ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ: ಕಂಪೆನಿಗಳಿಗೇಕೆ ಅನುಕಂಪವಿಲ್ಲ?

ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ(ಫಿಕ್ಕಿ)ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಕಾರ್ಪೊರೇಟ್ ನಾಯಕರನ್ನು ಉದ್ದೇಶಿಸಿ ಮಾತನಾಡುತ್ತ ಕಂಪೆನಿಗಳಲ್ಲಿ ಸೃಷ್ಟಿಸಲಾದ ಉದ್ಯೋಗಾವಕಾಶ ಮತ್ತು ನೌಕರರ ವೇತನ ಹೆಚ್ಚಳದ ಕುರಿತಾಗಿ ಪ್ರಶ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಸರಕಾರವು ಕಂಪೆನಿಗಳಿಗೆ ಒದಗಿಸುತ್ತಿರುವ ತೆರಿಗೆ ಕಡಿತದ ಸೌಲಭ್ಯ ಮತ್ತು ಕಂಪೆನಿಗಳ ಲಾಭ ಹೆಚ್ಚಳವನ್ನು ಉಲ್ಲೇಖಿಸಿದ್ದಾರೆ. ಉದ್ಯಮ ಸ್ನೇಹಿ ಪ್ರಧಾನಿಯವರು ಈ ಪ್ರಶ್ನೆಯನ್ನು ಕೈಗಾರಿಕೋದ್ಯಮಿಗಳ ಮುಂದೆ ಎತ್ತಿದ್ದಾರೆ ಎಂದರೆ ದೇಶದ ನಿರುದ್ಯೋಗ ಸಮಸ್ಯೆಗೆ ಕಂಪೆನಿಗಳು ಹೆಚ್ಚು ಸ್ಪಂದಿಸುತ್ತಿಲ್ಲ ಎಂಬ ವಿಚಾರ ಅವರಿಗೂ ಮನವರಿಕೆಯಾಗಿದೆ ಎಂದರ್ಥ. ಕಳೆದ 12 ವರ್ಷಗಳಲ್ಲಿ ಪ್ರಧಾನಿಯವರು ಮೊದಲ ಬಾರಿಗೆ ಇಂತಹ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವುದೊಂದು ವಿಶೇಷ.
ಸರಕಾರಕ್ಕೆ ಕಂಪೆನಿಗಳನ್ನು, ಅಲ್ಲಿ ಸೃಷ್ಟಿಯಾಗಿರುವ ಉದ್ಯೋಗಾವಕಾಶ ಮತ್ತು ಉದ್ಯೋಗಿಗಳ ವೇತನದ ಕುರಿತಾಗಿ ಪ್ರಶ್ನಿಸುವಂತಹ ಆಡಳಿತಾತ್ಮಕ ಅಧಿಕಾರ ಖಂಡಿತವಾಗಿಯೂ ಇದೆ. ಜೊತೆಗೆ ಈ ಕುರಿತಾಗಿ ಪ್ರಶ್ನೆ ಮಾಡುವಂತಹ ನೈತಿಕ ಹೊಣೆಗಾರಿಕೆಯೂ ಇದೆ. ಯಾಕೆಂದರೆ ಸರಕಾರವು ಕಂಪೆನಿಗಳ ಸ್ಥಾಪನೆ ಸಂದರ್ಭದಲ್ಲಿ ಅವುಗಳಿಗೆ ಸಾಕಷ್ಟು ಉಚಿತ ಅಥವಾ ವಿನಾಯಿತಿ ಸೌಲಭ್ಯಗಳು ಮತ್ತು ತೆರಿಗೆ ಕಡಿತದಂತಹ ಅನುಕೂಲಗಳನ್ನು