ರಾಯಚೂರು ಜಿಲ್ಲಾ ಕೇಂದ್ರಗಳಲ್ಲಿ ರಸ್ತೆಗಳ ಅವ್ಯವಸ್ಥೆ: ತಗ್ಗು ಗುಂಡಿಗಳಿಂದ ಹೈರಾಣಾದ ಸವಾರರು

ರಾಯಚೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಹಲವೆಡೆ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.
ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಒಬ್ಬ ಸಚಿವರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಇಬ್ಬರು ಶಾಸಕರೂ ವಾಸವಾಗಿದ್ದರೂ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.
ನಗರದ ಹೈದ್ರಾಬಾದ್ ರಸ್ತೆ, ಗಂಜ್ ರಸ್ತೆ, ಬಸವನಬಾವಿ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿಗೆ ಹೋಗುವ ರಸ್ತೆ, ಗದ್ವಾಲ್ ರಸ್ತೆ, ಸ್ಟೇಷನ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಮಂತ್ರಾಲಯ ರಸ್ತೆ, ಆಶಾಪುರ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ ಹಾಗೂ ಸಿಸಿ ರಸ್ತೆಗಳಲ್ಲಿ ಸಿಮೆಂಟ್ ಕಿತ್ತು ಹೋಗಿ ರಾಡುಗಳು ಕಾಣುತ್ತಿವೆ.
ಡಾಂಬರ್ ರಸ್ತೆಗಳ ಸ್ಥಿತಿ ಭಿನ್ನವಾಗಿಲ್ಲ. ಸತತ ಸುರಿದ ಮಳೆಯಿಂದಾಗಿ ಡಾಂಬರ್ ಕಿತ್ತು ಹೋಗಿದ್ದು ಕಂಕರ್ ತೇಲುತ್ತಿವೆ. ಹಲವೆಡೆ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ ಸವಾರರನ್ನು ಹೈರಾಣಾಗಿಸಿವೆ.
ಇನ್ನೂ ನಗರದ ಬಡಾವಣೆಗಳ ಒಳ ರಸ್ತೆಗಳು ಪಾಡು ಹೇಳತೀರದು. ಎಲ್ ಬಿ.ಎಸ್ ನಗರ, ಜಲಾಲ್ ನಗರ, ಆಶ್ರಯ ಕಾಲನಿ, ಸಿಯತಲಾಬ್, ಮಡ್ಡಿಪೇಟೆ, ಸ್ಟೇಷನ್ ಬಝಾರ್, ಗಾಲಿಬ್ ನಗರ, ಜಹೀರಾಬಾದ್ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ದೊಡ್ಡ ತಗ್ಗು ನಿರ್ಮಾಣವಾಗಿ ಮಳೆನೀರು ಸಂಗ್ರಹವಾಗಿದೆ ಹಾಗೂ ಕಚ್ಚಾ ರಸ್ತೆಗಳು ಸಂಪೂರ್ಣ ಹಾಳಾಗಿ ಕೆಸರು ಗದ್ದೆಯಾಗಿವೆ. ರಾಡಿಯಲ್ಲಿಯೇ ಸರ್ಕಸ್ ಮಾಡುತ್ತಾ ಜನ ತಿರುಗಾಡುವಂತಾಗಿದೆ.
