ಮಾಹಿತಿ ಹಕ್ಕು ಕಾಯ್ದೆ ನಿರಾಕರಣೆಯ ಹಾದಿಯಲ್ಲಿ

ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ಹಲವು ಪ್ರಮಾದಗಳು ನಡೆದಿರುವುದು ವಾಸ್ತವ. ಆದರೆ ಈ 77 ವರ್ಷಗಳ ಅವಧಿಯಲ್ಲಿ ಭಾರತದ ಚುನಾಯಿತ ಸರಕಾರಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಾಂವಿಧಾನಿಕವಾಗಿ ರಕ್ಷಿಸುವ ಮತ್ತು ಸಾಮಾಜಿಕವಾಗಿ ಸಮಾನತೆಯಿಂದ ಗುರುತಿಸುವ ನಿಟ್ಟಿನಲ್ಲಿ ಹಲವು ಸುಧಾರಣಾ ಕ್ರಮಗಳನ್ನೂ ಕೈಗೊಂಡಿವೆ. ಯುಎಪಿಎದಂತಹ ಕರಾಳ ಶಾಸನಗಳ ನಡುವೆಯೇ ನರೇಗಾದಂತಹ ಜನಸ್ನೇಹಿ ಕಾಯ್ದೆಗಳನ್ನೂ, ವಿಭಿನ್ನ ಕಾಲಘಟ್ಟಗಳಲ್ಲಿ ಜಾರಿಗೊಳಿಸಿವೆ. ಇಲ್ಲಿ ಗುರುತಿಸಬೇಕಾದ ವ್ಯತ್ಯಾಸ ಎಂದರೆ 1970ರ 20 ಅಂಶದ ಕಾರ್ಯಕ್ರಮಗಳಿಂದ 2013ರ ಅರಣ್ಯ ಹಕ್ಕುಗಳ ಕಾಯ್ದೆಯವರೆಗೂ ಕಾಣಬಹುದಾದ ಬಹುತೇಕ ಜನಪರ ಕಾಯ್ದೆಗಳಿಗೆ ಕಾರಣ ತಳಸಮಾಜದ, ಮಹಿಳೆಯರ, ಜನಪರ ಸಂಘಟನೆಗಳ ಹಾಗೂ ಬುಡಕಟ್ಟು ಸಮುದಾಯಗಳ ಜನಾಂದೋಲನಗಳು.
ಪ್ರಜಾಪ್ರಭುತ್ವದ ಮೂಲ ತತ್ವ ಇರುವುದು ಚುನಾಯಿತ ಪ್ರತಿನಿಧಿಗಳ ಸಂವಿಧಾನ ಬದ್ಧ್ದತೆ, ಶಾಸನ ಬದ್ಧತೆ, ಪ್ರಾಮಾಣಿಕತೆ, ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಬಹಳ ಮುಖ್ಯವಾಗಿ ಜನಬದ್ಧತೆಯಲ್ಲಿ. ವರ್ತಮಾನದ ಸಂದರ್ಭದಲ್ಲಿ ಈ ಎಲ್ಲ ಮೌಲ್ಯಗಳೂ ಶಿಥಿಲವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಈ ಹಿಂದೆ ಅನುಷ್ಠಾನಗೊಳಿಸಿದ್ದ ಜನಸ್ನೇಹಿ ಕಾಯ್ದೆಗಳನ್ನೂ ಸಹ, ಕಾರ್ಪೊರೇಟ್-ಬಂಡವಾಳಶಾಹಿ ಸ್ನೇಹಿ ((Crony capitalism)) ಆರ್ಥಿಕ ನೀತಿಗಳ ಸಲುವಾಗಿ, ಶಿಥಿಲಗೊಳಿಸುತ್ತಿರುವುದನ್ನೂ ನೋಡುತ್ತಿದ್ದೇವೆ. ಆದರೂ ಈ ಕಾಯ್ದೆಗಳು ತಮ್ಮ ಶಾಸನಬದ್ಧ್ದ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷಗಳು ತಾವೇ ರೂಪಿಸಿದ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸುವಂತೆಯೇ ಮತ್ತೊಂದು ಬದಿಯಲ್ಲಿ ಮತದಾರರ ಬೆಂಬಲ ಉಳಿಸಿಕೊಳ್ಳುವ ಸಲುವಾಗಿ ಕೆಲವು ಕಾನೂನುಗಳನ್ನು ಬಳಸುವುದನ್ನೂ ಕಾಣಬಹುದು.
