ಆರೆಸ್ಸೆಸ್ ಮತ್ತು ನವ ವಸಾಹತೀಕರಣ

ವಸಾಹುತುಶಾಹಿ ಮನಸ್ಥಿತಿಯಿಂದ ಹೊರಬರುವುದು ಎಂದರೆ ಇಂಗ್ಲಿಷ್ ಕಲಿಯುವಂತಿಲ್ಲ, ಮೆಕಾಲೆಯನ್ನು ಟೀಕಿಸಬೇಕು ಎನ್ನುವುದಲ್ಲ. ಬದಲಿಗೆ ಕೇಂದ್ರೀಕೃತ ವ್ಯವಸ್ಥೆಯಿಂದ ವಿಕೇಂದ್ರೀಕರಣದೆಡೆಗೆ ಚಲಿಸುವುದು, ಸಾಂಸ್ಥಿಕ ಪ್ರಾಬಲ್ಯವನ್ನು ಕೊನೆಗೊಳಿಸುವುದು, ಅಧಿಕಾರಶಾಹಿಯ ದಬ್ಬಾಳಿಕೆಯನ್ನು ನಿಯಂತ್ರಿಸಿ ಮತ್ತಷ್ಟು ಜನಸ್ನೇಹಿಯಾಗಿಸುವುದು, ರಾಜ್ಯಗಳಿಗೆ ಸ್ವಾಯತ್ತೆ ಕಲ್ಪಿಸುವುದು ಮುಂತಾದವು ವಸಾಹತುಶಾಹಿ ಚಿಂತನೆಯಿಂದ ಬಿಡುಗಡೆಗೊಳಿಸಲು ಅಗತ್ಯವಾದ ಕಾರ್ಯಯೋಜನೆಗಳು. ಆದರೆ ಆರೆಸ್ಸೆಸ್ ಮತ್ತು ಮೋದಿಯವರು ತಮ್ಮ ಚಾತುರ್ವರ್ಣ ವ್ಯವಸ್ಥೆಯ ಪರವಾದ ಸಾಂಸ್ಕೃತಿಕ, ರಾಜಕೀಯ ಸಿದ್ಧಾಂತಗಳ ಅನುಷ್ಠಾನಕ್ಕಾಗಿ ಈ ವಸಾಹತುಶಾಹಿ, ಮೆಕಾಲೆ ಮುಂತಾದವರನ್ನು ಬಳಸಿಕೊಳ್ಳುತ್ತಿದ್ದಾರೆ.
ಭಾಗ - 1
ನವ ವಸಾಹತೀಕರಣ
ಮುಂದಿನ ಎರಡು ವರ್ಷಕ್ಕೆ ಅಂಬೇಡ್ಕರ್‌ರಿಂದ ಮನುಸ್ಮತಿ ದಹನಕ್ಕೆ ನೂರು ತುಂಬುತ್ತದೆ. ಆದರೆ ಸಂಘ ಪರಿವಾರವು ವಸಾಹತುಶಾಹಿಯ ದುಷ್ಟತನ ಎನ್ನುವ ಕಥನದ ಮೂಲಕ ಈ ಮನುಸ್ಮತಿ ಮತ್ತು ಚಾತುರ್ವರ್ಣ ವ್ಯವಸ್ಥೆಯನ್ನು ಮರಳಿ ಚರ್ಚೆಗೆ ತರುತ್ತಿದೆ. ಆ ಮೂಲಕ ನವ ವಸಾಹತುಶಾಹಿ ಮನಸ್ಥಿತಿಯನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ 17 ನವೆಂಬರ್ 2025ರಂದು ಪ್ರಧಾನಿ ನರೇಂದ್ರ ಮೋದಿಯವರು ಆರನೇ ರಾಮನಾಥ್ ಗೊಯೆಂಕ ಸ್ಮರಣಾರ್ಥ ಉಪನ್ಯಾಸದಲ್ಲಿ ‘‘1835ರ ಮೆಕಾಲೆ ಅಪರಾಧಕ್ಕೆ ಹತ್ತು ವರ್ಷಗಳ ನಂತರ 2035ರಲ್ಲಿ ನೂರು ವರ್ಷಗಳಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ವಸಾಹತುಶಾಹಿ ಮನಸ್ಥಿತಿಯಿಂದ ಬಿಡುಗಡೆ ಪಡೆದುಕೊಳ್ಳಬೇಕು’’ ಎಂದು ಹೇಳಿದರು. ಶಿಕ್ಷಣವನ್ನು ಬ್ರಾಹ್ಮಣರ ಹಿಡಿತದಿಂದ ಬಿಡುಗಡೆಗೊಳಿಸಿ ಸಾರ್ವತ್ರೀಕರಣಗೊಳಿಸಿದ ಮೆಕಾಲೆ ಚಿಂತನೆಯು 19ನೇ ಶತಮಾನದಲ್ಲಿ ಫುಲೆ ದಂಪತಿಯ ಸಾಮಾಜಿಕ ಕ್ರಾಂತಿಗೆ ಒಂದು ವೇದಿಕೆ ಕಲ್ಪಿಸಿತ್ತು. ಭಾರತದ ಅಸ್ಪಶ್ಯರು ಮನು ಸಿದ್ಧಾಂತದ ಪ್ರತ್ಯೇಕತೆ ಮತ್ತು ತಾರತಮ್ಯ ನೀತಿಯಿಂದ ಕಳಚಿಕೊಳ್ಳಲು ಅಗತ್ಯವಾದ ಕಿಟಿಕಿಯನ್ನು ತೆರೆದು ಕೊಟ್ಟಿತ್ತು. ಆದರೆ ಮೋದಿಯವರು ಇಂತಹ ಬದಲಾವಣೆಯನ್ನು ಟೀಕಿಸುತ್ತಾ ಭಾರತವು ಮರಳಿ ಪ್ರಾಚೀನ ಕಾಲದ ಚಾತುರ್ವರ್ಣ ವ್ಯವಸ್ಥೆಗೆ ಮರಳಬೇಕೆಂದು ಬಯಸುತ್ತಿದ್ದಾರೆ. ಹೊಸ ನರೇಶನ್ ಸೃಷ್ಟಿಸುತ್ತಿದ್ದಾರೆ
ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕು ಎಂದು ಹೇಳುವ ಮೋದಿಯವರು ಪ್ರಧಾನ ಮಂತ್ರಿಯಾಗಿ ಕಳೆದ ಹತ್ತು ವರ್ಷಗಳಲ್ಲಿ ಅದೇ ವಸಾಹತುಶಾಹಿಯ ಎಲ್ಲಾ ಆಯುಧಗಳನ್ನು ಮತ್ತಷ್ಟು ಹರಿತಗೊಳಿಸಿದ್ದಾರೆ ಮತ್ತು ಭಾರತದಲ್ಲಿ ನವ ವಸಾಹತುಶಾಹಿಯನ್ನು ಜಾರಿಗೊಳಿಸಿದ್ದಾರೆ. ಸ್ವದೇಶಿ ರಾಷ್ಟ್ರೀಯತೆ ಹೆಸರಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಮನಸ್ಥಿತಿಯನ್ನು ದೇಶದ ಮೇಲೆ ಹೇರಿದ್ದಾರೆ. ಆಯುಧೀಕರಣಗೊಳಿಸಿದ್ದಾರೆ. ಪ್ರೊ.ಆನಂದ್ ತೇಲ್ತುಂಬ್ಡೆ ಅವರು ‘ನಿರ್ವಸಾಹತೀಕರಣ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತತೆ, ಅಧಿಕಾರದ ಸಮಾನ ಹಂಚಿಕೆ, ಮನುಷ್ಯರ ಘನತೆಯನ್ನು ನಾಶ ಮಾಡುವ ಶ್ರೇಣೀಕೃತ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು. ಆದರೆ ಮೋದಿಯವರ ಯೋಜನೆಗಳು ಇದ್ಯಾವುದನ್ನೂ ಸಾಧಿಸಲಿಲ್ಲ’ ಎಂದು ಬರೆಯುತ್ತಾರೆ.