ಚಿನ್ನ, ಬೆಳ್ಳಿ ವ್ಯಾಪಾರ ಮಾಡುವ ಅಂಗಡಿಗಳವರು ಸರಾಫ್ ಬಝಾರ್ ರಸ್ತೆಯಲ್ಲಿ ಚರಂಡಿಯನ್ನು ಒತ್ತುವರಿ ಮಾಡಿ ಮಳಿಗೆಗಳನ್ನು ನಿರ್ಮಿಸಿದ ಕಾರಣ ಮಳೆ ನೀರು ಸಾರಾಗವಾಗಿ ಹರಿಯದೇ ರಸ್ತೆಯ ಮೇಲೆ ಹರಿಯುತ್ತದೆ. ಕೊಳಚೆ ನೀರಿನಲ್ಲಿ ವಾಹನ ಸವಾರರು, ಪಾದಚಾರಿಗಳು ನಡೆದಾಡುವಂತಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಪ್ರತಿಷ್ಠಿತ ಎನಿಸಿರುವ ನಿಜಲಿಂಗಪ್ಪ ಕಾಲನಿಯ ರಸ್ತೆಯಲ್ಲಿಯೂ ದೊಡ್ಡ ಗುಂಡಿಗಳು, ತಗ್ಗು ಬಿದ್ದಿದೆ. ಸಚಿವ ಎನ್.ಎಸ್‌ಭೋಸರಾಜು ಅವರ ನಿವಾಸ, ಜಿಲ್ಲಾಧಿಕಾರಿ ಬಂಗಲೆ, ಜಿಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಗಣ್ಯರು ವಾಸವಾಗಿದ್ದಾರೆ. ಇಲ್ಲಿಯ ಪರಿಸ್ಥಿತಿ ಬದಲಾಗಿಲ್ಲ ಇದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಮೂರು ಬಾರಿ ಶಾಸಕರಾದರೂ ಸುಧಾರಣೆಯಾಗದ ರಸ್ತೆಗಳು: ರಾಯಚೂರು ನಗರ ಕ್ಷೇತ್ರದಲ್ಲಿ ಮೂರು ಬಾರಿ ( ಒಮ್ಮೆ ಜೆಡಿಎಸ್, ಎರೆಡು ಬಾರಿ ಬಿಜೆಪಿಯಿಂದ) ಗೆಲುವನ್ನು ಸಾಧಿಸಿದ ಡಾ.ಶಿವರಾಜ್ ಪಾಟೀಲ್ ಅವರು ರಸ್ತೆಗಳ ಸುಧಾರಣೆಗೆ ಕ್ರಮವಹಿಸಿಲ್ಲ. ಕಳೆದ ವಿಧಾನಸಭೆ ಚುನಾವಣೆಗೂ ಮುಂಚೆ ತರಾತುರಿಯಲ್ಲಿ ಹಲವೆಡೆ ಡಾಂಬರ್ ರಸ್ತೆ ನಿರ್ಮಿಸಿದರೂ ಕೆಲವೇ ವರ್ಷಗಳಲ್ಲಿ ರಸ್ತೆಗಳು ಹಾಳಾಗಿದ್ದು ಕಳಪೆ ಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ರಸ್ತೆಗಳ ದುರಸ್ತಿ ನನಗೆ ಸಂಬಂಧವಿಲ್ಲ ಅದು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುತ್ತದೆ ಎಂದು ಉಡಾಫೆಯಾಗಿ ಮಾತನಾಡಿದ್ದು ಖಂಡನೀಯ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು, ಸರಕಾರ ಅನುದಾನ ನೀಡುತ್ತಿಲ್ಲ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವಾಗಿದೆ. ಮತದಾರರು ಮತ ಹಾಕಿ ಗೆಲ್ಲಿಸಿ ಶಕ್ತಿ ತುಂಬಿದ್ದಾರೆ. ರಸ್ತೆ ದುರಸ್ತಿ ಮಾಡದಿದ್ದರೆ ಶಾಸಕರ ವಿರುದ್ಧ ಹೋರಾಟ ಮಾಡಲಾಗುವುದು.
-ಬಂಗಿ ಮುನಿರೆಡ್ಡಿ, ಲೋಕ ಜನಶಕ್ತಿ ಪಕ್ಷದ ಮುಖಂಡ
ರಾಯಚೂರು ನಗರದ ಪ್ರಮುಖ ರಸ್ತೆಗಳ ದುರಸ್ತಿಗೆ ಹಾಗೂ ವಿದ್ಯುತ್ ಕಂಬಗಳಿಗೆ ಲೈಟುಗಳನ್ನು ಅಳವಡಿಸಲು ಮಹಾನಗರ ಪಾಲಿಕೆಯ ಆಯುಕ್ತರ ಜೊತೆ ಈಗಾಗಲೆ ಸಭೆ ನಡೆಸಿ ಮಾತನಾಡಿದ್ದು, ಮಳೆ ಕಡಿಮೆಯಾದ ಬಳಿಕ ದುರಸ್ತಿ ಕಾರ್ಯ ಆರಂಭವಾಗಲಿದೆ.
-ಡಾ.ಶಿವರಾಜ ಪಾಟೀಲ್, ರಾಯಚೂರು ನಗರ ಶಾಸಕ