ಆದರೆ ಸಮಾಜದ ಅವಕಾಶವಂಚಿತ-ಶೋಷಿತ ಸಮುದಾಯಗಳನ್ನು, ಅಂಚಿನಲ್ಲಿರುವ ಸಮಾಜಗಳನ್ನು ಸುಸ್ಥಿರ-ನಿಶ್ಚಿತ ಬದುಕಿನ ಕಡೆಗೆ ಕರೆದೊಯ್ಯುವ ಹಾದಿಯಲ್ಲಿ ಸಂವಿಧಾನ ಕಲ್ಪಿಸಿರುವ ಮೂಲ ತತ್ವ ಸಂಹಿತೆಗಳ ಜೊತೆಗೇ ಕೆಲವು ಜನರ ಕಾಯ್ದೆಗಳೂ ಸಹ ಸಮಾಜಗಳ ಸರ್ವತೋಮುಖ ಬೆಳವಣಿಗೆಗೆ, ಆ ಸಮಾಜಗಳ ಸದಸ್ಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಪೂರಕವಾಗಿ ಕಾರ್ಯನಿರ್ವಹಿಸಿವೆ. ‘ಪಾರದರ್ಶಕ ಆಡಳಿತ ಅಥವಾ ಆಳ್ವಿಕೆ’ ಎಂಬ ಉದಾತ್ತ ಮೌಲ್ಯವನ್ನು ಬಹುತೇಕ ರಾಜಕೀಯ ಪಕ್ಷಗಳು ಗ್ರಾಂಥಿಕ ರೂಪದಲ್ಲಿ ಮಾತ್ರವೇ ಅನುಸರಿಸುವುದರಿಂದ, ಚುನಾಯಿತ ಸರಕಾರಗಳ ಮೇಲೆ ಪಾರದರ್ಶಕತೆಯ ಜವಾಬ್ದಾರಿಯನ್ನು ಹೇರುವ ಕಾಯ್ದೆ ಕಾನೂನುಗಳು ಸಮಾಜದ ಅಭ್ಯುದಯದ ದೃಷ್ಟಿಯಿಂದ, ಜನಸಾಮಾನ್ಯರಿಗೆ ಅಪ್ಯಾಯಮಾನವಾಗಿ ಕಾಣುತ್ತವೆ. ಇಂತಹ ಒಂದು ಕ್ರಾಂತಿಕಾರಿ ಕಾನೂನು ಮಾಹಿತಿ ಹಕ್ಕು
ಕಾಯ್ದೆ (ಆರ್‌ಟಿಐ)
ಪ್ರಜಾಪ್ರಭುತ್ವದ ಉಳಿವಿಗಾಗಿ ‘ಜನರ, ಜನರಿಂದ, ಜನರಿಗಾಗಿ ಆಳ್ವಿಕೆ’ ಇದು ಪ್ರಜಾಪ್ರಭುತ್ವದ ಮೂಲ ಅಂತಃಸತ್ವ. ಅರ್ಥಾತ್ ಸರಕಾರದ ಬಳಿ ಇರುವ ಎಲ್ಲ ಮಾಹಿತಿ ದತ್ತಾಂಶಗಳೂ ಜನರಿಗೆ ಲಭ್ಯವಾಗಬೇಕು. ಈ ಮಾಹಿತಿಗಳು ಸಾರ್ವಭೌಮ ಪ್ರಜೆಗಳ ಹಕ್ಕು, ಅದನ್ನು ಜನರ ಪರವಾಗಿ ಕಾಪಿಡುವ ಜವಾಬ್ದಾರಿ ಚುನಾಯಿತ ಸರಕಾರಗಳ ಮೇಲಿರುತ್ತದೆ. ಜನರು ಶಾಸನಸಭೆಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಕಾನೂನುಬದ್ಧಗೊಳಿಸುವಂತೆಯೇ ಪ್ರತಿನಿಧಿಗಳು ಅಧಿಕಾರಶಾಹಿಯನ್ನು ಕಾನೂನುಬದ್ಧಗೊಳಿಸುತ್ತಾರೆ. ಈ ಸೂತ್ರದ ಅನುಸಾರ ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಸರಕಾರಗಳು ಎಲ್ಲ ಮಾಹಿತಿಗಳನ್ನೂ ಜನರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಆದರೆ ದೇಶದ ಸಾರ್ವಭೌಮತ್ವ, ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವು ವಿನಾಯಿತಿಗಳನ್ನೂ ಅಳವಡಿಸಲಾಗಿರುತ್ತದೆ. ಆರ್‌ಟಿಐ ಕಾಯ್ದೆಯಲ್ಲಿ ಅಂತಹ ಒಂದು ವಿನಾಯಿತಿ ಕಾಯ್ದೆಯ ಸೆಕ್ಷನ್ 8(1)(ಜೆ) ನಿರೂಪಿಸುತ್ತದೆ. ಇದು ವೈಯಕ್ತಿಕ ಮಾಹಿತಿಯನ್ನು ಕುರಿತಾದ ನಿಬಂಧನೆ.
