ಬರಗಾಲದ ನಡುವೆ ಅಕ್ಕಿ ದರ ಗಗನಕ್ಕೆ
ಕೃತಕ ಅಭಾವ ಸೃಷ್ಟಿಸಿ ಹಗಲು ದರೋಡೆ ಆರೋಪ

ಸಾಂದರ್ಭಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದ್ದು, ಭತ್ತ ಸೇರಿದಂತೆ ಕೃಷಿ ಉತ್ಪಾದನೆ ಕುಂಠಿತವಾಗಿದೆ. ಇದರ ನಡುವೆ ಬಿತ್ತನೆ ಕೊರತೆಯ ನೆಪದಲ್ಲಿ ದಲ್ಲಾಳಿಗಳು ಹಳೆಯ ಭತ್ತ ಮತ್ತು ಅಕ್ಕಿಯನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬರದ
ಸಂಕಷ್ಟದ ನಡುವೆ ಅಕ್ಕಿ ದರ ಏರಿಕೆ ಯಾಗಿರುವುದು ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಉಂಟುಮಾಡಿದೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರು, ಬೆಳೆ ಹಾನಿ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಇದರ ನೇರ ಪರಿಣಾಮ ಅಕ್ಕಿಯ ಮೇಲೂ ಬೀರಿದ್ದು, ಕಳೆದ ಎರಡು ತಿಂಗಳಲ್ಲಿ ಬೆಲೆ ಭಾರಿ ಏರಿಕೆಯಾಗಿದೆ. ಹಿಂದೆ ಕ್ವಿಂಟಾಲ್ಗೆ 3,000ರಿಂದ 4,000 ರೂ. ಇದ್ದ ಅಕ್ಕಿ ದರ ಇದೀಗ 8 ರಿಂದ 9 ಸಾವಿರ ರೂ.ಗೆ ತಲುಪಿದೆ.
ಪ್ರಸ್ತುತ ಭತ್ತ ಕಟಾವಿನ ಹಂತದಲ್ಲಿದ್ದು, ರೈತರು ಮಾರುಕಟ್ಟೆಗೆ ಉತ್ಪನ್ನ ತರುತ್ತಿದ್ದಾರೆ. ಆದರೆ ಕೆಲವು ದಲ್ಲಾಳಿಗಳು ಹಳೆಯ ಭತ್ತವನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಹೆಚ್ಚಿನ ಬೆಲೆಗೆ ಅಕ್ಕಿ ಗಿರಣಿ ಮಾಲೀಕರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಗಿರಣಿ ಮಾಲೀಕರು ಅಕ್ಕಿಯನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ದುಬಾರಿ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಬೇಕಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವೆ ವಿಶಾಲವಾದ ನೀರಾವರಿ ಪ್ರದೇಶ ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಇಲ್ಲಿ ಬೆಳೆಯುವ ಸೋನಾಮಸೂರಿ ಹಾಗೂ ಆರ್ಎನ್ಆರ್ ತಳಿಯ ಅಕ್ಕಿಗೆ ದೇಶದ ವಿವಿಧ ರಾಜ್ಯಗಳಲ್ಲಿ ಬೇಡಿಕೆಯಿದೆ. ಬೆಂಗಳೂರು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ಹಲವು ಭಾಗಗಳಿಗೆ ಅಕ್ಕಿ ಸಾಗಣೆಯಾಗುತ್ತದೆ. ಬಾಂಗ್ಲಾದೇಶ, ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತದೆ.
ಆದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದ್ದು, ಬೆಳೆಗಳಿಗೆ ನೀರಿನ ಅಭಾವ ಉಂಟಾಗಿದೆ. ಇದರಿಂದ ಭತ್ತದ ಉತ್ಪಾದನೆ ಕುಂಠಿತವಾಗಿ ಅಕ್ಕಿ ಬೆಲೆ ಏರಿಕೆಯಾಗಿದೆ. ಹಳೆಯ ಅಕ್ಕಿಯನ್ನು ಹಿಂದಿನ ವರ್ಷದ ದರದಲ್ಲೇ ಮಾರಾಟ ಮಾಡಬೇಕಿದ್ದರೂ, ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಭತ್ತ ಖರೀದಿಸಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬುದು ಕೆಲ ರೈತರ ಆರೋಪ. ಗಿರಣಿ ಮಾಲೀಕರಿಗೆ ಹೆಚ್ಚಿನ ಬೆಲೆಗೆ ಭತ್ತ ಮಾರಾಟವಾಗುತ್ತಿರುವುದರಿಂದ ಅನೇಕ ಗಿರಣಿಗಳು ಉತ್ತರ ಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಭತ್ತ ಖರೀದಿಸಿ ಅಕ್ಕಿ ಉತ್ಪಾದಿಸುತ್ತಿವೆ. ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಮೂಲಕ ಗ್ರಾಹಕರಿಗೆ ತಲುಪುವಷ್ಟರಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ಭತ್ತದ ಉತ್ಪಾದನೆ ಕುಸಿತವೇ ಬೆಲೆ ಏರಿಕೆಗೆ ಕಾರಣ ಎಂದು ಗಿರಣಿ ಮಾಲೀಕರು ಹೇಳುತ್ತಿದ್ದರೆ, ದಲ್ಲಾಳಿಗಳ ಕೃತಕ ಅಭಾವವೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂಬುದು ಕೆಲ ರೈತರ ವಾದ. ಈ ಬೆಳವಣಿಗೆಗಳ ನಡುವೆ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಶೇ.30ರಷ್ಟು ಕೊರತೆಯಾಗಿದೆ. ನೀರಾವರಿ ಪ್ರದೇಶಗಳಲ್ಲಿ ತುಂಗಭದ್ರಾ ಜಲಾಶಯದಿಂದ ತಡವಾಗಿ ನೀರು ಹರಿಸಲಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಮಳೆಯಾದ ಕಾರಣ ಇಳುವರಿಯೂ ಕುಸಿದಿದೆ.
-ಪ್ರಕಾಶ ಚವ್ಹಾಣ ಜಂಟಿ ನಿರ್ದೇಶಕರು ಕೃಷಿ ಇಲಾಖೆ, ರಾಯಚೂರು
ಕಳೆದ ತಿಂಗಳಷ್ಟೇ ಕಿರಾಣಿ ಅಂಗಡಿಗಳಲ್ಲಿ ಒಂದು ಕೆ.ಜಿ. ಅಕ್ಕಿ 30 ರೂ.ಗೆ ಸಿಗುತ್ತಿತ್ತು. ಈಗ 60 ರೂ.ಗೆ ಏರಿಕೆಯಾಗಿದೆ. ಇದರಿಂದ ಬಡವರು ಮತ್ತು ದಿನಗೂಲಿ ಕಾರ್ಮಿಕರಿಗೆ ತೀವ್ರ ಸಮಸ್ಯೆಯಾಗಿದೆ. ದಲ್ಲಾಳಿಗಳು ಗೋದಾಮುಗಳಲ್ಲಿ ಭತ್ತ ಮತ್ತು ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟು ಕೃತಕ ಅಭಾವ ಸೃಷ್ಟಿಸಿರುವುದರಿಂದಲೇ ಬೆಲೆ ಗಗನಕ್ಕೇರಿದೆ. ಸಂಬಂಧಿಸಿದ ಅಧಿಕಾರಿಗಳು ಮೌನವಾಗಿದ್ದಾರೆ. ಕೂಡಲೇ ಅಕ್ರಮ ದಾಸ್ತಾನುಗಳ ಮಾಹಿತಿ ಪಡೆದು ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಬೇಕು.
-ಮಹೇಶ್, ಮಹಮ್ಮದ್ ಅಲಿ ಗ್ರಾಹಕರು