ವಸಾಹುತುಶಾಹಿ ಮನಸ್ಥಿತಿಯಿಂದ ಹೊರಬರುವುದು ಎಂದರೆ ಇಂಗ್ಲಿಷ್ ಕಲಿಯುವಂತಿಲ್ಲ, ಮೆಕಾಲೆಯನ್ನು ಟೀಕಿಸಬೇಕು ಎನ್ನುವುದಲ್ಲ. ಬದಲಿಗೆ ಕೇಂದ್ರೀಕೃತ ವ್ಯವಸ್ಥೆಯಿಂದ ವಿಕೇಂದ್ರೀಕರಣದೆಡೆಗೆ ಚಲಿಸುವುದು, ಸಾಂಸ್ಥಿಕ ಪ್ರಾಬಲ್ಯವನ್ನು ಕೊನೆಗೊಳಿಸುವುದು, ಅಧಿಕಾರಶಾಹಿಯ ದಬ್ಬಾಳಿಕೆಯನ್ನು ನಿಯಂತ್ರಿಸಿ ಮತ್ತಷ್ಟು ಜನಸ್ನೇಹಿಯಾಗಿಸುವುದು, ರಾಜ್ಯಗಳಿಗೆ ಸ್ವಾಯತ್ತೆ ಕಲ್ಪಿಸುವುದು ಮುಂತಾದವು ವಸಾಹತುಶಾಹಿ ಚಿಂತನೆಯಿಂದ ಬಿಡುಗಡೆಗೊಳಿಸಲು ಅಗತ್ಯವಾದ ಕಾರ್ಯಯೋಜನೆಗಳು. ಆದರೆ ಆರೆಸ್ಸೆಸ್ ಮತ್ತು ಮೋದಿಯವರು ತಮ್ಮ ಚಾತುರ್ವರ್ಣ ವ್ಯವಸ್ಥೆಯ ಪರವಾದ ಸಾಂಸ್ಕೃತಿಕ, ರಾಜಕೀಯ ಸಿದ್ಧಾಂತಗಳ ಅನುಷ್ಠಾನಕ್ಕಾಗಿ ಈ ವಸಾಹತುಶಾಹಿ, ಮೆಕಾಲೆ ಮುಂತಾದವರನ್ನು ಬಳಸಿಕೊಳ್ಳುತ್ತಿದ್ದಾರೆ. ವಸಾಹತೋತ್ತರ ಕಾಲದಲ್ಲಿ ಶ್ರೇಣೀಕರಣ ವ್ಯವಸ್ಥೆಯನ್ನು ಅಂತ್ಯಗೊಳಿಸುವುದು ಬಹುಸಂಸ್ಕೃತಿ, ಬಹುತ್ವ ಸಮಾಜದ ನಿರ್ಮಾಣ ಮುಖ್ಯ ಪ್ರಣಾಳಿಕೆಯಾಗಬೇಕಿತ್ತು. ಆದರೆ ಸಂಘ ಪರಿವಾರಕ್ಕೆ ಇದು ಒಪ್ಪಿತವಿಲ್ಲದ ಕಾರಣ ಜಾತಿ ಅಸಮಾನತೆಯನ್ನು ಗಟ್ಟಿಗೊಳಿಸುವುದು, ಏಕರೂಪಿ ಸಂಸ್ಕೃತಿಯ ಹೇರಿಕೆ, ಬಹುಸಂಖ್ಯಾತವಾದ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ವಸಾಹತುಶಾಹಿ ವಿರೋಧಿ ಕತೆ ಕಟ್ಟುತ್ತಿದ್ದಾರೆ
ಆನಂದ ತೇಲ್ತುಂಬ್ಡೆಯವರು ‘ವಸಾಹತುಶಾಹಿ ಲಕ್ಷಣಗಳಾದ ವೈಸರಾಯ್‌ಗಳು ಇಂದು ರಾಜ್ಯಪಾಲರಾಗಿ, ನಿರಂಕುಶ ಕಾರ್ಯಾಂಗವು ಇಂದು ಐಎಎಸ್ ಲಾಬಿಯಾಗಿ, ಭಿನ್ನಮತೀಯತೆಯನ್ನು ನಿಯಂತ್ರಿಸುವುದು ಇಂದು ಯುಎಪಿಎ ಶಾಸನದ ರೂಪದಲ್ಲಿ, ಏಕರೂಪಿ ಸಂಹಿತೆಯು ಇಂದು ಹಿಂದುತ್ವ ಸಾಂಸ್ಕೃತಿಕ ರಾಜಕಾರಣವಾಗಿ, ಜ್ಞಾನ ಮತ್ತು ಶಿಕ್ಷಣದ ಮೇಲಿನ ಏಕಸ್ವಾಮ್ಯವು ಇಂದು ಪಠ್ಯಗಳನ್ನು ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಮರು ರಚಿಸುವುದರ ರೂಪದಲ್ಲಿ, ಜಾತಿ ಒಂದು ಆಳವಾದ ವಸಾಹತುಶಾಹಿ ಮನಸ್ಥಿತಿಯಾಗಿ ಮರು ಹುಟ್ಟು ಪಡೆದುಕೊಳ್ಳುತ್ತಿದೆ’ ಎಂದು ಬರೆಯುತ್ತಾರೆ