ಈ ಸೆಕ್ಷನ್‌ನ ಮೂಲ ಸ್ವರೂಪದಲ್ಲಿ ಮಾಹಿತಿ ಹಕ್ಕನ್ನು ವ್ಯಕ್ತಿಗತ ಗೋಪ್ಯತೆಯೊಂದಿಗೆ ಸಮತೋಲನಗೊಳಿಸುವ ಉದ್ದೇಶವನ್ನು ಕಾಣಬಹುದು. ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧ ಇಲದಿದ್ದಲ್ಲಿ ಅಥವಾ ವ್ಯಕ್ತಿಯ ಗೋಪ್ಯತೆಯ ಮೇಲೆ ಅನಗತ್ಯವಾಗಿ ಅತಿಕ್ರಮಿಸುವ ಉದ್ದೇಶ ಇದ್ದಲ್ಲಿ ವೈಯಕ್ತಿಕ ಮಾಹಿತಿಯನ್ನು ನೀಡಲು ನಿರಾಕರಿಸಬಹುದು ಎಂದು ಹೇಳುತ್ತದೆ. ಸಾರ್ವಜನಿಕ ಹಿತಾಸಕ್ತಿ ಅಡಗಿದ್ದಲ್ಲಿ ಮಾತ್ರವೇ ಈ ವಿನಾಯಿತಿ ಅನ್ವಯಿಸುವುದಿಲ್ಲ. ಈ ಮೂಲ ನಿಯಮದ ನಿರ್ಣಾಯಕ ಅಂಶ ಎಂದರೆ, ಮಾಹಿತಿಯನ್ನು ಸಂಸತ್ತಿಗೆ ಅಥವಾ ವಿಧಾನಸಭೆಗೆ ನಿರಾಕರಿಸಲು ಆಗದಿದ್ದರೆ ಅದನ್ನು ವ್ಯಕ್ತಿಗೂ ನಿರಾಕರಿಸಲಾಗುವುದಿಲ್ಲ. ಈ ನಿಯಮವನ್ನು ರೂಪಿಸಿದ ಮೂಲ ಉದ್ದೇಶ ಎಂದರೆ, ಸಾರ್ವಜನಿಕ ಚಟುವಟಿಕೆ, ಖಾಸಗಿ ಚಟುವಟಿಕೆ ಹಾಗೂ ಗೋಪ್ಯತೆಯ ಅತಿಕ್ರಮಣ ಈ ಮೂರೂ ಅಂಶಗಳ ಬಗ್ಗೆ ವಿವೇಚಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ (ಪಿಐಒ) ಮಾರ್ಗದರ್ಶನವನ್ನು ನೀಡುವುದಾಗಿತ್ತು.