ಒದಗಿಸಿ ಕೊಟ್ಟಿರುತ್ತದೆ. ಇದರ ಹಿಂದೆ ಇರುವುದು ದೇಶದ ಅಭಿವೃದ್ಧಿ ಹಾಗೂ ಪ್ರಗತಿಯ ಉದ್ದೇಶ. ಇದರೊಂದಿಗೆ ದೇಶದ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯ ಬಹುದು ಎಂಬ ಆಶಯವೂ ಅಂತರ್ಗತವಾಗಿ ಇರುತ್ತದೆ. ಇದನ್ನು ಕಂಪೆನಿಗಳು ಅರ್ಥ ಮಾಡಿ ಕೊಳ್ಳದಷ್ಟು ಅಮಾಯಕವಾದವುಗಳಲ್ಲ. ಆದರೆ ಅವುಗಳು ಸರಕಾರದ ಇಂತಹ ಆಶಯಗಳನ್ನು ಕಡೆಗಣಿಸಿ ಕೇವಲ ಲಾಭ, ವ್ಯವಹಾರ ಏರಿಕೆ, ಹೆಸರು, ಪ್ರತಿಷ್ಠೆ ಇತ್ಯಾದಿಗಳಿಗೆ ಅಂಟಿ ಕೊಳ್ಳವುದೇ ಹೆಚ್ಚು. ಇದು ಅತ್ಯಂತ ದುರದೃಷ್ಟಕರ.
ಸಮಾಜದ ದ್ವಂದ್ವ ನೋಡಿ. ನಮ್ಮ ಸಾಮಾಜಿಕ ಚಿಂತಕರು ಮತ್ತು ಪತ್ರಕರ್ತರು ಹೆಚ್ಚಾಗಿ ಜನಸಾಮಾನ್ಯರಿಗೆ ನೀಡುವಂತಹ ಉಚಿತ ಯೋಜನೆಗಳನ್ನು ಪ್ರಶ್ನಿಸುತ್ತಾರೆಯೇ ಹೊರತು ಈ ಕಂಪೆನಿಗಳಿಗೆ ಒದಗಿಸಲಾಗುವ ಉಚಿತ ಸೌಲಭ್ಯಗಳು ಅಥವಾ ರಿಯಾಯಿತಿಗಳನ್ನು ಪ್ರಶ್ನಿಸುವುದೇ ಇಲ್ಲ. ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಪ್ರತಿಪಕ್ಷ ನಾಯಕ ರಾಹುಲ್ಗಾಂಧಿಯವರನ್ನು ವ್ಯಕಿಯೋರ್ವರು, ‘‘ನಿಮ್ಮ ಕಾಂಗ್ರೆಸ್ ಸರಕಾರಗಳು ಜನರಿಗೆ ಉಚಿತ ಯೋಜನೆಗಳನ್ನು ಜಾರಿಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ?’’ ಎಂದು ಪ್ರಶ್ನಿಸಿದ್ದರು. ಅದಕ್ಕೆ ರಾಹುಲ್ ಗಾಂಧಿಯವರು, ‘‘ನೀವು ಉಚಿತ ಯೋಜನೆಗಳನ್ನು ಮಾತ್ರ ಟೀಕಿಸುತ್ತಿದ್ದೀರಿ. ಅದಕ್ಕೆ ಇನ್ನೊಂದು ಆಯಾಮವೂ ಇದೆ. ನೀವು ಯಾಕೆ ಕಂಪೆನಿಗಳಿಗೆ ಸರಕಾರ ನೀಡುತ್ತಿರುವ ಉಚಿತ ಸೌಲಭ್ಯಗಳನ್ನು ಪ್ರಶ್ನಿಸುತ್ತಿಲ್ಲ?’’ ಎಂದು ಮರು ಪ್ರಶ್ನೆ ಹಾಕಿದರು. ಈ ಮಾತಿನಲ್ಲಿ ಸತ್ಯಾಂಶವಿದೆ. ಆದ್ದರಿಂದ ಕಂಪೆನಿಗಳು ಜನ ಸಾಮಾನ್ಯರು ಮತ್ತು ಸಮಾಜದ ಕುರಿತು ಹೊಂದಿರುವ ಧೋರಣೆಗಳನ್ನು ಸರಕಾರ ನಿರಂತರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಕಂಪೆನಿಗಳಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಗದಿ ಪಡಿಸುವಂತಹ ಕಾರ್ಯ ಅಗತ್ಯವಾಗಿ ಆಗಬೇಕು. ದೇಶದಲ್ಲಿ ಕೈಗಾರಿಕೆ, ಉದ್ಯಮಗಳಿಗೆ ಒತ್ತು ನೀಡುವಂತಹ ಕ್ರಮಗಳನ್ನು ಸರಕಾರಗಳು ಸ್ವಾತಂತ್ರ್ಯ ದೊರೆತ ಕೂಡಲೇ ಪ್ರಾರಂಭಿಸಿದವು. ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂರವರು ಕೈಗಾರಿಕೆಗಳು ಭವಿಷ್ಯದ ದೇವಾಲಯಗಳು ಎಂದು ಹೇಳಿದ್ದರು. ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕೆಗಳಿಗೆ ಪ್ರಾಧಾನ್ಯತೆ ನೀಡುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಈ ನಿಟ್ಟಿನಲ್ಲಿ ಎಕರೆಗಟ್ಟಲೆ ಭೂಮಿ, ನೀರು, ವಿದ್ಯುತ್ಅನ್ನು ಆದ್ಯತೆಯ ಮೇಲೆ ಒದಗಿಸಲಾಗುತ್ತಿತ್ತು. ಆದ್ಯತಾ ವಲಯದಲ್ಲಿರುವ ಉದ್ಯಮಗಳಿಗೆ ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಎಕರೆಗಟ್ಟಲೆ ಭೂಮಿಯನ್ನು ನೀಡುವಂತಹ ಕ್ರಮವಿದೆ. ಜೊತೆಗೆ ಹಣಕಾಸು ಮತ್ತು ತೆರಿಗೆ ವಿಚಾರಗಳಲ್ಲಿ ವಿನಾಯಿತಿ, ರಿಯಾಯಿತಿ, ಸಬ್ಸಿಡಿ ಇತ್ಯಾದಿಗಳನ್ನು ನೀಡಿ ಉತ್ತೇಜನ ನೀಡುವಂತಹ ವ್ಯವಸ್ಥೆಯಿದೆ.
ಇಂತಹ ಉದ್ಯಮ ಸ್ನೇಹಿ ನೀತಿ ಸರಿಯಾದುದೇ. ಇದರಲ್ಲಿ ಎರಡು ಮಾತಿಲ್ಲ. ಕೃಷಿ ಪ್ರಧಾನ ದೇಶವಾಗಿದ್ದ ಭಾರತ ಆರ್ಥಿಕ ಸಮತೋಲನ ಸಾಧಿಸಲು ಕೈಗಾರಿಕೆಗಳು ಅವಶ್ಯವಾಗಿ ಬೆಳವಣಿಗೆಯನ್ನು ಸಾಧಿಸಬೇಕಾಗಿತ್ತು. ಭಾರತವು ಉದಾರೀಕರಣ ನೀತಿಯನ್ನು ಅನುಸರಿಸಲು