ಸಂಘ ಪರಿವಾರದ ಈ ನವ ವಸಾಹತುಶಾಹಿ ನರೇಶನ್‌ನನ್ನು ವಿವಿಧ ಆಯಾಮಗಳಲ್ಲಿ ಮುಂದುವರಿಸುತ್ತಿರುವುದಕ್ಕೆ ಉದಾಹರಣೆಯಾಗಿ 24 ಜುಲೈ 2025ರಂದು ತುರ್ತುಪರಿಸ್ಥಿತಿಯ 50 ವರ್ಷದ ನೆನಪಿನ ಸಂದರ್ಭದಲ್ಲಿ ಆರೆಸ್ಸೆಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ‘‘ಸಂವಿಧಾನದ ಪೀಠಿಕೆಯಲ್ಲಿರುವ ಸಮಾಜವಾದ ಮತ್ತು ಸೆಕ್ಯುಲರಿಸಂನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೇರಿಸಲಾಗಿದೆ, ಈ ಎರಡೂ ಪದಗಳು ಇರಬೇಕೇ ಎಂದು ಪರಿಷ್ಕರಿಸಬೇಕು’’ ಎಂದು ಹೇಳಿದರು. ಸೆಕ್ಯುಲರ್‌ಮತ್ತು ಸಮಾಜವಾದ ಭಾರತದ ಬಗ್ಗೆ ಸಂಘ ಪರಿವಾರಕ್ಕೆ ಮೊದಲಿನಿಂದಲೂ ತಿರಸ್ಕಾರವಿರುವುದು ಗುಟ್ಟಾಗಿ ಉಳಿದಿಲ್ಲ. ಸ್ವತಃ ಪರಿವಾರವೇ ಬಹಿರಂಗವಾಗಿ ಇದರ ವಿರುದ್ಧ ಹೇಳಿಕೆ ಕೊಡುತ್ತಲೇ ಬಂದಿದೆ. ಆದರೆ ಜೊತೆ ಜೊತೆಗೆ ಚಾತುರ್ವರ್ಣ ವ್ಯವಸ್ಥೆ ಮತ್ತು ಮನುಸ್ಮತಿ ಪರವಾಗಿಯೂ ತನ್ನ ಅಭಿಪ್ರಾಯಗಳನ್ನು ದಾಖಲಿಸುತ್ತಲೇ ಬಂದಿದೆ. ಸಂಘ ಪರಿವಾರಕ್ಕೆ ಈ ವಿಚಾರದಲ್ಲಿ ಯಾವುದೇ ದ್ವಂದ ಮತ್ತು ಗೊಂದಲಗಳಿಲ್ಲ
ಉದಾಹರಣೆಗೆ ಇತೀಚಿನ ಬೆಳವಣಿಗೆ ಗಮನಿಸಬಹುದು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ‘ಶ್ರಮ ಶಕ್ತಿ ನೀತಿ 2025-ಭಾರತದ ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿ’ ಕರಡನ್ನು ಪ್ರಕಟಿಸಿದೆ. ಈ ನೀತಿಯನ್ನು ‘ಮನುಸ್ಮತಿಯಿಂದ’ ಪ್ರೇರಣೆ ಪಡೆದುಕೊಂಡು ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಮನುಸ್ಮತಿಯು ’ಕಾರ್ಮಿಕ ಪದ್ಧತಿ’ಯನ್ನು ರಾಜಧರ್ಮ ಎಂದು ಕರೆದಿದೆ. ಇಂತಹ ವಿಕೃತಿ ಧರ್ಮಶಾಸ್ತ್ರದಿಂದ ಈ ಶ್ರಮ ಶಕ್ತಿ ನೀತಿ ರೂಪಿತಗೊಂಡಿದೆ ಅಂದರೆ ಸಂಘ ಪರಿವಾರದ ಒಲವು ನಿಲುವು ಯಾವ ಕಡೆಗಿದೆ ಎಂದು ಸ್ಪಷ್ಟವಾಗುತ್ತದೆ.