ಸರಕಾರಗಳು ತಮ್ಮ ನಿತ್ಯ ಕಾರ್ಯನಿರ್ವಹಣೆಯಲ್ಲಿ ವ್ಯಕ್ತಿಗಳಿಂದ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸುತ್ತಲೇ ಇರುವುದರಿಂದ ಇಂತಹ ಮಾಹಿತಿಗಳನ್ನು ಗೋಪ್ಯತೆಯ ಅತಿಕ್ರಮಣ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಅದನ್ನು ಹಂಚಿಕೊಳ್ಳಬೇಕಾಗುತ್ತದೆ. ಆದರೆ ನಿರ್ದಿಷ್ಟ ಮಾಹಿತಿಯು ವ್ಯಕ್ತಿಯ ಗೋಪ್ಯತೆಯನ್ನು ಅತಿಕ್ರಮಿಸುವಂತಿದ್ದರೆ, ಆಗ ಹಂಚಲು ನಿರಾಕರಿಸಬಹುದು. ಮೂಲಭೂತ ಮಾಹಿತಿ ಹಕ್ಕಿನ ಮೇಲೆ ಹೇರುವ ನಿರ್ಬಂಧಗಳು ಸಂವಿಧಾನದ ಅನುಚ್ಛೇದ 19(1) (2) ಅಡಿಯಲ್ಲಿ ಮಾನ್ಯತೆ ಪಡೆದಿರುವುದು ಕಡ್ಡಾಯವಾಗಿರುತ್ತದೆ. ಈ ನಿಯಮಾನುಸಾರ ಮಾಹಿತಿಯ ಹಂಚಿಕೆಯು ವ್ಯಕ್ತಿಯ ನೈತಿಕತೆ ಅಥವಾ ಘನತೆಯನ್ನು ಉಲ್ಲಂಘಿಸಿದಲ್ಲಿ ಮಾತ್ರ ಅದನ್ನು ಜನತೆಗೆ, ಸಂಸತ್ತಿಗೆ ನೀಡಲು ನಿರಾಕರಿಸಬಹುದು.
ನೂತನ ಡಿಪಿಡಿಪಿ ಕಾಯ್ದೆ-ಪರಿಣಾಮಗಳು ಈಗ ಕೇಂದ್ರ ಸರಕಾರ ಜಾರಿಗೊಳಿಸಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ (ಡಿಪಿಡಿಪಿ) ಅರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ)ಗೆ ತಿದ್ದುಪಡಿ ಮಾಡಿದೆ. ಈ ಕಾಯ್ದೆಯ ಅನುಸಾರ ಬಹುಪಾಲು ಮಾಹಿತಿಗಳನ್ನು ಸುಲಭವಾಗಿ ನಿರಾಕರಿಸಬಹುದಾಗಿದೆ. ಇಲ್ಲಿ ವೈಯಕ್ತಿಕ ಮಾಹಿತಿ ಎಂಬ ಪದದ ವ್ಯಾಖ್ಯಾನವೇ ಕಳಕಳಿಯ ವಿಷಯವಾಗಿದೆ. ತಿದ್ದುಪಡಿ ಮಾಡಲಾಗಿರುವ ಆರ್‌ಟಿಐ ಕಾಯ್ದೆಯಲ್ಲಿ, ಹೊಸ ಡಿಪಿಡಿಪಿ ಕಾಯ್ದೆಗೆ ಸಂಬಂಧಿಸಿದಂತೆ, ‘ವೈಯಕ್ತಿಕ ಮಾಹಿತಿ’ಯನ್ನು ಸ್ಪಷ್ಟವಾಗಿ, ದೃಢತೆಯಿಂದ ನಿರ್ವಚಿಸಲಾಗಿಲ್ಲ. ಇಲ್ಲಿ ಎರಡು ಪರಸ್ಪರ ಭಿನ್ನ ದೃಷ್ಟಿಕೋನಗಳಿವೆ. ಮೊದಲನೆಯದಾಗಿ ವ್ಯಕ್ತಿ ಎನ್ನುವ ಪದವನ್ನು ಸಾಮಾನ್ಯ ನೆಲೆಯಲ್ಲಿ ಪರಿಗಣಿಸುವುದು ಅಂದರೆ ಸ್ವಾಭಾವಿಕ-ಸಾಮಾನ್ಯ ವ್ಯಕ್ತಿ ಎಂದು ಭಾವಿಸುವುದು. ಎರಡನೆಯದಾಗಿ ಡಿಪಿಡಿಪಿ ಕಾಯ್ದೆಯ ಅನುಸಾರ ಪರಿಭಾವಿಸುವುದು. ಈ ಕಾಯ್ದೆಯ ವ್ಯಾಖ್ಯಾನವು ವಿಶಾಲ ಸ್ತರವನ್ನು ಹೊಂದಿದ್ದು ‘ಹಿಂದೂ ಅವಿಭಕ್ತ ಕುಟುಂಬ, ಉದ್ದಿಮೆ, ಕಂಪೆನಿ ಹಾಗೂ ವ್ಯಕ್ತಿಗಳ ಯಾವುದೇ ಸಂಘ ಮತ್ತು ಪ್ರಭುತ್ವ’ವನ್ನು ಸೂಚಿಸುತ್ತದೆ.
