ಯಲಬುರ್ಗಾ, ಕುಕನೂರು ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ ಚುರುಕು

ಸಾಂದರ್ಭಿಕ ಚಿತ್ರ
ಯಲಬುರ್ಗಾ/ಕುಕನೂರ: ಬಹುದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಸಿದ್ಧತೆಯ ಭಾಗವಾಗಿ ರಾಜ್ಯ ಸರಕಾರ ಕ್ಷೇತ್ರಗಳ ಮೀಸಲಾತಿ ಕರಡು ಪಟ್ಟಿ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಯಲಬುರ್ಗಾ-ಕುಕನೂರು ಅವಳಿ ತಾಲೂಕುಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಚುನಾವಣಾ ಲೆಕ್ಕಾಚಾರ ಆರಂಭಿಸಿದ್ದಾರೆ.
ಕರಡು ಪಟ್ಟಿಯ ಪ್ರಕಾರ, ಯಲಬುರ್ಗಾ ತಾಪಂ ವ್ಯಾಪ್ತಿಯ 15, ಕುಕನೂರು ತಾಪಂ ವ್ಯಾಪ್ತಿಯ 9 ಹಾಗೂ ಎರಡೂ ತಾಲೂಕುಗಳ ವ್ಯಾಪ್ತಿಯ 7 ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಇದು ಕರಡು ಪಟ್ಟಿಯಾಗಿದ್ದು, ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಪಟ್ಟಿ ಪ್ರಕಟವಾಗುವ ಸಂಭವವಿದೆ.
ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ತೊಡಗಿದ್ದಾರೆ. ಮೀಸಲಾತಿ ಅನುಕೂಲವಾಗಿರುವವರು ಚುನಾವಣಾ ಸಿದ್ಧತೆಯತ್ತ ಗಮನ ಹರಿಸಿದ್ದರೆ, ಅವಕಾಶ ಬದಲಾಗಿರುವವರು ಪರ್ಯಾಯ ಕ್ಷೇತ್ರಗಳ ಸಾಧ್ಯತೆ ಪರಿಶೀಲಿಸುತ್ತಿದ್ದಾರೆ. ಪಕ್ಷಗಳ ಸ್ಥಳೀಯ ಮುಖಂಡರು ಹಾಗೂ ವರಿಷ್ಠರ ಮಟ್ಟದಲ್ಲಿಯೂ ಟಿಕೆಟ್ ಹಂಚಿಕೆ ಕುರಿತು ಚರ್ಚೆಗಳು ಆರಂಭವಾಗುವ ನಿರೀಕ್ಷೆಯಿದೆ.
ತಾಪಂ ಕ್ಷೇತ್ರಗಳ ಮೀಸಲಾತಿ ಕರಡು ಯಲಬುರ್ಗಾ (15 ತಾಪಂ ಕ್ಷೇತ್ರಗಳು) :
ಮುಧೋಳ-ಸಾಮಾನ್ಯ, ಹಿರೇಮ್ಯಾಗೇರಿ-ಹಿಂದುಳಿದ ವರ್ಗ ‘ಅ’, ಕಲ್ಲೂರು-ಅನುಸೂಚಿತ ಜಾತಿ, ಬಳೂಟಗಿ-ಅನುಸೂಚಿತ ಜಾತಿ (ಮಹಿಳೆ), ಬಂಡಿ- ಸಾಮಾನ್ಯ (ಮಹಿಳೆ), ವಜ್ರಬಂಡಿ-ಅನುಸೂಚಿತ ಪಂಗಡ (ಮಹಿಳೆ), ಚಿಕ್ಕಮ್ಯಾಗೇರಿ-ಅನುಸೂಚಿತ ಪಂಗಡ (ಮಹಿಳೆ), ಮಾಟಲದಿನ್ನಿ-ಸಾಮಾನ್ಯ, ಹಿರೇವಂಕಲಕುಂಟಾ-ಸಾಮಾನ್ಯ, ತಾಳಕೇರಿ- ಸಾಮಾನ್ಯ (ಮಹಿಳೆ),ಗಾಣದಾಳ-ಅನುಸೂಚಿತ ಪಂಗಡ, ಗುನ್ನಾಳ-ಸಾಮಾನ್ಯ (ಮಹಿಳೆ), ಮುರಡಿ-ಸಾಮಾನ್ಯ, ಬೇವೂರು-ಸಾಮಾನ್ಯ (ಮಹಿಳೆ), ಹಿರೇಅರಳಿಹಳ್ಳಿ-ಹಿಂದುಳಿದ ವರ್ಗ ‘ಅ’ (ಮಹಿಳೆ).
