ಗುಡ್ಡ ಕುಸಿತದ ಆತಂಕದಲ್ಲಿ ಉಳುವರೆ ಗ್ರಾಮದ ನಿವಾಸಿಗಳು

ಅಂಕೋಲಾ: ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತದ ಮಣ್ಣು ಗಂಗಾವಳಿ ನದಿಯಲ್ಲಿ ಬಿದ್ದು ಗುಡ್ಡದಂತಾಗಿದ್ದು ಅಧಿಕಾರಿ ಮತ್ತು ಆಡಳಿತ ವರ್ಗದವರು ತೆರವುಗೊಳಿಸದೇ ಇರುವುದರಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿಯೂ ಇಲ್ಲಿ ಗುಡ್ಡ ಕುಸಿಯಬಹುದು ಎನ್ನುವ ಆತಂಕದಿಂದಾಗಿ ಇನ್ನೊಂದು ದಡವಾದ ಉಳುವರೆ ಗ್ರಾಮದ ನಿರಾಶ್ರಿತರಿಗೆ ಬೇರೆ ಕಡೆ ನಿವೇಶನ ನೀಡಿ ಅವರನ್ನು ಸ್ಥಳಾಂತರಿಸಲಾಗಿದೆ. ಇನ್ನು ಗುಡ್ಡ ಕುಸಿಯುವ ಅಥವಾ ಅಪಾಯದ ಮುನ್ಸೂಚನೆ ಸಿಕ್ಕರೆ ಈಗಾಗಲೇ ನಿರ್ಮಾಣಗೊಂಡಿರುವ ಮಂಜಗುಣಿ-ಗಂಗಾವಳಿ ಸೇತುವೆಯ ಮೂಲಕ ವಾಹನ ಬಿಡಲು ಅಧಿಕಾರಿಗಳು ಚಿಂತಿಸಿದ್ದಾರೆ ಎನ್ನಲಾಗಿದೆ. ಯಲ್ಲಾಪುರ-ಹುಬ್ಬಳ್ಳಿ ಕಡೆಗೆ ತೆರಳುವ ವಾಹನಗಳಿಗೆ ಬಳಲೆ ಮೂಲಕ ಹೊಸಕಂಬಿ ಮಾರ್ಗವಾಗಿ ತೆರಳಲು ಸಿದ್ಧತೆ ನಡೆಸಿದ್ದಾರೆ.
ಈ ಬಾರಿ ಭಾರೀ ಮಳೆಯಾದರೆ ನದಿಯಲ್ಲಿ ಬಿದ್ದ ಗುಡ್ಡ ಕುಸಿತದ ಮಣ್ಣಿನಿಂದಾಗಿ ಮೇಲ್ಭಾಗದ ಸಗಡಗೇರಿ, ವಾಸರಕುದ್ರಿಗೆ, ಅಗಸೂರು, ಡೋಂಗ್ರಿ, ಸುಂಕಸಾಳ, ಹಿಲ್ಲೂರು ಪಂಚಾಯತ್ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನುಗ್ಗುವ ಸಾಧ್ಯತೆಯಿದೆ. ಹಾಗೇ ಒಮ್ಮೆಲೆ ನೀರು ನುಗ್ಗಿ ಮಣ್ಣು ಒಡೆದು ಬಂದರೆ ಗಂಗಾವಳಿ ನದಿಯ ಪಕ್ಕದ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಬಾರಿ ಘಟ್ಟದ ಮೇಲ್ಭಾಗದಲ್ಲಿ ವಿಪರೀತ ಮಳೆ ಬಿದ್ದರೆೆ ವಿವಿಧ ಸಮಸ್ಯೆಗಳಿಗೆ ಕಾರಣವಾಗಲಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ತೀರಾ ಖಂಡನಾರ್ಹವಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ಶಿರೂರು ಗುಡ್ಡ ಕುಸಿತದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ ಇದುವರೆಗೂ ಅಲ್ಲಿ ಯಾವುದೇ ತೆರವು ಕಾರ್ಯ ಮಾಡದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಾರಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯ ಪಟ್ಟಿದೆ. ಒಂದು ವೇಳೆ ಘಟ್ಟದ ಮೇಲ್ಭಾಗದಲ್ಲಿ ಭಾರೀ ಮಳೆಯಾದರೆ ಹೆಚ್ಚು ಅಪಾಯ ಸಂಭವಿಸಲಿದೆ.
-ರಮೇಶ ಗೌಡ ಶಿರೂರು, ಗ್ರಾಪಂ ಮಾಜಿ ಸದಸ್ಯ