ಈ ವ್ಯಾಖ್ಯಾನವನ್ನು ಪರಿಗಣಿಸಿದಲ್ಲಿ, ಎಲ್ಲ ಮಾಹಿತಿಗಳೂ ವೈಯಕ್ತಿಕ ಆಗಿಬಿಡುತ್ತವೆ. ಬಹುಪಾಲು ಮಾಹಿತಿಗಳನ್ನು ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದೆ ಎಂದು ನಿರೂಪಿಸಬಹುದು. ಹಾಗಾಗಿ ಮಾಹಿತಿ ನಿರಾಕರಿಸಲು ಕಾನೂನಾತ್ಮಕ ಸಮ್ಮತಿ ದೊರೆಯುತ್ತದೆ. ಇದು ಅಕ್ಷರಶಃ ಮಾಹಿತಿ ಹಕ್ಕು ಎನ್ನುವುದನ್ನು ಮಾಹಿತಿ ನಿರಾಕರಣೆಯ ಹಕ್ಕು ಎಂದು ಅರ್ಥೈಸುವಂತಾಗುತ್ತದೆ. ಈ ವಿಶಾಲ ವ್ಯಾಖ್ಯಾನವು ಪಾರದರ್ಶಕತೆಯ ತಾತ್ವಿಕ ನೀತಿಯನ್ನು ಮೂಲದಲ್ಲೇ ಭಂಗಗೊಳಿಸುತ್ತದೆ. ಇಷ್ಟು ಸಾಲದೆಂಬಂತೆ, ಡಿಪಿಡಿಪಿ ಮಸೂದೆಯ ಅನುಸಾರ, ಸಂಘರ್ಷ/ವಿವಾದ ಏರ್ಪಟ್ಟ ಸಂದರ್ಭಗಳಲ್ಲಿ ಈ ಕಾಯ್ದೆಯ ನಿಯಮವು ಎಲ್ಲವನ್ನೂ ಮೀರಿ ಮಾನ್ಯತೆ ಪಡೆಯುತ್ತದೆ. ಈ ಉಲ್ಲಂಘನೆಗೆ 250 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ನಿಯಮವು ವಿಷಯವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ತತ್ಪರಿಣಾಮವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (ಪಿಐಒ) ಮಾಹಿತಿ ನಿರಾಕರಣೆಯನ್ನೇ ಪ್ರಧಾನವಾಗಿ ಪರಿಗಣಿಸುವ ಅಪಾಯ ಎದುರಾಗುತ್ತದೆ.
ಈ ಕಾಯ್ದೆಯ ವಾಸ್ತವಿಕ ಪರಿಣಾಮ ಎಂದರೆ ಸಾರ್ವಜನಿಕ ಉತ್ತರದಾಯಿತ್ವ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಗಳಿಗೆ ಧಕ್ಕೆ ಉಂಟಾಗುತ್ತದೆ. ಇತರ ಶಾಸನಾತ್ಮಕ ಭ್ರಷ್ಟಾಚಾರ ನಿರ್ಬಂಧಕ ಕ್ರಮಗಳು ನಿಷ್ಪ್ರಯೋಜಕವಾಗಿರುವುದರಿಂದ, ಇದು ಗಂಭೀರ ವಿಚಾರವಾಗಿ ಕಾಣುತ್ತದೆ. ಮೊದಲನೆಯದಾಗಿ ಆಡಳಿತ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನಿರಾಕರಿಸುವುದು ಸುಲಭವಾಗುವುದರಿಂದ ಸಾರ್ವಜನಿಕ ಪರಿವೀಕ್ಷಣೆಗೆ (Monitoring) ಧಕ್ಕೆಯಾಗುತ್ತದೆ. ಸರಕಾರದ ಲೋಕಪಾಲ್, ಭ್ರಷ್ಟಾಚಾರ ನಿಯಂತ್ರಣ ಇಲಾಖೆ ಮುಂತಾದ ಸಂಸ್ಥೆಗಳು ಭ್ರಷ್ಟಾಚಾರ ನಿಯಂತ್ರಿಸಲು ವಿಫಲವಾಗಿರುವುದರಿಂದ, ಇದು ಇನ್ನೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತದೆ.