ತೊಡಗಿದ ನಂತರವಂತು ಇಲ್ಲಿನ ಕೈಗಾರಿಕಾ ಮತ್ತು ಸೇವಾ ವಲಯ ಗಮನಾರ್ಹ ಪ್ರಗತಿಯನ್ನು ದಾಖಲಿಸಿವೆ. ಹಿಂದಿನ ಲೈಸೆನ್ಸ್ರಾಜ್ ರಗಳೆ ಕೊನೆಗೊಂಡಿದೆ. ಕಾರ್ಮಿಕರ ಮುಷ್ಕರ, ಪ್ರತಿಭಟನೆಗಳು ತೀರಾ ವಿರಳವೆಂದೇ ಹೇಳ ಬೇಕು. ಇಂದು ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ದಲ್ಲಿ ಕೈಗಾರಿಕೆ ಮತ್ತು ಸೇವಾ ವಲಯಗಳದ್ದೇ ಸಿಂಹ ಪಾಲು. ಕೋವಿಡ್ ಮತ್ತು ಜಾಗತಿಕ ಆರ್ಥಿಕ ಹಿನ್ನಡೆ ಸಂದರ್ಭಗಳನ್ನು ಹೊರತು ಪಡಿಸಿದರೆ ಭಾರತದ ಜಿಡಿಪಿ ಸಾಕಷ್ಟು ಉತ್ತಮ ಮಟ್ಟದಲ್ಲಿ ಮುಂದುವರಿಯುತ್ತ ಬಂದಿದೆ. ಅಂದರೆ ದೇಶದ ಉದ್ಯಮ ವಲಯ ಒಟ್ಟಾರೆಯಾಗಿ ಲಾಭದಾಯಕ ಸ್ಥಿತಿಯಲ್ಲಿವೆ ಎಂದು ಅರ್ಥ ಮಾಡಿ ಕೊಳ್ಳ ಬಹುದು. ಭಾರತದ ಹಲವಾರು ಕಂಪೆನಿಗಳು ಜಾಗತಿಕವಾಗಿ ಗುರುತಿಸಿ ಕೊಂಡಿರುವುದನ್ನು ಗಮನಿಸ ಬಹುದಾಗಿದೆ.
ದುರದೃಷ್ಟವಶಾವತ್ ಭಾರತದಲ್ಲಿ ಕಂಪೆನಿಗಳ ಕುರಿತಾಗಿ ಜನಸಾಮಾನ್ಯರಲ್ಲಿ ಇಂದಿಗೂ ಸದಭಿಪ್ರಾಯಗಳಿಲ್ಲ. ಈ ಅಭಿಪ್ರಾಯ ಕಹಿಯಾದರೂ ಒಪ್ಪಲೇ ಬೇಕು. ಯಾಕೆಂದರೆ ಇಲ್ಲಿ ಸಮಾಜ ಮತ್ತು ಕಂಪೆನಿಗಳ ಜಗತ್ತೇ ಬೇರೆಯೇ ಎಂಬ ವಾತಾವರಣವಿದೆ. ಕಂಪೆನಿಗಳು ಜನರ ಭೂಮಿಯನ್ನು ಕಸಿದು ಕೊಂಡಿವೆ, ಪರಿಸರಕ್ಕೆ ಹಾನಿ ಮಾಡುತ್ತವೆ ಎಂಬಿತ್ಯಾದಿ ಆಕ್ಷೇಪಗಳ ನಡುವೆ ಸ್ಥಳೀಯ ಯುವಜನರಿಗೆ ಅವುಗಳು ಉದ್ಯೋಗಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಕಂಪೆನಿಗಳಿಗೆ ಏನಿದ್ದರೂ ಜನತೆಯ ಹಿತಾಸಕ್ತಿಗಿಂತ ಪ್ರತಿಷ್ಠೆ, ಲಾಭಗಳು ಮುಖ್ಯ ಎಂಬ ಅಭಿಪ್ರಾಯ ಗಟ್ಟಿಯಾಗಿ ಬೇರೂರಿದೆ