ಅದರ ಕಾರ್ಮಿಕ ಕರಡು ನೀತಿಯಲ್ಲಿ ‘ಭಾರತೀಯ ವಿಶ್ವದರ್ಶನದಲ್ಲಿ ಕೆಲಸವು ಕೇವಲ ಜೀವನೋಪಾಯ ಮಾತ್ರವಲ್ಲ. ಜೊತೆಗೆ ಧರ್ಮದ ವಿಶಾಲಾರ್ಥ ಆದೇಶಕ್ಕೆ ಕೊಡುಗೆಯಾಗಿದೆ. ಈ ದೃಷ್ಟಿಕೋನವು ಕಲಾಕಾರ, ರೈತ, ಶಿಕ್ಷಕ ಅಥವಾ ಕೈಗಾರಿಕಾ ಕಾರ್ಮಿಕರನ್ನು ಸಾಮಾಜಿಕ ಸೃಷ್ಟಿಯ ಆವರ್ತನದ ಭಾಗವೆಂದು ಪರಿಗಣಿಸಲಾಗುತ್ತದೆ’ ಎಂದು ಹೇಳಿದ್ದಾರೆ. ಮುಂದುವರಿದು ‘ಪ್ರಾಚೀನ ಸ್ಮತಿಗಳಾದ ಮನುಸ್ಮತಿ, ಯಾಜ್ಞವಲ್ಕಸ್ಮತಿ, ನಾರದಸ್ಮತಿ, ಶುಕ್ರನೀತಿ ಮತ್ತು ಅರ್ಥಶಾಸ್ತ್ರಗಳು ‘ರಾಜಧರ್ಮ’ ರೂಪದಲ್ಲಿ ಮೇಲಿನ ಆಶಯಗಳನ್ನು ಪ್ರತಿಪಾದಿಸಿವೆ’ ಎಂದು ಬರೆದಿದ್ದಾರೆ
ಕಾರ್ಮಿಕ ಕಲ್ಯಾಣ ಯೋಜನೆಗಳು, ನೀತಿಗಳು, ಹಕ್ಕುಗಳು ಮುಂತಾದವು ಆಧುನಿಕ ದೃಷ್ಟಿಕೋನದ ಕಥನಗಳಾಗಿವೆ. ಕಳೆದ ಎರಡು ಶತಮಾನಗಳಿಂದ ನಡೆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಈ ಆಧುನಿಕ ಸುಧಾರಣೆಗಳು ಜಾರಿಗೊಂಡಿವೆ. ಆದರೆ ಈ ಕಾರ್ಮಿಕ ಕರಡು ನೀತಿ 2025 ಈ ಆಧುನಿಕ ಪ್ರಜ್ಞೆ ಮತ್ತು ಪದ್ಧತಿಯನ್ನು ಧಿಕ್ಕರಿಸುತ್ತದೆ. ಇದು ಪ್ರತಿಪಾದಿಸುವ ಪ್ರಾಚೀನ ಭಾರತದಲ್ಲಿ ಶ್ರಮಿಕರು ಊಳಿಗಮಾನ್ಯ ವ್ಯವಸ್ಥೆಯಲ್ಲಿ ದುಡಿಯುತ್ತಿದ್ದರು. ಅಲ್ಲಿ ಅವರಿಗೆ ಯಾವುದೇ ಹಕ್ಕುಗಳಿರಲಿಲ್ಲ. ಅವರ ದುಡಿಮೆಗೆ ಪ್ರತಿಯಾಗಿ ಭಿಕ್ಷೆಯಂತೆ ವೇತನ ಕೊಡುತ್ತಿದ್ದರು. ಶ್ರಮಕ್ಕೆ ತಕ್ಕ ವೇತನ ನಿರ್ಧರಿಸುವಲ್ಲಿಯೂ ಅವರಿಗೆ ಯಾವುದೇ ಪಾತ್ರವಿರಲಿಲ್ಲ. ಆದರೆ ಮೋದಿ ನೇತೃತ್ವದ ಸರಕಾರವು ಇಂತಹ ಪದ್ಧತಿಯನ್ನು ವೈಭವೀಕರಿಸುತ್ತಿದೆ. ಹಿಂದೂ ಸ್ಮತಿಗಳನ್ನು ಉದಾಹರಿಸಿ ಶ್ರಮ ಸಂಸ್ಕೃತಿಯ ನೀತಿಯನ್ನು ರೂಪಿಸುತ್ತಿದೆ. ಹಿಂದಿನ ಕಾಲದಲ್ಲಿ ಮಾಡಿದ ಪಾಪಗಳಿಗೆ ಈ ಜನ್ಮದಲ್ಲಿ ಶೂದ್ರರಾಗಿ ಹುಟ್ಟಿದ್ದೀರಿ ಎಂದು ಹೇಳುವ ಚಾತುರ್ವರ್ಣ ವ್ಯವಸ್ಥೆಯ ಕರ್ಮ ಸಿದ್ಧಾಂತವನ್ನು ಕಾರ್ಮಿಕ ನೀತಿಯಲ್ಲಿಯೂ ಅಳವಡಿಸಿಕೊಳ್ಳುತ್ತಿದೆ.