ಎರಡನೆಯ ಅಂಶ ಎಂದರೆ, ಅಗತ್ಯ ಮಾಹಿತಿಯ ನಿರಾಕರಣೆ. ‘ವೈಯಕ್ತಿಕ ಮಾಹಿತಿಯ’ ನಿರ್ವಚನೆ ವಿಶಾಲ ನೆಲೆಯಲ್ಲಿರುವುದರಿಂದ ಲೌಕಿಕವಾದರೂ ನಿರ್ಣಾಯಕವಾದ ದಸ್ತಾವೇಜುಗಳನ್ನು ತಡೆಹಿಡಿಯುವುದು ಸಾಧ್ಯವಾಗುತ್ತದೆ. ಉದಾಹರಣೆಗೆ ನಾಗರಿಕರ ತಿದ್ದುಪಡಿಯಾದ ಅಂಕಪಟ್ಟಿಯನ್ನೂ ವೈಯಕ್ತಿಕ ಎಂದು ಪರಿಗಣಿಸಬಹುದು. ಒಬ್ಬ ಅಧಿಕಾರಿ ಸಹಿ ಮಾಡಿರುವ ಸಣ್ಣ ದಸ್ತಾವೇಜನ್ನು ಸಹ ವೈಯಕ್ತಿಕ ಮಾಹಿತಿ ಎಂದು ನಿರಾಕರಿಸಬಹುದು. ತತ್ಪರಿಣಾಮವಾಗಿ ಶೇಕಡಾ 90ರಷ್ಟು ಮಾಹಿತಿಗಳನ್ನು ನಿರಾಕರಿಸುವ ಅವಕಾಶವಿರುತ್ತದೆ. ಮೂರನೆಯ ಅಂಶ ಎಂದರೆ, ನಿರ್ಬಂಧಗಳೇ ಇಲ್ಲದ ಭ್ರಷ್ಟಾಚಾರ. ಈ ತಿದ್ದುಪಡಿಗಳು ಭ್ರಷ್ಟರಾಗುವುದನ್ನು ಸುಲಭವಾಗಿಸುತ್ತವೆ. ರಾಜಸ್ಥಾನದಲ್ಲಿ ಅಗೋಚರ ಉದ್ಯೋಗಿ ಅಥವಾ ಪಿಂಚಣಿದಾರರನ್ನು ಗುರುತಿಸಿ, ವೇತನ ತಡೆಹಿಡಿದ ಉದಾಹರಣೆಯ ಹಿನ್ನೆಲೆಯಲ್ಲಿ ನೋಡಿದಾಗ, ಈ ತಿದ್ದುಪಡಿಗಳು ಇಂತಹ ಅಗೋಚರ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆಯುವುದನ್ನೇ ದುಸ್ತರವಾಗಿಸುತ್ತವೆ.