ಈ ಹಿನ್ನೆಲೆಯಲ್ಲಿ ಉದ್ಯಮ ಹಾಗೂ ಸೇವಾ ವಲಯದಲ್ಲಿ ಆತ್ಮಶೋಧನೆಯಾಗಬೇಕಾಗಿದೆ. ಸುತ್ತಲಿನ ಸಮಾಜದ ಹಿತಾಸಕ್ತಿಯನ್ನು ಬಿಟ್ಟು ಕಂಪೆನಿಗಳು ದಂತ ಗೋಪುರದಲ್ಲಿರಲು ಸಾಧ್ಯವಿಲ್ಲ. ಸಮಾಜದ ಆಗುಹೋಗುಗಳಿಗೆ ಅವುಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತಹ ಸಂವೇದನಾಶೀಲತೆಯನ್ನು ತೋರಬೇಕು. ಇಂದು ದೇಶದಲ್ಲಿ ನಿರುದ್ಯೋಗ ಪ್ರಮಾಣ ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಯುವಜನರು ಭ್ರಮನಿರಸನಗೊಂಡಿದ್ದಾರೆ. ಕೇಂದ್ರ ಸರಕಾರ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಈ ಭರವಸೆ ಕೊನೆಗೂ ಕಾರ್ಯಗತವಾಗಿಲ್ಲ. ರಾಜ್ಯಗಳಲ್ಲಿಯೂ ಆಶಾದಾಯಕ ಪರಿಸ್ಥಿತಿಯಿಲ್ಲ. ಸರಕಾರ ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗಿಯವರಿಗೆ ವಹಿಸಿ ಕೊಡುವುದಕ್ಕೆ ಒಲವು ತೋರುತ್ತಿದೆ. ಸರಕಾರಿ ನೇಮಕಾತಿಗಳು ಕಡಿಮೆಯಾಗುತ್ತಿವೆ. ಯುವಜನರಿಗೆ ಸ್ವಂತ ಉದ್ಯೋಗಗಳನ್ನು ಕೈಗೊಂಡು ಉದ್ಯೋಗಪತಿಗಳಾಗಿ ಎಂಬ ಸಲಹೆಯನ್ನು ರಾಜಕೀಯ ನಾಯಕರು ಬಿಟ್ಟಿಯಾಗಿ ನೀಡುತ್ತಿದ್ದಾರೆ. ಇದು ಬಂಡವಾಳವಿಲ್ಲದವರಿಗೆ ಸುಲಭದ ಮಾತೇ? ಮೇಲಾಗಿ ಈಗಾಗಲೇ ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯವಹಾರ ಹಾಗೂ ವ್ಯಾಪಾರ ಮಾಡುತ್ತಿರುವವರು ಆನ್ಲೈನ್ ಮತ್ತು ದೊಡ್ಡ ಕಂಪೆನಿಗಳ ಮಾರ್ಟ್, ಔಟ್ಲೆಟ್ ಇತ್ಯಾದಿಗಳ ಸ್ಪರ್ಧೆ ಎದರಿಸಲಾಗದೆ ತತ್ತರಿಸಿ ಹೋಗುತ್ತಿದ್ದಾರೆ. ಬಟ್ಟೆ, ಪಾದರಕ್ಷೆ, ಕಿರಾಣಿ ಮುಂತಾದ ಅಂಗಡಿಗಳು ನಗರಗಳಲ್ಲಿ ಸಾಲು ಸಾಲಾಗಿ ಬಾಗಿಲು ಮುಚ್ಚುತ್ತಿರುವುದನ್ನು ನಾವು ಗಮನಿಸಬಹುದು. ಈ ಪರಿಸ್ಥಿತಿಯಲ್ಲಿ ವಿದ್ಯಾವಂತ ಯುವಜನರು ಸ್ವಉದ್ಯೋಗದ ಕನಸು ಕಾಣುವುದಾದರೂ ಹೇಗೆ?