ಕಾರ್ಮಿಕ ನೀತಿ ರೂಪಿಸುವಾಗ ಮನುಸ್ಮತಿಯ ಕರಾಳ ಸಂಹಿತೆಗಳನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರಕಾರವು ಆ ಮೂಲಕ ಆರೆಸ್ಸೆಸ್ ಸಿದ್ಧಾಂತವನ್ನು ಅನುಷ್ಠಾನಗೊಳಿಸುತ್ತಿದೆ. ಶ್ರಮಶಕ್ತಿಯನ್ನು ‘ರಾಜಧರ್ಮ’ ಎಂದು ಸಂಬೋಧಿಸಿ ಅವರ ಹಕ್ಕುಗಳನ್ನು, ಪ್ರಜಾಪ್ರಭುತ್ವದ ಆಶಯಗಳನ್ನು ನಿರಾಕರಿಸುತ್ತಿದೆ. ಇದು ನಮ ವಸಾಹತುಶಾಹಿಯ ಪ್ರಯೋಗಗಳು
ಉನ್ನತ ಶಿಕ್ಷಣದಲ್ಲಿ ಮನುಸ್ಮತಿ ಮತ್ತು ಚಾತುರ್ವರ್ಣ ನೀತಿ
28, ಎಪ್ರಿಲ್ 2022ರಂದು ಕೇಂದ್ರ ಶಿಕ್ಷಣ ಇಲಾಖೆಯು ‘ಎನ್‌ಸಿಎಫ್‌ನ ರಚನೆಗಾಗಿ ಮಾರ್ಗಸೂಚಿಗಳು’ ಎನ್ನುವ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ‘‘ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ವಸಾಹತೀಕರಣದಿಂದ ಮುಕ್ತಗೊಳಿಸುವುದು ಇದರ ಉದ್ದೇಶ’’ ಎಂದು ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇದರ ಶಿಫಾರಸಿನ ಪ್ರಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಹಿನ್ನೆಲೆಯುಳ್ಳ ಜ್ಞಾನವನ್ನು, ಭಾರತೀಯ ಜ್ಞಾನ ವ್ಯವಸ್ಥೆಯನ್ನು, ಪರಂಪರೆ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳುವುದು, ಆ ಮೂಲಕ ‘ಭಾರತದ ಹೆಮ್ಮೆಯನ್ನು ಬೆಳೆಸುವುದು. ಸ್ಥಳೀಯ ಸಮುದಾಯಗಳು, ರಾಜ್ಯಗಳು ಮತ್ತು ದೇಶ ಎದುರಿಸುತ್ತಿರುವ ಗಂಭೀರ ವಿಚಾರಗಳನ್ನು ಒಳಗೊಳ್ಳುವುದು, ಶಿಕ್ಷಕರನ್ನು ಕೇಂದ್ರವಾಗಿಸಿಕೊಳ್ಳುವುದು. 5ನೇ ತರಗತಿವರೆಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಕೊಡುವುದು. ಎನ್‌ಸಿಎಫ್ 2005ರಲ್ಲಿ ಕಲಿಕಾ ಕೇಂದ್ರಿತ, ವೈವಿಧ್ಯತೆಯ ಪಠ್ಯಕ್ರಮಕ್ಕೆ ಆದ್ಯತೆ ಕೊಟ್ಟಿದ್ದರೆ ಈ ಹೊಸ ಎನ್‌ಸಿಎಫ್‌ನಲ್ಲಿ ಮರಳಿ ಶಿಕ್ಷಕರು ಕೇಂದ್ರಿತವಾಗಿರುತ್ತದೆ’ ಎಂದು ಹೇಳಿದ್ದಾರೆ.
