ಮೊಬೈಲ್ ನೋಡುತ್ತಿದ್ದ ಮಕ್ಕಳು: ಮಕ್ಕಳು ಪ್ರತಿ ದಿನ ಒಂದು ಗಂಟೆಯಿಂದ ನಾಲ್ಕು ಗಂಟೆವರಗೆ ಮೊಬೈಲ್ ನೋಡುತ್ತಿದ್ದರು. ಜೊತೆಗೆ ಅವರ ಆಹಾರ ಕ್ರಮವೂ ಸರಿಯಾಗಿರಲಿಲ್ಲ. ಅಸಹಜತೆ ಕಂಡುಬಂದ ವಿದ್ಯಾರ್ಥಿಗಳ ಪರೀಕ್ಷಾ ವರದಿಯನ್ನು ಅವರ ಹೆತ್ತವರಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕಳುಹಿಸಿ ಕೊಡಲಾಗಿದೆ. ಅವರ ದೈನಂದಿನ ಜೀವನ ಬದಲಾವಣೆಯಾಗದೇ ಹೋದರೆ ಅವರು ಹೃದಯಾಘಾತಕ್ಕೆ ಹತ್ತಿರವಾಗಿದ್ದಾರೆ ಎಂಬುದನ್ನು ತಿಳಿಸಲಾಗಿದೆ. ಜೊತೆಗೆ ಅಧ್ಯಯನ ತಂಡವೇ ವಿದ್ಯಾರ್ಥಿಗಳ ಮನೆಗೆ ಹೋಗಿ, ಅವರಿಗೆ ಆಹಾರ ಪದ್ಧತಿ, ದೈಹಿಕ ಚಟುವಟಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟಿದೆ. ಅಲ್ಲದೆ, ಅನುವಂಶಿಕ ಸಮಸ್ಯೆ ಇರುವ ಮಕ್ಕಳಲ್ಲಿ ಹೆತ್ತವರ ಜೊತೆ ಕುಳಿತು ಕೌನ್ಸೆಂಗ್ ಮಾಡಲು ತಂಡ ಮುಂದಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪರಿಹಾರ ಕ್ರಮಗಳೇನು?: ಮಕ್ಕಳಲ್ಲಿ ಹೃದಯಾಘಾತವಾಗುವುದನ್ನು ತಪ್ಪಿಸಬೇಕಾದರೆ ಅವರ ಆಹಾರ ಪದ್ದತಿ ಬದಲಾಗಲೇಬೇಕಾಗಿದೆ. ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಪಠ್ಯದ ಜೊತೆಗೆ ಆಟಕ್ಕೂ ಹೆಚ್ಚಿನ ಸಮಯ ನೀಡಬೇಕು. ಒಳ್ಳೆಯ ಜೀವನ ಶೈಲಿ, ಒಳ್ಳೆಯ ಆಹಾರ ಪದ್ಧತಿ ರೂಢಿಸಿಕೊಂಡರೆ ಹೃದಯದ ತೊಂದರೆಯಿಂದ ಪಾರಾಗಬಹುದು ಸಲಹೆ ನೀಡಿದ್ದಾರೆ.
ಸಂಶೋಧನೆಯಲ್ಲಿ ಭಾಗಿಯಾದ ಡಾ.ಮಂಜುನಾಥ ನೇಕಾರ ಪ್ರತಿಕ್ರಿಯಿಸಿ, ಚಿಕ್ಕ ಮಕ್ಕಳಿಗೆ ಆಗುವ ಹೃದಯಾಘಾತ ತಪ್ಪಿಸಲು ಪೋಷಕರ ಪಾತ್ರ ಮುಖ್ಯವಾಗಿದೆ. ತಮ್ಮ ಮಕ್ಕಳು ಆಟದಲ್ಲಿ ಆಸಕ್ತಿ ವಹಿಸುವದನ್ನು ಕಲಿಸಬೇಕು. ಕೇವಲ ಮಾರ್ಕ್ ತೆಗೆಯುವುದೇ ಅವರ ಕಾಯಕವಾಗಬಾರದು. ಶಾಲೆಗಳಲ್ಲಿ ಆಟದ ಮೈದಾನಗಳು ಇಲ್ಲದೆ ಅಪಾರ್ಟ್‌ಮೆಂಟ್‌ಗಳಂತೆ ಆಗುತ್ತಿವೆ. ಪ್ರತಿ ಶಾಲೆಗೂ ಆಟದ ಮೈದಾನ ಕಡ್ಡಾಯವಾಗಿ ಇರಬೇಕು. ಇದ್ದರೆ ಮಾತ್ರ ಶಾಲೆಗೆ ಅನುಮತಿ ಕೊಡುವ ವ್ಯವಸ್ಥೆ ಬರಬೇಕು. ಇದರಿಂದ ವರದಿಯಲ್ಲಿ ಬಂದಂತ ಆಘಾತಕಾರಿ ಅಂಶಗಳನ್ನು ಮೆಟ್ಟಿ ನಿಲ್ಲಬಹುದು. ಪಾಲಕರೂ ಮಕ್ಕಳ ಮೇಲಿನ ಅಕ್ಕರೆಗೆ ಸಿಹಿ ಪದಾರ್ಥ ಕೊಡುವುದು, ಮೊಬೈಲ್ ಕೊಡುವುದನ್ನು ತಪ್ಪಿಸಬೇಕು. ಜಂಕ್ ಫುಡ್ ತಿನ್ನುವುದು ಹೆಚ್ಚಾಗುತ್ತಿದ್ದು, ಇದಕ್ಕೂ ಪೋಷಕರು ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೆಎಂಸಿ ಆರ್‌ಐನ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಪ್ರತಿಕ್ರಿಯಿಸಿ, ಚಿಕ್ಕಮಕ್ಕಳಲ್ಲಿ ಹೃದಯಾಘಾತ ಸಂಬಂಧಿತ ಸಮಸ್ಯೆಗಳು ಕಂಡು ಬಂದಿದ್ದು ಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಸರಿಯಾದ ವ್ಯಾಯಾಮ, ಸರಿಯಾದ ಊಟ ಮಾಡದಿರುವದು, ಜಂಕ್ ಫುಡ್ ಸೇವನೆ ಮಾಡುವುದರಿಂದ ಈ ತರ ಬಂದಿರಬಹುದು. ನಮ್ಮ ಸಂಸ್ಥೆ ವತಿಯಿಂದ ಇನ್ನೂ ಹಲವು ಶಾಲೆಗಳಿಗೆ ಭೇಟಿ ನೀಡಿ ಹೆಚ್ಚಿನ ಸ್ಯಾಂಪಲ್ ಸಂಗ್ರಹಿಸಲಾಗುವುದು. ಈ ಕುರಿತಂತೆ ಈಗಾಗಲೇ ಸರಕಾರಕ್ಕೂ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.