ಆರ್‌ಟಿಐ ಕಾಯ್ದೆಯ ಪ್ರಸ್ತುತತೆ-ಮಹತ್ವ ಆರ್‌ಟಿಐ ಕಾಯ್ದೆಯಲ್ಲಿ ಈಗಲೂ ಸೆಕ್ಷನ್ 8(2) ಅನ್ವಯ ‘ವಿಶಾಲ ಸಾರ್ವಜನಿಕ ಹಿತಾಸಕ್ತಿ’ಯ ಪರಿಕಲ್ಪನೆ ಮಾನ್ಯತೆ ಪಡೆದಿದ್ದರೂ, ಅದನ್ನು ವಾಸ್ತವದಲ್ಲಿ ಜಾರಿಮಾಡುವುದು ಅಪರೂಪವೂ, ಕಷ್ಟಕರವೂ ಆಗಿರುತ್ತದೆ. ಮಾಹಿತಿ ಪಡೆಯುವುದು ನಾಗರಿಕರ ಮೂಲಭೂತ ಹಕ್ಕು ಆಗಿರುವುದರಿಂದ ಜನರಿಗೆ ಈ ವಿಶಾಲ ಸಾರ್ವಜನಿಕ ಹಿತಾಸಕ್ತಿಯನ್ನು ನಿರೂಪಿಸುವ ಅಗತ್ಯವೇ ಇರುವುದಿಲ್ಲ. ಮಾಹಿತಿಯು ಈಗಾಗಲೇ ವಿನಾಯಿತಿ ಪಡೆದಿದ್ದಲ್ಲಿ ಮಾತ್ರ ಇದು ಅನ್ವಯವಾಗುತ್ತದೆ. ಆದರೆ ಈ ರೀತಿ ವಿನಾಯಿತಿಗೆ ಒಳಪಡುವ ಮಾಹಿತಿಗಳ ಪ್ರಮಾಣ ಶೇಕಡಾ 1ರಷ್ಟೂ ಇರುವುದಿಲ್ಲ. ಆದರೆ ಅಧಿಕಾರಿಗಳು ವ್ಯಕ್ತಿಗೆ ಆಗಬಹುದಾದ ಸಂಭಾವ್ಯ ಹಾನಿಯನ್ನು ಗಮನದಲ್ಲಿಟ್ಟುಕೊಂಡು, ಮಾಹಿತಿ ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಈ ದೃಷ್ಟಿಯಿಂದ ನೋಡಿದಾಗ, ಈ ತಿದ್ದುಪಡಿಯ ಆನಂತರ ಪಾರದರ್ಶಕತೆಯನ್ನು ನಿರೀಕ್ಷಿಸುವುದೇ ವ್ಯರ್ಥವಾಗುತ್ತದೆ.
ಈ ತಿದ್ದುಪಡಿಗಳ ಗಂಭೀರ ಸ್ವರೂಪದ ಹೊರತಾಗಿಯೂ, ಈ ಹಿಂದಿನ ಆರ್‌ಟಿಐ ತಿದ್ದುಪಡಿಗಳ ಸಂದರ್ಭಕ್ಕೆ ಹೋಲಿಸಿದರೆ, ಸಾರ್ವಜನಿಕ ವಲಯ ಮತ್ತು ಮಾಧ್ಯಮಗಳು ಹೆಚ್ಚಾಗಿ ಪ್ರತಿರೋಧ ವ್ಯಕ್ತಪಡಿಸದಿರುವುದು, ಚರ್ಚೆ ಮಾಡದಿರುವುದು ಅಚ್ಚರಿ ಮೂಡಿಸುತ್ತದೆ. ಬಹುಶಃ ಈ ತಿದ್ದುಪಡಿಗಳು ‘ದತ್ತಾಂಶ ರಕ್ಷಣೆ’ಯ ಹೊದಿಕೆ ಹೊಂದಿರುವುದೂ ಈ ನಿರ್ಲಿಪ್ತತೆಯ ಕಾರಣ ಇರಬಹುದು. ಸಾಮಾನ್ಯ ನಾಗರಿಕರಿಗೆ ಹೆಚ್ಚು ಅಪಾಯಕಾರಿಯಲ್ಲ ಎಂಬ ಭಾವನೆ ಮೂಡಿರುವ ಸಾಧ್ಯತೆಗಳಿವೆ. ಮತ್ತೊಂದೆಡೆ ಎಷ್ಟೇ ಪ್ರಸ್ತುತತೆ ಇದ್ದರೂ ವೈಯಕ್ತಿಕ ಸ್ವಂತ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ಸಮಾಜವೇ ಸಮ್ಮತಿಸದಿರುವುದನ್ನೂ ಗಮನಿಸಬೇಕಿದೆ.