ಆರೆಸ್ಸೆಸ್ ಸಿದ್ಧಾಂತಗಳ ಜಾರಿಗಾಗಿ ಬಿಜೆಪಿ ಸರಕಾರವು ಚಾಲ್ತಿಯಲ್ಲಿರುವುದನ್ನು ವಿಸರ್ಜಿಸಿ ಹೊಸ ಎನ್‌ಸಿಎಫ್ 2023 ರಚನೆಗೆ ಮುಂದಾಗಿದೆ. 17 ವರ್ಷಗಳ ನಂತರ ಹೊಸ ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಪು’ ಎನ್ನುವ ಛದ್ಮವೇಷದಲ್ಲಿ ಚಾತುರ್ವರ್ಣದ ಅನುಷ್ಠಾನಕ್ಕೆ ಎಲ್ಲಾ ಬಗೆಯ ಅಧಿಕೃತ ಸಿದ್ಧತೆಗಳಾಗುತ್ತಿವೆ. ನೂತನ ಎನ್‌ಸಿಎಫ್‌ಗಾಗಿ ಸಮೀಕ್ಷೆ ಹೆಸರಿನ ‘ಅನುಮತಿ ಉತ್ಪಾದನೆ’ ಜಾರಿಯಲ್ಲಿದೆ. ತಮಾಷೆ ಮತ್ತು ದುರಂತವೆಂದರೆ ಆಗಿನ ಕರ್ನಾಟಕದ ಬಿಜೆಪಿ ಸರಕಾರವು ಮೇಲೆ ಪ್ರಸ್ತಾಪಗೊಂಡ, ಗೊತ್ತು ಗುರಿಯಿಲ್ಲದ ಡಿಜಿಟಲ್ ಸಮೀಕ್ಷೆ ಮತ್ತು ಕೇಂದ್ರ ಶಿಕ್ಷಣ ಇಲಾಖೆ ಹಾಗೂ ಎನ್‌ಸಿಇಆರ್‌ಟಿ ನಿರ್ದೇಶನದ ಮೇರೆಗೆ ತಯಾರಾದ 25 ಪೊಸಿಶನ್ ಪೇಪರ್ಸ್ ಆಧರಿಸಿ ತರಾತುರಿಯಲ್ಲಿ ರಾಜ್ಯ ಪಠ್ಯಕ್ರಮ ಚೌಕಟ್ಟು ರಚಿಸಿದೆ. ‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಭಿವೃದ್ದಿ ಮಾರ್ಗಸೂಚಿ’ ದಸ್ತಾವೇಜಿನಲ್ಲಿ ‘ಎನ್‌ಇಪಿ 2020ರ ಅನುಸಾರ ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವುದು ನೂತನ ಎನ್‌ಸಿಎಫ್‌ನ ಉದ್ದೇಶ’ ಎಂದು ಹೇಳಿದ್ದಾರೆ. ಆದರೆ ಇಂದಿನ ಸಂದರ್ಭದಲ್ಲಿ ಮೇಲಿನ ನೀತಿಯನ್ನು ಗಾಳಿಗೆ ತೂರಿ ಆರೆಸ್ಸೆಸ್ ಸಿದ್ಧಾಂತವನ್ನು ತುರುಕುವ ಸಾಧ್ಯತೆಗಳೇ ಹೆಚ್ಚು. ಪಠ್ಯಪುಸ್ತಕಗಳ ಪರಿಶೀಲನೆ ನೆಪದಲ್ಲಿ ಸಂಪೂರ್ಣ ಬ್ರಾಹ್ಮಣೀಕರಣಕ್ಕೆ ಮುಂದಾದ 2019-23ರ ಕರ್ನಾಟಕ ಬಿಜೆಪಿ ಸರಕಾರದ ನಿರ್ಧಾರ ಇದಕ್ಕೆ ಪುರಾವೆಯಾಗಿದೆ.