ಈ ಹಿನ್ನೆಲೆಯಲ್ಲಿ ಕಂಪೆನಿಗಳು ಯುವಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಣೆಗಾರಿಕೆ ವಹಿಸಬೇಕು. ಇದೇನೂ ಅವುಗಳ ಔದಾರ್ಯವಾಗ ಬೇಕಾಗಿಲ್ಲ. ಬದಲಾಗಿ ಅವುಗಳ ನೈಜ ಹೊಣೆಗಾರಿಕೆ ಎಂಬುದಾಗಿ ತಿಳಿಯ ಬೇಕಿದೆ. ಜನರ ಆಶೋತ್ತರದಿಂದ ರಚಿತವಾಗಿರುವ ಸರಕಾರದಿಂದ ಪಡೆದಿರುವ ಅನುಕೂಲತೆ, ಸೌಲಭ್ಯಗಳಿಗೆ ಪ್ರತಿಯಾಗಿ ಅವುಗಳಿಗೂ ಜವಾಬ್ದಾರಿಯನ್ನು ನಿಭಾಯಿಸುವಂತಹ ಕರ್ತವ್ಯವಿದೆ. ಪ್ರಧಾನಿಯವರು ಉದ್ಯಮ ನಾಯಕರ ಮುಂದೆ ಎತ್ತಿರುವ ಪ್ರಶ್ನೆ ಕ್ರಿಯಾತ್ಮಕವಾಗಿ ಪರಿವರ್ತನೆಯಾಗಬೇಕಾಗಿದೆ. ಕಂಪೆನಿಗಳು ಈಗಿರುವಂತೆ ಸೀಮಿತ ಸಂಖ್ಯೆಯ ಉದ್ಯೋಗಾವಕಾಶವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಮುಂದಡಿಯಿಟ್ಟರೆ ಪ್ರಯೋಜನವಾದೀತು. ಇದರಿಂದ ಅವುಗಳ ಲಾಭಾಂಶ ಕೊಂಚ ಕಡಿಮೆಯಾಗಿ ಶೇರುದಾರರಿಗೆ ದೊರಕುವಂತಹ ಡಿವಿಡೆಂಟ್ ಒಂದಷ್ಟು ತಗ್ಗಬಹುದು, ಅಷ್ಟೇ.
ಈ ನಿಟ್ಟನಲ್ಲಿ ಸರಕಾರವು ನಿಯಮಗಳನ್ನು ರೂಪಿಸಿ ಕಂಪೆನಿಗಳಿಗೆ ಹೊಣೆಗಾರಿಕೆ ನಿಗದಿ ಗೊಳಿಸಬೇಕಾಗಿದೆ. ಇದು ಕಾರ್ಯಸಾಧುವಲ್ಲವೆಂದು ಕೈಚೆಲ್ಲಿ ಬೇಕಾಗಿಲ್ಲ. ನಮ್ಮ ಮುಂದೆ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕಾ ನಿಧಿ(ಸಿಎಸ್ಆರ್ಫಂಡ್) ಯ ನಿದರ್ಶನವಿದೆ. ಈಗ ನಿಯಮಾನುಸುರವಾಗಿ ದೊಡ್ಡ ಮಟ್ಟದ ಕಂಪೆನಿಗಳು ನಿವ್ವಳ ಲಾಭದ ಶೇ. 2ನ್ನು ಕಡ್ಡಾಯವಾಗಿ ಸರಕಾರಿ ಅಥವಾ ಸಾರ್ವಜನಿಕ ರಂಗದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಮುಂತಾದ ಉದ್ದೇಶಗಳಿಗೆ ವಿನಿಯೋಗಿಸಬೇಕಾಗಿದೆ. ಇದೇ ಮಾದರಿಯಲ್ಲಿ ಕಂಪೆನಿಗಳು ವಿದ್ಯಾವಂತ ಯುವಜನರಿಗಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಕ್ಕೆ ಕಾನೂನಾತ್ಮಕ ಕ್ರಮ ತೆಗೆದು ಕೊಳ್ಳಬಹುದು. ಭವಿಷ್ಯದಲ್ಲಿ ದೇಶದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇದೊಂದು ಪರ್ಯಾಯ ಸಾಧ್ಯತೆ. ಸರಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಈ ನಿಟ್ಟಿನಲ್ಲಿ ಯಶಸ್ಸು ಸಾಧ್ಯ.






