ಪ್ರಸ್ತಕ ಸಾಲಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 250 ಕೋಟಿ ರೂ. ಮೀಸಲು

ಕಲಬುರಗಿ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ದಿಂದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮತ್ತು ನಾಗರಿಕರ ಸಬಲೀಕರಣಕ್ಕಾಗಿ 10 ಯೋಜನೆಗಳಿಗೆ ಸಂಸ್ಥೆ ಆನ್ ಲೈನ್ ಅರ್ಜಿ ಆಹ್ವಾನಿಸಿದ್ದು, ಇದೆ ನವೆಂಬರ್ 30 ಕೊನೆ ದಿನವಾಗಿದೆ. ಸಮುದಾಯದ ಹೆಚ್ಚಿನ ಜನರಿಗೆ ಯೋಜನೆಗಳ ಲಾಭ ಮತ್ತು ಜಾಗೃತಿ ಮೂಡಿಸಲು ದಿನಾಂಕ ವಿಸ್ತರಣೆ ಮಾಡಬೇಕೆಂದು ಕ್ರಿಶ್ಚಿಯನ್ ಸಮುದಾಯದ ಸಂಘಟನೆಗಳು ಆಗ್ರಹಿಸಿವೆ.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ 2025ರ ಜನವರಿ 6ರಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಸಂಸ್ಥೆಯನ್ನು ರಾಜ್ಯ ಸರಕಾರ ಸ್ಥಾಪನೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಕ್ರಿಶ್ಚಿಯನ್ ಸಮುದಾಯದ ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಮಹಿಳಾ ಹಾಗೂ ಯುವಜನರ ಸಬಲೀಕರಣ, ಶಿಕ್ಷಣದ ಉತ್ತೇಜನ ಮತ್ತು ಸಮುದಾಯದ ಪರಂಪರೆಯನ್ನು ಬಲವರ್ಧನೆಗಾಗಿ ರಾಜ್ಯ ಸರಕಾರ 2025-26ನೇ ಸಾಲಿಗೆ ರೂ. 250 ಕೋಟಿಗಳು ಮೀಸಲಿಟ್ಟು ಕ್ರೀಯಾ ಯೋಜನೆಗೆ ಜಾರಿಗೆ ತಂದಿದೆ.
ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಟ್ಯಾಕ್ಸಿಗಳು, ಸರಕು ವಾಹನಗಳು ಅಥವಾ ಪ್ರಯಾಣಿಕರ ಆಟೋ ರಿಕ್ಷಾಗಳನ್ನು ಖರೀದಿಸಲು, ವಾಹನದ ಬೆಲೆಯ ಶೇ.50ರಷ್ಟು ಅನುದಾನವನ್ನು ಪಡೆಯಬಹುದು. ಶ್ರಮಶಕ್ತಿ ಯೋಜನೆಯಲ್ಲಿ ಕ್ರೈಸ್ತ ಕುಲಕಸುಬುದಾರರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಅಥವಾ ಸಣ್ಣ ವ್ಯಾಪಾರಗಳನ್ನು ಪ್ರಾರಂಭಿಸಲು ರೂ.50 ಸಾವಿರ ವರೆಗೆ ಸಹಾಯಧನ ಪಡೆಯಬಹುದು. ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಲ್ಲಿ ವಿಧವೆಗಳು, ವಿಚ್ಛೇದಿತರು ಅಥವಾ ಅವಿವಾಹಿತ ಕ್ರೈಸ್ತ ಮಹಿಳೆಯರು ರೂ.50 ಸಾವಿರ ಸಹಾಯಧನವನ್ನು (ಶೇ.50 ಸಾಲ, ಶೇ.50% ಅನುದಾನ) ಪಡೆಯಬಹುದು.
ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಲ್ಲಿ ಸಣ್ಣ ಪ್ರಮಾಣದ ವ್ಯಾಪಾರ, ಚಿಲ್ಲರೆ ಮಾರಾಟ ಮತ್ತು ರಿಪೇರಿ ಸೇವೆಗಳಿಗಾಗಿ ರೂ.1 ಲಕ್ಷ ಸಹಾಯವನ್ನು ಪಡೆಯಬಹುದು (ಶೇ.50 ಸಾಲ ಮತ್ತು ಶೇ.50 ಅನುದಾನ). ಈ ಸಾಲವನ್ನು ಒಂದು ತಿಂಗಳ ನಂತರ ಪ್ರತಿ ತಿಂಗಳು ಸಮಾನವಾಗಿ 36 ಕಂತುಗಳಲ್ಲಿ 4% ಬಡ್ಡಿದರದಲ್ಲಿ ತೀರಿಸಬೇಕಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್ ಸಮುದಾಯದಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಪ್ರತಿ ಜಿಲ್ಲೆಗೆ ಸರಕಾರ 3 ರಿಂದ 4 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ. ಪಾರ/ಉದ್ಯಮಗಳಿಗೆ ನೇರ ಸಾಲ ಯೋಜನೆಯಲ್ಲಿ ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನು ಒದಗಿಸಲಾಗುತ್ತದೆ.ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾಲಂಬಿಯನ್ನಾಗಿ ಮಾಡುವ ಸಲುವಾಗಿ, ರಾಷ್ಟೀಕೃತ ಮಾನ್ಯತೆ ಪಡೆದ ಬ್ಯಾಂಕ್‌ಗಳಿಂದ ಘಟಕ ವೆಚ್ಚದ ಶೇ.50 ಅಥವಾ ಗರಿಷ್ಠ 2 ರೂ. ಲಕ್ಷ ಸಹಾಯಧನ ನಿಗಮದಿಂದ ಒದಗಿಸಲಾಗುತ್ತಿದೆ.
ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ-ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಮುದಾಯದ ಎಲ್ಲ ನಾಯಕರು ಮತ್ತು ಮುಖಂಡರು ಮುಂದೆ ಬಂದು, ಅರ್ಹ ಫಲಾನುಭವಿಗಳಿಗೆ ಯೋಜನೆಗಳಿಗೆ ಅರ್ಜಿಸಲ್ಲಿಸಲು ಉತ್ತೇಜಿಸಬೇಕು. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ.
-ಹಝ್ರತ್ ಅಲಿ ನದಾಫ್, ಜಿಲ್ಲಾ ವ್ಯವಸ್ಥಾಪಕರು. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಕಲಬುರಗಿ
ರಾಜ್ಯದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ, ಹಲವು ಯೋಜನೆಗಳಿಗೆ ಆನ್ ಲೈನ್ ಆರ್ಜಿ ಆಹ್ವಾನಿಸಿದೆ. ಹಿಂದುಳಿದ ಕ್ರೈಸ್ತ ಬಾಂಧವರೆಲ್ಲರು ಒಂದು ಯೋಜನೆಯನ್ನು ರೂಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಲು ಕನಿಷ್ಠ 10 ದಿನಗಳ ವರೆಗೆ ದಿನಾಂಕ ವಿಸ್ತರಿಸಿದರೆ ಸೂಕ್ತ.
-ಬಿಷಪ್ ರಾಬರ್ಟ್ ಮೈಕಲ್ ಮಿರಾಂಡಾ, ಕಲಬುರಗಿ ಕ್ಯಾಥೊಲಿಕ್ ಡಯಸೆಸ್ ಬಿಷಪ್
ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಸಮುದಾಯದ ಜನರಿಗೆ ಜಾಗೃತಿ ಇಲ್ಲ. ಮಾಹಿತಿ ಇದ್ದವರು ಯೋಜನೆಗಳ ಲಾಭ ಪಡೆಯಲು ಜಾತಿ ಪ್ರಮಾಣ ಪತ್ರ ಮತ್ತು ಅನ್ ಲೈನ್ ಆರ್ಜಿ ಹಾಕಲು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ದಿನಾಂಕ ವಿಸ್ತರಣೆ ಮಾಡದಿದ್ದರೆ, ಸಾವಿರಾರು ಜನರು ಯೋಜನೆಗಳಿಂದ ವಂಚಿತರಾಗುತ್ತಾರೆ.
-ಸಂಧ್ಯಾರಾಜ್ ಸ್ಯಾಮುಲ್, ಉಪಾಧ್ಯಕ್ಷರು ಅಖಿಲ ಭಾರತ ಕ್ರಿಶ್ಚಿಯನ್ ಮಹಾಸಭಾ ಕಲ್ಯಾಣ ಕರ್ನಾಟಕ ಘಟಕ ಕಲಬುರಗಿ