ಕುಕನೂರು (9 ತಾಪಂ ಕ್ಷೇತ್ರಗಳು) :
ಮಂಗಳೂರು-ಸಾಮಾನ್ಯ, ತಳಕಲ್-ಸಾಮಾನ್ಯ, ಬನ್ನಿಕೊಪ್ಪ-ಸಾಮಾನ್ಯ, ಕುದ್ರಿಮೋತಿ-ಹಿಂದುಳಿದ ವರ್ಗ ‘ಅ’ (ಮಹಿಳೆ), ಹಿರೇಬೀಡನಾಳ-ಅನುಸೂಚಿತ ಪಂಗಡ (ಮಹಿಳೆ), ರಾಜೂರು-ಸಾಮಾನ್ಯ (ಮಹಿಳೆ), ಯರೇಹಂಚಿನಾಳ-ಸಾಮಾನ್ಯ (ಮಹಿಳೆ), ಇಟಗಿ-ಅನುಸೂಚಿತ ಜಾತಿ (ಮಹಿಳೆ), ಬೆಣಕಲ್ಲ-ಅನುಸೂಚಿತ ಜಾತಿ.
ಜಿಪಂ ಕ್ಷೇತ್ರಗಳ ಮೀಸಲಾತಿ ಕರಡು ಯಲಬುರ್ಗಾ (4 ಜಿ. ಪಂ ಕ್ಷೇತ್ರಗಳು) :
ಹಿರೇವಂಕಲಕುಂಟಾ-ಅನುಸೂಚಿತ ಪಂಗಡ (ಮಹಿಳೆ), ಬಳೂಟಗಿ-ಅನುಸೂಚಿತ ಜಾತಿ, ಮುಧೋಳ-ಹಿಂದುಳಿದ ವರ್ಗ ‘ಅ’, ಬೇವೂರು-ಸಾಮಾನ್ಯ (ಮಹಿಳೆ).
ಕುಕನೂರು (3 ಜಿ. ಪಂ ಕ್ಷೇತ್ರಗಳು) :
ತಳಕಲ್-ಹಿಂದುಳಿದ ವರ್ಗ ‘ಬಿ’ (ಮಹಿಳೆ), ಮಂಗಳೂರು-ಸಾಮಾನ್ಯ, ಇಟಗಿ-ಅನುಸೂಚಿತ ಜಾತಿ (ಮಹಿಳೆ).
ಅ.19ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ :
ಕರಡು ಮೀಸಲಾತಿ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ಸಂಬಂಧಿತ ದಾಖಲೆಗಳೊಂದಿಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಅವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅ.19ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು. ಗಡುವಿನ ಬಳಿಕ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ.
ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಮಾರ್ಗದರ್ಶನದಲ್ಲಿ ತಾಪಂ ಹಾಗೂ ಜಿಪಂ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಲಾಗುವುದು. ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಬಳಿಕ, ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ.
- ಸಂಗಮೇಶ ಗುತ್ತಿ, ಕಾಂಗ್ರೆಸ್ ವಕ್ತಾರ, ಕುಕನೂರು
ಸಾಮಾನ್ಯ ವರ್ಗಕ್ಕೆ ಮೀಸಲಾದ ಮಂಗಳೂರು ಜಿಪಂ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರು ಗೆಲ್ಲುವ ಸಾಮರ್ಥ್ಯವಿರುವ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಿದ್ದು, ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ.
-ಮಲ್ಲನಗೌಡ ಕೋನನಗೌಡ, ಮಂಗಳೂರು ಜಿಪಂ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಆಕಾಂಕ್ಷಿ
ಮೀಸಲಾತಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರು ಟಿಕೆಟ್ ಹಂಚಿಕೆ ನಿರ್ಧರಿಸಲಿದ್ದಾರೆ. ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸಿ ಪಕ್ಷವನ್ನು ಸದೃಢಗೊಳಿಸುವುದು ನನ್ನ ಕರ್ತವ್ಯ.
-ನವೀನ ಗುಳಗಣ್ಣನವರ್, ಬಿಜೆಪಿ ಜಿಲ್ಲಾ ಅಧ್ಯಕ್ಷ, ಕೊಪ್ಪಳ
ಬೆಣಕಲ್ ತಾಪಂ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ನಾನು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸಗಳ ಮೂಲಕ ಜನರೊಂದಿಗೆ ನಿಕಟ ಒಡನಾಟ ಹೊಂದಿದ್ದು, ಟಿಕೆಟ್ ದೊರೆತರೆ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸವಿದೆ.
-ನಿಂಗು ಜಿ.ಎಸ್, ಬೆಣಕಲ್ ತಾಪಂ ಕ್ಷೇತ್ರದ ಟಿಕೆಟ್ ಆಕಾಂಕ್ಷಿ