ಡಿಪಿಡಿಪಿ ಕಾಯ್ದೆಯ ಸೆಕ್ಷನ್ 8(2) ಮತ್ತು ಸೆಕ್ಷನ್ 44(3) ಭಾರತದ ಪ್ರಜಾತಂತ್ರ ವ್ಯವಸ್ಥೆಯ ದೃಷ್ಟಿಯಿಂದ ಮೂಲಭೂತ ಹಿಂಚಲನೆಯ ಸೂಚಕವಾಗಿ ಕಾಣುತ್ತದೆ. ಇಲ್ಲಿ ನಾಲ್ಕು ಅಂಶಗಳನ್ನು ಗಂಭೀರವಾಗಿ ಪರಾಮರ್ಶಿಸಬೇಕಾಗುತ್ತದೆ. ಮೊದಲನೆಯದಾಗಿ ದೇಶಾದ್ಯಂತ ಸಾರ್ವಜನಿಕರ ನಡುವೆ, ಮಾಧ್ಯಮಗಳಲ್ಲಿ ವ್ಯಾಪಕವಾದ ಚರ್ಚೆ ನಡೆಯಬೇಕು. ಎರಡನೆಯದಾಗಿ ರಾಜಕೀಯ ಉತ್ತರದಾಯಿತ್ವದ ದೃಷ್ಟಿಯಿಂದ, ಈ ತಿದ್ದುಪಡಿಗಳನ್ನು ರದ್ದುಮಾಡುವ ಆಶ್ವಾಸನೆಯನ್ನು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳಿಂದ ನಾಗರಿಕರು ಆಗ್ರಹಿಸಬೇಕು. ಮೂರನೆಯದಾಗಿ ಮಾಧ್ಯಮಗಳ ಪರವಾಗಿ ಬಲವಾದ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕು. ನಾಲ್ಕನೆಯದಾಗಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಇತರ ಯಾವುದೇ ರಾಷ್ಟ್ರಮಟ್ಟದ ಚರ್ಚೆಯಂತೆಯೇ ಈ ವಿಷಯವೂ ಸಹ ಗಮನ ಸೆಳೆಯಬೇಕು. ಏಕೆಂದರೆ ಮಾಹಿತಿ ಪಡೆಯುವ ಮೂಲಭೂತ ಹಕ್ಕು ಇಲ್ಲಿ ನಷ್ಟವಾಗುತ್ತಿದೆ.
ನಾಗರಿಕರು ತಮ್ಮ ನಿರ್ಲಿಪ್ತ ಮೌನವನ್ನು ಮುಂದುವರಿಸಿದರೆ, ಅವರ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಎರಡೂ ಧಕ್ಕೆಗೊಳಗಾಗುತ್ತವೆ. ಸಾಮೂಹಿಕ ಚಟುವಟಿಕೆಯ ಮೂಲಕ ಈ ತಿದ್ದುಪಡಿಯನ್ನು ಪ್ರಶ್ನಿಸಬಹುದು. ಭಾರತದ ಪ್ರಜೆಗಳು ಆರ್‌ಟಿಐ ಕಾಯ್ದೆಯ ಪರಿಪೂರ್ಣ ಭದ್ರತೆಯನ್ನು ರಕ್ಷಿಸುವ ಉದ್ದೇಶ ಹೊಂದಿದ್ದಲ್ಲಿ, ಭವಿಷ್ಯ ಭಾರತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡುವ ದೃಷ್ಟಿಯಿಂದ ಈ ಚರ್ಚೆಯನ್ನು ವಿಸ್ತರಿಸಬೇಕು.
(ಈ ಲೇಖನದ ಮಾಹಿತಿ-ಕಾನೂನಾತ್ಮಕ ಅಂಶಗಳು-ಅಭಿಪ್ರಾಯಗಳಿಗೆ ಮೂಲ ಆಧಾರ ‘ದ ಹಿಂದೂ’ ಪತ್ರಿಕೆಯ ಶೈಲೇಶ್ ಗಾಂಧಿ ಅವರ ‘The RTIʼs Shift to a ́ right to deny information’ ಲೇಖನ. ಇವರು ಮಾಜಿ ಮಾಹಿತಿ ಆಯುಕ್ತರು)