2022ರಲ್ಲಿನ ಮಾಹಿತಿ ಪ್ರಕಾರ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ, ಪಾಂಡಿಚೆರಿ, ಮಣಿಪುರ, ನಾಗಾಲ್ಯಾಂಡ್, ಗೋವಾ ರಾಜ್ಯಗಳು ಇನ್ನೂ ‘ನಿಲುವು ದಾಖಲೆ ಪತ್ರಗಳಿಗೆ ಸಮಿತಿಯನ್ನೇ ರಚನೆ ಮಾಡಿರಲಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ತಮ್ಮ ಪಾಲಿನ ಶೇ.50ರಷ್ಟು ಕೆಲಸ ಮುಗಿಸಿವೆ. ಎಲ್ಲಾ ರಾಜ್ಯಗಳು ತಮ್ಮ ಪಠ್ಯಕ್ರಮ ಸಲ್ಲಿಸುವವರೆಗೂ ಹೊಸ ಎನ್‌ಸಿಎಫ್ ಪ್ರಕಟಗೊಳ್ಳುವಂತಿಲ್ಲ. ಆದರೆ ಮೋದಿ ಆಡಳಿತದಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತಿಗೆ ಸಾಕ್ಷಿಯಾಗಿ ಎಲ್ಲಾ ರಾಜ್ಯಗಳ ಪಠ್ಯಕ್ರಮ ಚೌಕಟ್ಟನ್ನು ಒಳಗೊಳ್ಳದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಅಪೂರ್ಣ ಎನ್‌ಸಿಎಫ್ ಪ್ರಕಟಗೊಂಡರೂ ಅಚ್ಚರಿ ಪಡಬೇಕಾಗಿಲ್ಲ.
ಮೇ 2022ರಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ‘ಭಾರತದ ಜ್ಞಾನ’, ‘ವಿಜ್ಞಾನ ಶಿಕ್ಷಣ’, ‘ಆರೋಗ್ಯ ಮತ್ತು ಯೋಗ ಕ್ಷೇಮ’, ‘ಲಿಂಗತ್ವ ಶಿಕ್ಷಣ’, ‘ಮೌಲ್ಯಯುತ ಶಿಕ್ಷಣ’, ‘ಶಿಕ್ಷಣದ ತತ್ವಶಾಸ್ತ್ರ’, ‘ಪಠ್ಯಕ್ರಮ ಮತ್ತು ವ್ಯಾಸಂಗಕ್ರಮ’, ‘ಸಮಾಜ ವಿಜ್ಞಾನದಲ್ಲಿ ಶಿಕ್ಷಣ’, ‘ವೃತ್ತಿಪರ ಶಿಕ್ಷಣ’, ‘ಶಿಕ್ಷಕರ ಶಿಕ್ಷಣ’, ‘ಪರಿಸರ ಶಿಕ್ಷಣ’, ‘ಭಾಷಾ ಶಿಕ್ಷಣ’ಗಳನ್ನು ಒಳಗೊಂಡ 25 ‘ನಿಲುವು ದಾಖಲೆ ಪತ್ರಗಳನ್ನು’ ಬಿಡುಗಡೆ ಮಾಡಿದೆ. ಅದರ ಅವಾಂತಕಾರಿ ಮತ್ತು ಅನಾಹುತಕಾರಿ ನಿಲುವುಗಳ ಕಾರಣದಿಂದ ಈ ದಾಖಲೆ ಪತ್ರಗಳು ಬಹು ಚರ್ಚಿತವಾಗುತ್ತಿವೆ. ಮನುವಾದವನ್ನು ಸಮರ್ಥಿಸುವ, ಚಾತುರ್ವರ್ಣವನ್ನು ಮರಳಿ ಜಾರಿಗೊಳಿಸುವ ಮತ್ತು ಮತೀವಾದಗೊಳಿಸುವ ಉದ್ದೇಶವನ್ನು ಹೊಂದಿವೆಯೆಂದು ವಿಷಯ ತಜ್ಞರು, ಶಿಕ್ಞಣ ತಜ್ಞರು ವಿಮರ್ಶಿಸುತ್ತಿದ್ದಾರೆ. ಇದು ನವ ವಸಾಹತುಶಾಹಿಯ ಸ್ವರೂಪಗಳು







